ಪಡ್ಡಂದಡ್ಕದಲ್ಲಿ ಹಗಲಲ್ಲೂ ಉರಿಯುವ ಬೀದಿ ದೀಪ…!

ಅವೈಜ್ಞಾನಿಕ ಹಂಪ್ಸ್: ನಾಗರಿಕರ ಆಕ್ರೋಶ

ಪಡ್ಡಂದಡ್ಕ: ಹೊಸಂಗಡಿಯ ಪಡ್ಡಂದಡ್ಕ ಬಳಿಯ ಹೈಮಾಸ್ಟ್ ಎಲ್‌ಇಡಿ ದೀಪಗಳು ಕಳೆದ ಸರಿಸುಮಾರು 4 ದಿನಗಳಿಂದ ಹಗಲಿರುಲೆನ್ನದೆ ಉರಿಯುತ್ತಿದೆ.
ಪಡ್ಡಂದಡ್ಕದಿಂದ ಕಾಶಿಪಟ್ಣ ಕಡೆಗೆ ತೆರಳುವ ರಸ್ತೆಯಲ್ಲಿ ಐದಾರು ಹೈಮಾಸ್ಟ್ ಬೀದಿದೀಪಗಳು ಹಗಲೊತ್ತಿನಲ್ಲಿಯೂ ಉರಿಯುತ್ತಿದ್ದು, ಪಂಚಾಯತುನ ಗಮನಕ್ಕೆ ತಂದರೂ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರಾದ ವಿದ್ಯಾನಂದ ಜೈನ್ ಅವರು ದೂರಿದ್ದಾರೆ. ಈ ಬಗ್ಗೆ ಹೊಸಂಗಡಿ ಗ್ರಾ.ಪಂ. ಅಧ್ಯಕ್ಷೆ ಹೇಮಾವಸಂತ್ ಪ್ರತಿಕ್ರಿಯಿಸಿ, ಹೈಮಾಸ್ಟ್ ಬೀದಿದೀಪಗಳ ಲೈನ್‌ಗಳು ಡೈರೆಕ್ಟ್ ಆಗಿರುವುದರಿಂದ ದಿನವಿಡೀ ಉರಿಯುತ್ತಿದೆ. ಈ ಬಗ್ಗೆ ಮೆಸ್ಕಾಂ ಇಲಾಖೆಗೆ ತಿಳಿಸಲಾಗಿದೆ. ಅವರು ದುರಸ್ತಿ ಪಪಡಿಸುವುದಾಗಿ ತಿಳಿಸಿದ್ದು, ಮತ್ತೊಮ್ಮೆ ಗಮನಕ್ಕೆ ತರಲಾಗುವುದು ಎಂದಿದ್ದಾರೆ.
ಅವೈಜ್ಞಾನಿಕ ಹಂಪ್‌ಗಳು: ಇಲ್ಲಿಯ ಕಾಂಕ್ರಿಟ್ ರಸ್ತೆಯ ಒಂದೇ ಕಡೆಗಳಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಲಾದ ೩ ಹಂಪ್ಸ್‌ಗಳು ಪ್ರಯಾಣಿಕರಿಗೆ ಅಪಾಯವನ್ನು ತಂದೊಡ್ಡಿದೆ. ಈ ಬಗ್ಗೆ ಗ್ರಾಮಸಭೆಗಳಲ್ಲಿ ಗಮನಕ್ಕೆ ತಂದಿದ್ದರೂ ಈವರೆಗೆ ಕ್ರಮ ಕೈಗೊಂಡಿಲ್ಲ. ಅಲ್ಲದೆ ಇಲ್ಲಿಯ ಸಂಬಂಧಿತ ಜನಪ್ರತಿನಿಧಿಗಳಿಗೂ ತಿಳಿಸಲಾಗಿದ್ದು, ಯಾರದೋ ಒತ್ತಡಕ್ಕೆ ಮಣಿದು ಅವೈಜ್ಞಾನಿಕ ಹಂಪ್ಸನ್ನು ದುರಸ್ತಿ ಪಡಿಸಲು ಮನಸ್ಸು ಮಾಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಹತ್ತಿರ ಬರುವವರೆಗೂ ಈ ಹಂಪ್‌ಗಳು ಗೊತ್ತಾಗದೆ ಹಲವು ಬಾರಿ ದ್ವಿಚಕ್ರ ಸವಾರರು ನಿಯಂತ್ರಣ ತಪ್ಪಿ ಮಗುಚಿ ಬಿದ್ದು ಗಾಯಗೊಂಡಿರುವ ಉದಾಹರಣೆಗಳಿವೆ. ರಸ್ತೆಯ ಬದಿಯಲ್ಲಿ ಮಸೀದಿ ಹಾಗೂ ಅದರ ಎದುರು ಭಾಗದಲ್ಲಿ ಹಿ.ಪ್ರಾ. ಶಾಲೆ ಇದ್ದು, ಸುರಕ್ಷತೆ ದೃಷ್ಠಿಯಿಂದ ಹಂಪ್ಸ್ ಇಲ್ಲಿ ಅನಿವಾರ್ಯವಾಗಿದೆ. ಆದರೆ ಕಾಂಕ್ರಿಟ್ ರಸ್ತೆ ನಿರ್ಮಿಸಿದ ಸಾಮಾನ್ಯ ಜ್ಞಾನವಿಲ್ಲದ ಗುತ್ತಿಗೆದಾರನ ಅವೈಜ್ಞಾನಿಕ ಹಂಪ್ಸ್‌ಗಳಿಂದ ಪ್ರಯಾಣಿಕರು ಜೀವವನ್ನು ಕೈಯಲ್ಲಿಡಿದುಕೊಂಡು ಸವಾರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ತಕ್ಷಣ ಅವೈಜ್ಞಾನಿಕ ಹಂಪ್ಸ್‌ಗಳನ್ನು ಸರಿಪಡಿಸಿ ಇಲ್ಲವೇ ತೆರವುಗೊಳಿಸುವಂತೆ ಆಗ್ರಹ ಕೇಳಿ ಬಂದಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.