ಕೂಕ್ರಬೆಟ್ಟು ಶಾಲೆಯಲ್ಲಿ ಉಚಿತ ಆರೋಗ್ಯ ತಪಾಸಣೆ

ಆರೋಗ್ಯ ಅಮೂಲ್ಯ ಸಂಪತ್ತು: ಜಯಂತ್‌ ಕೋಟ್ಯಾನ್‌

 ಉಜಿರೆ ಎಸ್‌ಡಿಎಂ ಆಸ್ಪತ್ರೆಯ ವೈದ್ಯ ಡಾ.ಶಿವಶಂಕರ್‌ ದೀಪ ಬೆಳಗಿಸಿ ಕಾರ್ಯಕ್ರಮವನ್ನು  ಉದ್ಘಾಟಿಸಿದರು.

ಮರೋಡಿ: ಉಜಿರೆ ಎಸ್‌ಡಿಎಂ ಕಾಲೇಜಿನ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗ ಹಾಗೂ ಮರೋಡಿಯ ವಿವಿಧ ಸಂಘಸಂಸ್ಥೆಗಳ ಸಹಕಾರದಲ್ಲಿ ಉಜಿರೆ ಎಸ್‌ಡಿಎಂ ಆಸ್ಪತ್ರೆ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಮತ್ತು ಯೋಗವಿಜ್ಞಾನ ಕಾಲೇಜಿನ ತಜ್ಞವೈದ್ಯರಿಂದ  ಕೂಕ್ರಬೆಟ್ಟು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

ಸರ್ಕಾರಿ ಶಾಲೆ ಉಳಿಸಿ ಬೆಳೆಸಿ ಮರೋಡಿ ಸಮಿತಿಯ ಅಧ್ಯಕ್ಷ ಜಯಂತ ಕೋಟ್ಯಾನ್‌ ಶಿಬಿರವನ್ನು ಉದ್ಘಾಟಿಸಿ, ‘ಆರೋಗ್ಯ ಮನುಷ್ಯದ ಅತ್ಯಮೂಲ್ಯ ಸಂಪತ್ತು. ಈ ಸಂಪತ್ತು ನಮ್ಮಲ್ಲಿ ಇದ್ದರೆ ಉಳಿದ ಎಲ್ಲ ಸಂಪತ್ತನ್ನು ಗಳಿಸಬಹುದು. ಯಾರೂ ಆರೋಗ್ಯವನ್ನು ನಿರ್ಲಕ್ಷ್ಯ ಮಾಡಬಾರದು’ ಎಂದು ಹೇಳಿದರು.

ಮಕ್ಕಳ ಕೊರತೆಯಿಂದ ಮುಚ್ಚುವ ಹಂತದಲ್ಲಿದ್ದ ಕೂಕ್ರಬೆಟ್ಟು ಸರ್ಕಾರಿ ಶಾಲೆಗೆ ಮರುಜೀವ ದೊರಕಿದೆ. ಈಗಾಗಲೇ ಎಲ್‌ಕೆಜಿ ಮತ್ತು ಯುಕೆಜಿ ತರಗತಿ ಆರಂಭಗೊಂಡಿದ್ದು, ನಿರೀಕ್ಷೆಗೂ ಮೀರಿ ಮಕ್ಕಳು ಬಂದಿದ್ದಾರೆ. ಮುಂದಿನ ವರ್ಷ 100ಕ್ಕೂ ಹೆಚ್ಚು ಮಕ್ಕಳು ಶಾಲೆಗೆ ಬರುವ ನಿರೀಕ್ಷೆಯಿದೆ.  ಉಚಿತವಾಗಿ ಗುಣಮಟ್ಟದ ಶಿಕ್ಷಣ ನೀಡುವುದು ನಮ್ಮ ಆದ್ಯತೆ. ಈ ನಿಟ್ಟಿನಲ್ಲಿ ಶಾಲೆಯಲ್ಲಿ ಮೂಲಸೌಕರ್ಯ ಒದಗಿಸಲಾಗುತ್ತದೆ ಎಂದು ಹೇಳಿದರು.

ಉಜಿರೆ ಎಸ್‌ಡಿಎಂ ಆಸ್ಪತ್ರೆಯ ವೈದ್ಯ ಡಾ.ಶಿವಶಂಕರ್‌, ಪ್ರಕೃತಿ ಮತ್ತು ಯೋಗವಿಜ್ಞಾನ ಕಾಲೇಜಿನ ಪ್ರಕೃತಿ ಚಿಕಿತ್ಸಾ ವಿಭಾಗದ ಡೀನ್‌ ಡಾ.ಸುಜಾತಾ ಕೆ.ಜೆ. ಮಾತನಾಡಿದರು.

ಹೊಸ್ಮಾರು ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ದಿವಾಕರ ಹೆಗ್ಡೆ, ನಾರಾವಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಮುಖ್ಯಕಾರ್ಯನಿರ್ವಹಣಾಧಿಕಾರಿ ವಿಜಯಕುಮಾರ್ ಬಂಗ, ಪ್ರಗತಿಬಂಧು ಒಕ್ಕೂಟದ ನಾರಾವಿ ವಲಯಾಧ್ಯಕ್ಷ ಯಶೋಧರ ಬಂಗೇರ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಜುಪೂಜಾರಿ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರದೀಶ್‌ ಹಾರೊದ್ದು, ಅರುಣೋದಯ ಯುವಕ ಮಂಡಲದ ಅಧ್ಯಕ್ಷ ಬಾಲಕೃಷ್ಣ ಬಂಗೇರ, ಶಾರದಾಂಬಾ ಭಜನಾ ಮಂಡಳಿ ಅಧ್ಯಕ್ಷ ಗೋಪಾಲ ಸೇರಿಗಾರ್‌, ಉಮಾಮಹೇಶ್ವರ ಯಂಗ್‌ ಸ್ಟಾರ್‌ ಫ್ರೆಂಡ್ಸ್‌ ಅಧ್ಯಕ್ಷ ವಿದ್ಯಾನಂದ ಪೂಜಾರಿ, ಶಾಲಾ ಮುಖ್ಯಶಿಕ್ಷಕಿ ಸುಫಲಾ, ಮೂಡುಬಿದಿರೆ ಪದ್ಮಶ್ರೀ ಗ್ರಾಸ್ ಏಜೆನ್ಸಿಯ ಪ್ರವೀಣ್‌ ಬಳ್ಳಾಲ್‌, ಉದ್ಯಮಿ ಅಬೂಬಕ್ಕರ್‌ ಇದ್ದರು.

ಸಮಾಜ ಕಾರ್ಯ ವಿಭಾಗ ಸಹ ಪ್ರಾಧ್ಯಾಪಕ ಅತುಲ್‌ ಜೈನ್‌ ವಂದಿಸಿದರು. ಶಿಬಿರದಲ್ಲಿ ಸುಮಾರು 100 ಮಂದಿಯ ಆರೋಗ್ಯ ತಪಾಸಣೆ ನಡೆಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.