1.24ಲಕ್ಷ ಅರ್ಜಿಗಳಲ್ಲಿ 2 ಸಾವಿರದಷ್ಟು ಮಾತ್ರ ಪರಿಹಾರಕ್ಕೆ ಬಾಕಿ
ತಾಂತ್ರಿಕ ಕಾರಣದಿಂದಷ್ಟೇ ಪಾವತಿಗೆ ಉಳಿಕೆ
ಆಧಾರ್ ಲಿಂಕ್ ಲಾಸ್ಟ್ ಅಪ್ಡೇಟ್ ಮಾಡಿದ ಖಾತೆಗೆ ಹಣ ವರ್ಗಾವಣೆ
ತಾಲೂಕು ಕಚೇರಿಗೆ ಬಂದರೆ ಸ್ಟೇಟಸ್ ಮಾಹಿತಿ ನೀಡಲು ಬದ್ಧ; ತಹಶಿಲ್ದಾರ್
17202ಎಕ್ರೆ ಪ್ರದೇಶದಲ್ಲಿ ಕೊಳೆರೋಗ ಬಾಧೆ ಆಗಿದ್ದಾಗಿ ತೋಟಗಾರಿಕಾ ಇಲಾಖೆ ಮಾಹಿತಿ
ಬೆಳ್ತಂಗಡಿ: ಕಳೆದ ಬಾರಿ ಅತಿವೃಷ್ಟಿಯಿಂದ ತಾಲೂಕಿನ ಬಹುತೇಕ ಅಡಿಕೆ ತೋಟಗಳಿಗೆ ಬಾಧಿಸಿದ್ದ ಕೊಳೆರೋಗ ನಷ್ಟದ ಪರಿಹಾರದ ಕಡತ ವಿಲೇಯಲ್ಲಿ ಬೆಳ್ತಂಗಡಿ ತಾಲೂಕು ಗಣನೀಯ ಸಾಧನೆ ಮೆರೆದಿದೆ. ತಾಲೂಕಿನಲ್ಲಿ ಫೀಲ್ಡ್ ವರ್ಕ್ ಮೂಲಕ ಸಂಗ್ರಹಿಸಲಾದ ಒಟ್ಟು 1.24 ಲಕ್ಷ ಅರ್ಜಿಗಳನ್ನು ಕಂದಾಯ ಮತ್ತು ತೋಟಗಾರಿಕಾ ಇಲಾಖೆ ಜಂಟಿ ಕಾರ್ಯಾಚರಣೆ ಮೂಲಕ ಅಂತಿಮಗೊಳಿಸಿದ್ದು ಆ ಪೈಕಿ ಕೇವಲ 2 ಸಾವಿರದಷ್ಟು ಮಂದಿಗೆ ಮಾತ್ರ ತಾಂತ್ರಿಕ ಕಾರಣಗಳಿಂದಾಗಿ ಪರಿಹಾರ ಸಂದಾಯಕ್ಕೆ ಬಾಕಿಯಾಗಿದೆ ಎಂದು ತಿಳಿದುಬಂದಿದೆ.
ಪಂಚಾಯತ್ ಮಟ್ಟದಲ್ಲಿ ತಂಡಗಳಾಗಿ ಅಧಿಕಾರಿಗಳಿಂದ ಸಮೀಕ್ಷೆ: ಕಳೆದ ಬಾರಿ ಅಡಿಕೆ ಬೆಳೆಗಾರರು ಕೊಳೆರೋಗದಿಂದ ಕಂಗೆಟ್ಟು ಭಾರೀ ಸಮಸ್ಯೆಗೆ ಸಿಲುಕಿದಾಗ ಅವರಿಗೆ ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ ಸಮ್ಮಿಶ್ರ ಸರಕಾರಕ್ಕೆ ಹೆಚ್ಚಿನ ಒತ್ತಡಗಳನ್ನು ಹಾಕಲಾಗಿತ್ತು. ಈ ವೇಳೆ ಸರಕಾರ ಕೊಳೆರೋಗದ ಪ್ಯಾಕೇಜ್ ಘೋಷಿಸು ವಾಗ ರೈತರು ಪರಿಹಾರದಿಂದ ವಂಚಿತರಾಗಬಾರದು ಎಂದು ಸರಕಾರದ ಆದೇಶಕ್ಕೂ ಪೂರ್ವವಾಗಿಯೆ ಗ್ರಾ.ಪಂ ಪಿಡಿಇ, ತೋಟಗಾರಿಕಾ ಇಲಾಖೆ ಅಧಿಕಾರಿಗಳು, ಕಂದಾಯ ಇಲಾಖೆಯಿಂದ ಆರ್.ಐ ಮತ್ತು ವಿ.ಎ ಯನ್ನೊಳಗೊಂಡ ಅಧಿಕಾರಿಗಳ ವಿಶೇಷ ತಂಡ ರಚಿಸಿ ಆಯಾಯಾ ಪಂಚಾಯತ್ ಮಟ್ಟದಲ್ಲೇ ಅರ್ಜಿ ಸ್ವೀಕಾರದ ಪ್ರಕಟಣೆ ಹೊರಡಿಸಿ ರೈತರಿಗೂ ತೊಂದರೆಯಾಗದಂತೆ ಮಾದರಿ ಕಾರ್ಯಯೋಜನೆ ಮಾಡಲಾಗಿತ್ತು. ಈ ಬಗ್ಗೆ ಶಾಸಕ ಹರೀಶ್ ಪೂಂಜ ಅವರು ಲಾಯಿಲ ಪಂಚಾಯತ್ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ಕಡೆದು ಅವರಿಗೆ ಸ್ಪಷ್ಟ ನಿರ್ದೇಶನ ನೀಡಿದ್ದರು. ಇದೆಲ್ಲದರ ಪರಿಣಾಮವಾಗಿ ಇಂದು ಅರ್ಜಿ ನೀಡಿದ ಎಲ್ಲಾ ಅರ್ಜಿಗಳು ವಿಲೇ ಆಗುವಂತಾಗಿದ್ದು ಎಲ್ಲರಿಗೂ ಪರಿಹಾರ ಕೈ ಸೇರುವಲ್ಲಿ ಪ್ರಮುಖ ಕಾರಣವಾಗಿದೆ ಎಂಬುದು ಇಲ್ಲಿ ಉಲ್ಲೇಖಾರ್ಹ.
ರೈತರ ಸಾಲಮನ್ನಾ ಪ್ರಯೋಜನ ದೊರೆಯುವುದಕ್ಕಾಗಿ ಸಹಕಾರಿ ಸಂಘಗಳ ಸಿಬ್ಬಂದಿಗಳು ಸಲ್ಲಿಸಿದ ಸೇವೆಯೂ ಅಭಿನಂದನಾರ್ಹ:
ವಿಶೇಷವಾಗಿ ಸರಕಾರಗಳು ರೈತರ ಸಾಲ ಮನ್ನಾ ಮಾಡಬೇಕು ಎಂಬ ಕೂಗು ಎಲ್ಲೆಡೆ ಕೇಳುತ್ತಿರುತ್ತದೆ. ಅದು ಕೊನೆ ಗಳಿಗೆಯಲ್ಲಿ ಘೋಷಣೆಯಾದರೆ ಅದಕ್ಕೆ ಸೂಕ್ತ ಕಡತ ಅಂತಿಕಗೊಳಿಸಬೇಕಾದ ಕೆಲಸ ಮಾಡುವುದರ ಹಿಂದೆ ಪರದೆಯ ಹಿಂದೆ ಅನೇಕರ ಕೆಲಸ ಸಾಧನೆಗಳು ಅಡಗಿರುತ್ತದೆ. ರೈತರಿಗೆ ಅತೀ ಹೆಚ್ಚು ಸಾಲ ವ್ಯವಹಾರಗಳು ಇರುವುದು ಸಹಕಾರಿ ಸಂಘಗಳಲ್ಲಿ. ಆದ್ದರಿಂದ ರೈತರಿಗೆ ಸಾಲಮನ್ನಾದ ಪ್ರಯೋಜನ ದೊರೆಯಬೇಕು ಎಂದು ಸಹಕಾರಿ ಸಂಘದ ಸಿಬ್ಬಂದಿಗಳು ಶನಿವಾರ ಅಪರಾಹ್ನ, ಎರಡನೇ ಶನಿವಾರ, ಆದಿತ್ಯವಾರ ಎಂದಿಲ್ಲದೆ, ರಾತ್ರಿ 10 ಗಂಟೆಯವರೆಗೂ ಕಚೇರಿಯಲ್ಲಿದ್ದು ಹೆಚ್ಚುವರಿ ಕೆಲಸ ಮಾಡಿದನ್ನೂ ಇಲ್ಲಿ ನೆನಪಿಸಬೇಕಾಗುತ್ತದೆ.
1.24 ಲಕ್ಷ ಅರ್ಜಿಯಲ್ಲಿ ಕೇವಲ 2ಸಾವಿರದಷ್ಟು ಮಾತ್ರ ಪಾವತಿಗೆ ಬಾಕಿ ಎಂದರೆ ಉತ್ತಮ ಸಾಧನೆ. ಅದರಲ್ಲೂ ಒಂದೇ ಒಂದು ಕಡತ ಬಾಕಿಯಾಗದಂತೆ ವಿಲೇ ಮಾಡಲಾಗಿದೆ. ರೈತರು ಲಾಸ್ಟ್ ಅಪ್ಡೇಟ್ನಲ್ಲಿ ಯಾವ ಖಾತೆಗೆ ಆಧಾರ್ ಲಿಂಕ್ ಮಾಡಿದ್ದಾರೋ ಆ ಖಾತೆಗೆ ಹಣ ವರ್ಗಾವಣೆಯಾಗಿದೆ. ಆಧಾರ್ ಮತ್ತು ಖಾತೆಯಲ್ಲಿ ಫಲಾನುಭವಿ ರೈತರ ಹೆಸರು ತಾಳೆ ಬಾರದೇ ಇರುವ ತಾಂತ್ರಿಕ ಕಾರಣದಿಂದಾಗಿ ಕೆಲವೊಂದು ಪಾವತಿಗೆ ಬಾಕಿ ಉಳಿದಿರಬಹುದು. ಆದರೆ ಅದನ್ನೂ ಸರಿಪಡಿಸಲು ಕ್ರಮ ಕೈಗೊಳ್ಳಲಾಗಿದೆ. ನಮ್ಮ ಇಲಾಖೆ ಸಿಬ್ಬಂದಿಗಳು ಆಹೋರಾತ್ರಿ ಕೆಲಸ ಮಾಡಿದ್ದರಿಂದ ಅಷ್ಟೂ ಪ್ರಮಾಣದ ಅರ್ಜಿಗಳ ವಿಲೇ ಸಾಧ್ಯವಾಯಿತು. ಇದರಲ್ಲಿ ಸಾಮೂಹಿಕ ಪ್ರಯತ್ನ ಅಡಗಿದೆ. ಇದೀಗ ಪಾವತಿಗೆ ಬಾಕಿ ಇರುವವರು ನಮ್ಮ ಕಚೇರಿಗೆ ಬಂದರೆ ಅವರಿಗೆ ಪಾವತಿಯ ಮಾಹಿತಿ ಒದಗಿಸಿಕೊಡಲಾಗುವುದು.
-ಗಣಪತಿ ಶಾಸ್ತ್ರಿ, ತಹಶಿಲ್ದಾರರು ಬೆಳ್ತಂಗಡಿ.