ಸಾಮೂಹಿಕ ಆತ್ಮಹತ್ಯೆಗೈದ ಕುಟುಂಬದಲ್ಲಿ ಉಳಿದ ಏಕೈಕ ವ್ಯಕ್ತಿ ಮಂಗಳೂರಿನಲ್ಲಿ ಅಸಹಜ ಸಾವು

Advt_NewsUnder_1
Advt_NewsUnder_1
Advt_NewsUnder_1

ಕೊಕ್ಕಡ: ಇಲ್ಲಿನ ಕೊಕ್ಕಡ ಹಳ್ಳಿಂಗೇರಿ ನಿವಾಸಿ, ಮಗನ ಎಂಡೋ ಕಾಯಿಲೆಯಿಂದ ಬೇಸತ್ತು ಸಾಮೂಹಿಕ ಆತ್ಮಹತ್ಯೆಗೆ ಶರಣಾಗಿದ್ದ ಹಳ್ಳಿಂಗೇರಿ ಸನಿಹದ ಆಲಡ್ಕ ಬಾಬು ಗೌಡ ಕುಟುಂಬದ ಪೈಕಿ ಬದುಕುಳಿದಿದ್ದ ಏಕೈಕ ಪುತ್ರ ದಯಾನಂದ ಗೌಡ ಅವರು ಮಂಗಳೂರಿನ ಸುರತ್ಕಲ್ ಠಾಣಾ ವ್ಯಾಪ್ತಿಗೊಳಪಟ್ಟ ಸಾರ್ವಜನಿಕ ಪ್ರಯಾಣಿಕರ ತಂಗುದಾಣದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
2 ವರ್ಷಗಳ ಹಿಂದಿನಿಂದಲೇ ಮನೆ ಬಿಟ್ಟು ಮಂಗಳೂರು ನಗರ ಸೇರಿದ್ದ ದಯಾನಂದ ಗೌಡ ಅವರು ತೃತೀಯ ಲಿಂಗಿಗಳಂತೆ ವರ್ತಿಸುತ್ತಾ ಅವರದೇ ತಂಡದಲ್ಲಿ ಬೆರೆಯುತ್ತಿದ್ದರು. ಸೈಕಲ್ ಬೇಲೆನ್ಸ್‌ನ ತಂಡದಲ್ಲಿ ಸೈಕ್ಲಿಂಗ್, ಡ್ಯಾನ್ಸಿಂಗ್ ಮಾಡುತ್ತಾ ದಿನಕಳೆಯುತ್ತಿದ್ದರು.
ಅಂದು ಬಾಬು ಗೌಡರು ತನ್ನ ಪುತ್ರ ಎಂಡೋ ಪೀಡಿತರಾಗಿ ತೀವ್ರ ಅನಾರೋಗ್ಯಕ್ಕೊಳಗಾದ ಚಿಂತೆಯಲ್ಲಿ ಪುತ್ರ ಸದಾನಂದ ಅವರನ್ನು ಮನೆ ಎದುರಿನ ಕೆರೆಗೆ ದೂಡಿ, ತಾನು ಮತ್ತು ಪತ್ನಿ ಗಂಗಮ್ಮ ಅವರ ಜೊತೆ ಸಾಮೂಹಿಕ ಆತ್ಮಹತ್ಯೆಗೆ ಶರಣಾಗಿದ್ದರು. ಅಂದೇ ರಾತ್ರಿ ಮನೆ ಬಿಟ್ಟು ಹೋಗಿದ್ದ ಪುತ್ರ ನಿತ್ಯಾನಂದ ಅವರ ಮೃತದೇಹ ಪಕ್ಕದ ಇನ್ನೊಂದು ಜಾಗದ ಕೆರೆಯಲ್ಲಿ ಪತ್ತೆಯಾಗಿತ್ತು.
ಇದೀಗ ಅಸಹಜವಾಗಿ ಮೃತಪಟ್ಟಿರುವ ದಯಾನಂದ ಗೌಡ ಅವರ ಮೃತದೇಹವನ್ನು 4 ಮಂದಿ ಸಂಗಡಿಗರೆನ್ನಲಾದ ತೃತೀಯ ಲಿಂಗಿಗಳು ಕೊಕ್ಕಡಕ್ಕೆ ತಂದಿದ್ದು ಈ ವೇಳೆ ಊರವರು ಧರ್ಮಸ್ಥಳ ಠಾಣೆಗೆ ಮಾಹಿತಿ ನೀಡಿದ್ದರು. ಈ ಸಮಯ ಮೃತದೇಹದ ಮರಣೋತ್ತರ ಪರೀಕ್ಷೆ ಕೈಗೊಳ್ಳದ್ದರಿಂದ ಮತ್ತೆ ಮೃತದೇಹವನ್ನು ಆಂಬುಲೆನ್ಸ್ ಮೂಲಕ ದೇಹ ಸಿಕ್ಕಿದ ವ್ಯಾಪ್ತಿಗೊಳಪಟ್ಟ ಸುರತ್ಕಲ್ ಠಾಣೆಗೆ ಕಳುಹಿಸಿಕೊಡಲಾಗಿದೆ ಎಂದು ಧರ್ಮಸ್ಥಳ ಎಸ್‌ಐ ಅವಿನಾಶ್ ಗೌಡ ಸುದ್ದಿಗೆ ಮಾಹಿತಿ ನೀಡಿದ್ದಾರೆ. ಇದೀಗ ಸುರತ್ಕಲ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣದ ದಾಖಲಾಗಿದ್ದು, ಮೃತದೇಹವನ್ನು ಸದ್ಯ ವೆನ್ಲಾಕ್ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಸಂರಕ್ಷಿಸಿಡಲಾಗಿದೆ ಎಂದು ಮಾಹಿತಿ ಲಭಿಸಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.