ಲಾಯಿಲ ಗ್ರಾಮೀಣ ಶ್ರೇಷ್ಠತಾ ಕೇಂದ್ರದ ಆವರಣದಲ್ಲಿ “ಸಿರಿಧಾನ್ಯ ಕೆಫೆ” ಆರಂಭ

ಪಾಶ್ಚಾತ್ಯ ಆಹಾರ ಶೈಲಿಯ ವ್ಯಾಮೋಹದಿಂದ ಮೂಲ ಆಹಾರ ಪದ್ಧತಿ -ಸಂಸ್ಕೃತಿ ನಶಿಸಿಹೋಗದಿರಲಿ: ಶ್ರದ್ಧಾ ಅಮಿತ್

ಲಾಯಿಲ: ಜಾಹೀರಾತುಗಳ ಪ್ರಭಾವ ಮತ್ತು ನಮ್ಮ ಪಾಶ್ಚಾತ್ಯ ಆಹಾರ ಶೈಲಿಯ ವ್ಯಾಮೋಹದಿಂದಾಗಿ ಮೂಲ ಆಹಾರ ಪದ್ಧತಿ ಮತ್ತು ಆಹಾರ ಸಂಸ್ಕೃತಿ ಮುಂದಿನ ಪರಂಪರೆಗೆ ಹಸ್ತಾಂತರವಾಗದೆ ನಶಿಸಿ ಹೋಗುವ ಅಪಾಯ ಎದುರಾಗಿದೆ ಎಂದು ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಟ್ರಸ್ಟ್ ಟ್ರಸ್ಟಿ ಶ್ರದ್ಧಾ ಅಮಿತ್ ಆತಂಕ ವ್ಯಕ್ತಪಡಿಸಿದರು.
ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ ಬೆಳ್ತಂಗಡಿ ಇದರ ವತಿಯಿಂದ ಲಾಯಿಲ ಗ್ರಾಮೀಣ ಶ್ರೇಷ್ಠತಾ ಕೇಂದ್ರದ ಆವರಣದಲ್ಲಿ ಮೇ. 26 ರಂದು ಪ್ರಾರಂಭಗೊಂಡ ಸಿರಿಧಾನ್ಯ ಕೆಫೆ (ಮಿಲ್ಲಟ್ ಕೆಫೆ) ಇದನ್ನು ಉದ್ಘಾಟನೆಗೊಳಿಸಿ ಅವರು ಮಾತನಾಡಿದರು.

ಹಿಂದಿನ ಕಾಲದ ತಾಯಂದಿರು ಮಕ್ಕಳಿಗೆ ಮೂರು ಹೊತ್ತು ಇಂತಿಷ್ಟು ಅಂತ ಆಹಾರ ನೀಡಿ ನಿಶ್ಚಿಂತರಾಗಿದ್ದರೆ ಈಗಿನ ಕಾಲದಲ್ಲಿ ಈ ಕ್ಷೇತ್ರದಲ್ಲಿ ದಿನ ದಿನ ಆಗುತ್ತಿರುವ ಆವಿಷ್ಕಾರಗಳಿಂದಾಗಿ ಯಾವ ಆಹಾರ, ಯಾವ ಪ್ರಾಯದ ಮಗುವಿಗೆ ಎಷ್ಟೆಷ್ಟು ಬೇಕು. ಕ್ರೀಡೆ, ಕಲಿಕೆ, ಜೀವನೋತ್ಸಾಹ ಉಳಿಸಿಕೊಂಡು ಮಗು ಬೆಳೆಯಬೇಕಾದರೆ ಯಾವ ಕಾಲಕ್ಕೆ ಯಾವ್ಯಾವ ಅಂಶಗಳು ಮಗುವಿನ ಆಹಾರದ ಮೂಲಕ ದೊರೆಯಬೇಕು ಎಂಬುದಾಗಿ ಪ್ರತಿಯೊಬ್ಬ ಆಧುನಿಕ ಕಾಲದ ತಾಯಿ ತಾನೇ ಸ್ವತಃ ಒರ್ವೆ ಆಹಾರ ತಜ್ಞೆಯಾಗಿರಬೇಕಾದ ಅನಿವಾರ್ಯತೆ ಸೃಷ್ಟಿಸಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಸಿರಿ ಧಾನ್ಯ ಆಹಾರ ತಜ್ಞೆಯಾಗಿರುವ ಧಾರವಾಡಿ ಕೃಷಿ ವಿವಿ ನಿವೃತ ಪ್ರಾದ್ಯಾಪಕಿ ಡಾ. ಶಕುಂತಲಾ ಸವದತ್ತಿ ಮಾಸೂರು ಅವರು ಮಾತನಾಡಿ, ಸಿರಿ ಧಾನ್ಯಗಳಿಗೆ ಅದರದ್ದೇ ಆದ ಮಹತ್ವ ಇದೆ. 9 ಸಿರಿ ಧಾನ್ಯಗಳನ್ನು ಸೇವಿಸುವುದರಿಂದ ಉತ್ತಮ ಆರೋಗ್ಯ ಕಾಯ್ದುಕೊಳ್ಳಬಹುದು. ಅದರಲ್ಲೂ ದಿನಕ್ಕೊಂದರಂತೆ ಸಿದಿ ಧಾನ್ಯ ಬಳಸಿದರೆ ವಾರದಲ್ಲಿ ಎಲ್ಲಾ ಧಾನ್ಯಗಳ ಪ್ರಯೋಜನವನ್ನು ದೇಹಕ್ಕೆ ಲಭಿಸುವಂತೆ ಮಾಡಬಹುದಾಗಿದೆ. ಸಿರಿಧಾನ್ಯ ಸೇವಿಸಿ ಸಿರಿವಂತರಾಗಿರಿ ಎಂದರು.

ಇನ್ನೋರ್ವ ಮುಖ್ಯ ಅತಿಥಿ ಭದ್ರಾವತಿಯ ಆರ್ಯಾಸ್ ಸ್ಲೋಫುಡ್ ಮಾಲಿಕ ಹಾಗೂ ಸಾವಯ ಕೃಷಿಕ ಈಶ್ವರನ್ ಪಿ ತೀರ್ಥ ಅವರು ಸಿರಿ ಧಾನ್ಯಗಳ ಬಗ್ಗೆ ಜಾಗೃತಿ ಮತ್ತು ತಮ್ಮ ಅನುಭವ ಹಂಚಿಕೊಂಡರು.
ಅಧ್ಯಕ್ಷತೆ ವಹಿಸಿದ್ದ ಸಿರಿ ಗ್ರಾಮೋದ್ಯೋಗ ಸಂಸ್ಥೆ ಆಡಳಿತ ನಿರ್ದೇಶಕ ಡಾ. ಎಲ್. ಎಚ್ ಮಂಜುನಾಥ್ ಮಾತನಾಡಿ, ಧರ್ಮಸ್ಥಳ ಸಿರಿ ಸಂಸ್ಥೆಯಿಂದ ಸಿರಿಧಾನ್ಯ ಸಂಸ್ಕರಣ ಘಟಕ, ಸಿರಿ ಬೇಕರಿ, ಸಿರಿ ಲೆಬೋರೇಟರಿ ಇವುಗಳನ್ನು ಈಗಾಗಲೆ ತೆರೆಯಲಾಗಿದೆ. ಇದೀಗ ಕೇಂದ್ರ ಕಚೇರಿ ಲಾಯಿಲ ದಿಂದಲೇ ಸಿರಿಧಾನ್ಯ “ಮಿಲ್ಲೆಟ್ ಕೆಫೆ” ತೆರೆಯಲಾಗುತ್ತಿದ್ದು ಇದು ಎಲ್ಲೆಡೆ ವಿಸ್ತರಿಸುವ ಇರಾದೆ ಇದೆ. ಇದರ ಜೊತೆ ದ್ವಿದಳ ಧಾನ್ಯ ಮತ್ತು ಸಿರಿಧಾನ್ಯ ಬೆರೆಸಿದ ಬೇರೆ ಉತ್ಪನ್ನಗಳ ಖಾದ್ಯಗಳನ್ನು ತಯಾರಿಸಿ ನಿತ್ಯ ನೀಡಲಾಗುವುದು. ನಮ್ಮ ಶಿಕ್ಷಣ ಸಂಸ್ಥೆಗಳ ವಿದ್ಯಾಥಿಗಳಲ್ಲಿ ಈ ಬಗ್ಗೆ ಜಾಗೃತಿ ಮತ್ತು ಆಸಕ್ತಿ ಮೂಡಿಸಲಾಗುವುದ. ಅಲ್ಲದೆ ಕಚೇರಿ, ದೈನಂದಿನ ವ್ಯವಹಾರಕ್ಕೆ ಅತ್ತಿಂದಿತ್ತ ಓಡಾಡುವ ಜನಸಾಮಾನ್ಯರಿಗೂ ಈ ಕ್ಯಾಂಟೀನ್ ಪ್ರಯೋಜನ ನೀಡಲಿದೆ ಎಂದರು.
ಅಶ್ವಿನಿ ಮತ್ತು ಬಳಗದವರು ಧ್ಯೇಯಗೀತೆಯ ಪ್ರಾರ್ಥನೆ ಹಾಡಿದರು. ರಾಮ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಯೋಜನಾಧಿಕಾರಿ ರೋಹಿತಾಕ್ಷ ವಂದನಾರ್ಪಣೆಗೈದರು. ಹಿರಿಯ ಮಾರುಕಟ್ಟೆ ಪ್ರಬಂಧಕ ಸುಧಾಕರ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.