* ಸುತ್ತಮುತ್ತಲ 15ಕೊಳವೆ ಬಾವಿಗಳ ನೀರು ಪರಿಶೀಲನೆ
* ವಾಸಪ್ಪ ಅವರ ಕೊಳವೆ ಬಾವಿ ನೀರಿನಲ್ಲಿ ಇದೇ ನೀರಿನ ಅಲ್ಪ ತಾಂತ್ರಿಕ ಅಂಶ ಪತ್ತೆ
* ಅರ್ತ್ಸೈನ್ಸ್ ಸ್ಟಡೀಸ್ ಸಂಸ್ಥೆಯಿಂದ ಮಳೆಮಾಪನ ಅಳವಡಿಸಿ ಹವಾಮಾನದ ಮೇಲೆ ಕಣ್ಣು
* ಸಂಸ್ಥೆಯ ಅಧಿಕಾರಿಗಳಿಂದ ಸ್ಥಳ ಪರಿಶೀಲನೆ, ನಿತ್ಯ ಮಳೆ ಲೆಕ್ಕ ದಾಖಲೆ ಪಡೆಯುತ್ತಿರುವ ತಿರುವನಂತಪುರಂನ ಅಧಿಕಾರಿಗಳು
* 300 ವರ್ಷಗಳ ಬಳಿಕ ಇದೇ ಮೊದಲ ಬಾರಿ ಬತ್ತಿದ ನೀರು
* ನಿತ್ಯ 36.1 ಡಿಗ್ರಿ ಸೆಲ್ಸಿಯಸ್ ಬೆಚ್ಚಗಿರುವ ನೀರು ಬರುತ್ತಿದ್ದ ಕೆರೆ.
ಬಂದಾರು: ಸುಮಾರು 6 ತಲೆಮಾರುಗಳಿಗೂ ಹಳೆಯ, ಹೆಚ್ಚೂ ಕಮ್ಮಿ 300 ವರ್ಷಗಳ ಇತಿಹಾಸ ಇರುವ, ರಾಜ್ಯದ ಅತ್ಯಂತ ಅಪರೂಪದ ಮತ್ತು ವಿಜ್ಞಾನಲೋಕದ ಅಚ್ಚರಿ ಬಂದಾರು ಬಿಸಿ ನೀರ ಕೆರೆ ಇದೇ ಮೊದಲ ಬಾರಿಗೆ ಸಂಪೂರ್ಣ ಬತ್ತಿಹೋಗಿದೆ.
ಮಳೆ ಅಥವಾ ಬೇಸಿಗೆ ಕಾಲವೇ ಇರಲಿ ಸದಾ ಈ ಕೆರೆಯಲ್ಲಿ ತಳಕ್ಕಿಂತ 1 ಅಡಿ ಮೇಲಿನಿಂದ ನಿರಂತರ 36.1 ಡಿಗ್ರಿ ಸೆಲ್ಸಿಯಸ್ ಬೆಚ್ಚಗಿರುವ ನೀರು ಹರಿದುಬರುತ್ತಿತ್ತು. ಯಾವುದೋ ರಾಸಾಯನಿಕ ಮಿಶ್ರಿತವೆಂಬಂತೆ ವಿಶಿಷ್ಟ್ಯ ರೀತಿಯ ಪರಿಮಳ ಹೊಂದಿರುವ ಈ ನೀರು ಕುಡಿಯುವುದಕ್ಕೆ ಬಳಕೆಯಾಗುತ್ತಿಲ್ಲವಾದರೂ ನಿರಂತರ ಹರಿಯುವಿಕೆಯೊಂದಿಗೆ ಅಚ್ಚರಿಗೆ ಕಾರಣವಾಗಿತ್ತು. ಈ ಬಿಸಿನೀರ ಕೆರೆ ಇದೀಗ ಈ ವರ್ಷದ ತೀವ್ರ ಬರದ ಛಾಯೆಯಿಂದ ಸಂಪೂರ್ಣ ಬತ್ತಿ ಹೋಗಿದೆ. ಪರಿಸರದ ದೀರ್ಘ ತಲೆಮಾರು ಇರುವ ಕುಟುಂಬಗಳ ಸದಸ್ಯರಿಗೆ ಇದು ಅಚ್ಚರಿಯ ಸಂಗತಿಯಾಗಿದೆ. ಅವರ ಹೇಳಿಕೆ ಪ್ರಕಾರ ಈ ಕೆರೆಯ ನೀರು ಬತ್ತುವುದು ಬಿಡಿ ಒಮ್ಮೆಯೂ ಪ್ರಮಾಣ ಕಡಿಮೆಯಾದದ್ದೂ ಇಲ್ಲ ಎನ್ನುತ್ತಾರೆ.
ತಿರುವನಂತಪುರಂನಿಂದ ಕೇಂದ್ರ ಸರಕಾರದ ಅಧಿಕಾರಿಗಳ ಭೇಟಿ:
ಕೇಂದ್ರ ಸರಕಾರದ ಮಿನಿಸ್ಟ್ರಿ ಆಫ್ ಅರ್ತ್ ಸೈನ್ಸಸ್ ಅಧೀನಕ್ಕೊಳಪಟ್ಟ ನೇಶನಲ್ ಸೆಂಟರ್ ಫಾರ್ ಅರ್ತ್ ಸೈನ್ಸಸ್ ಸ್ಟಡೀಸ್ ಸಂಸ್ಥೆಯ ಅಧಿಕಾರಿಗಳು ಈ ಕೆರೆಯ ನೀರು ಮತ್ತು ಅಲ್ಲಿನ ಪ್ರಕೃತಿ ಬಗ್ಗೆ ವಿಶೇಷ ಅಧ್ಯಯನ ಕೈಗೊಳ್ಳುತ್ತಿದ್ದು, ಅವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಸದ್ರಿ ಬಿಸಿನೀರ ಕೆರೆಯ ಪ್ರತಿದಿನದ ನೀರಿನ ಉಷ್ಣಾಂಶವನ್ನು ಮಾಪನದಲ್ಲಿ ಪರಿಶೀಲಿಸಿ ನಿಗದಿತ ಸಮಯದಲ್ಲಿ ನೇಶನಲ್ ಸೆಂಟರ್ ಫಾರ್ ಅರ್ತ್ ಸೈನ್ಸಸ್ ಸ್ಟಡೀಸ್ ಸಂಸ್ಥೆಗೆ ನೀಡುವ ಜವಾಬ್ಧಾರಿ ನನಗೆ ನೀಡಲಾಗಿರುತ್ತದೆ. ಅದಕ್ಕಾಗಿ ತಿರುವನಂತಪುರಂ ಕಚೇರಿಯಿಂದ ನನಗೆ ಮಾಸಿಕ 3 ಸಾವಿರ ರೂ. ಗೌರವಧನ ಕೂಡ ನೀಡಲಾಗುತ್ತಿದೆ. ನಮ್ಮ ಪೂರ್ವಿಜರ ಮೂಲಕ ನಮಗೆ ಬಂದಿರುವ ಈ ಜಾಗದಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ಕೆರೆ ಸಂಪೂರ್ಣ ಬತ್ತಿಹೋಗಿದ್ದು, ಈಗ ಸದ್ರಿ ಸಂಸ್ಥೆ ಇದೇ ಜಾಗದಲ್ಲಿ ನಿರ್ಮಿಸಿದ ಮಳೆಮಾಪನದಲ್ಲಿ ಪ್ರತಿದಿನದ ಬೆಳಿಗ್ಗೆ ಸಂಜೆ ಮಳೆಲೆಕ್ಕ ಸಂಗ್ರಹಿಸಿ ಅವರಿಗೆ ಒದಗಿಸುವ ಕೆಲಸ ಮಾಡುತ್ತಿದ್ದೇನೆ.
ಮುಹಮ್ಮದ್ ಓಟೆಚ್ಚಾರು ಬಂದಾರು. ಜೀವ ರಕ್ಷಕ ಮತ್ತು ಜಾಗದ ಮಾಲಿಕರು