ಮಡಂತ್ಯಾರು: ಕಠಿಣ ದುಡಿಮೆಯ ವೇಳೆ ಆಗಿರುವ ಆಕಸ್ಮಿಕ ಘಟನೆಯಿಂದ ಗಂಭೀರ ಗಾಯಗೊಂಡು ತೀವ್ರ ತೊಂದರೆಗೆ ಒಳಗಾಗಿರುವ ಯೂಸುಫ್ (ಇಸುಬಾಕ ಮಡಂತ್ಯಾರ್) ಅವರಿಗೆ ಎಮರ್ಜನ್ಸಿ ಹೆಲ್ಪಿಂಗ್ ಫಂಡ್ ವಾಟ್ಸ್ ಆಪ್ ಮೂಲಕ 1 ವಾರದಲ್ಲಿ ಸಂಗ್ರಹಿಸಿದ ಒಟ್ಟು 1,52,375 ರೂ. ಸಹಾಯಧನ ಮೊತ್ತವನ್ನು ಮೇ 26 ರಂದು ಮಂಗಳೂರು ತೇಜಸ್ವಿನಿ ಆಸ್ಪತ್ರೆಯಲ್ಲಿ ಅವರ ಪತ್ನಿ ಹಾಗೂ ಕುಟುಂಬದವರಿಗೆ ಹಸ್ತಾಂತರಿಸಲಾಯಿತು.
ಸಿದ್ದೀಕ್ ಸಾಗರ್ ಬ್ರದರ್ಸ್ ಸೋಮಂತಡ್ಕ ಅವರ ನೇತೃತ್ವದಲ್ಲಿ ಸಮಾನ ಮನಸ್ಕ ಸ್ನೇಹಿತರು, ಟಿಂಬರ್ ಉದ್ಯಮಿಗಳು ಹಾಗೂ ಸಾರ್ವಜನಿಕರು ಈ ನೆರವಿಗೆ ಅಪಾರವಾಗಿ ಸ್ಪಂದಿಸಿದ್ದಾರೆ.
ಕೂಲಿ ಕಾರ್ಮಿಕರಾಗಿರುವ ಯೂಸುಫ್ ಇಸುಬು ಮಡಂತ್ಯಾರು ಅವರು ಇತ್ತೀಚೆಗೆ ಕ್ರೈನ್ ಮೂಲಕ ಮರದ ದಿಮ್ಮಿ ಲೋಡ್ ಕೆಲಸದಲ್ಲಿ ನಿರತರಾಗಿದ್ದಾಗ ಆಕಸ್ಮಿಕವಾಗಿ ಮರದ ದಿಮ್ಮಿಯೊಂದಿ ಅವರ ಮೈಮೇಲೆ ಉರುಳಿ ಅವರ ದೇಹದ ಬಹುತೇಕ ಕಡೆ ಎಲುಬುಗಳ ಮುರಿತಕ್ಕೊಳಗಾಗಿ ಅವರು ಈಗಾಗಲೇ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಚಿಕಿತ್ಸೆಗೆ ಸುಮಾರು ೧೦ ಲಕ್ಷಕ್ಕೂ ಅಧಿಕ ಮೊತ್ತ ಬೇಕಾಗ ಬಹುದು ಎಂದು ಸುದ್ದಿ ಬಿಡುಗಡೆ ಪತ್ರಿಕೆ ಕೂಡ ಸಾರ್ವಜನಿಕರಲ್ಲಿ ಮನವಿ ಮಾಡಿ ವರದಿಪ್ರಕಟಿಸಿದ್ದು ಅದನ್ನೂ ನೋಡಿದ ಅನೇಕ ಮಂದಿ ಅವರ ವೈಯುಕ್ತಿಕ ಖಾತೆಗೆ ಹಣ ಜಮಾವಣೆ ಮಾಡಿದ್ದಾರೆ.