HomePage_Banner_
HomePage_Banner_

8 ಲಕ್ಷದ ಅಂಗನವಾಡಿ ಕಟ್ಟಡಕ್ಕೆ ಉದ್ಘಾಟನೆಯೂ ಇಲ್ಲ……ಶೌಚಾಲಯವೂ ಇಲ್ಲ…

 ಬೆದ್ರಬೆಟ್ಟು ಅಂಗನವಾಡಿ ಮಕ್ಕಳ ಕಥೆಯ  ವ್ಯಥೆ

8 ಲಕ್ಷ ರೂ ಅನುದಾನದಲ್ಲಿ ಹೊಸದಾಗಿ ನಿರ್ಮಾಣವಾಗಿರುವ ಅಂಗನವಾಡಿ ಕಟ್ಟಡ
ನಾಗರಿಕ ಸಮಿತಿ ಮತ್ತು ತಾಯಂದಿರಿಂದ ಪಂಚಾಯತ್‌ಗೆ ಮನವಿ
ಈಗ ಬಳಕೆಗೆ ಅಸಾಧ್ಯ ಸ್ಥಿತಿಯಲ್ಲಿಯಲ್ಲಿರುವ ಹಳೆಯ ಶೌಚಾಲಯ

 ಅಶ್ರಫ್ ಆಲಿಕುಂಞಿ

ಇಂದಬೆಟ್ಟು: ಬೆದ್ರಬೆಟ್ಟು | ಇಲ್ಲಿನ ಅಂಗನವಾಡಿ ಕಟ್ಟಡ 8 ಲಕ್ಷ ರೂ. ಸರಕಾರಿ ಅನುದಾನದಲ್ಲಿ ಬಹುತೇಕ ಪೂರ್ತಿಗೊಂಡು 2 ವರ್ಷ ಕಳೆದರೂ ಇನ್ನೂ ಉದ್ಘಾಟನೆ ಭಾಗ್ಯ ಕಂಡಿಲ್ಲ. ಅಲ್ಲದೆ ನೀರಿನ ಸಂಪರ್ಕವೂ ಇಲ್ಲದ ಹಳೆಯ ಕಟ್ಟಡದ ಗೋಡೆ ಮಕ್ಕಳ ಮೇಲೆ ಬೀಳುವ ಸ್ಥಿತಿಯಲ್ಲಿದ್ದು ಅದೇ ಕಟ್ಟಡದ ಹಳೆಯ ಶೌಚಾಲಯ ಈಗ ಉಪಯೋಗಕ್ಕೆ ಅಸಾಧ್ಯವಾಗಿದ್ದು ಗಬ್ಬೆದ್ದು ನಾರುತ್ತಿದೆ. ಹೊಸ ಕಟ್ಟಡಕ್ಕೆ ಉದ್ಘಾಟನೆ ಭಾಗ್ಯವೂ ಇಲ್ಲ..ಶೌಚಾಲಯವೂ ಇಲ್ಲ…..ಆದರೆ ಗುತ್ತಿಗೆದಾರರಿಗೆ ಎಲ್ಲಾ 8 ಲಕ್ಷ ರೂ. ಮೊತ್ತ ಪಾವತಿಯಾಗಿದೆ..!?
ಹೀಗೊಂದು ದುಸ್ಥಿತಿ ಸಹಿಸಿ ಇದೀಗ ಆಕ್ರೋಶದ ಕಟ್ಟೆಯೊಡೆದಿರುವ ಮಕ್ಕಳ ಹೆತ್ತವರು ಮತ್ತು ಪೋಷಕರು, ಊರ ನಾಗರಿಕರ ಸಹಕಾರದೊಂದಿಗೆ ಎಸ್‌ಡಿಪಿಐ ಜಿಲ್ಲಾ ಉಪಾಧ್ಯಕ್ಷರೂ ಆಗಿರುವ ಪಿ.ಡಿ ಆಂಟೊನಿ ಅವರ ಮಾರ್ಗದರ್ಶದಲ್ಲಿ ನಾಗರಿಕ ಹಿತರಕ್ಷಣಾ ವೇದಿಕೆ ಬೆದ್ರಬೆಟ್ಟು ಎಂಬ ಸಮಿತಿ ರಚಿಸಿಕೊಂಡು ಪ್ರಥಮ ಹಂತದಲ್ಲಿ ಪಂಚಾಯತ್‌ನಗೆ ಮನವಿ ನೀಡುವ ಮೂಲಕ ಹೋರಾಟದ ಮೊದಲ ಹೆಜ್ಜೆ ಇಟ್ಟಿದ್ದಾರೆ. ಶೌಚಾಲಯ ವ್ಯವಸ್ಥೆಯಾಗದಿದ್ದರೆ ಮಕ್ಕಳನ್ನೇ ಕಳುಹಿಸದೆ ಅಂಗನವಾಡಿ ಬಹಿಷ್ಕರಿಸುವ ಎಚ್ಚರಿಕೆ ನೀಡಿದ್ದಾರೆ.

ಗ್ರಾಮ ಪಂಚಾಯತ್‌ಗೆ ದೂರು: ಪ್ರತಿಭಟನೆ ಎಚ್ಚರಿಕೆ
ಈ ನಡುವೆ ಕಳೆದ 2 ವರ್ಷಗಳಿಂದ ಅಂಗನವಾಡಿಯ ಈ ದಯನೀಯ ಸ್ಥಿತಿಯನ್ನು ಸಹಿಸಿಕೊಂಡು ಬಂದಿದ್ದ ಮಕ್ಕಳ ಹೆತ್ತವರು, ಸಮಿತಿ ಸದಸ್ಯರುಗಳು. ಬೆದ್ರೆಬೆಟ್ಟು ಹಿತರಕ್ಷಣಾ ವೇದಿಕೆ ಸಮಿತಿ ಪದಾಧಿಕಾರಿಗಳು ಹೋರಾಟದ ಮೊದಲ ಹೆಜ್ಜೆ ಇಟ್ಟಿದ್ದು ಅದರ ಭಾಗವಾಗಿ ಗ್ರಾ.ಪಂ ಪಿಡಿಒ ಅವರಿಗೆ ಲಿಖಿತ ದೂರುನೀಡಿ ಸಂಬಂಧಪಟ್ಟ ಇಲಾಖೆ ಕಣ್ಣು ತೆರೆಯುವಂತೆ ಮಾಡಿದ್ದಾರೆ. ಶೀಘ್ರದಲ್ಲಿ ಶೌಚಾಲಯ ಕಾಮಗಾರಿ ಪೂರ್ತಿಗೊಳಿಸಬೇಕು. ಮಕ್ಕಳಿಗಾಗಿಯೇ ನಿರ್ಮಿಸಲಾದ ಹೊಸ ಅಂಗನವಾಡಿ ಕಟ್ಟಡವನ್ನು ಉದ್ಘಾಟನೆಗೊಳಿಸಿ ಬಲಕೆಗೆ ಮುಕ್ತವಾಗಿಸಬೇಕು. ಸದ್ಯಕ್ಕೆ ಶೌಚಾಲಯವನ್ನಾದರೂ ಸರಿಪಡಿಸಿ ಈಗ ಇರುವ ವ್ಯವಸ್ಥೆಯ ಉಪಯೋಗಕ್ಕಾದರೂ ಕ್ರಮ ಕೈಗೊಳ್ಳಬೇಕು ಎಂದು ಎಚ್ಚರಿಕೆ ನೀಡಲಾಗಿದೆ.
ಎಒ, ಸಿಡಿಪಿಒ ಪರಿಶೀಲನೆ:
ಸಾರ್ವಜನಿಕರು ಮತ್ತು ಮಕ್ಕಳ ಪೋಷಕರ ದೂರು ಬಂದ ಹಿನ್ನೆಲೆಯಲ್ಲಿ ತಾ.ಪಂ ಇಒ ಕುಸುಮಾಧರ್, ಸಿಡಿಪಿಒ ಪ್ರಿಯಾ ಆಗ್ನೇಸ್ ಚಾಕೋ ಅವರು ಮಾ. ೧೯ ರಂದು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಅರ್ಜಿಯಲ್ಲಿ ತಿಳಿಸಿರುವಂತೆ ಬ್ಲಾಕ್ ಆಗಿ ಗಬ್ಬೆದ್ದ ಸ್ಥಿತಿಯಲ್ಲಿರುವ ಶೌಚಾಲಯವನ್ನು ವೀಕ್ಷಿಸಿ ನಾಗರಿಕರ ಸಮಸ್ಯೆ ಅರ್ಥೈಸಿಕೊಂಡಿದ್ದಾರೆ. ಉದ್ಘಾಟನೆಗೆ ನೀತಿ ಸಂಹಿತೆ ಇರುವ ಕಾರಣದಿಂದ ಚುನಾವಣೆ ದಾಟದೆ ಏನೂ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಈ ವೇಳೆ ಮಾತನಾಡಿದ ಆಂಟೊನಿ ಮತ್ತಿತರರು, ಉದ್ಘಾಟನೆಗಿಂತಲೂ ಮುಂಚಿತವಾಗಿ ಮಕ್ಕಳಿಗೆ ಶೌಚಾಲಯದ ನಿರ್ಮಾಣ ಮಾಡಿ ಕೂಡಲೇ ವ್ಯವಸ್ಥೆ ಮಾಡಿ ಎಂದು ಬಲವಾಗಿ ಆಗ್ರಹಿಸಿದ್ದಾರೆ.
ಸಮಸ್ಯೆಗಳ ಆಗರ:
* ಹೊಸ ಕಟ್ಟಡ ನಿರ್ಮಾಣವಾದರೂ ಶೌಚಾಲಯ ಇಲ್ಲ.
* ಕಟ್ಟಡದ ಎದುರಿಗೆ ಬಣ್ಣ ಬಳಿದು ಚಿತ್ರ ಬಿಡಿಸಲಾಗಿದ್ದು ಒಳಗೆ ಸುಣ್ಣ ಕೂಡ ಇಲ್ಲ
* ಹಳೆಯ ಕಟ್ಟಡದ ಶೌಚಾಲಯವನ್ನೇ ಇದುವರೆಗೆ ಬಳಸುತ್ತಿದ್ದು, ಇದೀಗ ಅದೂ ಬ್ಲಾಕ್ ಆಗಿ ಗಬ್ಬೆದ್ದು ನಾರುವ ಸ್ಥಿತಿ
* ಮಕ್ಕಳಿಗೇನಾದರೂ ಮಲವಿಸರ್ಜಗೆ ಬಂದರೆ ಮನೆಗೆ ಕರೆಮಾಡಿ ತಾಯಂದಿರೇ ಬಂದು ಮನೆಗೆ ಕರೆದುಕೊಂಡು ಹೋಗುವ ದಯನೀಯ ಸ್ಥಿತಿ
* ಹಳೆಯ ಶೌಚಾಲಯದ ಎರಡು ಬಂದಿ ಗೋಡೆ ಅಪಾಯದಲ್ಲಿದ್ದು ಇನೂ ಎರಡು ಬದಿ ಬಟ್ಟೆಯಿಂದ ಕಟ್ಟಿದ ಅನಾಥ ಸ್ಥಿತಿ
* 2 ವರ್ಷದಿಂದ ಹೊಸ ಕಟ್ಟಡ ಉದ್ಘಾಟನೆ ಕಾದು ಕಾದು ಪಕ್ಕದ ಸಮುದಾಯ ಭವನದಲ್ಲಿ ದಿನದೂಡುತ್ತಿರುವ ಅಂಗನವಾಡಿ ಕೇಂದ್ರ.
* ಕಾಮಗಾರಿ ಪೂರ್ತಿಗೊಳಿಸಲು ಇನ್ನೂ 1.50 ಬೇಕು ಎನ್ನುತ್ತಿರುವ ಗುತ್ತಿಗೆದಾರರು

ಸರಕಾರಿ ಕಟ್ಟಡಕ್ಕೆ ಶೌಚಾಲಯ ಇಲ್ಲ:
ಶೌಚಾಲಯ ಆಗದಿದ್ದರೆ ಸರಕಾರದಿಂದ ಆಶ್ರಯ ಅಥವಾ ಇನ್ಯಾವುದೇ ಮನೆನಿರ್ಮಾಣ ಯೋಜನೆಗಳಲ್ಲಿ ಕೊನೆಯ ಬಿಲ್ಲು ಪಾವತಿ ತಡೆಹಿಡಿಯಲಾಗುತ್ತಿದೆ. ಆದರೆ ಇಲ್ಲಿ ಶೌಚಾಲಯ ಮತ್ತು ವಿದ್ಯುತ್ ಸಂಪರ್ಕ ಅದ್ಯಾವುದೂ ಆಗದಿದ್ದರೂ ಗುತ್ತಿಗೆದಾರರಿಗೆ ಪೂರ್ತಿ 8 ಲಕ್ಷ ರೂ. ಪಾವತಿಸಲಾಗಿದೆ. ಪಂಚಾಯತ್ ಅಧ್ಯಕ್ಷರಾಗಲೀ, ವಾರ್ಡ್‌ನ ಸದಸ್ಯರಾಗಲೀ ಈ ಮಸ್ಯೆ ಪರಿಹಾರಕ್ಕೆ ಪ್ರಯತ್ನ ಮಾಡಿಲ್ಲ ಎಂಬುದು ಖೇದಕರ
ಪಿ.ಡಿ ಆಂಟೊನಿ. ಅಧ್ಯಕ್ಷರು ನಾಗರಿಕ ಹಿತರಕ್ಷಣಾ ವೇದಿಕೆ ಬೆದ್ರಬೆಟ್ಟು

ಪಂಚಾಯತ್ ಅನುದಾನದಲ್ಲಿ ಶೌಚಾಲಯ ನಿರ್ಮಾಣಕ್ಕೆ ಸೂಚನೆ:
ಪಂಚಾಯತ್ ಅನುದಾನದಲ್ಲಿ ಶೌಚಾಲಯ ಗುಂಡಿ ಕಾಮಗಾರಿ ನಡೆಸಲು ಅನುದಾನ ಬಳಕೆ ಮಾಡುವಂತೆ ಇಒ ಅವರು ಈಗಾಲಗಲೇ ಪಂಚಾಯತ್ ಪಿಡಿಒ ಅವರಿಗೆ ಸೂಚನೆ ನೀಡಿದ್ದಾರೆ. ನೀತಿ ಸಂಹಿತೆ ಮುಕ್ತಾಯವಾದ ಬಳಿಕ ಉದ್ಘಾಟನೆ ನಡೆಸಿ ಬಳಕೆಗೆ ಮುಕ್ತವಾಗಿಸುವ ಕ್ರಮ ಕೈಗೊಳ್ಳಲಾಗುವುದು.
ಪ್ರಿಯಾ ಆಗ್ನೇಸ್ ಚಾಕೋ, ಸಿಡಿಪಿಒ (ಪ್ರಭಾರ) ಬೆಳ್ತಂಗಡಿ

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.