HomePage_Banner_
HomePage_Banner_
HomePage_Banner_

ಕಳಸ: ಕಂದಕಕ್ಕೆ ಉರುಳಿದ ಕಾರು; ಇಬ್ಬರು ಸಹೋದರ ದಂಪತಿಯ ಸಾವು

ಬೆಳ್ತಂಗಡಿ: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಹೋಬಳಿಯ ಹಿರೇಬೈಲು ಸಮೀಪ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ದ.ಕ. ಜಿಲ್ಲೆಯ ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಘಟನೆ ಫೆ.18 ರಂದು ನಡೆದಿದೆ.
ಬೆಳ್ತಂಗಡಿ ತಾಲೂಕಿನ ಬಾರ್ಯ ಗ್ರಾಮದಹೆನ್ನಡ್ಕ ನಿವಾಸಿ ರಾಜೀವ ರೈ ಮತ್ತು ಇವರ ಪತ್ನಿ ಮಮತಾ ರೈ ಹಾಗೂ ಬಂಟ್ವಾಳ ತಾಲೂಕಿನ ಪನೋಲಿಬೈಲು ಬೊಳ್ಳಾಯಿ ನಿವಾಸಿ ವಿಶ್ವನಾಥ ರೈ ಮತ್ತು ಇವರ ಪತ್ನಿ ಪುಷ್ಪಾವತಿ ರೈ ಅಪಘಾತದಲ್ಲಿ ಮೃತಪಟ್ಟ್ಟ ದುರ್ದೈವಿಗಳು. ಮೃತ ವಿಶ್ವನಾಥ ರೈ ಅವರ ಬಾವ, ಬಿ.ಸಿ.ರೋಡ್ ಅಜ್ಜಿಬೆಟ್ಟು ನಿವಾಸಿಯಾಗಿರುವ ಹವ್ಯಾಸಿ ಯಕ್ಷಗಾನ ಅರ್ಥಧಾರಿ ಸಂಜೀವ ಶೆಟ್ಟಿ ಎಂಬವರು ತೀವ್ರ ಗಾಯಗೊಂಡಿದ್ದು, ಅವರನ್ನು ಕಳಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಬಳಿಕ ಮಂಗಳೂರು ಎ.ಜೆ.ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯ ವಿವರ: 
ವಿಶ್ವನಾಥ ರೈ, ರಾಜೀವ್ ರೈ ಸಹೋದರಿ ಜಯಂತಿ ಅಡ್ಯಂತಾಯ ಅವರ ಮಗಳು ಸೌಮ್ಯರವರನ್ನು ಕಳಸ ಬಾಳೆಹೊಳೆ ನಿವಾಸಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಕನ್ನಡ ಚಿತ್ರ ನಿರ್ಮಾಪಕ ಉದ್ಯಮಿ ರವಿ ರೈ ಅವರಿಗೆ ಮದುವೆ ಮಾಡಿಕೊಡಲಾಗಿದ್ದು, ಅವರ ಮನೆ ಬಾಳೆಹೊಳೆಯಲ್ಲಿ ಫೆ.೧೮ ರಂದು ಮಧ್ಯಾಹ್ನ ದೇವರ ಕಾರ್‍ಯ ಮತ್ತು ರಾತ್ರಿ ಕಟೀಲು ಕ್ಷೇತ್ರದ ಮೇಳದವರಿಂದ ಯಕ್ಷಗಾನ ಬಯಲಾಟ ನಡೆಯಲಿದ್ದು, ಈ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲೆಂದು ವಿಶ್ವನಾಥ ರೈ ದಂಪತಿ ಮತ್ತು ರಾಜೀವ ರೈ ದಂಪತಿ ಹಾಗೂ ಸಂಜೀವ ಶೆಟ್ಟಿಯವರು ವಿಶ್ವನಾಥ ರೈಯವರ ಮಾರುತಿ ವ್ಯಾಗನರ್ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಮಧ್ಯಾಹ್ನ ಈ ದುರ್ಘಟನೆ ಸಂಭವಿಸಿದೆ.

ವಿಶ್ವನಾಥ ರೈಯವರು ಕಾರು ಚಲಾಯಿಸುತ್ತಿದ್ದರೆ, ಅವರ ಬಾವ(ಮಗಳ ಗಂಡನ ತಂದೆ) ಸಂಜೀವ ಶೆಟ್ಟಿಯವರು ಅವರ ಪಕ್ಕದಲ್ಲಿ ಎಡಬದಿಯ ಸೀಟಲ್ಲಿ ಕುಳಿತಿದ್ದರು. ಐವರೂ ಕಾರಿನಲ್ಲಿ ಬಾಳೆಹೊಳೆಗೆ ಹೋಗುತ್ತಿದ್ದಾಗ ಕಾರು ಕಳಸ ಸಮೀಪ ಹಿರೇಬೈಲ್ ಎಂಬಲ್ಲಿ ಸುಮಾರು 80 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದು, ಈ ಅವಘಡ ಸಂಭವಿಸಿದೆ. ಕಾರಲ್ಲಿದ್ದ ವಿಶ್ವನಾಥ ರೈ ದಂಪತಿ ಮತ್ತು ರಾಜೀವ ರೈ ದಂಪತಿ ಸ್ಥಳದಲ್ಲಿಯೇ ಸಾವಿಗೀಡಾಗಿದ್ದರೆ, ಸಂಜೀವ ಶೆಟ್ಟಿಯವರು ಅಪಘಾತದ ವೇಳೆ ಕಾರಿನ ಬಾಗಿಲು ತೆರೆದುಕೊಂಡ ಪರಿಣಾಮ ಕಾರಿನಿಂದ ಹೊರಕ್ಕೆಸೆಯಲ್ಪಟ್ಟು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ನಾಲ್ವರು ಸಹೋದರರಲ್ಲಿ ಮೂವರು ನಿವೃತ್ತ ಸೈನಿಕರು: ವಿಠಲ ರೈ, ನೇಮಣ್ಣ ರೈ, ವಿಶ್ವನಾಥ ರೈ ಮತ್ತು ರಾಜೀವ ರೈ ನಾಲ್ಕು ಮಂದಿ ಸಹೋದರರು ಮತ್ತು ಮೂವರು ಸಹೋದರಿಯರಾಗಿದ್ದು ಈ ಪೈಕಿ ವಿಠಲ ರೈ ಹೊರತು ಇತರ ಮೂವರು ಸಹೋದರರೂ ನಿವೃತ್ತ ಸೈನಿಕರು.ವಿಶ್ವನಾಥ ರೈಯವರು ಸೇನೆಯಿಂದ ನಿವೃತ್ತರಾದ ಬಳಿಕ ಬೇಂಕ್ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ವಿಶ್ವನಾಥ ರೈ-ಪುಷ್ಪಾವತಿ ದಂಪತಿ ಇಬ್ಬರು ಪುತ್ರಿಯರನ್ನು ಹೊಂದಿದ್ದು ಶರ್ಮಿಲಾ ರೈಯವರು ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಉದ್ಯೋಗಿಯಾಗಿದ್ದು ಸಹೋದರಿ ಸಬಿತಾ ರೈಯವರು ಮಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾರೆ.ರಾಜೀವ ರೈಯವರ ಮೊದಲ ಪತ್ನಿ ಕೆಯ್ಯೂರು ಇಳಂತಾಜೆ ನಿವಾಸಿ ನಿವೃತ್ತ ಮುಖ್ಯ ಶಿಕ್ಷಕ ದುಗ್ಗಪ್ಪ ಆಳ್ವರ ಪುತ್ರಿ ಶೋಭಾ ಅವರು ಮೃತರಾಗಿದ್ದಾರೆ. ಅವರಿಗೆ ಇಬ್ಬರು ಪುತ್ರರಿದ್ದು ಹಿರಿಯ ಪುತ್ರ ರಾಕೇಶ್ ಅಮೇರಿಕಾದಲ್ಲಿ ಉದ್ಯೋಗದಲ್ಲಿದ್ದು ಮತ್ತೋರ್ವ ಪುತ್ರ ರಿತೇಶ್ ಮಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾರೆ.ಶೋಭಾ ರೈಯವರ ನಿಧನದ ಬಳಿಕ ರಾಜೀವ ರೈಯವರು ಮಮತಾ ರೈಯವರನ್ನು ಮದುವೆಯಾಗಿದ್ದರು.ಇವರ ಪುತ್ರಿ ದೀಕ್ಷಾ ರೈ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾರೆ. ಮೃತ ವಿಶ್ವನಾಥ ರೈ, ರಾಜೀವ ರೈಯವರ ಸಹೋದರ ದಿ. ನೇಮಣ್ಣ ರೈಯವರ ಪುತ್ರಿ ಪ್ರತಿಭಾ ರೈಯವರನ್ನು ನಿವೃತ್ತ ಕಂದಾಯ ಅಧಿಕಾರಿ ವಿಠಲ ರೈ ದೇರ್ಲ ಅವರ ಮಗ ಶಿವಶ್ರೀರಂಜನ್ ರೈ ದೇರ್ಲರವರಿಗೆ ಮದುವೆ ಮಾಡಿಕೊಡಲಾಗಿದೆ.
ಮೃತ ಪುಷ್ಪಾವತಿ ವಿಶ್ವನಾಥ ರೈ ದಂಪತಿಯ ಅಂತ್ಯ ಸಂಸ್ಕಾರ ಫೆ.18 ರಂದು ರಾತ್ರಿ ಬೊಳ್ಳಾಯಿ ಮನೆಯಲ್ಲಿ ನಡೆದಿದೆ. ಮೃತ ಮಮತಾ ರಾಜೀವ ರೈಯವರ ಅಂತ್ಯಸಂಸ್ಕಾರ, ಪುತ್ರ ರಾಕೇಶ್ ರೈ ಅಮೇರಿಕಾದಿಂದ ಬಳಿಕ ಬುಧವಾರ ನಡೆಯಲಿರುವುದರಿಂದ ಮೃತದೇಹಗಳನ್ನು ಪುತ್ತೂರು ಸಿಟಿ ಆಸ್ಪತ್ರೆಯಲ್ಲಿರಿಸಲಾಗಿದೆ

.

ರಸ್ತೆ ತಪ್ಪಿತು
ಕಾರಲ್ಲಿ ಪ್ರಯಾಣಿಸುತ್ತಿದ್ದ ನತದೃಷ್ಟರಿಗೆ ದಾರಿ ತಪ್ಪಿ ಹೋಗಿದ್ದು, ಮೇಲಿನ ರಸ್ತೆಯಲ್ಲಿ ಹೋಗುವ ಬದಲು ಕೆಳ ರಸ್ತೆಯಲ್ಲಿ ಸಂಚರಿಸಿದ್ದರು. ಅಪಘಾತ ಸ್ಥಳದಲ್ಲಿ ದೊಡ್ಡ ಕಂದಕವಿರುವುದಾದರೂ ಅಲ್ಲಿ ಯಾವುದೇ ರೀತಿಯ ತಡೆಗೋಡೆ ಇಲ್ಲದೇ ಇದ್ದು ಈ ಕುರಿತು ಇವರಿಗೆ ಯಾವುದೇ ಮಾಹಿತಿ ಇಲ್ಲದೇ ಇದ್ದ ಪರಿಣಾಮ ಕಾರು ನೇರವಾಗಿ ಪ್ರಪಾತಕ್ಕೆ ಬಿದ್ದು ಈ ಅವಘಡ ಸಂಭವಿಸಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಘಟನೆ ಸಂಭವಿಸಿದ ಸುದ್ದಿ ತಿಳಿಯುತ್ತಲೇ ಸಂಬಂಧಿಕರು ಘಟನಾ ಸ್ಥಳಕ್ಕೆ ತೆರಳಿದ್ದು ಮೃತದೇಹಗಳನ್ನು ಊರಿಗೆ ತರುವ ಕೆಲಸ ನಡೆಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.