ಕುತ್ಲೂರು ಪತ್ರಕರ್ತರ ಗ್ರಾಮವಾಸ್ತವ್ಯದ ಇಂಪ್ಯಾಕ್ಟ್
ಬೆಳ್ತಂಗಡಿ: ತಾಲೂಕಿನ ಎಂಡೋ ಪೀಡಿತರಿಗಾಗಿ ಮನೆಮನೆಗೆ ಹೋಗಿ ಫಿಸಿಯೇಥೆರಪಿ ನಡೆಸಲು ಅನುವಾಗುವಂತೆ ಗ್ರಾಮಾಂತರ ಒಳನಾಡು ಪ್ರದೇಶಕ್ಕೂ ಅಡಚಣೆಯಿಲ್ಲದೆ ಗುಣಮಟ್ಟದ ಸೇವೆ ದೊರಕಿಸಿಕೊಡಲು ಇದೀಗ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ 3 ಬೊಲೆರೋ ವಾಹನಗಳನ್ನು ವ್ಯವಸ್ಥೆಗೊಳಿಸಿದೆ.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ತಾಲೂಕು ಪತ್ರಕರ್ತರ ಸಂಘದ ವತಿಯಿಂದ ದೇಶದಲ್ಲೇ ಮೊದಲ ಬಾರಿಗೆ ಎಂಬಂತೆ ಪತ್ರಕರ್ತರ ಗ್ರಾಮವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಂಡಿದ್ದ ವೇಳೆ ಮುಕ್ತ ಸಂವಾದದಲ್ಲಿ ಜನ ಇಟ್ಟಿದ್ದ ಬೇಡಿಕೆಗೆ ಸ್ಪಂದಿಸಿದ ಇಲಾಖೆ ಇದೀಗ ಸೌಲಭ್ಯ ಒದಗಿಸಿಕೊಡುವ ಮೂಲಕ ಜನತೆಗೆ ಪೂರಕ ನೆರವು ಲಭಿಸಿದಂತಾಗಿದೆ.
ಓಮ್ನಿ ವಾಹನದಂದಿ ಸಮಸ್ಯೆಯಾಗುತ್ತಿತ್ತು:
ಇಲಾಖೆ ಈ ಹಿಂದೆ ಓಮ್ನಿ ವಾಹನ ವ್ಯವಸ್ಥೆ ಮಾಡಿತ್ತು. ಆದರೆ ಮಳೆಗಾದಲ್ಲಿ ಗ್ರಾಮೀಣ ಪ್ರದೇಶದ ಮಣ್ಣು ಕೆಸರಿನ ರಸ್ತೆಗಳಲ್ಲಿ ತೆರಳಲು ಇದರಿಂದ ಅನಾನುಕೂಲವಾಗುತ್ತಿತ್ತು ಎಂದು ಜನ ದೂರಿದ್ದರು. ಸಂವಾದಲ್ಲಿ ಬಂದ ಪ್ರಶ್ನೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಜಿ.ಪಂ ಸಿಇಒ ಡಾ. ಸೆಲ್ವಮಣಿ ಅವರು ಈ ವಿಚಾರವನ್ನು ಆರೋಗ್ಯ ಇಲಾಖೆ ಜೊತೆ ಚರ್ಚಿಸಿ ಕ್ರಮಕ್ಕೆ ಸೂಚಿಸಿದ್ದರು.ಇದೀಗ ಆರೋಗ್ಯ ಇಲಾಖೆ ಇಡೀ ಜಿಲ್ಲೆಗೇ ಅನುಕೂಲವಾಗುವಂತೆ ೪ ಬೊಲೆರೋ ವಾಹನಗಳನ್ನು ಒದಗಿಸಿಕೊಟ್ಟಿದೆ.
ತಂಡ ಮನೆ ಮನೆಗೆ ಬಂದು ಚಿಕಿತ್ಸೆ
ಮೊದಲು ಇದ್ದ ಓಮ್ನಿ ವಾಹನದಿಂದ ಆಗುತ್ತಿದ್ದ ಅಡಚಣೆ ಮನಗಂಡು ಇದೀಗ 4 ಬದಲಿ ವಾಹನ ವ್ಯವಸ್ಥೆ ಮಾಡಿದ್ದೇವೆ. ಹಾಸಿಗೆ ಹಿಡಿದಿರುವ ಎಂಡೋ ಬಾಧಿತರ ಮನೆಮನೆಗೇ ಬಂದು ನಮ್ಮ ನಿಯೋಜಿ ಸಿಬ್ಬಂದಿ ಫಿಸಿಯೋಥೆರಪಿ ಸೇವೆ ನೀಡಲಿದ್ದಾರೆ.
ಡಾ. ರಾಮಕೃಷ್ಣ ರಾವ್. ಜಿಲ್ಲಾ ಆರೋಗ್ಯಾಧಿಕಾರಿ