ಸುದೆಕಾರು-ಕುರ್ಲೊಟ್ಟು ರಸ್ತೆ: ಅಸಮರ್ಪಕ ದುರಸ್ತಿ ಆರೋಪ

ಗುತ್ತಿಗೆದಾರನ ವಿರುದ್ಧ ಗ್ರಾಮಸ್ಥರಿಂದ ಲೋಕಾಗೆ ದೂರು

ವೇಣೂರು: ಹೊಸಂಗಡಿ ಗ್ರಾಮದ ಸುದೆಕಾರು-ಗಾಂಧಿನಗರ-ಕುರ್ಲೊಟ್ಟು ರಸ್ತೆ ದುರಸ್ತಿ ಕಾಮಗಾರಿಯನ್ನು ಅಸಮರ್ಪಕವಾಗಿ ನಿರ್ವಹಿಸಿದ್ದು, ಕೃಷಿ ತೋಟಗಳಿಗೆ ಹಾನಿಯಾಗುವ ಸಂಭವಗಳಿವೆ ಎಂದು ಆರೋಪಿಸಿ ಗ್ರಾಮಸ್ಥರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
ಮಳೆಹಾನಿ ಪ್ರಕೃತಿ ವಿಕೋಪದಡಿ ಸುದೆಕಾರು-ಗಾಂಧಿನಗರ ರಸ್ತೆ ದುರಸ್ತಿಗೆ 2018-19ನೇ ಸಾಲಿನಲ್ಲಿ ರೂ. 2 ಲಕ್ಷ ಬಿಡುಗಡೆಗೊಂಡಿತ್ತು. ಈ ಮಧ್ಯೆ ಹೊಸಂಗಡಿ ಗ್ರಾ.ಪಂ.ನಿಂದ ರೂ. 40 ಸಾವಿರ ಮೊತ್ತವೂ ಬಿಡುಗಡೆಗೊಂಡಿರುತ್ತದೆ. ಆದರೆ ಕಳೆದೆರಡು ತಿಂಗಳಿನ ಹಿಂದೆ ನಡೆದ ಕಾಮಗಾರಿಯು ಅಸಮರ್ಪಕವಾಗಿದ್ದು, ರೂ. 2.40 ಲಕ್ಷ ಮೊತ್ತವನ್ನು ರಸ್ತೆಗೆ ವಿನಿಯೋಗ ಮಾಡಿರುವುದಿಲ್ಲ. ಅಲ್ಲದೆ ರಸ್ತೆಯನ್ನು ಅಗೆದು ರಸ್ತೆ ಬದಿಗೆ ಮಣ್ಣನ್ನು ಸುರಿಯಲಾಗಿದೆ. ಇದು ಮಳೆಗಾಲದಲ್ಲಿ ಕೊಚ್ಚಿಹೋಗುವ ಸಾಧ್ಯತೆ ಇದ್ದು, ಸ್ಥಳೀಯ ಕೃಷಿಕರಿಗೆ ಬಹಳಷ್ಟು ಹಾನಿಯಾಗುವ ಸಾಧ್ಯತೆ ದಟ್ಟವಾಗಿದೆ. ಇದನ್ನು ಗುತ್ತಿಗೆದಾರನ ಗಮನಕ್ಕೆ ತಂದಿದ್ದರೂ ಅನುದಾನ ಕೊರತೆ ಇದ್ದು, ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಇಲ್ಲಿ ನಡೆದ ಕಾಮಗಾರಿಯಲ್ಲಿ ಸರಕಾರಿ ಅನುದಾನವನ್ನು ಪೂರ್ಣವಾಗಿ ವಿನಿಯೋಗಿಸದಿರುವುದು ಕಂಡು ಬರುತ್ತಿದ್ದು, ಇದನ್ನು ಸೂಕ್ತವಾಗಿ ಪರಿಶೀಲಿಸಿ ಕಾಮಗಾರಿಯನ್ನು ವ್ಯವಸ್ಥಿತಗೊಳಿಸಲು ಆದೇಶಿಸುವಂತೆ ಗ್ರಾಮಸ್ಥರು ಮನವಿಯಲ್ಲಿ ಆಗ್ರಹಿಸಿದ್ದಾರೆ. ಅಲ್ಲದೆ ಈ ಬಗ್ಗೆ ಬೆಳ್ತಂಗಡಿ ಪಂಚಾಯತ್‌ರಾಜ್ ಎಂಜನಿಯರಿಂಗ್ ಉಪವಿಭಾಗ ಹಾಗೂ ಹೊಸ ಗ್ರಾ.ಪಂ.ಗೂ ಲಿಖಿತ ಮನವಿ ನೀಡಿರುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.

ಗಾಂಧಿನಗರ-ಸುದೆಕಾರು-ಕುರ್ಲೊಟ್ಟು ರಸ್ತೆ ದುರಸ್ತಿ ಕಾಮಗಾರಿ ಅಸಮರ್ಪಕವಾಗಿದ್ದು, ಮಳೆಗಾಲದಲ್ಲಿ ಸಂಚರಿಸಲು ಕಷ್ಟಸಾಧ್ಯ. ಅಲ್ಲದೆ ರಸ್ತೆಗೆ ಅಗೆದ ಮಣ್ಣು ಮಳೆಗಾಲದಲ್ಲಿ ತೋಟಕ್ಕೆ ಕೊಚ್ಚಿ ಬರುವ ಸಾಧ್ಯತೆ ಇದೆ. ಕಳೆದ ಬಾರಿಯೂ ಗುಡ್ಡ ಕುಸಿದು ಭಾರೀ ಪ್ರಮಾಣದಲ್ಲಿ ನೀರು ತೋಟಕ್ಕೆ ನುಗ್ಗಿ ಲಕ್ಷಾಂತರ ರೂ. ನಷ್ಟ ಸಂಭವಿಸಿ ರೂ. 2 ಸಾವಿರ ಪರಿಹಾರ ದೊರೆತಿತ್ತು.
ಆನಂದ ಪೂಜಾರಿ, ಸುದೆಕಾರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.