ಕರಾಯ ಕಲ್ಲಾಪು ನಿವಾಸಿ ಯಶವಂತ ನಲಿಕೆ ಕೊಲೆ: ಆರೋಪಿ ಬಂಧನ

ಕರಾಯ: ಇಲ್ಲಿಯ ಕಲ್ಲಾಪು ನಿವಾಸಿ ಯುವಕನೋರ್ವ ಉಪ್ಪಿನಂಗಡಿ ಕಂಬಳ ನಡೆಯುತ್ತಿದ್ದ ಜಾಗದಲ್ಲಿ ಸಂಬಂಧಿಕರೊಬ್ಬರಿಂದಲೇ ತಿವಿತಕ್ಕೊಳಗಾಗಿ ಕೊಲೆಯಾಗಿದ್ದಾರೆ.  ಕರಾಯ ಗ್ರಾಮದ ಕಲ್ಲಾಪು ಮನೆ ಮೋನಪ್ಪ ನಲಿಕೆ ಎಂಬವರ ಪುತ್ರ,ದೈನ ನರ್ತಕ ಯಶವಂತ ನಲಿಕೆ (19ವ.) ಎಂಬವರಾಗಿದ್ದಾರೆ.
ಯಶವಂತ ನಲಿಕೆ ಕೊಲೆ ಪ್ರಕರಣದ ಸಾರಾಂಶ:
ಕರಾಯ ಕಲ್ಲಾಪು ನಿವಾಸಿ ಯಶವಂತ ಕೆ (19ವ.) ಅವರು ಮಾ. 1 ರಂದು ಸಂಜೆ ಚಿಕ್ಕಪ್ಪನ ಮನೆ ಪೂವಪ್ಪ ಅವರ ಕುಂತೂರು ಮನೆಗೆ ಹೋಗಿ ಅಲ್ಲಿ ರಾತ್ರಿ ಉಳಕೊಂಡು ಮರುದಿನ ಮಾ. 2 ರಂದು ಉಪ್ಪಿನಂಗಡಿಯಲ್ಲಿ ನಡೆದ ಕಂಬಳಕ್ಕೆ ಪೂವಪ್ಪ, ದೀಕ್ಷಿತ್ ಹಾಗೂ ದೂರುದಾರರ ಅಣ್ಣನ ಮಗ ಆನಂದ ಎಂಬವರೊಂದಿಗೆ ಕಂಬಳ ವೀಕ್ಷಣೆಗೆ ತೆರಳಿದ್ದರು. ಮಾ. 3ರಂದು ಬೆಳಿಗ್ಗೆ 6.15 ಕ್ಕೆ ಪೊಲೀಸ್‌ರೊಬ್ಬರು ಕರೆ ಮಾಡಿ ತಮ್ಮ ಪುತ್ರನಿಗೆ ಹೊಟ್ಟೆಯ ಭಾಗಕ್ಕೆ ತಿವಿದ ಗಾಯವಾಗಿದ್ದು, ಪುತ್ತೂರು ಆಸ್ಪತ್ರಗೆ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದರು. ತಕ್ಷಣ ಅವರು ಆಸ್ಪತ್ರೆಗೆ ಧಾವಿಸುತ್ತಿದ್ದಂತೆ ಪ್ರಥಮ ಚಿಕಿತ್ಸೆಯ ಬಳಿಕ ಯಶವಂತ ಅವರನ್ನು ಮಂಗಳೂರಿನ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಆದರೆ ಅಲ್ಲಿ ಯಶವಂತ ಅವರು ಅಸುನೀಗಿದ್ದರು.
ಘಟನೆಯ ಹಿನ್ನೆಲೆಯಲ್ಲಿ ನಡೆದ ತನಿಖೆಯ ವೇಳೆ ಯಶವಂತ ಅವರ ಸಂಬಂಧಿ ಕಾಡಬೆಟ್ಟು ನಿವಾಸಿ ಆನಂದ ಅವರು ಯಾವುದೊ ವೈಯಕ್ತಿಕ ವಿಚಾರದಿಂದ ಕಂಬಳದ ಗದ್ದೆಯಲ್ಲಿ ಹರಿತವಾದ ಆಯುಧದಿಂದ ಹೊಟ್ಟೆಯ ಭಾಗಕ್ಕೆ ತಿವಿದು ಕೊಲೆ ಮಾಡಿದ್ದಾಗಿ ಪ್ರಕರಣ ದಾಖಲಾಗಿರುತ್ತದೆ.
 ಆರೋಪಿ ಬಂಧನ:
ಯಶವಂತ ಕೊಲೆ ಪ್ರಕರಣದ ಆರೋಪಿ ಆನಂದ ನಲಿಕೆ ತಲೆಮರೆಸಿಕೊಂಡಿದ್ದವರನ್ನು ಪತ್ತೆಗಾಗಿ 3 ತಂಡಗಳನ್ನು ರಚಿಸಲಾಗಿತ್ತು. ಇದಾದ ಮೂರನೇ ದಿನಕ್ಕೆ ಆರೋಪಿ ಕರಾಯ ಬಳಿ ಬೈಕಿನಲ್ಲಿ ಬರುತ್ತಿದ್ದುದಾಗಿ ಖಚಿತಪಡಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಬಂಧಿತ ಆರೋಪಿ ಆನಂದ ಅವರಿಂದ ಕೃತ್ಯಕ್ಕೆ ಬಳಸಿದ ಸಣ್ಣ ಕತ್ತಿ ಮತ್ತು ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಕೊಲೆಕೃತ್ಯದ ಬಗ್ಗೆ ವಿಚಾರಣೆ ನಡೆಸಿದಾಗ, ಇತ್ತೀಚೆಗೆ ತನ್ನ ಮಗು ಸಾಯಲು ಇದೇ ಯಶವಂತ ಕಾರಣನಾಗಿದ್ದಾನೆ ಹಾಗೂ ಪತ್ನಿಯ ಸಂಬಂಧಿ ಹುಡುಗಿಯನ್ನು ಯಶವಂತ ಪ್ರೀತಿಸುತ್ತಿದ್ದ ಕಾರಣಕ್ಕೆ ಒಳಗೊಳಗೇ ದ್ವೇಷ ಹೊಂದಿ ಈ ಕೃತ್ಯ ನಡೆಸಿರುವ ಬಗ್ಗೆ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.