ಕೋಳಿ ತ್ಯಾಜ್ಯ ಎಸೆದು ಪರಿಸರ ಮಾಲಿನ್ಯ: ಸೂಕ್ತ ಕ್ರಮ ಕೈಗೊಳ್ಳಲು ನಾಗರಿಕರ ಆಗ್ರಹ

ಬೆಳ್ತಂಗಡಿ: ತಾಲೂಕಿನ ಕೆಲ ಪ್ರದೇಶಗಳಲ್ಲಿ ಕೋಳಿ ತ್ಯಾಜ್ಯಗಳನ್ನು ಎಸೆಯುತ್ತಿದ್ದು, ಪರಿಸರ ಮಾಲಿನ್ಯ ಉಂಟಾಗುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಬರುತ್ತಿದ್ದು, ಸಂಬಂಧಪಟ್ಟ ಇಲಾಖೆಯವರು ಇದರ ಬಗ್ಗೆ ಸೂಕ್ತ ಕ್ರಮ ಜರುಗಿಸುವಂತೆ ನಾಗರಿಕರು ಒತ್ತಾಯಿಸಿದ್ದಾರೆ.
ಗುರುವಾಯನಕೆರೆಯ ಅರಫಾ ಸ್ಯಾನಿಟರಿ ಸಮೀಪದ ಸೇತುವೆ ಕೆಳಗೆ ಕೋಳಿಯ ತ್ಯಾಜ್ಯಗಳನ್ನು ರಾತ್ರಿ ಸಮಯ ತಂದು ಹಾಕಲಾಗುತ್ತಿದ್ದು, ದುರ್ವಾಸನೆ ಬೀರುತ್ತಿದೆ. ಇಲ್ಲಿಯ ಸೇತುವೆ ಮೂಲಕ ಹಾದು ಹೋಗುವ ಪಾದಚಾರಿಗಳು ಹಾಗೂ ವಾಹನ ಚಾಲಕರು ಮೂಗು ಮುಚ್ಚಿಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದಲ್ಲದೆ ಗುರುವಾಯನಕೆರೆ ವರಕಬೆ ಡಾಬದ ಬಳಿಯ ರಸ್ತೆ ಬದಿ, ಪಿಲಿಚಂಡಿಕಲ್ಲು ಶಾಲೆಗಿಂತ ಸ್ವಲ್ಪ ಮುಂದೆ, ಮದ್ದಡ್ಕದ ಸುಂಟಾನ್‌ಗುರಿ ಪ್ರದೇಶ, ಪಣಕಜೆ, ಸಬರಬೈಲು ಪರಿಸರದ ರಸ್ತೆಯ ಇಕ್ಕೆಲಗಳಲ್ಲಿ, ಕಲ್ಮಂಜ ಶೀಟ್ ಪರಿಸರ, ಮುಂಡಾಜೆಯಿಂದ ಕಕ್ಕಿಂಜೆಗೆ ಹೋಗುವ ರಸ್ತೆಯ ಕಾಡಿನ ಪರಿಸರ ಸೇರಿದಂತೆ ತಾಲೂಕಿನ ಹಲವು ಕಡೆಗಳಲ್ಲಿ ಕೋಳಿ ತ್ಯಾಜ್ಯಗಳನ್ನು ಎಸೆಯಲಾಗುತ್ತಿದೆ.
ತಾಲೂಕಿಗೆ ದೂರದ ಊರುಗಳಿಂದ ಕೋಳಿ ಪೂರೈಕೆ ಮಾಡುವ ಟೆಂಪೋಗಳು ಬರುತ್ತಿದ್ದು, ಬರುವಾಗ ಸತ್ತ ಕೋಳಿಗಳನ್ನು ಅವರು ಅಲ್ಲಲ್ಲಿ ಎಸೆದು ಹೋಗುತ್ತಿದ್ದಾರೆ ಎಂದು ದೂರುಗಳು ಸಾರ್ವಜನಿಕ ರಿಂದ ವ್ಯಕ್ತವಾಗುತ್ತಿದೆ. ಇದಲ್ಲದೆ ಕೋಳಿ ಫಾರ್ಮ್‌ಗಳನ್ನು ನಡೆಸುತ್ತಿರುವವರು ಹಾಗೂ ಮಾರಾಟದ ಅಂಗಡಿಗಳನ್ನು ಹೊಂದಿರುವವರು ತ್ಯಾಜ್ಯವನ್ನು ತಮ್ಮ ಜಾಗದಲ್ಲೇ ವಿಲೇ ಮಾಡಬೇಕು ಎಂಬ ನಿಯಮವಿದೆ. ಹೆಚ್ಚಿನ ಫಾರ್ಮ್‌ನವರು ಇದನ್ನು ಮಾಡುತ್ತಿದ್ದಾರೆ. ಆದರೆ ಕೆಲವರು ರಾತ್ರಿ ಸಮಯ ರಸ್ತೆ ಬದಿಯಲ್ಲಿ ಎಸೆಯುತ್ತಿರುವ ದೂರುಗಳು ಬರುತ್ತಿವೆ. ತ್ಯಾಜ್ಯ ಎಸೆಯುತ್ತಿರುವುದರಿಂದ ಪರಿಸರ ಮಾಲಿನ್ಯ ಉಂಟಾಗುತ್ತಿದ್ದು, ಸಂಬಂಧ ಪಟ್ಟ ಇಲಾಖೆಯವರು, ಗ್ರಾಮ ಪಂಚಾಯತು ಇದರ ಬಗ್ಗೆ ಸೂಕ್ತ ಕ್ರಮಗಳನ್ನು ವಹಿಸುವಂತೆ ನಾಗರಿಕರು ಆಗ್ರಹಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.