HomePage_Banner_
HomePage_Banner_
HomePage_Banner_

ಓಡಿಲ್ನಾಳ ರಸ್ತೆ ಅವ್ಯವಸ್ಥೆ: ರಸ್ತೆಯುದ್ದಕ್ಕೂ ಹೊಂಡಗಳ ಸರಮಾಲೆ

ಓಡಿಲ್ನಾಳ: ಇಲ್ಲಿಯ ಕಿನ್ನಿಗೋಳಿ-ಗೇರುಕಟ್ಟೆಗೆ  ಅತೀ ಸಮೀಪದ ಸಂಪರ್ಕ ರಸ್ತೆಯಾದ ಓಡಿಲ್ನಾಳ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದ್ದು, ಪ್ರಯಾಣಿಕರು, ವಾಹನ ಚಾಲಕರು, ಶಾಲಾ ವಿದ್ಯಾರ್ಥಿಗಳು ಈ ರಸ್ತೆಯಲ್ಲಿ ಸಂಚರಿಸಲು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ರಸ್ತೆ ಡಾಂಬರು ಕಾಣದೆ ವರ್ಷಗಳೇ ಕಳೆದಿದ್ದು, ರಸ್ತೆಯುದ್ದಕ್ಕೂ ಸಾಲುಸಾಲು ಹೊಂಡಗಳು ತುಂಬಿದ್ದು, ವಾಹನ ಚಲಾಯಿಸಲು ಸವಾರರು ಹರಸಾಹಸ ಪಡುವಂತಾಗಿದೆ. ಈ ಗ್ರಾಮಕ್ಕೆ ಸಂಬಂಧಪಟ್ಟ ಕುವೆಟ್ಟು ಗ್ರಾಮ ಪಂಚಾಯತದಲ್ಲಿ ಸುಮಾರು 25 ವರ್ಷಗಳಿಂದ ಒಂದೇ ರಾಜಕೀಯ ಪಕ್ಷ ಅಧಿಕಾರದಲ್ಲಿದ್ದರೂ, ಈ ಗ್ರಾಮದ ರಸ್ತೆ ಅಭಿವೃದ್ಧಿ ಮಾತ್ರ ಶೂನ್ಯ. ಅಲ್ಲದೆ ಬೆಳ್ತಂಗಡಿ ತಾಲೂಕಿನ ಮಾಜಿ ಶಾಸಕರಿಬ್ಬರೂ ಇದೇ ಊರಿನಲ್ಲಿ ಹುಟ್ಟಿ ಬೆಳೆದವರಾಗಿದ್ದು, ಈ ಗ್ರಾಮ ರಸ್ತೆ ಅಭಿವೃದ್ಧಿಯಿಂದ ವಂಚಿತವಾಗಿದೆ.

ಈ ರಸ್ತೆ ವ್ಯಾಪ್ತಿಯಲ್ಲಿ ಓಡಿಲ್ನಾಳ ಅಂಗನವಾಡಿ ಕೇಂದ್ರ, ಓಡಿಲ್ನಾಳ ಹಿ.ಪ್ರಾ.ಶಾಲೆ, ಕಟ್ಟದಬೈಲು ಹಿ.ಪ್ರಾ ಶಾಲೆ, ರೇಷ್ಮೆ ಕೃಷಿ ಘಟಕ, ಮೈರಳಿಕೆ ಹಾಲು ಉತ್ಪಾದಕರ ಸಂಘ, ಶ್ರೀಧರ್ಮಸ್ಥಳ  ಗ್ರಾಮಾಭಿವೃದ್ಧಿ ಯೋಜನೆಯ ಸೇವಾನಿರತರ ಕಛೇರಿ ಹೀಗೆ ಅನೇಕ ಸಂಘ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ಸಾವಿರಾರು ಮನೆ ನಿವಾಸಿಗಳು ಈ ರಸ್ತೆಯನ್ನು ಅವಲಂಬಿಸಿದ್ದಾರೆ.

ಓಡಿಲ್ನಾಳ ಶಾಲಾ ಬಳಿಯಿರುವ ಖಾಸಗಿ ವ್ಯಕ್ತಿಯೊಬ್ಬರ ಜಾಗದಲ್ಲಿ ನಿರ್ವಹಿಸಿದ್ದ ಅಸಮರ್ಪಕ ಕಾಮಗಾರಿಯಿಂದಾಗಿ ಮಳೆನೀರು ರಸ್ತೆಯಲ್ಲಿ ಹರಿದು, ನೀರು ನಿಂತು ಶಾಲಾ ಆವರಣಗೋಡೆ ಕುಸಿದಿದೆ ಹಾಗೂ ರಸ್ತೆ ಪೂರ್ತಿ ಕೆಸರುಮಯವಾಗಿದೆ.

6 ತಿಂಗಳ ಹಿಂದೊಮ್ಮೆ ಭದ್ರಕಜೆ ಎಂಬಲ್ಲಿ ನಡೆದ ಖಾಸಗಿ ಕಾರ್ಯಕ್ರಮಕ್ಕೆ ಭೇಟಿ ನೀಡಿದ ಶಾಸಕ ಹರೀಶ್ ಪೂಂಜರಲ್ಲಿ ರಸ್ತೆ ದುರಸ್ತಿ ಬಗ್ಗೆ ಮನವಿ ನೀಡಿದ್ದು, ಆದಷ್ಟು ಶೀಘ್ರವೇ ದುರಸ್ತಿಗೊಳಿಸುವುದಾಗಿ ಭರವಸೆ ನೀಡಿದ್ದರು. ಆದರೆ ಅವರು ನೀಡಿದ ಭರವಸೆ ಭರವಸೆಯಾಗಿಯೇ ಉಳಿದಿದೆ. ಗ್ರಾಮದ ಜನಪ್ರತಿನಿಧಿಗಳು ದಿನಕ್ಕೆ ಹತ್ತಾರು ಬಾರಿ ಇದೇ ದಾರಿಯಲ್ಲಿ ಪ್ರಯಾಣಿಸುತ್ತಿದ್ದರೂ ಸಹ ತಮ್ಮ ಕಣ್ಣಿಗೆ ಬಟ್ಟೆ ಕಟ್ಟಿಕೊಂಡಂತಾಗಿದೆ.

ಇನ್ನಾದರೂ ಜನಪ್ರತಿನಿಧಿಗಳು, ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿ, ರಸ್ತೆ ದುರಸ್ತಿಗೊಳಿಸಿ ಸಂಚಾರಕ್ಕೆ ಯೋಗ್ಯರಸ್ತೆಯನ್ನಾಗಿ ಮಾಡಿಕೊಡಬೇಕೆಂದು ಗ್ರಾಮಸ್ಥರ ಆಗ್ರಹ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.