ಚಾರ್ಮಾಡಿ: ಅಧಿಕಾರಿಗಳ ಮಧ್ಯ ಪ್ರವೇಶದಿಂದ ಚುನಾವಣೆ ಬಹಿಷ್ಕಾರ ಹಿಂಪಡೆದ ಗ್ರಾಮಸ್ಥರು

ಕತ್ತರಿಗುಡ್ಡೆ ಶಿಥಿಲಾವಸ್ಥೆಯ ಟ್ಯಾಂಕ್ ಸಮಸ್ಯೆ,ಇನ್ನಿತರ  ಹಲವು ಸಮಸ್ಯೆಗಳನ್ನು ಮುಂದಿಟ್ಟು ಸ್ಥಳೀಯ ಗ್ರಾಮಸ್ಥರ ಚುನಾವಣಾ ಬಹಿಷ್ಕಾರ

 

ಚಾರ್ಮಾಡಿ:  ಗ್ರಾ.ಪಂ  ಚಾರ್ಮಾಡಿ ವ್ಯಾಪ್ತಿಯ ಚಿಬಿದ್ರೆ ಗ್ರಾಮದ ಕತ್ತರಿಗುಡ್ಡೆಯಲ್ಲಿ ಶಿಥಿಲಾವಸ್ಥೆಯಲ್ಲಿರುವ ನೀರಿನ ಟ್ಯಾಂಕ್‌ಗೆ ಪರ್ಯಾಯ ವ್ಯವಸ್ಥೆ ಕಲ್ಪಿಸದಿರುವುದು ಹಾಗೂ  ಇನ್ನಿತರ  ಹಲವು ಸಮಸ್ಯೆಗಳನ್ನು ಮುಂದಿಟ್ಟು ಸ್ಥಳೀಯ ಗ್ರಾಮಸ್ಥರ ಚುನಾವಣಾ ಬಹಿಷ್ಕಾರದ ನಿರ್ಧಾರವನ್ನು ಅಧಿಕಾರಿಗಳ ಮಧ್ಯಪ್ರವೇಶದಿಂದ ಹಿಂಪಡೆದ ಘಟನೆ ಮಾ.29 ರಂದು ವರದಿಯಾಗಿದೆ.
ನೀರಿನ ಟ್ಯಾಂಕ್ ಶಿಥಿಲಾವಸ್ಥೆ, ರಸ್ತೆ ಡಾಂಬರು  ಕಾಮಗಾರಿ, ಕೆರೆ ಅಭಿವೃದ್ಧಿ ನಿರ್ಲಕ್ಷ್ಯದಿಂದ ಚಿಬಿದ್ರೆ ಗ್ರಾಮದ ಕತ್ತರಿಗುಡ್ಡೆ, ನರ್ತಿಲು, ಅನ್ನಾರು ಮಲೆಕುಡಿಯ ಕಾಲನಿ, ಉರುಪೇಲ್ಗುಡ್ಡೆ ನಿವಾಸಿಗಳು ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಕಕ್ಕಿಂಜೆಯಲ್ಲಿ ಬ್ಯಾನರನ್ನು ಅಳವಡಿಸಿದ್ದರು.
ಮಾ. 28ರಂದು ಐಟಿಡಿಪಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರೂ ಗ್ರಾಮಸ್ಥರು ತಮ್ಮ ಪಟ್ಟು ಸಡಿಲಿಸಿರಲಿಲ್ಲ. ಹೀಗಾಗಿ ಬೆಳ್ತಂಗಡಿ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಎಚ್.ಆರ್.ನಾಯಕ್ ಸಹಿತ ಅಧಿಕಾರಿಗಳು ಮಾ.29 ರಂದು  ಮದ್ಯಾಹ್ನ  ಗ್ರಾಮಸ್ಥರನ್ನು ಭೇಟಿಯಾದರು.
ಆರಂಭದಲ್ಲಿ ಗ್ರಾಮಸ್ಥರು ಹಾಗೂ ಅಧಿಕಾರಿಗಳ ಮಧ್ಯೆ ಮಾತಿನ ಚಕಮಕಿ ನಡೆದಿದ್ದು , ನಂತರ  ಚುನಾವಣಾಧಿಕಾರಿ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ತಮ್ಮ ಮನವಿಯನ್ನು ಸ್ವೀಕರಿಸುತ್ತೇನೆ. ಜೊತೆಗೆ ಜಿಲ್ಲಾಧಿಕಾರಿ ಹಾಗೂ ಜಿ.ಪಂ. ಸಿಇಒ ಅವರ ಗಮನಕ್ಕೂ ತರುವುದಾಗಿ ಭರವಸೆ ನೀಡಿದರು.
ಬಳಿಕ ಕತ್ತರಿಗುಡ್ಡೆಯ ನೀರಿನ ಟ್ಯಾಂಕ್‌ನ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ, ರಸ್ತೆ ಸಮಸ್ಯೆ ಕುರಿತು ವರದಿ ಸಲ್ಲಿಸುವಂತೆ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಎಂ ಪಾಟೀಲ್ ಹಾಗೂ ಬೆಳ್ತಂಗಡಿ ಐಟಿಡಿಪಿ ಅಧಿಕಾರಿ ಹೇಮಲತಾ ರಿಗೆ ಸೂಚನೆ ನೀಡಿದರು. ನಿವೇಶನ ಸಮಸ್ಯೆಯನ್ನು ತಹಶೀಲ್ದಾರ್ ಗಣಪತಿ ಶಾಸ್ತ್ರಿ ಅವರ ಗಮನಕ್ಕೆ ತಂದರು.
ತಾ.ಪಂ. ಇಒ ಕುಸುಮಾಧರ್ ಬಿ., ಅರಣ್ಯಾಧಿಕಾರಿ ಸುಬ್ಬಯ್ಯ ನಾಯ್ಕ, ಚಾರ್ಮಾಡಿ ಗ್ರಾ.ಪಂ ಪಿಡಿಒ ಪ್ರಕಾಶ್ ಶೆಟ್ಟಿ  ನೊಚ್ಚ, ಪಂಚಾಯತ್ ರಾಜ್ ಎಂಜಿನಿಯರ್ ಚೆನ್ನಪ್ಪ ಮೊಯಿಲಿ, ಶಿಕ್ಷಣ ಸಂಯೋಜಕ ಸುಭಾಷ್ ಜಾಧವ್, ಧರ್ಮಸ್ಥಳ ಠಾಣೆಯ ಸಿಬಂದಿ , ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.