ಕಡಿಮೆ ಖರ್ಚಿನಲ್ಲಿ ಕೊಳವೆ ಬಾವಿಗೆ ರೀಚಾರ್ಚ್: ವಾಣಿಜ್ಯ ತೆರಿಗೆ ನಿರೀಕ್ಷರಿಂದ ಹೊಸ ವಿಧಾನ

  

ಬೆಳ್ತಂಗಡಿ: ಅಂತರ್ಜಲ ಮಟ್ಟ ಸಂರಕ್ಷಿಸುವ ಎಲ್ಲ ವೈಜ್ಞಾನಿಕ ವಿಧಾನಗಳಿಗೆ ಸೆಡ್ಡುಹೊಡೆಯುವ ರೀತಿಯಲ್ಲಿ ಇಲ್ಲೊಂದು ಹೊಸ ವಿಧಾನವನ್ನು ಕೃಷಿಕರೊಬ್ಬರು ಕಂಡುಕೊಂಡಿದ್ದಾರೆ. ಕಡಿಮೆ ಖರ್ಚಿನಲ್ಲಿ ಅತ್ಯಂತ ಸುಲಭ ವಿಧಾನದಲ್ಲಿ ಬೋರ್‌ವೆಲ್‌ಗೆ ರೀಚಾರ್ಜ್ ಮಾಡಲು ಸಾಧ್ಯವಿದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಓಡಿಲ್ನಾಳ ಗ್ರಾಮದ ನಿವಾಸಿ ಹಾಗೂ ಮಂಗಳೂರಿನಲ್ಲಿ ವಾಣಿಜ್ಯ ತೆರಿಗೆ ನಿರೀಕ್ಷಕರಾಗಿರುವ ಯತೀಶ್ ಸಿರಿಮಜಲು ಅವರು ತಮ್ಮ ಕೃಷಿ ತೋಟದಲ್ಲಿ ಕೊಳವೆ ಬಾವಿಗೆ ಈ ಜಲಮರುಪೂರಣ ವಿಧಾನವನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಅವರದೇ ಕಲ್ಪನೆಯಲ್ಲಿ ಈ ನೂತನ ವಿಧಾನವನ್ನು ಕಂಡುಕೊಂಡಿದ್ದು, ಕೊಳವೆಬಾವಿ ಹೊಂದಿರುವ ಎಲ್ಲ ಕೃಷಿಕರನ್ನು ಈ ವಿಧಾನವನ್ನು ಸುಲಭವಾಗಿ ಅನುಸರಿಸಹುದು ಎನ್ನುತ್ತಾರೆ.

ಏನಿದು ಸುಲಭ ವಿಧಾನ : ಇವರು ತಮ್ಮ ಜಮೀನಿನಲ್ಲಿ ಎರಡು ಕೊಳವೆ ಬಾವಿಗಳನ್ನು ಹೊಂದಿದ್ದು, ಇದರ ನೀರನ್ನು ಉಪಯೋಗಿಸಿ ಕೃಷಿ ಮಾಡುತ್ತಿದ್ದಾರೆ. ಹಿಂದೆ ಇವರ ಜಾಗದಲ್ಲಿರುವ ಕೆರೆಯಲ್ಲಿ ಹೇರಳವಾಗಿ ನೀರಿತ್ತು. ಇದು ಎಲ್ಲಾ ಕೃಷಿಗೆ ಮತ್ತು ಕುಡಿಯಲು ಬಳಕೆ ಮಾಡಲಾಗುತ್ತಿತ್ತು. ಈ ಕೆರೆಯ ನೀರೇ ಕೃಷಿ ಮತ್ತು ಕುಡಿಯಲು ಸಾಕಾಗುತ್ತಿತ್ತು.
ಸುಮಾರು 12 ವರ್ಷಗಳ ಹಿಂದೆ ಅವರು ತಮ್ಮ ಮನೆಯ ಸಮೀಪ ಕೊಳವೆ ಬಾವಿಯನ್ನು ಕೊರೆಸಿದ್ದರು. ಇದರಲ್ಲಿ 12 ಸ್ಪ್ರಿಂಕ್ಲರ್ ರನ್ ಆಗುತ್ತಿತ್ತು. ಕ್ರಮೇಣ ನೀರು ಕಡಿಮೆಯಾಗಿ ಸ್ಪ್ರಿಂಕ್ಲರ್ 5ಕ್ಕೆ ಇಳಿಯಿತು. ಕಳೆದ ವರ್ಷ ಅಡಿಕೆ ತೋಟದೊಳಗೆ ಮತ್ತೊಂದು ಕೊಳವೆ ಬಾವಿಯನ್ನು ಕೊರೆದಿದ್ದಾರೆ. ಕೊಳವೆ ಬಾವಿಯಲ್ಲಿ ನೀರು ಕಡಿಮೆಯಾಗುತ್ತಿರುವುದು ತಮ್ಮ ಜಾಗದಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿರುವುದು ಕಾರಣವಾಗಿದೆ ಎಂಬ ವಿಷಯವನ್ನು ಕಂಡುಕೊಂಡ ಯತೀಶ್ ಅವರು ಕೊಳವೆ ಬಾವಿಯಲ್ಲಿ ನೀರು ಕಡಿಮೆಯಾಗುತ್ತಿರುವುದರಿಂದ ಇದಕ್ಕೆ ನೀರಿಂಗಿಸಿದರೆ ಹೇಗೆ ಎಂದು ಅಲೋಚನೆ ಮಾಡಿ ಆನೇಕ ಕಡೆಗಳಲ್ಲಿ ಮಾಹಿತಿಯನ್ನು ಪಡೆದರು. ಗೂಗಲ್‌ನಲ್ಲಿ ಸರ್ಚ್ ಮಾಡಿ ನೀರಿಂಗಿಸುವ ಕುರಿತು ಹಲವು ಮಾಹಿತಿ ಪಡೆದು ಇದೀಗ ತಮ್ಮದೇ ಅಲೋಚನೆಯಲ್ಲಿ ನೀರಿಂಗಿಸುವ ಯೋಜನೆ ರೂಪಿಸಿದ್ದಾರೆ.

ತಮ್ಮ ಜಾಗದಲ್ಲಿರುವ ತೋಟದಲ್ಲಿ ಕೆರೆ ನೀರು ಶುದ್ಧವಾಗಿದ್ದು, ಮಳೆಗಾಲದಲ್ಲಿ ನೀರಿನ ಒಸರಿನಿಂದ ಕೆರೆ ತುಂಬಿ ಹೊರಗೆ ಹರಿದು ಹೋಗುತ್ತಿದೆ. ಈ ನೀರು ನದಿ ಸೇರಿ ಸಮುದ್ರ ಪಾಲಾಗುದರಿಂದ ಇದನ್ನು ತಮ್ಮ ಜಾಗದಲ್ಲಿರುವ ಕೊಳವೆ ಬಾವಿಗೆ ಹಿಂಗಿಸಿದರೆ ಹೇಗೆ ಎಂಬ ಚಿಂತನೆ ಈಗ ಅವರ ಕೊಳವೆ ಬಾವಿ ರೀಚಾರ್ಜ್ ಯೋಜನೆಗೆ ಕಾರಣವಾಗಿದೆ. ಕೊಳವೆ ಬಾವಿಯಿಂದ ಕರೆ ತನಕ ಸುಮಾರು ಒಂದು ಇಂಚಿನ ಪಿವಿಸಿ ಪೈಪನ್ನು ಅಳವಡಿಸಿ, ಕೊಳವೆ ಬಾವಿಗೆ ಮೇಲ್ಗಡೆ ಪೈಪ್ ಹೋಗುವಷ್ಟು ತೂತು ಕೊರೆದು ಕೊಳವೆ ಬಾವಿಯೊಳಗೆ ಸುಮಾರು 80 ಅಡಿಯವರೆಗೆ ಪೈಪನ್ನು ಇಳಿಸಿದ್ದಾರೆ. ಪೈಪ್‌ಗೆ ಮೊದಲು ಇನ್ನೊಂದು ಕೊಳವೆ ಬಾವಿಯ ನೀರನ್ನು ತುಂಬಿಸಿ ನಂತರ ಅದನ್ನು ಕರೆ ನೀರಿನ ಒಳಗೆ ಇಟ್ಟು ಒಮ್ಮೆಲೆ ಪೈಪ್ ತೆಗೆದಾಗ ಉಂಟಾಗುವ ಒತ್ತಡದ ಮೂಲಕ (ಸೈಪನಿಂಗ್) ನೀರು ಕೊಳವೆ ಬಾವಿಗೆ ಹರಿಯುವ ಸರಳ ತಂತ್ರಜ್ಞಾನ ಇಲ್ಲಿ ಅಳವಡಿಸಿದ್ದಾರೆ.


ಕೆರೆಯ ಶುದ್ಧವಾದ ನೀರು ಪೈಪ್‌ನ ಮೂಲಕ ದಿನದ ೨೪ ಗಂಟೆಯೂ ನಿರಂತರವಾಗಿ ಕೊಳವೆ ಬಾವಿಗೆ ಹೋಗುತ್ತಿದೆ. ವರ್ಷದ ಎಪ್ರಿಲ್‌ನಿಂದ ಸೆಷ್ಟೆಂಬರ್ ತಿಂಗಳ ತನಕ ಕೆರೆಯ ನೀರು ಹೊರಗೆ ಹರಿದು ಹೋಗುತ್ತಿದ್ದು, ಈ ಅವಧಿಯಲ್ಲಿ ಮಾತ್ರ ಹೊರ ಹೋಗುವ ನೀರನ್ನು ಕೊಳವೆ ಬಾವಿಗೆ ಇಂಗಿಸಲಾಗುತ್ತಿದೆ. ಕಳೆದ ವರ್ಷ ಇಪ್ಪತು ದಿನ ಇಂಗಿಸಿದ್ದಾರೆ. ಈ ವರ್ಷ ಮಳೆ ತಡವಾಗಿದ್ದರಿಂದ ಕಳದೆ 20 ದಿನಗಳಿಂದ ನಿರಂತರವಾಗಿ ಈ ಕಾರ್ಯವನ್ನು ಮಾಡುತ್ತಾ ಬರುತ್ತಿದ್ದರೂ ಕೊಳವೆ ಬಾವಿಯಲ್ಲಿ ನೀರು ಪೂರ್ತಿಯಾಗಿಲ್ಲ. ಕೊಳವೆ ಬಾವಿಯೊಳಗೆ ನೀರಿನ ಒರತೆ ಬರುವ ಪದರಗಳು ಪೂರ್ತಿ ಬತ್ತಿ ಹೋಗಿದ್ದು, ಈಗ ನೀರಿಂಗಿಸುತ್ತಿರುವುದರಿಂದ ಬತ್ತಿ ಹೋದ ಪದರದಲ್ಲಿ ಒರತೆ ಪುನಶ್ಚೇತನ ಕೊಳ್ಳುತ್ತಿದೆ ಎನ್ನುತ್ತಾರೆ ಯತೀಶ್ ಸಿರಿಮಜಲು.

ಕೊಳವೆ ಬಾವಿಯಲ್ಲಿ ನೀರಿನ ಪ್ರಮಾಣ ಹೆಚ್ಚುತ್ತಾ ಬರುತ್ತಿದೆ. ಇದೀಗ ಇನ್ನೊಂದು ಕೊಳವೆ ಬಾವಿಗೂ ನೀರು ಇಂಗಿಸುವ ಅಲೋಚನೆ ಅವರದು. ಇದರಿಂದಾಗಿ ಅವರ ಎಲ್ಲಾ ಕೃಷಿಗೆ ನೀರು ದೊರೆಯುವುದರ ಜೊತೆಗೆ ಬೇಸಿಗೆ ಕಾಲದಲ್ಲಿ ಕೃಷಿಗೆ ನೀರಿನ ಅಭಾವ ಇರುವುದಿಲ್ಲ. ಈ ರೀತಿ ನೀರಿಂಗಿಸುವ ಕಾರ್ಯ ಮಾಡುತ್ತಿರುವುದರಿಂದ ಅಂತರ್ಜಲ ಹೆಚ್ಚಳವಾಗುತ್ತಿದ್ದು, ಇವರಿಗೆ ಬೇಕಾದಷ್ಟು ನೀರು ದೊರೆಯುವುದ ಜೊತೆಗೆ ಪರಿಸರದ ರೈತರ ಬಾವಿ, ಕೆರೆ, ಕೊಳವೆ ಬಾವಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗುವ ಸಾಧ್ಯತೆಗಳಿವೆ. ವರ್ಷಗಳು ಕಳೆದಂತೆ ನೀರಿನ ಮಟ್ಟ ಕೆಳಗಿಳಿಯುವುದರಿಮದ ಮಳೆ ನೀರು ಇಂಗಿಸುವ ಪ್ರಯತ್ನ ಮಾಡಿದಲ್ಲಿ ನೀರಿಗೆ ಯಾವುದೇ ರೀತಿಯ ಸಮಸ್ಯೆಯಾಗುವುದಿಲ್ಲ. ಪ್ರತಿಯೊಬ್ಬರು ಕೃಷಿಕರು ತಮ್ಮ ಕುಡಿಯುವ ನೀರಿನ ಬಾವಿ, ಕೊಳವೆ ಬಾವಿಗಲಿಗೆ ನಿರೀಂಗಿಸುವ ಯೋಜನೆ ಮಾಡಬೇಕು ಎಂದು ಯತೀಶ್ ಅವರು ಸಲಹೆ ನೀಡಿದ್ದಾರೆ.

ಬಿ.ಎಸ್.ಕುಲಾಲ್ ಬೆಳ್ತಂಗಡಿ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.