ಬೆಳ್ತಂಗಡಿ: ನಗರ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರೂ ಆಗಿದ್ದು ಸಾಮಾಜಿಕ ಧಾರ್ಮಿಕ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಶಂಕರ ಹೆಗ್ಡೆ ಅವರು ಲೋಕಸಭಾ ಚುನಾವಣೆಯಂದು ನಗರದ ಕಾಂಗ್ರೆಸ್ ಕಾರ್ಯಕರ್ತರ ಬೂತ್ನಲ್ಲಿ ಅವರ ಜೊತೆ ಕಾಣಿಸಿಕೊಂಡು ಎಲ್ಲರ ಹುಬ್ಬೇರಿಸಿದರು. ಕಾಂಗ್ರೆಸ್ ಪಕ್ಷದ ಶಾಲು, ಮತ್ತು ಟೋಪಿ ಧರಿಸಿದ್ದ ಅವರು ಭಾವ ಚಿತ್ರಕ್ಕೂ ಫೋಸ್ನೀಡಿದ್ದು ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು ಬಿಜೆಪಿ ಪಾಳಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಯಿತು.
ನಗರ ಪಂಚಾಯತ್ ಮಾಜಿ ನಾಮನಿರ್ದೇಶಿತ ಸದಸ್ಯರಾಗಿರುವ ಅವರು ಈ ಹಿಂದಿನ ಬಾರಿ ಮತ್ತು ಈ ಬಾರಿ ನಗರ ಪಂಚಾಯತ್ಗೆ ಬಿಜೆಪಿ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಿ ಪರಾಭವಗೊಂಡಿದ್ದರು. ಈ ನಡುವೆ ಈ ಬಾರಿ ಅವರು ಚುನಾವಣೆಗೆ ಸ್ಪರ್ಧಿಸಲು ಉದ್ಧೇಶಿಸಿದ್ದ ವಾರ್ಡ್ನ ಬದಲಾಗಿ ಪಕ್ಷ ಅವರಿಗೆ ಇನ್ನೊಂದು ವಾರ್ಡ್ನಲ್ಲಿ ಸ್ಪರ್ಧಿಸುವ ಅವಕಾಶ ನೀಡಿದ್ದರಿಂದ ಇದುವೇ ನನಗೆ ಸೋಲಿಗೆ ಕಾರಣವಾಗಿದೆ ಎಂದು ಅವರು ಪಕ್ಷದ ಮುಖಂಡರ ಬಗ್ಗೆ ಅಸಮಾಧಾನ ಹೊಂದಿದ್ದರು.