ಮಹಿಳೆ ಬಹುಕಾರ್ಯಕ ಸಾಮರ್ಥ್ಯ ಹೊಂದಿದ್ದಾಳೆ: ಹೇಮಾವತಿ ವಿ ಹೆಗ್ಗಡೆ
ಉಜಿರೆ: ಆಧ್ಯಾತ್ಮಿಕ, ಮಾನಸಿಕ, ದೈಹಿಕವಾಗಿ ಮಹಿಳೆ ಸಮಾನ ಸಾಮರ್ಥ್ಯ ಹೊಂದಿದವಳಾಗಿದ್ದಾಳೆ. ಇದನ್ನು ಪುರುಷರು ಅರಿತು ಮಹಿಳಾ ದಿನಾಚರಣೆ ಆಚರಿಸಿದಾಗ ಈ ಆಚರಣೆಗೆ ಇನ್ನಷ್ಟು ಅರ್ಥಬರುತ್ತದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಜ್ಞಾನ ಜ್ಯೋತಿ ಮಹಿಳಾ ಕಾರ್ಯಕ್ರಮದ ಮುಖಸ್ಥೆ ಹೇಮಾವತಿ ವಿ ಹೆಗ್ಗಡೆ ಹೇಳಿದರು.
ಉಜಿರೆ ಎಸ್ಡಿಎಂ ಐಟಿ ಕಾಲೇಜಿನಲ್ಲಿ ಮಾ. 8 ರಂದು ಆಚರಿಸಲಾದ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಅವರು ವಿಶೇಷ ಅತಿಥಿಯಾಗಿ ಮಾತನಾಡಿದರು.
ಇದು ಕೇವಲ ದಿನದ ಆಚರಣೆಯಲ್ಲ, ನಿತ್ಯದ ಆಚರಣೆ ಆಗಬೇಕು. ಹೆಣ್ಣು ಮಗಳು ಹುಟ್ಟಿದ ತಕ್ಷಣ ಮನೆಯಲ್ಲಿ ನಿಜವಾದ ಸಂತಸದ ವಾತಾವರಣದ ಸೃಷ್ಟಿಯಾಗುತ್ತದೆ. ಮನೆಯವರ ನೋವಿಗೆ ಮೊದಲು ಸ್ಪಂದಿಸುವ ಹೃದಯ ಮಹಿಳೆಯದ್ದೇ, ನಿಜವಾದ ಬಹುಕಾರ್ಯಕ ಮಾಡುವ ವಿಷೇಷ ಸಾಮರ್ಥ್ಯ ಅವಳಿಗಿರುತ್ತದೆ. ಆದರೂ ದೈಹಿಕವಾಗಿ ಅವಳನ್ನು ಕುಗ್ಗಿಸುವ ಪ್ರಯತ್ನ ಎಳವೆಯಲ್ಲಿಯೇ ನಡೆಯುತ್ತದೆ. ಮಹಿಳೆಗೆ ಸಣ್ಣ ಸಹಾಯ ಸಿಕ್ಕಿದರೂ ಬಹಳ ಎತ್ತರಕ್ಕೆ ಬೆಳೆಯುತ್ತಾಳೆ ಎಂಬುದಾಗಿ ಅವರು ಉದಾಹರಣೆ ಸಮೇತ ನುಡಿದರು.
ಕಾಲೇಜಿನ ಪ್ರಾಂಶುಪಾಲ ಡಾ| ಅಶೋಕ್ ಕುಮಾರ್ ಸ್ವಾಗತಿಸಿ, ಪ್ರೋ ಸರಿತಾ ವಂದಿಸಿದರು, ಗ್ರಂಥಪಾಲಕಿ ಡಾ| ರಜತಾ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು.
ಪ್ರೋ. ವಿಶ್ವನಾಥ್ ಭಟ್ ನಿರೂಪಿಸಿದರು. ವೇದಿಕೆಯಲ್ಲಿ ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ ಯಶೋವರ್ಮ ಅವರ ಪತ್ನಿ ಸೋನಿಯ ವರ್ಮ ಉಪಸ್ಥಿತರಿದ್ದರು