ಕಾಡಿನ ಮಧ್ಯದಲ್ಲೊಂದು ದೈವಾರಾಧನೆಯ ಕೇಂದ್ರ – ಬೆಳಕಿಗೆ

ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಮತ್ತು ಚಾರ್ಮಾಡಿ ಗ್ರಾಮಗಳ ಗಡಿಯಂಚಿನಲ್ಲಿ ಹರಡಿರುವ ದಟ್ಟ ಅರಣ್ಯ ಮಧ್ಯದಲ್ಲಿ ಪುರಾತನ ಶಕ್ತಿ ಅಥವಾ ದೈವಗಳ ಆರಾಧನೆಯ ಒಂದು ಕೇಂದ್ರವು ಬೆಳಕಿಗೆ ಬಂದಿದೆ. ಇದು ಜನನಿವಾಸ ಅಥವಾ ಮನೆ ತೋಟಗಳಿಂದ ಸುಮಾರು ಒಂದುವರೆ ಕಿಲೋ ಮೀಟರ್ ದೂರ ಎತ್ತರ ಪ್ರದೇಶದಲ್ಲಿದೆ. ದಾರಿ ಅಥವಾ ಜನ ವಾಸ್ತವ್ಯದ ಯಾವುದೇ ಕುರುಹುಗಳು ಇಲ್ಲಿಲ್ಲ. ಆದರೆ ಚಕ್ರಾಕಾರದ ಸುಮಾರು ಆರು ಅಡಿ ವಾಸದ ಕಾಡುಕಲ್ಲುಗಳಿಂದ ನಿರ್ಮಿಸಿದ ಒಂದು ಕೋಣೆಯಂತಹ ರಚನೆ ಇಲ್ಲಿ ಕಂಡು ಬರುತ್ತದೆ. ಅಲ್ಲಿಂದ ಸುಮಾರು ಹತ್ತು ಅಡಿ ದೂರದಲ್ಲಿ ಮಣ್ಣಿನಿಂದ ನಿರ್ಮಿಸಿದ್ದ ಒಂದು ಪೀಠದ ಮೇಲೆ ಸುಮಾರು ಆರು ಅಡಿ ಉದ್ದದ, ನಾಲ್ಕು ಅಡಿ ಅಗಲದ ಒಂದು ಕಲ್ಲು ಚಪ್ಪಡಿಯನ್ನು ಇಡಲಾಗಿದೆ. ಬಳಿಯಲ್ಲಿ ಏನಾದರೂ ಬೇರೆ ವಸ್ತುಗಳು ಇರಬಹುದೇ ಎಂದು ನಾವು ಕತ್ತಿಯಿಂದ ಕೆದಕಿ ನೋಡಿದಾಗ ಧೂಪ ಹಾಕುವ ಅಥವಾ ಮದ್ಯವನ್ನೋ ರಕ್ತವನ್ನೋ ತುಂಬಿಸಿಡುವ ಒಂದು ಮಣ್ಣಿನ ಪಾತ್ರೆಯ ಮೇಲ್ಭಾಗದ ಸುಮಾರು 6 ಇಂಚು ಎತ್ತರದ ಒಡೆದ ಭಾಗವು ಸಿಕ್ಕಿತು. ಇದು ತುಂಬಾ ಅಲಂಕಾರಿಕ ರಚನೆಗಳನ್ನು ಹೊಂದಿದ್ದರಿಂದ ಅದು ಸಾಮಾನ್ಯ ಒಂದು ಮಡಿಕೆಯಾಗಿರದೆ ಯಾವುದೋ ಒಂದು ಆರಾಧನೆಯಲ್ಲಿ ಬಳಸಲ್ಪಡುವ ಪಾತ್ರೆಯ ಭಾಗವಾಗಿರಬೇಕೆಂದು ತಿಳಿಯುತ್ತಿತ್ತು.
ಕೆಲವು ತಿಂಗಳಿಗಳ ಹಿಂದೆ ಬುದ್ಧಿ ಭ್ರಮಣೆ ಹೊಂದಿದ್ದ ಮಹಿಳೆಯೊಬ್ಬಳು ಅಲ್ಲಿಗೆ ಹೋಗಿ ಅಲ್ಲಿದ್ದ ಹಿತ್ತಾಳೆಯ ಎರಡು ಪಾಪೆಗಳನ್ನು ತಂದು ಊರಲೆಲ್ಲಾ ತೋರಿಸುತ್ತಿದ್ದಳಂತೆ. ತುಂಬಾ ಬಡಕಲಾದ ಆ ಹೆಂಗಸು ಇದೇ ಪಾಪೆಗಳನ್ನು ಊರಲ್ಲಿ ತೋರಿಸುತ್ತಾ ಸತ್ತು ಹೋದಳು. ಆ ಮನೆಯವರೂ ಇದೇ ರೀತಿ ಅನೇಕ ಸದಸ್ಯರನ್ನು ಕಳೆದುಕೊಂಡು ಮನೆಯು ಬರಿದಾಯಿತಂತೆ. ಹತ್ತಿರದ ಊರಿನ ಅನೇಕ ಮನೆಗಳಲ್ಲಿ ನಾನಾರೋಗಗಳು, ಅಪಸ್ಮಾರಗಳು, ಜಗಳ, ರೋಷಾವೇಶಗಳಿಂದಾಗಿ ಪರಸ್ಪರ ಕೊಲೆಗಳು ನಡೆದು ಹೋದುವಂತೆ. ಅನಿರೀಕ್ಷಿತವಾದ ದುರ್ಘಟನೆಗಳು ನಡೆದು, ಮನೆ ಮನೆಗಳಲ್ಲೂ ಕಷ್ಟಗಳು ಅಶಾಂತಿ ಉಂಟಾಯಿತು. ಈ ಮೇಲಿನ ಘಟನೆಗಳು ಮೇಲಿಂದ ಮೇಲೆ ಈ ಪರಿಸರದಲ್ಲಿ ನಡೆಯುತ್ತಿದ್ದುದರಿಂದ ಊರಿನ ಹಿರಿಯರು ಸೇರಿ ದೈವಗಳ ಆರಾಧನಾ ಕೇಂದ್ರಕ್ಕೆ ಭೇಟಿಕೊಟ್ಟೆವು. ಸ್ವಲ್ಪ ಭಯದ ವಾತಾವರಣವೇ ಇಲ್ಲಿ ಇದೆ. ಆದರೆ ಕಾಡು ಮೃಗಗಳು ಸಿಗಲಿಲ್ಲ. ಈ ರೀತಿಯ ಘಟನೆಗಳಿಗೂ ಸಮಸ್ಯೆಗಳಿಗೂ ಪರಿಹಾರವನ್ನು ಕಂಡು ಹುಡುಕಲೇ ಬೇಕಿತ್ತು.
ಇಲ್ಲಿ ಯಾವುದೇ ದೈವಗಳ ಆರಾಧನೆಯಾಗುತ್ತಿದ್ದುದನ್ನು ಕಂಡವರು ಯಾರೂ ಇಲ್ಲದ ಕಾರಣ ಜ್ಯೋತಿಷಿಗಳನ್ನೇ ಅವಲಂಬಿಸಬೇಕಾಯಿತು. ಅವರು ಯಾವುದನ್ನೋ ಗುಣಿಸಿ, ಭಾಗಿಸಿ ಇಲ್ಲಿ ಘಟ್ಟದ ಚಾಮುಂಡಿ, ಗುಳಿಗ ಕಲ್ಕುಡ, ಭೈರವ ಇತ್ಯಾದಿ ಏಳು ದೈವಗಳು ಆವಾಸವಾಗಿವೆಯಂದು ಹೇಳಿದ್ದಾರೆ. ವನದುರ್ಗೆಯ ಆರಾಧನೆಯ ಬಗ್ಗೆ ಅವರಲ್ಲೇ ಸ್ಪಷ್ಟತೆ ಇಲ್ಲ. ಆದರೆ ಇಲ್ಲಿ ಸುಮಾರು ಎರಡು ಶತಮಾನಗಳ ಹಿಂದೆ ಮಲೆಕುಡಿಯರಂತಹ ಮೂಲ ನಿವಾಸಿಗಳು ಜಾನಪದೀಯ ರೀತಿಯಲ್ಲಿ ಬಹಳ ವೈಭವದಿಂದ ದೈವಾರಾಧನೆ ನಡೆಸುತ್ತಿದ್ದರಂತೆ. ಬಲಿ, ರಕ್ತದಾಹುತಿಯನ್ನು ಕೊಡಲಾಗುತ್ತಿತ್ತಂತೆ. ಆದುದರಿಂದ ಇಲ್ಲಿ ಸಮಕಾಲೀನ ರೀತಿಯಲ್ಲಿ ಪುನಃ ಆರಾಧನೆಯನ್ನು ಮಾಡಲೇಬೇಕಾಗಿದೆ.
ಕಷ್ಟಗಳ ಪರಿಹಾರಕ್ಕಾಗಿ ಹಾಗೂ ಊರಿನಲ್ಲಿ ಸುಖಶಾಂತಿಗಳು ನೆಲೆಸಲಿಕ್ಕಾಗಿ ಹಿರಿಯರ ಮಾರ್ಗದರ್ಶನದಲ್ಲಿ ಊರಿನವರೆಲ್ಲ ಈಗ ಒಟ್ಟಾಗಿದ್ದಾರೆ. ಸ್ಥಳೀಯ ಸಮಾಜ ಸೇವಕಿ ಶ್ರೀಮತಿ ಲೋಕೇಶ್ವರಿ ವಿನಯಚಂದ್ರ ಅವರ ಮುಂದಾಳತ್ವದಲ್ಲಿ ಸ್ಥಳೀಯರಾದ ಬರಮೇಲು ಅಣ್ಣುಗೌಡ, ಬಾಬು ಗೌಡ, ಆನಂದ ಗೌಡ, ಕುಚ್ಚೂರಿನ ನೇಮಣ್ಣ ಗೌಡ, ಶ್ರೀಧರ ಗೌಡ, ಮಲೋಡಿಯ ಕೃಷ್ಣಪ್ಪ ಪೂಜಾರಿ, ಬೆಂಗಳೂರಿನ ಶ್ರೀಮತಿ ಮತ್ತು ಶ್ರೀ ವಿಶ್ವನಾಥ ಗೌಡ, ಮಲ್ಲಡ್ಕದ ದೇಜಮ್ಮ ಹಾಗೂ ಕುಚ್ಚೂರಿನಿಂದ ಹೇಡ್ಯದವರೆಗಿನ ಎಲ್ಲಾ ಗ್ರಾಮಸ್ಥರು ಒಟ್ಟು ಸೇರಿ ಮಲ್ಲ ಕುಕ್ಕುದಕಾಡ್ ಅಥವಾ ಉಪ್ಪೊಳಿಗೆ ಗುರಿಯೆಂದು ಕರೆಯಲ್ಪಡುತ್ತಿದ್ದ ಕಾಡುಬೆಟ್ಟದ ಮೇಲಿನ ಈ ದೈವಾರಾಧನಾ ಕೇಂದ್ರವನ್ನು ಮತ್ತೆ ಪುನರ್ ನಿರ್ಮಿಸಲು ಮುಂದಡಿಇಟ್ಟಿದ್ದಾರೆ.
—–ಡಾ|| ವೈ. ಉಮಾನಾಥ ಶೆಣೈ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.