ಬೆಳ್ತಂಗಡಿ ನ.ಪಂ. ಕಸವಿಲೇ ಘಟಕದ ಅವ್ಯವಸ್ಥೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಕಸವಿಂಗಡಣೆ ವ್ಯವಸ್ಥೆಯೇ ಇಲ್ಲ ; ಸೌಲಭ್ಯವಿದ್ದರೂ ಅನುಷ್ಠಾನದಲ್ಲಿ ನಿರ್ಲಕ್ಷ

ಬೆಳ್ತಂಗಡಿ: ಬೆಳ್ತಂಗಡಿ ನಗರ ಪಂಚಾಯತು ವ್ಯಾಪ್ತಿಯಿಂದ ಕಸವನ್ನು ತಂದು ಹಾಕುತ್ತಿರುವ ಕೊಯ್ಯೂರು ಗ್ರಾಮದ ಕುಂಟಾಲಪಲ್ಕೆ ಎಂಬಲ್ಲಿಯ ಕಸವಿಲೇವಾರಿ ಘಟಕವು ಅವ್ಯವಸ್ಥೆಯಿಂದ ಕೂಡಿದ್ದು, ಸರಿಯಾದ ನಿರ್ವಹಣೆ ಇಲ್ಲದೆ, ಸೌಲಭ್ಯಗಳಿದ್ದರೂ ಇದನ್ನು ಅನುಷ್ಠಾನ ಮಾಡದೆ, ಅಧಿಕಾರಿಗಳ ತೀವ್ರ ನಿರ್ಲಕ್ಷದಿಂದಾಗಿ ಸರಕಾರದ ಹಣ ಪೋಲಾಗುತ್ತಿರುವುದು ಕಂಡು ಬರುತ್ತಿದೆ.
ಬೆಳ್ತಂಗಡಿ ನಗರ ವ್ಯಾಪ್ತಿಯಲ್ಲಿ ಯಾವುದೇ ತ್ಯಾಜ್ಯವಿಲೇ ಘಟಕಗಳಿಲ್ಲ. ನಗರ ಪಂಚಾಯತದ ತ್ಯಾಜ್ಯ ವಿಲೇಗಾಗಿ ನಗರದ ಜನರ ಬೇಡಿಕೆಯಂತೆ ಕೊಯ್ಯೂರು ಗ್ರಾಮದ ಕುಂಟಾಲಪಲ್ಕೆ ಎಂಬಲ್ಲಿ ಸರಕಾರದ ವತಿಯಿಂದ 4.30ಎಕ್ರೆ ಜಾಗ ಮಂಜೂರು ಆಗಿದ್ದು, ಇಲ್ಲಿ ನಗರದ ಕಸವನ್ನು ಕಳೆದ ಕೆಲ ವರ್ಷಗಳಿಂದ ವಿಲೇ ಮಾಡಲಾಗುತ್ತಿದೆ.

ಅವ್ಯವಸ್ಥೆಯ ಆಗರ: ಬೆಳ್ತಂಗಡಿ ನಗರದಲ್ಲಿ ಪ್ರತಿ ದಿನ ಸಂಗ್ರಹವಾಗುವ ತ್ಯಾಜ್ಯವನ್ನು ಟ್ರಾಕ್ಟರ್ ಮೂಲಕ ಇಲ್ಲಿ ತಂದು ಸುರಿಯಲಾಗುತ್ತಿದ್ದು, ಘಟಕದ ಒಳಗೆ ಕಸದ ದೊಡ್ಡ ರಾಶಿಯೇ ತುಂಬಿಕೊಂಡಿದೆ. ಇಲ್ಲಿ ಪ್ರತಿ ದಿನ ತಂದು ಹಾಕುವ ತ್ಯಾಜ್ಯವನ್ನು ದೊಡ್ಡ ರಾಶಿಯಾದ ನಂತರ ಸಮೀಪದಲ್ಲಿರುವ ಗುಡ್ಡದಿಂದ ಮಣ್ಣನ್ನು ತಂದು ಇದರ ಮೇಲೆ ಸುರಿದು ತ್ಯಾಜ್ಯವನ್ನು ಮುಚ್ಚಲಾಗುತ್ತದೆ. ಪುನಃ ಮುಚ್ಚಿದ ಮಣ್ಣಿನ ಮೇಲೆ ತ್ಯಾಜ್ಯವನ್ನು ತಂದು ಹಾಕಲಾಗುತ್ತದೆ. ಇದು ಬೆಳ್ತಂಗಡಿ ನಗರ ಪಂಚಾಯತದಿಂದ ನಡೆಯುವ ತ್ಯಾಜ್ಯ ವಿಲೇವಾರಿ.

ಕಸ ವಿಂಗಡಣೆ ಇಲ್ಲ: ತ್ಯಾಜ್ಯವನ್ನು ವಿಂಗಡಿಸಿ ವಿಲೇ ಮಾಡಬೇಕು ಪ್ಲಾಸ್ಟಿಕ್ ಚೀಲ, ಬಾಟಲಿ ಮಣ್ಣಿನಡಿಗೆ ಸೇರಬಾರದು ಎಂದು ಸರಕಾರದ ಆದೇಶವಿದೆ. ತಾಲೂಕಿನ ಆನೇಕ ಗ್ರಾಮ ಪಂಚಾಯತುಗಳಲ್ಲಿ ಇದನ್ನು ಅನುಷ್ಠಾನ ಮಾಡಲಾಗುತ್ತಿದೆ. ಹಸಿಕಸ, ಒಣಕಸ, ಪ್ಲಾಸ್ಟಿಕ್ ಇದನ್ನು ವಿಂಗಡಿಸಿ ವಿಲೇ ಮಾಡುತ್ತಿದ್ದಾರೆ. ಕೆಲವೊಂದು ಪಂಚಾಯತುಗಳು ತ್ಯಾಜ್ಯವನ್ನು ಗೊಬ್ಬರ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಪ್ಲಾಸ್ಟಿಕ್ ಹಾಗೂ ಪ್ಲಾಸ್ಟಿಕ್ ಬಾಟಲಿಗಳನ್ನು ಖರೀದಿಸುವವರು ಇದ್ದಾರೆ. ಆದರೆ ನಗರ ಪಂಚಾಯತದ ಈ ಕಸ ವಿಲೇ ಘಟಕದಲ್ಲಿ ಇದಾವೂದು ಇಲ್ಲ. ನಗರದಿಂದ ತರುವ ಕಸ ಹಾಗೂ ಇದರ ಜೊತೆ ಇರುವ ಪ್ಲಾಸ್ಟಿಕ್ ಚೀಲ, ಬಾಟಲಿ ಸಮೇತ ಮಣ್ಣಿನಡಿಗೆ ಹಾಕಲಾಗುತ್ತಿದೆ.

ಅನಾಥವಾದ ಶೆಡ್‌ಗಳು: ಕಸವಿಲೇ ಘಟಕದಲ್ಲಿ ಕಸ ವಿಂಗಡಣೆಗೆ ಬೇಕಾದ ಶೆಡ್‌ಗಳನ್ನು ನಿರ್ಮಿಸಲಾಗಿದೆ. ಸಾವಿರಾರು ರೂ. ವೆಚ್ಚದಲ್ಲಿ ಹಲವು ವರ್ಷಗಳ ಹಿಂದೆ ಕಟ್ಟಲಾಗಿದ್ದ ಈ ಶೆಡ್‌ಗಳು ಈಗ ಅನಾಥವಾಗಿದೆ. ಕಟ್ಟಡ ನಿರ್ಮಾಣವಾದ ಸಮಯದಲ್ಲಿ ಕೆಲ ಸಮಯ ಇಲ್ಲಿ ಕಸ ವಿಂಗಡಣೆ ಮಾಡಲಾಗಿತ್ತು. ಆಗ ವಿಂಗಡಣೆ ಮಾಡಿದ ಕಸಗಳು ಕೂಡಾ ಶೆಡ್‌ನೊಳಗೆ ಹಾಗೆಯೇ ಉಳಿದುಕೊಂಡಿರುವುದು ಇದಕ್ಕೆ ಸಾಕ್ಷಿಯಾಗಿದೆ.

ಕಾವಲುಗಾರನ ಕೊಠಡಿ: ಸುಮಾರು 4 ವರ್ಷದ ಹಿಂದೆ ಘಟಕದಲ್ಲಿ ಕಾವಲುಗಾರನಿಗಾಗಿ ಕೊಠಡಿ ನಿರ್ಮಿಸಲಾಗಿದೆ. ಹೊರಗಿನಿಂದ ನೋಡುವಾಗ ಸುಣ್ಣ-ಬಣ್ಣ ಬಳಿದು ಸುಂದರವಾಗಿ ಕಾಣುವ ಈ ಕಟ್ಟಡದ ಒಳಗೆ ಹೋಗಿ ನೋಡಿದರೆ ಇದರ ನಿಜ ಬಣ್ಣ ಬಯಲಾಗುತ್ತದೆ. ೪ ವರ್ಷದ ಹಿಂದೆ ಕಟ್ಟಿದ ಈ ಕಟ್ಟಡದ ಕಾಮಗಾರಿ ಪೂರ್ತಿಗೊಂಡಿಲ್ಲ. ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ಇಲ್ಲ, ಕಿಟಿಕಿಗಳಿಲ್ಲ, ಶೌಚಾಲಯ ಕೆಲಸ ಅರ್ಧದಲ್ಲಿದೆ. ಕಟ್ಟಡದ ಹಿಂದಿನ ಬಾಗಿಲು ಗೆದ್ದಲು ಹಿಡಿದು ಹೋಗಿದೆ. ನೀರಿನ ಸೌಲಭ್ಯವಿಲ್ಲ ಎಲ್ಲಾ ಅವ್ಯವಸ್ಥೆಯ ಆಗವಾಗಿದೆ. ಆದರೆ ಇದಕ್ಕೆ ಇಟ್ಟ ಅನುದಾನ ಪೂರ್ತಿ ಖರ್ಚಾಗಿದೆ.

ಕಂಪೌಂಡ್ ಮತ್ತು ರಸ್ತೆ: ಘಟಕದ ಸುತ್ತಾ ಕಂಪೌಂಡ್ ಕಟ್ಟಲಾಗಿದೆ. ಇದಕ್ಕೆ ಅರ್ಧಂಬರ್ಧ ಸುಣ್ಣ-ಬಣ್ಣ ಬಳಿಯಲಾಗಿದೆ. ಒಂದು ಕಡೆ ಕಂಪೌಂಡ್ ಕಟ್ಟಿದ ಕಲ್ಲಿಗೆ ಸಾರಣೆಯನ್ನು ಕೂಡಾ ಮಾಡಿಲ್ಲ. ಆವರಣದೊಳಗೆ ಸುಮಾರು 150 ಮೀಟರ್‌ನ ರಸ್ತೆಯನ್ನು ನಿರ್ಮಿಸಲಾಗಿದೆ. ಸುಮಾರು ರೂ. 2.40 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಈ ಎಲ್ಲಾ ಕಾಮಗಾರಿಗಳು ಸಂಪೂರ್ಣವಾಗಿ ಕಳಪೆಯಾಗಿದೆ. ಜೊತೆಗೆ ಘಟಕದ ಸುತ್ತಾ ವಾಹನ ಓಡಾಟಕ್ಕೆ ನಿರ್ಮಿಸಲಾದ ರಸ್ತೆ ಅವೈಜ್ಞಾನಿಕವಾಗಿ ಕಂಡು ಬರುತ್ತಿದೆ.

ಜಾಗದ ಸಮಸ್ಯೆ ಕಾಡಲಿದೆ: ನಗರ ಪಂಚಾಯತದಿಂದ ಪ್ರತಿ ದಿನ ಕಸವನ್ನು ಕೊಂಡೋಗುವುದು ರಾಶಿ ಹಾಕುವುದು ದೊಡ್ಡ ರಾಶಿಯಾದ ನಂತರ ಅದರ ಮೇಲೆ ಮಣ್ಣು ಹಾಕುವುದು ಈ ರೀತಿ ವಿಲೇ ಮಾಡುತ್ತಿರುವುದರಿಂದ ಈಗಾಗಲೇ ನೆಲದಿಂದ 10 ಅಡಿ ಎತ್ತರದವರೆಗೆ ಮಣ್ಣ ದಿಬ್ಬ ಬಂದಿದೆ. ಇದೇ ರೀತಿ ಮಾಡುತ್ತಾ ಹೋದರೆ ಇನ್ನೂ ಏಳೆಂಟು ವರ್ಷದಲ್ಲಿ ಇಲ್ಲಿ ಕಸ ಹಾಕಲು ಜಾಗವೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗುವುದರ ಜೊತೆಗೆ ಪ್ಲಾಸ್ಟಿಕ್ ವಸ್ತುಗಳು ಮಣ್ಣಿನ ಅಡಿಗೆ ಸೇರುವುದರಿಂದ ಪರಿಸರಕ್ಕೂ ಹಾನಿಯಾಗಲಿದೆ.

ರಾಜ್ಯ, ಕೇಂದ್ರ ಸರಕಾರಗಳು ಸ್ವಚ್ಛತೆ ಹಾಗೂ ತ್ಯಾಜ್ಯ ವಿಲೇಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಇದಕ್ಕಾಗಿ ಬೇಕಾದಷ್ಟು ಅನುದಾನವನ್ನು ನೀಡುತ್ತಿದೆ. ಬೆಳ್ತಂಗಡಿ ಕಸವಿಲೇ ಘಟಕದಲ್ಲಿ ಎಲ್ಲಾ ವ್ಯವಸ್ಥೆಗಳಿವೆ. ಆದರೆ ಅಧಿಕಾರಿಗಳು ಮಾತ್ರ ಇದೆಲ್ಲವನ್ನು ನಿರ್ಲಕ್ಷಿಸಿ ತಮಗೆ ಅನುಕೂಲವಾಗುವ ರೀತಿಯಲ್ಲಿ ವಿಲೇ ಕಾರ್ಯವನ್ನು ಅವೈಜ್ಞಾನಿಕವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಇದರ ಬಗ್ಗೆ ದ.ಕ ಜಿಲ್ಲಾಧಿಕಾರಿಗಳು, ನಗರ ಅಭಿವೃದ್ಧಿ ಕೋಶದ ಅಧಿಕಾರಿಗಳು ಗಮನ ಹರಿಸಬೇಕು. ಕಸವನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇ ಮಾಡಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.                                                                                                                                                                                    –  ಬಿ.ಎಸ್.ಕುಲಾಲ್

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.