ಸೋಮಾವತಿ ನದಿಗೆ ರೂ.1.10 ಕೋಟಿ ವೆಚ್ಚದ ಕಿಂಡಿ ಅಣೆಕಟ್ಟು

ಬೆಳ್ತಂಗಡಿ ನಗರ ಮತ್ತು ಲಾಯಿಲ ಗ್ರಾಮಸ್ಥರಿಗೆ ಕುಡಿಯುವ ನೀರು

ಬೆಳ್ತಂಗಡಿ: ಇಲ್ಲಿಯ ಶ್ರೀ ಗುರುದೇವ ಪದವಿ ಕಾಲೇಜು ಸಮೀಪ ಬೆಳ್ತಂಗಡಿಯ ಸೋಮಾವತಿ ನದಿಗೆ ನಿರ್ಮಾಣವಾಗುತ್ತಿದ್ದ ಕಿಂಡಿಅಣೆಕಟ್ಟಿನ ಕಾಮಗಾರಿ ಪೂರ್ಣಗೊಂಡಿದ್ದು, ಬೆಳ್ತಂಗಡಿ ನಗರಕ್ಕೆ ಶಾಶ್ವತ ಕುಡಿಯುವ ನೀರನ್ನು ಒದಗಿಸುವ ನಗರದ ಜನರ ಹಲವು ವರ್ಷಗಳ ಬೇಡಿಕೆ ಈಡೇರಿದೆ.
ಬೆಳ್ತಂಗಡಿ ನಗರ ವ್ಯಾಪ್ತಿಗೆ ಕುಡಿಯುವ ನೀರಿಗೆ ಸೋಮಾವತಿ ನದಿ ಆಸರೆಯಾಗಿದೆ. ಕಳೆದ ಹಲವಾರು ವರ್ಷಗಳಿಂದ ನಗರ ಪಂಚಾಯತು ವತಿಯಿಂದ ಇಲ್ಲಿ ಮಳೆಗಾಲ ಕಳೆದು ಬೇಸಿಗೆ ಆರಂಭದಲ್ಲಿ ತಾತ್ಕಾಲಿಕವಾಗಿ ಮಣ್ಣಿನ ಒಡ್ಡು ನಿರ್ಮಿಸಿ ಅದರಲ್ಲಿ ನೀರು ಸಂಗ್ರಹಿಸಿ ನಗರದ ಜನರಿಗೆ ಕುಡಿಯುವ ನೀರನ್ನು ಒದಗಿಸಲಾಗುತ್ತಿತ್ತು.
ಇದಕ್ಕಾಗಿ ನದಿ ದಡದಲ್ಲಿ ಸುಮಾರು ರೂ. 14 ಕೋಟಿ ವೆಚ್ಚದಲ್ಲಿ ನೀರು ಸಂಗ್ರಹ ಟ್ಯಾಂಕ್, ನೀರು ಶುದ್ಧೀಕರಣ ಘಟಕ ಸ್ಥಾಪನೆ ಮಾಡಲಾಗಿದ್ದು, ಕಳೆದ ವರ್ಷ ಆಗಿನ ಮುಖ್ಯಮಂತ್ರಿ ಯಾಗಿದ್ದ ಸಿದ್ಧರಾಮಯ್ಯ ಅವರು ಇದನ್ನು ಉದ್ಘಾಟಿಸಿದ್ದರು. ನದಿ ನೀರನ್ನು ಪಂಪಿನ ಮೂಲಕ ಶುದ್ಧೀಕರಣ ಘಟಕಕ್ಕೆ ಹಾಕಿ ಶುದ್ಧೀಕರಿಸಿದ ನೀರನ್ನು ನಗರದ ಜನರಿಗೆ ಕುಡಿಯುವುದಕ್ಕಾಗಿ ಪೂರೈಕೆ ಮಾಡಲಾಗುತ್ತಿದೆ.
ಆದರೆ ಈ ವರ್ಷ ಕಡು ಬೇಸಿಗೆಗೆ ಮಣ್ಣಿನ ತಾತ್ಕಾಲಿಕ ಕಟ್ಟ ನಿರ್ಮಿಸಿದ ಒಂದು ತಿಂಗಳಲ್ಲೇ ನದಿಯಲ್ಲಿ ನೀರು ಬತ್ತಿ ಹೋಗಿತ್ತು.
ಇದರಿಂದ ನೀರು ಪೂರೈಕೆ ಮಾಡಲಾಗದೆ ನಗರದ ಜನರು ನೀರಿಗಾಗಿ ಪರದಾಟ ನಡೆಸುವಂತಾಯಿತು. ನಗರದ ಜನರಿಗೆ ಕುಡಿಯುವ ನೀರಿಗಾಗಿ ಪಂಚಾಯತದ ಕೊಳವೆ ಬಾವಿ ಹಾಗೂ ಖಾಸಗಿ ಕೊಳವೆ ಬಾವಿಗಳನ್ನು ಅವಲಂಬಿಸಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಕಳೆದ ಎರಡು ತಿಂಗಳಿನಿಂದ ನಗರಕ್ಕೆ ದಿನದಲ್ಲಿ ಒಂದು ಗಂಟೆ ಮಾತ್ರ ನೀರು ಪೂರೈಕೆ ಮಾಡುವ ಹಂತದವರೆಗೂ ತಲುಪಿತ್ತು. ಮಳೆಗಾಲ ಆರಂಭವಾಗದಿದ್ದರೆ ಜನರಿಗೆ ಮತ್ತಷ್ಟು ಸಂಕಷ್ಟ ಎದುರಾಗುತ್ತಿತ್ತು.
ನೂತನ ಕಿಂಡಿಅಣೆಕಟ್ಟು: ಬೆಳ್ತಂಗಡಿ ನಗರಕ್ಕೆ ನೀರು ಪೂರೈಕೆ ಮಾಡುವ ಸೋಮಾವತಿ ನದಿಗೆ ಶಾಶ್ವತವಾಗಿ ಕಿಂಡಿ ಅಣೆಕಟ್ಟು ನಿರ್ಮಿಸಬೇಕೆಂಬುದು ನಗರದ ಜನರ ಹಲವು ವರ್ಷಗಳ ಬೇಡಿಕೆ ಈ ವರ್ಷ ಈಡೇರಿದೆ. ಇಲ್ಲಿಯ ಶ್ರೀ ಗುರುದೇವ ಪದವಿ ಕಾಲೇಜು ಸಮೀಪದಲ್ಲಿ ಸೋಮಾವತಿ ನದಿಗೆ ಸುಮಾರು ರೂ.1.10 ಕೋಟಿ ವೆಚ್ಚದಲ್ಲಿ ನೂತನ ಕಿಂಡಿಅಣೆಕಟ್ಟು ನಿರ್ಮಿಸಲಾಗಿದ್ದು, ಈಗಾಗಲೇ ಕಾಮಗಾರಿ ಪೂರ್ತಿಗೊಂಡಿದೆ.
ಶಾಸಕ ಹರೀಶ್ ಪೂಂಜ ಹಾಗೂ ಮಾಜಿ ಶಾಸಕ ಕೆ. ವಸಂತ ಬಂಗೇರರ ಪ್ರಯತ್ನದಿಂದ ನಗರದ ಜನರ ಬೇಡಿಕೆ ಈಡೇರಿದ್ದು, ಈ ವರ್ಷ ಮಳೆಗಾಲದ ಕೊನೆಯಲ್ಲಿ ಕಿಂಡಿಅಣೆಕಟ್ಟಿಗೆ ಹಲಗೆಗಳನ್ನು ಹಾಕಿ ನೀರು ನಿಲ್ಲಿಸುವ ಕಾರ್ಯ ನಡೆಯಲಿದೆ. ನದಿಗೆ ಅಡ್ಡವಾಗಿ ನಿರ್ಮಿಸಲಾದ ಈ ಕಿಂಡಿಅಣೆಕಟ್ಟಿನ ಮೇಲೆ ಜನರಿಗೆ ಓಡಾಡಲು ಅನುಕೂಲವಾಗುವಂತೆ ಫೂಟ್‌ಬ್ರೀಜ್ ವ್ಯವಸ್ಥೆಯಿದ್ದು, ಇಲ್ಲಿಯೂ ಜನರು ನದಿಯನ್ನು ದಾಟುತ್ತಿದ್ದಾರೆ.
ನದಿಗೆ ತಾತ್ಕಾಲಿಕ ಮಣ್ಣಿನ ಒಡ್ಡು ನಿರ್ಮಾಣದಿಂದ ಅಲ್ಲಲ್ಲಿ ನದಿ ನೀರು ಹರಿದು ಕೆಳಗಡೆ ಹೋಗುತ್ತದೆ. ಆದರೆ ಈಗ ನಿರ್ಮಾಣವಾದ ಕಿಂಡಿಅಣೆಕಟ್ಟಿಗೆ ಹಲಗೆ ಹಾಕಿ ನೀರು ನಿಲ್ಲಿಸಿದರೆ ಕೆಳಗಡೆ ನೀರು ಹರಿದು ಹೋಗುವುದಿಲ್ಲ. ನದಿಯ ವಿಶಾಲವಾದ ಜಾಗದಲ್ಲಿ ನೀರು ನಿಲ್ಲುವುದರಿಂದ ಹೆಚ್ಚು ನೀರಿನ ಸಂಗ್ರಹವಾಗುತ್ತದೆ. ಜೊತೆಗೆ ಪರಿಸರದ ಕೆರೆ, ಬಾವಿಗಳಲ್ಲಿ ಅಂತರ್ಜಲ ಮಟ್ಟ ಏರಿಕೆಯಾಗುತ್ತದೆ. ಮುಂದಿನ ದಿನಗಳಲ್ಲಿ ನಗರದ ಜನರ ಕುಡಿಯುವ ನೀರಿನ ಸಮಸ್ಯೆ ಶಾಶ್ವತವಾಗಿ ನಿವಾರಣೆಯಾಗಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.