HomePage_Banner_
HomePage_Banner_
HomePage_Banner_

ರಸ್ತೆಗೆ ಉಚಿತ ಜಾಗ ಕೊಟ್ಟರು….ಇದ್ದ 13 ತೆಂಗಿನ ಮರ ಕಳೆದುಕೊಂಡರು….

ನೆರಿಯ: ಸಾರ್ವಜನಿಕ ರಸ್ತೆ ಅಥವಾ ಯಾವುದೇ ಮೂಲಭೂತ ಸೌಕರ್ಯಗಳನ್ನು ಸರಕಾರ ಕಲ್ಪಿಸುವ ವೇಳೆ ಅತ್ತಿತ್ತ ಇರುವ ಮಂದಿ ತಮ್ಮ ಒಂದಿಂಚೂ ಭೂಮಿ ಹೋಗದ ಹಾಗೆ ಸ್ವಾರ್ಥ ತೋರುವವರು ನಮ್ಮ ಕಣ್ಣೆದುರು ಇರುವಾಗ, ಸಾರ್ವಜನಿಕ ರಸ್ತೆಗಾಗಿ ತನ್ನ ಸ್ವಂತ ಜಾಗದ ಬಹುತೇಕ ಪಾಲನ್ನು ಉಚಿತವಾಗಿ ಬಿಟ್ಟುಕೊಟ್ಟು ಇದೀಗ ಆಗಿರುವ ಅಡ್ಡ ಪರಿಣಾಮದಿಂದಾಗಿ ಉತ್ತಮ ಆದಾಯಕ್ಕೆ ದಾರಿಯಾಗಿದ್ದ 13 ತೆಂಗಿನ ಮರಗಳನ್ನು ಕಳೆದುಕೊಳ್ಳಬೇಕಾದ ಸ್ಥಿತಿ ಎದುರಾಗಿದೆ.
ಇದು ನೆರಿಯ ಗ್ರಾಮದ ಬೋವಿನಡಿ ರಾಮ್ ಕುಮಾರ್ ಅವರಿಗೆ ಎದುರಾದ ಸಮಸ್ಯೆ.
ಅಂದು ಅವರು ತಮ್ಮ ಜಾಗಕ್ಕೆ ತಾಗಿಕೊಂಡು ಹೋಗುವ ರಸ್ತೆ ನಿರ್ಮಾಣಕ್ಕಾಗಿ ತನ್ನ ಜಾಗವನ್ನು ನಿಶ್ಯರ್ಥವಾಗಿ ಬಿಟ್ಟುಕೊಟ್ಟಿದ್ದರು. ಅಂತೆಯೇ ರಸ್ತೆ ಕೂಡ ಅಗಲವಾಗಿ ಸುಂದರವಾಗಿ ನಿರ್ಮಾಣವಾಗಿತ್ತು. ರಾಮ್‌ಕುಮಾರ್ ಅವರ ಜಾಗದ ಬಳಿ ತಿರುವು ಕೂಡ ಇದ್ದು ಅಪಾಯಕಾರಿ ಜಾಗವಾಗಿರುವುದರಿಂದ ಎಲ್ಲರಿಗಿಂತ ಸ್ವಲ್ಪ ವಿಶಾಲವಾಗಿಯೇ ಇವರು ಜಾಗ ಕೊಡಬೇಕಾಗಿ ಬಂದಿತ್ತು.
ರಸ್ತೆ ಬಿಟ್ಟುಕೊಟ್ಟದ್ದರಲ್ಲಿ ನಮಗೆ ತೃಪ್ತಿ ಇದೆ. ಯಾಕೆಂದರೆ ನಮಗೆ ಹಿಂದೆ ಸರಕಾರವೇ ಕೊಟ್ಟ ಜಾಗ. ಸಾರ್ವಜನಿಕರಿಗೆ ಪ್ರಯೋಜನವಾಗುವುದಾದರೆ ಅದನ್ನು ನೀಡಿದ್ದರಲ್ಲಿ ನಮಗೇನೂ ಬೇಸರ ಇಲ್ಲ. ಆದರೆ ಸಮಸ್ಯೆ ಏನೆಂದರೆ ರಸ್ತೆ ನಿರ್ಮಾಣವಾಗಿ ವರ್ಷ ಕಳೆಯುತ್ತಿರುವಂತೆ ಇದೀಗ ರಸ್ತೆ ಬದಿ ಇದ್ದ ನಮ್ಮ ತೋಟದ ಉತ್ತಮ ಫಸಲು ಬರುವ 13 ತೆಂಗಿನ ಮರಗಳು ಇದ್ದಕ್ಕಿದ್ದಂತೆ ಸಾಯಲು ಪ್ರಾರಂಭವಾಗಿದೆ ಎಂದು ರಾಮ್ ಕುಮಾರ್ ದುಃಖ ಪಡುತ್ತಾರೆ. ಮೊದಮೊದಲು ನಿಧಾನಕ್ಕೆ ಮರದಲ್ಲಿ ವ್ಯತ್ಯಾಸ ಕಾಣಲು ಆರಂಭವಾಗಿ ಇದೀಗ ಕೆಲವು ಮರಗಳು ತುದಿಭಾಗ ಗರಿಗಳು ಮತ್ತು ಫಸಲು ಉದುರಿ ಸತ್ತೇ ಹೋಗಿದೆ. ಉಳಿದವುಗಳು ದಿನಗಣನೆ ಆರಂಭಿಸಿದೆ. ಇದು ತೀರಾ ಸಂಕಟ ತಂದಿದೆ ಎನ್ನುತ್ತಾರೆ ರಾಮ್ ಕುಮಾರ್ ಅವರು.

ಗುತ್ತಿಗೆದಾರರ ಬೇಜವಾಬ್ಧಾರಿಯಿಂದಲೂ, ಕಾರ್ಮಿಕರ ನಿರ್ಲಕ್ಷ್ಯದಿಂದಲೋ ಸಿಮೆಂಟ್ ನೀರು, ಅಥವಾ ರಸ್ತೆ ರಚನೆ ವೇಳೆ ಡಾಂಬರು ಮತ್ತು ಎಲ್ಲ ರೀತಿಯ ಮಿಶ್ರಿತ ಮಣ್ಣುಗಳು ತೆಂಗಿನ ಮರದ ಬುಡ ಸೇರಿದ್ದರಿಂದ ಈ ರೀತಿ ಆಗಿರುವ ಸಾಧ್ಯತೆ ಇದೆ. ಎಲ್ಲರ ಪ್ರಯೋಜನಕ್ಕಾಗಿ ನಾವು ಅಮೂಲ್ಯ ಕೃಷಿ ಜಾಗವನ್ನೇ ಬಿಟ್ಟುಕೊಟ್ಟು ಇದೀಗ ನಾವು ಹೆಚ್ಚು ಪ್ರೀತಿಸುವ ಕೃಷಿಗೇ ಸಂಚಕಾರ ತಂದುಕೊಂಡಂ ತಾಗಿದೆ. ಅಲ್ಲದೆ ಈ ತೆಂಗಿನ ಮರಗಳಲ್ಲಿ ವರ್ಷಕ್ಕೆ ಎಷ್ಟಿಲ್ಲವೆಂದರೂ ತಲಾ ಒಂದೊಂದು ಸಾವಿರ ಕಾಯಿಗಳು ಸಿಗುತ್ತಿತ್ತು. ಈಗ ಅವುಗಳನ್ನು ನೋಡುವಾಗ ಬೇಸರ ತರಿಸುತ್ತದೆ. ಇದಕ್ಕೆ ಗುತ್ತಿಗೆದಾರರು ಅಥವಾ ಇಲಾಖೆ ಮಧ್ಯಪ್ರವೇಶಿಸಿ, ಜನಪ್ರತಿನಿಧಿಗಳ ಮಧ್ಯಸ್ಥಿಕೆಯಲ್ಲಿ ಏನಾದರೂ ಪರಿಹಾರ ದೊರೆಯುವಂತೆ ಮಾಡಬೇಕಾಗಿದೆ.
-ರಾಮ್ ಕುಮಾರ್, ಜಾಗದ ಮಾಲಿಕರು

ಹಾಲಿ- ಮಾಜಿ ಶಾಸಕರಿಗೆ, ತಹಶಿಲ್ದಾರರಿಗೆ ಪತ್ರ:
ಇದೀಗ ರಾಮ್ ಕುಮಾರ್ ಅವರು ಶಾಸಕ ಹರೀಶ್ ಪೂಂಜ ಅವರನ್ನು ಕಂಡು ದೂರು ಸಲ್ಲಿಸಿದ್ದಾರೆ. ಅದಕ್ಕೆ ಅವರು, ಇದಕ್ಕೆಲ್ಲ ಪರಿಹಾರ ಅನುಮಾನ ಎಂದು ಪ್ರತಿಕ್ರಿಯಿಸಿದ್ದಾರೆಂದು ತಿಳಿಸಿದ್ದಾರೆ. ಮಾಜಿ ಶಾಸಕ ವಸಂತ ಬಂಗೇರ ಅವರಿಗೆ ದೂರು ನೀಡಿದ್ದು, ಅವರು ಸ್ಥಳ ಪರಿಶೀಲನೆ ನಡೆಸಿ ವಿಚಾರದ ಬಗ್ಗೆ ಗುತ್ತಿಗೆದಾರರನ್ನು ಸಂಪರ್ಕಿಸಲು ಪ್ರಯತ್ನ ಪಟ್ಟರೂ ಸಂಪರ್ಕ ಸಾಧ್ಯವಾಗಿಲ್ಲವಂತೆ. ಇದೀಗ ಅವರ ಸಲಹೆ ಮೇರೆಗೆ ತಹಶಿಲ್ದಾರರಿಗೆ ಲಿಖಿತ ಮನವಿ ನೀಡಿ ಪರಿಹಾರಕ್ಕೆ ಆಗ್ರಹಿಸಲಾಗಿದೆ.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.