5 ಕೌಂಟರ್‌ಗಳ ಮೂಲಕ ಆರ್.ಟಿ.ಸಿ ವಿತರಣೆ: ಬೆಳ್ತಂಗಡಿ ತಹಶಿಲ್ದಾರರಿಂದ ಪೂರಕ ಕ್ರಮ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಅಕ್ರಮ ಸಕ್ರಮ ಕಾಯ್ದೆಯಡಿ ನಮೂನೆ 57 ರಲ್ಲಿ ಅರ್ಜಿ ಸಲ್ಲಿಕೆಗೆ ಮಾ. 16 ಕೊನೆಯ ದಿನವಾಗಿರುವ ಹಿನ್ನೆಲೆಯಲ್ಲಿ ತಾಲೂಕು ಕಚೇರಿಯಲ್ಲಿ ಭಾರೀ ಜನ ಸರತಿ ಸಾಲಿನಲ್ಲಿ ಕಂಡು ಬಂದರು. ಈಗಾಗಲೇ 27 ಸಾವಿರಕ್ಕೂ ಅಧಿಕ ಮಂದಿ ಈ ಯೋಜನೆಯಡಿ ಅರ್ಜಿ ಸಲ್ಲಿಸಿದ್ದು ಜಿಲ್ಲೆಯಲ್ಲೇ ಇದೇ ಮೊದಲ ಬಾರಿಗೆ 4 ಕೌಂಟರ್‌ಗಳ ಮೂಲಕ ಅರ್ಜಿ ಸ್ವೀಕಾರ ನಡೆಯುತ್ತಿದೆ. ಅರ್ಜಿಯೊಂದಿಗೆ ಆರ್‌ಟಿಸಿ (ಪಹಣಿ) ಕಡ್ಡಾಯ ವಾಗಿದ್ದು, ಆ ಹಿನ್ನೆಲೆಯಲ್ಲಿ ಆರ್‌ಟಿಸಿ ಪಡೆಯಲು ಇದ್ದ ಒಂದು ಕೌಂಟರನ್ನು ವಿಸ್ತರಿಸಿ ಇದೀಗ 5 ಕೌಂಟರ್‌ಗಳ ಮೂಲಕ ವಿತರಣೆಗೆ ತಹಶಿಲ್ದಾರ್ ಗಣಪತಿ ಶಾಸ್ತ್ರಿ ಕ್ರಮ ಕೈಗೊಂಡಿದ್ದಾರೆ.

ಬೆಳಿಗ್ಗೆ 6 ಗಂಟೆಗೇ ಜನ ತಾಲೂಕು ಕಚೇರಿಗೆ:
ಅರ್ಜಿ ಸಲ್ಲಿಕೆಗೆ ಕೊನೆಯ ದಿನ ಸಮೀಪಿಸುತ್ತಿದ್ದಂತೆ ನಾನಾ ಗ್ರಾಮಗಳಿಂದ ಜನ ಬೆಳಗ್ಗೆ 6 ಗಂಟೆಗೇ ತಾಲೂಕು ಕಚೇರಿಗೆ ಹೆಜ್ಜೆ ಇಡುತ್ತಿದ್ದರು. ಜನರ ಭಾವನೆಗೆ ತಕ್ಕುದಾಗಿ ತಹಶಿಲ್ದಾರ್ ಗಣಪತಿ ಶಾಸ್ತ್ರಿ ಅವರು ತಮ್ಮ ಸಿಬ್ಬಂದಿಗಳನ್ನು ವ್ಯವಸ್ಥೆಗೊಳಿಸಿದ್ದು ರಾತ್ರಿ 10 ಗಂಟೆವರೆಗೂ ಅರ್ಜಿ ಸ್ವೀಕಾರಕ್ಕೆ ಕ್ರಮ ಕೈಗೊಂಡಿದ್ದಾರೆ. ಅಲ್ಲದೆ ದಿನದ ಬಹುತೇಕ ಸಮಯಗಳಲ್ಲಿ ತಾಲೂಕು ಕಚೇರಿಯಲ್ಲೇ ಕುಳಿತು ಕೆಲಸ ನಿರ್ವಹಿಸುತ್ತಿರುವ ಮಾಜಿ ಸೈನಿಕರೂ ಆಗಿರುವ ತಹಶಿಲ್ದಾರರು ತಡರಾತ್ರಿ 12 ಗಂಟೆವರೆಗೂ ಕಡತಗಳಿಗೆ ಸಹಿ ಹಾಕಿ ಜನಪಸ್ಪಂದನ ಕೆಲಸ ನಿರ್ವಹಿಸುತ್ತಿದ್ದಾರೆ.

ಬೆಳಗ್ಗೆ 6 ಗಂಟೆಗೇ ಕಚೇರಿಗೆ ಬರುತ್ತಿರುವ ತಹಶಿಲ್ದಾರ್
ಬೆಳ್ತಂಗಡಿ ಸರಕಾರಿ ವಸತಿಗೃಹದಲ್ಲಿ ತಂಗುತ್ತಿರುವ ತಹಶಿಲ್ದಾರರು ಬೆಳಿಗ್ಗೆ 6 ಗಂಟೆಗೇ  ಕಚೇರಿಗೆ ಆಗಮಿಸುತ್ತಿದ್ದಾರೆ.
ಬೆಳ್ಳಂಬೆಳಗ್ಗೆ ಜನ ಏನಾದರೂ ತಾಲೂಕು ಕಚೇರಿ ಬಳಿ ಅಲೆಯುತ್ತಿದ್ದರೆ ಅವರನ್ನು ವಿಚಾರಿಸುವ ಕಾರ್ಯ ಮಾಡುತ್ತಿದ್ದಾರೆ. ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಸಕಲ ಪ್ರಯತ್ನ ಮಾಡುತ್ತಿದ್ದಾರೆ. ಕನಿಷ್ಠ ಅಕ್ಷರಗಳಲ್ಲಿ ಭರ್ತಿ ಮಾಡಬಹುದಾದ ನಮೂನೆ 57 ರ ಅರ್ಜಿಯನ್ನು ಹೊರಗಡೆ ಅನಧಿಕೃತ ಬರಹಗಾರರು 50ರೂ. ಗಳಿಂದ 200 ರೂ. ಗಳ ವರೆಗೂ ಪಡೆಯುತ್ತಿರುವುದನ್ನು ವಿಚಾರಿಸಿ ತಿಳಿದುಕೊಳ್ಳುತ್ತಿದ್ದು, ಜನರಿಗೆ ತಿಳುವಳಿಕೆ ನೀಡುವ ಕೆಲಸ ಮಾಡುತ್ತಿದ್ದಾರೆ.

ಅಕ್ರಮ ಸಕ್ರಮ ಭೂಮಿ ಭೂ ಪರಿವರ್ತನೆಗೆ ನಕಾರ:
ಸರಕಾರ ಆಹಾರೋತ್ಪನ್ನ ಬೆಳೆಗಳನ್ನು ಹೆಚ್ಚಿಸುವ ದೃಷ್ಟಿಯಲ್ಲಿ ರೈತ ಸರಕಾರಿ ಜಾಗ ಅತಿಕ್ರಮಿಸಿಕೊಂಡು ಅದರಲ್ಲಿ ಕೃಷಿ ಮತ್ತು ಇತರ ಕೃತಾವಳಿಗಳನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದರೆ ಅಂತವರಿಗೆ ಹಕ್ಕುಪತ್ರ ನೀಡುವಂತೆ ಸರಕಾರ ರೂಪಿಸಿರುವ ಅಕ್ರಮ ಸಕ್ರಮ ಕಾಯ್ದೆಯ ನಿಯಮ ಮೀರಿ ಭೂಮಿ ಭೂಪರಿವರ್ತನೆ ಮಾಡಿಕೊಳ್ಳುವ ಉದ್ಧೇಶಕ್ಕೆ ಅರ್ಜಿಗಳು ಬಂದಾಗ ಅದನ್ನು ಖಡಾಖಂಡಿತವಾಗಿ ತಿರಸ್ಕರಿಸುವ ಕೆಲಸ ಮಾಡುತ್ತಿದ್ದಾರೆ. ನಿಯಮ ಮೀರಿದರೆ ನಿಮ್ಮ ಭೂಮಿಯ ಮಂಜೂರಾತಿಯ ಹಕ್ಕನ್ನು ವಾಪಾಸು ಪಡೆಯಲು ಸರಕಾರಕ್ಕಿರುವ ಅವಕಾಶವನ್ನು ಮನವರಿಕೆ ಮಾಡಿಕೊಡುತ್ತಿದ್ದಾರೆ. ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯಲು ಜಾಗ ಮೋಡ್ಗೇಜ್ ನಡೆಸುವ ಸಂದರ್ಭ ಬಹುಲಕ್ಷ ಲೋನ್ ಆರ್‌ಟಿಸಿ ಗೆ ಎಂಟ್ರಿಗೆ ಬರುವಾಗಲೂ ಅಂತವರಿಗೆ ಸೂಕ್ತ ಎಚ್ಚಿರಿಕೆ ಮತ್ತು ಸಲಹೆ ಕೊಡುವ ಕೆಲಸ ಮಾಡುತ್ತಿದ್ದಾರೆ.
ಬೆಳಿಗ್ಗೆ ಕಚೇರಿಗೆ ಬಂದವರೇ ನೇರ ತಮ್ಮ ಛೇಂಬರ್‌ಗೆ ಹೋಗದೆ ಟೇಬಲ್ ಟೇಬಲ್‌ಗಳಿಗೆ ಹೋಗುತ್ತಿದ್ದು ಅಲ್ಲಿರುವ ಸಿಬ್ಬಂದಿ ಕಾರ್ಯವೈಖರಿ ನೇರ ಪರಿಶೀಲಿಸುತ್ತಿದ್ದಾರೆ. ದಿನವಹಿ ಕೆಲಸ ಏನು ಎಂಬ ಮಾಹಿತಿ ಕೇಳುತ್ತಾ ಅವರನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದಾರೆ. ಕೆಲವು ಸಿಬ್ಬಂದಿಗಳು ಕಚೇರಿಯಲ್ಲಿ ದಿನವಿಡೀ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದು ಇನ್ನೂ ಕೆಲವರು ಖುರ್ಚಿ ಬಿಸಿಮಾಡಿ ಹೋಗುವುದಷ್ಟಕ್ಕೆ ಸೀಮಿತರಾಗಿದ್ದವರ ಚಳಿಬಿಡಿಸುತ್ತಿದ್ದಾರೆ. ಇದೀಗ ತಾಲೂಕು ಕಚೇರಿಯಲ್ಲಿ ಆಧಾರ್ ನೋಂದಾವಣೆ ತಾಂತ್ರಿಕ ಕಾರಣದಿಂದ ತಾತ್ಕಾಲಿಕವಾಗಿ ನಿಂತಿದ್ದು ಸದ್ರಿ ಸಿಬ್ಬಂದಿಯನ್ನು ಇತರ ಕೆಲಸ ನಿರ್ವಹಿಸಲು ಕ್ರಮ ಕೈಗೊಂಡಿದ್ದಾರೆ. 94 ಸಿ ಯಂತಹಾ ಯೋಜನೆಗಳು ದುರುಪಯೋಗಕ್ಕೊಳಗಾಗುತ್ತಿರುವ ಬಗ್ಗೆಯೂ ತಿಳಿದು ಅಗತ್ಯ ಬಿದ್ದಲ್ಲಿಗೆ ಸ್ಥಳಪರಿಶೀಲನೆಗೆ ಹೋದದ್ದೂ ಇದೆ. ಉಳಿದಂತೆ ವಿ.ರ ವರದಿ ತಯಾರಿಸುವ ವೇಳೆ ಫಲಾನುಭವಿ ಕಟ್ಟಿರುವ ಮನೆಯ ಎದುರು ಫಲಾನುಭವಿ ಮತ್ತು ವಿ.ಎ ಜೊತೆಯಾಗಿ ನಿಂತಿರುವ ಮನೆಯ ಫೋಟೋ ತರುವಂತೆಯೂ ಕಟ್ಟುನಿಟ್ಟಿನ ಸೂಚನೆ ನೀಡುತ್ತಿದ್ದಾರೆ. ಒಟ್ಟಾರೆಯಾಗಿ ವಿಭಿನ್ನ ಶೈಲಿಯ ಆಡಳಿತದಿಂದ ಬೆಳ್ತಂಗಡಿ ತಹಶಿಲ್ದಾರ್ ಇದೀಗ ಖಡಕ್ ಅಧಿಕಾರಿಯಾಗಿ ಮೂಡಿಬರುತ್ತಿದ್ದು ಕೆಲವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.