ಸರಕಾರಿ ಜಾಗದಲ್ಲಿ ಮನೆ ಮಾಡಿರುವ ವನಜ ಅವರ ಸ್ಥಿತಿ ಅಯೋಮಯ

ಒಕ್ಕಲೆಬ್ಬಿಸುವ ಬದಲು ನ್ಯಾಯ ಕೊಡಲಿ ಎಂಬುದು ನ್ಯಾಯಪ್ರಿಯರ ಆಗ್ರಹ

ನಾರಾವಿ: ಸರಕಾರಿ ಜಾಗದಲ್ಲಿ ವರ್ಷದಿಂದ ನೆಲೆಸಿರುವ ಭೂ ರಹಿತ ಬಡ ಮಹಿಳೆಯನ್ನು ಒಕ್ಕಲೆಬ್ಬಿಸಲು ಕಂದಾಯ ಇಲಾಖೆ ಮುಂದಾಗಿದೆ ಎಂಬ ಆರೋಪ ನಾರಾವಿ ಪಂಚಾಯತ್ ವ್ಯಾಪ್ತಿಯ ಹಟ್ಯಡ್ಕ ಎಂಬಲ್ಲಿಂದ ಕೇಳಿಬಂದಿದೆ.
ವೇಣೂರು ಕಂದಾಯ ಹೋಬಳಿ ಮರೋಡಿ ರಸ್ತೆ ಬದಿ ಸರಕಾರಿ ಜಮೀನಿನಲ್ಲಿ ಶೆಡ್ ನಿರ್ಮಿಸಿಕೊಂಡಿರುವ ವನಜ ಮತ್ತು ಕುಟುಂಬವೇ ಇದೀಗ ಈ ಆತಂಕದಿಂದ ದಿನದೂಡುತ್ತಿರುವ ಕುಟುಂಬ.
ವನಜ  ಅವರ ಪತಿ ಅನಾರೋಗ್ಯ ಪೀಡಿತರೂ ಆಗಿದ್ದು ನಿತ್ಯ ಮನೆಗೂ ಬರುತ್ತಿಲ್ಲ. ವನಜ ಅವರು ತನ್ನ ಮಕ್ಕಳಾದ ಏಳನೇ ತರಗತಿಯಲ್ಲಿ ಓದುತ್ತಿರುವ ಶ್ರಾವಣಿ, ನಾಲ್ಕನೇ ತರಗತಿಯಲ್ಲಿ ಒದುತ್ತಿರುವ ಶ್ರಾವ್ಯಾ ಎಂಬಿಬ್ಬರ ಜೊತೆ ಅಭದ್ರತೆಯ ಜೀವನ ನಡೆಸುತ್ತಿದ್ದಾರೆ.
ಹಿಂದೆ ನಾರಾವಿಯಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದ ಅವರು ಇದೀಗ ವರ್ಷದಿಂದ ಸರಕಾರಿ ಜಮೀನಿನಲ್ಲಿ ಅಕ್ರಮವಾಗಿ ಮತ್ತು ಅನಿವಾರ್ಯವಾಗಿ ಶೆಡ್ ನಿರ್ಮಿಸಿಕೊಂಡು ಜೀವನ ನಡೆಸುತ್ತಿದ್ದು ಇದಕ್ಕೆ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ 94 ಸಿ ಯಲ್ಲಿ ಅರ್ಜಿಯನ್ನೂ ನೀಡಿ ಮಂಜೂರಾತಿಗೆ ಕಾಯುತ್ತಿದ್ದಾರೆ.
ಆದರೆ ದುರಾದೃಷ್ಟವೇನೆಂದರೆ ಸದ್ರಿ ಯವರ ಅರ್ಜಿಯನ್ನು ಪರಿಗಣಿಸಿ ಸ್ಥಳ ತನಿಖೆ ಕೈಗೊಂಡು ಅರ್ಹರಾಗಿದ್ದಲ್ಲಿ ಅವರಿಗೆ ಸೂಕ್ತ ಕಾನೂನು ಕ್ರಮ ಕೈಗೊಂಡು ಅವರ ವಾಸದ ಮನೆ ಅಡಿಯನ್ನು ಸಕ್ರಮೀಕರಣಗೊಳಿಸಬೇಕಾದ ಕಂದಾಯ ಇಲಾಖೆ ಮಾತ್ರ ಅವರಿಗೆ ನೋಟೀಸು ಜಾರಿ ಮಾಡಿ ಇಲ್ಲಿಂದ ಮನೆ ತೆರವುಗೊಳಿಸುವಂತೆ ಒತ್ತಡ ತರುತ್ತಿದೆ.
ಅದೆಷ್ಟೋ ಮಂದಿ ಉಳ್ಳವರು, ಶಕ್ತಿವಂತರು 94 ಸಿ ಯಡಿ ಜಾಗ ಮಂಜೂರು ಮಾಡಿಸಿಕೊಂಡು ಹಕ್ಕುಪತ್ರ ಪಡೆದುಕೊಂಡಿದ್ದಾರೆ. ಆದರೆ ಇವರಿಗೆ ಅದು ಅಸಾಧ್ಯವಾಗಿದ್ದು ಇಲಾಖೆಯೇ ಮುತುವರ್ಜಿ ವಹಿಸಿ ಕ್ರಮ ಕೈಗೊಳ್ಳಬೇಕಿದೆ.
ಹಿಂದೊಮ್ಮೆ ಕಂದಾಯ ಇಲಾಖೆಯಿಂದ ಬಂದಿದ್ದ ಅಧಿಕಾರಿಗಳು ಇವರನ್ನು ತಹಶಿಲ್ದಾರರ ಭೇಟಿಗೆ ಸೂಚಿಸಿದ್ದರು. ಅಂತೆಯೇ ಇವರು ಭೇಟಿ ಮಾಡಿ ಬಂದಿದ್ದು ಆ ಬಳಿಕ ಅನೇಕ ತಹಶಿಲ್ದಾರರ ವರ್ಗಾವಣೆಯಿಂದಾಗಿ ಪ್ರಕ್ರಿಯೆ ಅಲ್ಲಿಗೇ ನಿಂತು ಹೋಗಿದೆ. ಈ ಮಹಿಳೆ ಕಂದಾಯ ಇಲಾಖೆಯವರು ಎಲ್ಲಿ ತಾನಿಲ್ಲದಾಗ ಬಂದು ಮನೆಯನ್ನು ಕೆಡವಿ ಹಾಕಲಿದ್ದಾರೋ ಎಂಬ ಭಯದಿಂದ ಮಕ್ಕಳನ್ನು ಬಿಟ್ಟು ಕೆಲಸಕ್ಕೂ ಹೋಗಲು ಹಿಂಜರಿಯುವ ಸ್ಥಿತಿಯಲ್ಲಿದ್ದಾರೆ.

ಜನಸ್ಪಂದನ ಈಗಿನ ತಹಶಿಲ್ದಾರ್ ಆದರೂ ಮನಃ ಮಾಡಲಿ:
ಸರಕಾರಿ ಕೆಲಸದಲ್ಲಿ ಆದರ್ಶ ಮೆರೆಯುತ್ತಿರುವ ಈಗಿನ ತಹಶಿಲ್ದಾರ್ ಗಣಪತಿ ಶಾಸ್ತ್ರಿಯವರು ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು, ಒತ್ತಡಕ್ಕೆ ಮಣಿದು ಈ ಕುಟುಂಬವನ್ನು ಒಕ್ಕಲೆಬ್ಬಿಸುವ ಬದಲು ಅವರ ಅರ್ಹತೆ ಮನಗಂಡು ಅವರಿಗೆ ಸೂಕ್ತ ನ್ಯಾಯ ದೊರಕಿಸಿಕೊಡಲಿ ಎಂದು ನ್ಯಾಯಪ್ರಿಯ ಜನತೆ ಅಭಿಪ್ರಾಯಪಡುತ್ತಾರೆ.

ಯೋಗ್ಯವಾದ ಜಾಗದಲ್ಲಿ ಅವರಿಗೆ ನಿವೇಶನಕ್ಕೆ ಕ್ರಮ ಕೈಗೊಳ್ಳಲಾಗುವುದು. ಈಗ ಅವರು ನೆಲೆಸಿರುವ ಜಾಗವನೂ ವಾಸಕ್ಕೆ ಯೋಗ್ಯವಾಗಿಲ್ಲ. ಅವರಿಗೆ ನಿಜವಾಗಿಯೂ ನಿವೇಶನ ಪಡೆಯುವ ಅರ್ಹತೆ ಇದೆ:
ರವೀಂದ್ರ ಪೂಜಾರಿ. ಅಧ್ಯಕ್ಷರು ಗ್ರಾ.ಪಂ ನಾರಾವಿ.

ಹಿಂದೆ ಸರಕಾರಿ ಜಮೀನಿನಲ್ಲಿ ಹಲವು ಕುಟುಂಬ ಇದೇ ರೀತಿ ಟರ್ಪಾಲ್ ನಿರ್ಮಿತ ಮನೆ ಮಾಡಿದ್ದರು. ಹಗಳು ವೇಳೆ ಮಾತ್ರ ಅವರೆಲ್ಲಾ ಇಲ್ಲಿ ನೆಲೆಸಿ ರಾತ್ರಿ ಅವರವರ ಮನೆಗೇ ಹೋಗಿ ನೆಲೆಸುತ್ತಿದ್ದರು. ಆದರೆ ಇಲ್ಲೇ ನೆಲೆಸಿರುವ ವನಜ ಅವರಿಗೆ ಬೇರೆ ಮನೆ ಇಲ್ಲ ನಿಜ. ಆದರೆ ನಾವು ಮೇಲಧಿಕಾರಿಗಳ ಆದೇಶ ಪಾಲಿಸಬೇಕಾಗಿದೆ.
ನಾರಾಯಣ ಕುಲಾಲ್. ಗ್ರಾಮ ಕರಣಿಕರು ನಾರಾವಿ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.