ಬ್ಯಾಗಿನ ತೂಕದೊಂದಿಗೆ ಕಲಿಕೆಯ ಹೊರೆಯೂ ಇಳಿಯಬೇಕು

Advt_NewsUnder_1
Advt_NewsUnder_1
ರಾಮಕೃಷ್ಣ ಭಟ್ ಚೊಕ್ಕಾಡಿ ಬೆಳಾಲು

ಹೊರೆ ರಹಿತ ಕಲಿಕೆಯ ಬಗ್ಗೆ ಸರಕಾರದ ನಿರ್ಧಾರ ತುಂಬಾ ಒಳ್ಳೆಯದು. ನಿಧಾನವಾಗಿ ಯಾದರೂ ಶೈಕ್ಷಣಿಕವಾಗಿರುವ ಸರಕಾರದ ಧನಾತ್ಮಕ ನಿರ್ಧಾರಕ್ಕೆ ಸ್ವಾಗತ. ಹೊರೆ ರಹಿತ ಕಲಿಕೆ ಮಕ್ಕಳ ದೈಹಿಕ ಭಾರವನ್ನು ಇಳಿಯಲಿದೆ. ಈ ಸಂಬಂಧವಾಗಿ 1ರಿಂದ 10ನೇ ತರಗತಿಯವರೆಗಿನ ಬ್ಯಾಗ್ ತೂಕ ಅಂದರೆ ಪುಸ್ತಕದ ತೂಕ ಎಷ್ಟಿರಬೇಕೆಂಬ ಬಗ್ಗೆಯೂ ಮಾಹಿತಿ ನೀಡಿದೆ. ಮುಂದಿನ ಶೈಕ್ಷಣಿಕ ವರ್ಷಕ್ಕೆ ಅಷ್ಟರ ಮಟ್ಟಿಗಾದರೂ ನಮ್ಮ ಮಕ್ಕಳು ಕಟ್ಟು ಹೊರುವ ಗುಲಾಮತನದ ಶೈಕ್ಷಣಿಕ ಭಾರದಿಂದ ಮುಕ್ತವಾಗಲಿದ್ದಾರೆ.
ಆದರೆ ನಿಜವಾಗಿಯೂ ಭಾರ ಕಡಿಮೆ ಆಗ ಬೇಕಾದ್ದು ಹೊರಗಿನ ಭಾರವೊ….. ಒಳಗಿನ ಭಾರವೊ……? ಹೊರಗಿನ ಭಾರ ಓಕೆ. ಒಳಗಿನ ಭಾರದ ಬೇನೆಗೆ ಪರಿಹಾರವೇನು? ಬರಬರುತ್ತಾ ಶೈಕ್ಷಣಿಕ ರಂಗ ಮುಕ್ತ ಮಾರುಕಟ್ಟೆಯ ಪ್ರಾಂಗಣವಾಗಿದೆ. ಈ ಕಾರಣಕ್ಕಾಗಿ ಮಾರುಕಟ್ಟೆಗೆ ಬೇಕಾದ ಹಾಗೂ ಮುಂಚೂಣಿಯಲ್ಲಿರುವ, ಗುಣಮಟ್ಟದ ಶಿಕ್ಷಣಕ್ಕಾಗಿ ಹೆಸರುವಾಸಿಯೆಂದು ಬಿಂಬಿಸಿಕೊಳ್ಳುವ ಸಂಸ್ಥೆಗಳಿಗೆ ಸರಕುಗಳನ್ನು ಸಪ್ಲೈ ಮಾಡಬೇಕಲ್ಲ! ಅದಕ್ಕಾಗಿ ಇವತ್ತು ಪುಸ್ತಕದ ಭಾರ ದ್ವಿಗುಣಗೊಂಡದ್ದು. ಇದು ಭಾರದ ಒಂದು ಭಾಗವಾದರೆ ಈಗಾಗಲೆ ಹೇಳಿದಂತೆ ಒಳಗಿನ ಬಹಳ ಮುಖ್ಯವಾದ ಕಲಿಕೆಯ ಹೊರೆಯ ಬಗ್ಗೆ ಯಾರು ಮಾತಾಡಬೇಕು?
ನಾವೆಲ್ಲರೂ ಗುಣಮಟ್ಟವನ್ನು ಅಂಕಕ್ಕೆ ಸಮೀಕರಿಸಿದ್ದೇವೆ. ಅಂಕವೇ ಗುಣಮಟ್ಟವೆನ್ನುವುದಾದರೆ ಹೊರಗಿನ ಭಾರ ಮುಖ್ಯವಲ್ಲ. ಅಂಕ ಗುಣಮಟ್ಟದ ಒಂದು ಭಾಗವೆಂದು ಪರಿಗಣಿಸಿ ಮಾತನಾಡುವು ದಾದರೆ ಕಲಿಕಾ ಪ್ರಕ್ರಿಯೆಯ ಪರಿಣಾಮ ಅದಕ್ಕಿಂತಲೂ ಮುಖ್ಯ ಭಾಗ. ಈ ಹಿನ್ನಲೆಯಲ್ಲಿ ಕಲಿಕಾ ಪ್ರಕ್ರಿಯೆಗೆ ಎಷ್ಟು ತೂಕದ ಪುಸ್ತಕ ಎನ್ನುವುದರ ಜೊತೆಗೆ ಅದರೊಳಗಿನ ಪಠ್ಯಗಳು ಯಾವ ರೀತಿ ತರಗತಿಗಳಲ್ಲಿ ಬೋಧಿಸಲ್ಪಡುತ್ತದೆ, ಯಾಕಾಗಿ ಬೋಧಿಸಲ್ಪಡುತ್ತದೆ ಎಂಬುದರ ನೆಲೆಯಲ್ಲಿ ಕಲಿಕೆಯ ಭಾಗವಾಗಿ ಬ್ಯಾಗ್ ಹೊರೆ ರಹಿತವೋ, ಸಹಿತವೋ ಎಂದು ಪರಿಗಣಿತ ವಾಗುತ್ತದೆ. ಒಂದು ಪಾಠವು (ಪಠ್ಯಪುಸ್ತಕಗಳು) ಹೊರೆ ರಹಿತ ಕಲಿಕೆಯ ಭಾಗವಾಗಬೇಕಾದರೆ ಅದರ ಆತ್ಯಂತಿಕ ನೆಲೆಯಾವುದು? ಭೋಧನೆ, ಪಾಠ ಪುಸ್ತಕಗಳು ಅಂಕ ಪಡೆಯುವುದಕ್ಕೊ, ಗುಣದ ಅಂಕ ರೂಢಿಸಿಕೊಳ್ಳುವುದಕ್ಕೊ ಎಂಬ ಎರಡು ಅಂಶಗಳಿವೆ. ಪ್ರಸ್ತುತ ಸಾಮಾನ್ಯವಾಗಿ ಎಲ್ಲಾ ತರಗತಿಗಳಲ್ಲೂ ಮಕ್ಕಳು ಪಾಸಾಗಬೇಕು, ಹೆಚ್ಚು ಅಂಕ ಪಡೆದು ಪಾಸಾಗಬೇಕು, ಗರಿಷ್ಠ ಅಂಕ ಪಡೆದು ಶಾಲೆಗೊ….. ಊರಿಗೊ….. ಫಸ್ಟ್ ಆಗಬೇಕು, 100 ಶೇಕಡಾ ಫಲಿತಾಂಶವನ್ನು ಶಾಲೆ ದಾಖಲಿಸಬೇಕು ಎಂಬಿತ್ಯಾದಿ ಹೊರೆಯನ್ನು ತಳಮಟ್ಟದ ಅಧಿಕಾರಿಗಳಿಂದ ಮೇಲ್ ಹಂತದ ಅಧಿಕಾರಿಗಳವರೆಗೆ ಮತ್ತು ಆಡಳಿತದಲ್ಲಿರು ವವರೆಲ್ಲರೂ ಶಿಕ್ಷಕರ ಮೇಲೆ ಹಾಕಿ ಬಿಡುತ್ತಾರೆ.

ಪ್ರತಿ ಶೈಕ್ಷಣಿಕ ವರ್ಷದಲ್ಲೂ 10ನೇ ತರಗತಿಯ ಫಲಿತಾಂಶವನ್ನು ಒಲಿಂಪಿಕ್ ಪದಕ ಗೆದ್ದವರಂತೆ ಅಥವಾ ಗೆಲ್ಲ ಬೇಕೆಂಬುದಕ್ಕಾಗಿ ಬಿಂಬಿಸುವುದು, ಪರಸ್ಪರ ಹೋಲಿಕೆಗಳೊಂದಿಗೆ (comparitive) ಗುರಿ ನಿಗದಿ ಮಾಡುವುದು ಸಾಮಾನ್ಯವಾಗಿ ಬಿಟ್ಟಿದೆ. ಇಲ್ಲಿ ಎಲ್ಲಿಯೂ ಹೊರೆ ರಹಿತ ಕಲಿಕೆ ಸಂತಸದ ಕಲಿಕೆ, ಗುಣಮಟ್ಟದ ಫಲಿತಾಂಶದ ಬಗ್ಗೆ ಬೊಟ್ಟು ಆಗುವುದೇ ಇಲ್ಲ. ಹಾಗೆ ಹೇಳುವವರಿಗೆ ತರಗತಿ ಕೋಣೆಯೊಳಗಿನ ಪರಿಸ್ಥಿತಿ ಹೇಗಿದೆ, ಪಾಠ ಪುಸ್ತಕ ಹೇಗಿದೆ, ಹೊರೆ ರಹಿತ ಕಲಿಕೆ ಮತ್ತು ಭಾರ ಕಡಿಮೆಯ ಬ್ಯಾಗ್ ಈ ಬಗೆಗಿನ ವ್ಯತ್ಯಾಸಗಳ ಅರಿವಿಲ್ಲದೆ ಫಲಿತಾಂಶವನ್ನು ವ್ಯಕ್ತಿಗತ ಮಟ್ಟಕ್ಕೆ ಇಳಿಸಿ ಪ್ರತಿಷ್ಠೆ ಮಾಡಿ ಬಿಡುತ್ತಾರೆ. ಯಾರು ಏನಾದರೇನು ನಾವು ಹೈಯೆಸ್ಟ್ ಎಂದು ಹೇಳುತ್ತಾ ಯಶಸ್ಸನ್ನು ವಿಜೃಂಭಿಸುವುದು ಅತ್ಯಂತ ಕ್ರೂರವರ್ತನೆ. ಅದು ಶೈಕ್ಷಣಿಕವಾಗಿ ಗುಣಮಟ್ಟದ ಹಿನ್ನಲೆಯಲ್ಲಿ ಅವಲೋಕನ, ಅಂತರೀಕ್ಷಣೆ, ಸ್ವ-ವಿಮರ್ಶೆ ನಡೆಯಬೇಕು. ಅಂಕವನ್ನೇ ಯಶಸ್ಸು ಏನ್ನುವುದಾದರೆ ಓರ್ವ ವಿದ್ಯಾರ್ಥಿಯ ಅಂತ:ಸತ್ವಕ್ಕೆ, ಒಳ್ಳೆಯತನಕ್ಕೆ ಸಿಗಬೇಕಾದ ಮಾನ್ಯತೆ, ಸಾಮಾಜಿಕ ಗುರುತಿಸುವಿಕೆ ಎಲ್ಲಿ ಹೋಯಿತು? ಈಗಿನ ಪರೀಕ್ಷೆಯ ಮತ್ತು ಫಲಿತಾಂಶದ ವ್ಯವಸ್ಥೆ ಹೇಗಿದೆಯೆಂದರೆ ವಿದ್ಯಾರ್ಥಿಗಳು ಬರವಣಿಗೆಯ (external exam) ಪರೀಕ್ಷೆಯಲ್ಲಿ ಬೆರಳೆಣಿಕೆಯ ಅಂಕಗಳ ಕೊರತೆಯಿಂದಾಗಿ ಫೇಲಾಗುವವರು ತುಂಬಾ ಮಂದಿ ಇದ್ದಾರೆ. ಹಾಗೆಂದು ಫೇಲಾಗುವವರು ಪಾಸಾದವರಿಗಿಂತ ಕಡಿಮೆ ಸಾಮರ್ಥ್ಯದ ಪ್ರತಿಭೆಯವರು ಎಂದರ್ಥವೇ? ಅಲ್ಲ. ಕೇವಲ ಅಂಕದ ಕಾರಣದಿಂದಾಗಿ ಫೇಲು ಎಂದು ಹೇಳಬೇಕಾದ ದು:ಸ್ಥಿತಿ ನಮ್ಮ ಶಿಕ್ಷಣ ಕ್ಷೇತ್ರದ್ದು. ಇದೆಲ್ಲ ಯಾಕೆ ಹೇಳುತ್ತಿದ್ದೇನೆಂದರೆ ಬ್ಯಾಗಿನ ಭಾರಕ್ಕಿಂತಲೂ ಹೊರೆ ರಹಿತ ಕಲಿಕೆಯ ಭಾಗ ಅತ್ಯಂತ ಪ್ರಮುಖ ಎಂಬುದಕ್ಕಾಗಿ. ಆದ್ದರಿಂದ ಬ್ಯಾಗಿನ ತೂಕ ಕಡಿಮೆ ಯಾಗುವುದು ಹೊರೆ ರಹಿತ ಕಲಿಕೆಯಲ್ಲ.
ಸದ್ಯ ಪಠ್ಯ ಪುಸ್ತಕಗಳು (ಯಾವುದೇ ತರಗತಿಯ) ಅತಿಯಾದ ಭಾರದಿಂದ ಕೂಡಿದೆ. ಅದನ್ನು ಕಡಿಮೆ ಮಾಡಿ ಎಂದಿರುವುದು ಸರಿ. ಆದರೆ ಕಲಿಕೆಯ ಭಾರದ ಪ್ರಶ್ನೆ ಬಂದಾಗ ಬ್ಯಾಗ್ ಭಾರ ಯಾವತ್ತೂ ಕಡಿಮೆ ಆಗದು. ಹಾಗಾಗಿ ವಿದ್ಯಾರ್ಥಿಗಳಾಗಲಿ, ಶಿಕ್ಷಕರಾಗಲಿ, ಪೋಷಕರಾಗಲಿ ಹೊರೆ ರಹಿತ ಶಾಲಾ ದಿನಗಳು ಬರಲಿವೆಯೆಂದು ಸಂತಸ ಪಡುವ ಅಗತ್ಯವಿಲ್ಲ. ಎಲ್ಲಿಯವರೆಗೆ ಅಂಕಾಧಾರಿತ ಫಲಿತಾಂಶ ರದ್ದಾಗುವುದಿಲ್ಲವೋ ಅಲ್ಲಿಯವರೆಗೆ ಕಲಿಕೆಯ ಹೊರೆ ಮತ್ತು ಬ್ಯಾಗಿನ ಹೊರೆ ಇದ್ದೇ ಇರುತ್ತದೆ.
ಮಕ್ಕಳ ಮನೋದೈಹಿಕ ಸುಸ್ಥಿತಿಗೆ ಯೋಚಿಸಬೇಕಾದ್ದು ಪುಸ್ತಕ ಭಾರದ ಜೊತೆಗೆ ಕಲಿಕೆಯ ಹೊರೆಯನ್ನೂ ಇಳಿಸುವ ಬಗ್ಗೆ. ಮಾಹಿತಿಯ ಮಣಭಾರದ ಪುಸ್ತಕಗಳು ಪ್ರತಿ ತರಗತಿಯಲ್ಲೂ, ಪ್ರತಿ ವಿಷಯಗಳಲ್ಲೂ ಇವೆ. ಪುನರಾವರ್ತನೆಗೊಳ್ಳುವ ವಿಷಯಗಳು, 6 ತಿಂಗಳಲ್ಲಿ ಪಾಠ ಮುಗಿಸಿ ಫಲಿತಾಂಶಕ್ಕಾಗಿ ಸಜ್ಜಾಗಿ ಎನ್ನುವ ಒತ್ತಡ. ಅದಕ್ಕಾಗಿ ಸರಣಿ ತರಗತಿಗಳು, ಪರಿಹಾರದ ತರಗತಿಗಳು ಹೀಗೆ…….. ಎಲ್ಲಾ ರಜೆಯನ್ನು ಮತ್ತು ಮಕ್ಕಳ ಎಲ್ಲಾ ಸಮಯವನ್ನು ನುಂಗುವ ಪ್ರಸ್ತುತದ ಶೈಕ್ಷಣಿಕ ವೇಳಾಪಟ್ಟಿಯನ್ನು ಪರಿಷ್ಕರಿಸುವವರಾರು? ಶೇ.90 ಮಂದಿ ವಿದ್ಯಾರ್ಥಿಗಳಿಗೆ ಬೇಡದ ಹಾಗೂ ಅವರ ಮಟ್ಟಕ್ಕೆ ನಿಲುಕದ ಪಠ್ಯಗಳ ಭಾರದ ಬಗ್ಗೆ ಏಕೆ ಚರ್ಚೆಯಾಗುತ್ತಿಲ್ಲ? ಹೊರೆ ರಹಿತದ ಬ್ಯಾಗ್ ಇರಲಿ, ಕಲಿಕೆಯಲ್ಲಿರುವ ಹೊರೆಯನ್ನು ಇಳಿಸುವ ಬಗೆಗಿನ ಶಿಕ್ಷಕರ ಮೊರೆಗೆ ಪರಿಹಾರ ಸೂಚಿಸಿ ಎಂಬುದೇ ನಮ್ಮೆಲ್ಲರ ಕರೆ. ಆಗ ಸಹಜವಾಗಿ ಬ್ಯಾಗಿನ ಹೊರೆಯೂ ಇಳಿಕೆಯಾಗುತ್ತದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.