ಬರಹ: ಅಚ್ಚು ಮುಂಡಾಜೆ
ಬೆಳ್ತಂಗಡಿ: ತುಳುವ ಮಣ್ಣಿನಲ್ಲಿ ಬಲ್ಲಿದರ ಪರವಾಗಿ ಪರಾಕ್ರಮ ತೋರಿ ರಣರಂಗದಲ್ಲೆ ಪ್ರಾಣಾರ್ಪಣೆಗೈದ ವೀರಘ್ರಣಿಗಳಾದ ಕೋಟಿ ಚೆನ್ನಯರ ತಾಯಿ ದೇಯಿ ಬೈದೆತಿ ಜೀವನಗಾಥೆ “ಸಾಮಾನ್ಯ ಮಹಿಳೆಯ ಅಸಾಮಾನ್ಯ ಕತೆ”ಯನ್ನೊಳಗೊಂಡ “ದೇಯಿ ಬೈದೆತಿ -ಗೆಜ್ಜೆಗಿರಿ ನಂದನೂಡು” ತುಳು ಚಲನಚಿತ್ರ ಕರಾವಳಿಯ ಎಲ್ಲಾ ಚಿತ್ರ ಮಂದಿರಗಳಲ್ಲಿ ಫೆ.15 ರಂದು ತೆರೆ ಕಾಣಲಿದೆ ಎಂದು ಚಿತ್ರನಿರ್ದೇಶಕ ಸೂರ್ಯೋದಯ್ ಪೆರಂಪಳ್ಳಿ ನುಡಿದರು.
ತಾಲೂಕು ಪತ್ರಿಕಾಭವನದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಈ ಅದ್ದೂರಿ ಐತಿಹಾಸಿಕ ಚಲನಚಿತ್ರವು ಕರಾವಳಿಯ ಎಲ್ಲ ಚಿತ್ರ ಮಂದಿರ ಮತ್ತು ವಿದೇಶದ ದುಬಾಯಿ, ಬೆಹರೈನ್, ಕತಾರ್ ಮೊದಲಾದೆಡೆ, ಹಾಗೂ ಮೋಲ್ಗಳಲ್ಲಿ, ಮಲ್ಟಿಫಲ್ ಚಿತ್ರಮಂದಿರಗಳಲ್ಲೂ ತೆರೆಕಾಣುತ್ತಿದೆ. ಉಡುಪಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಉದ್ಘಾಟನೆ ನೆರವೇರಿಸಲಿದ್ದಾರೆ. ಬೆಳ್ತಂಗಡಿ ಚಿತ್ರಮಂದಿರದಲ್ಲಿ ಕೂಡ ಅಂದು ಮಧ್ಯಾಹ್ನ 1 ಗಂಟೆಗೆ ಈ ಊರಿನ ಗಣ್ಯ ಅತಿಥಿಗಳ ಸಮ್ಮುಖ ಉದ್ಘಾಟನೆಯ ಸಾಂಕೇತಿಕ ಕಾರ್ಯಕ್ರಮ ಇಟ್ಟುಕೊಳ್ಳಳಾಗಿದೆ ಎಂದರು.
ಇದೊಂದು 500 ವರ್ಷಗಳ ಐತಿಹಾಸಿಕ ಕಥಾಹಂದರವಾಗಿದ್ದು, ಕುಟುಂಬ ಸಮೇತರಾಗಿ ನೋಡುಬಹುದಾಗಿದೆ. ಸಿನಿಮಾದಲ್ಲಿ 500 ವರ್ಷಗಳ ಹಿಂದಿನ ಕಾಲಕ್ಕೆ ಸರಿ ಹೊಂದುವ ಭವ್ಯ ಮನೆಗಳ ಸೆಟ್ಗಳನ್ನು ಹಾಕಲಾಗಿದೆ. ರೋಚಕ ಜೀವನಕಥೆ ಆಧರಿಸಿ ಈ ಸಿನಿಮಾ ಮೂಡಿಬಂದಿದೆ. ಇದರಲ್ಲಿ ಕಮರ್ಷಿಯಲ್ ಮೈಂಡ್ ಇಲ್ಲ, ದೇಶಭಕ್ತಿಯ ಕತೆ, ಮುಂದಿನ ಪೀಳಿಗೆಗೆ ಈ ನೈಜ ಸಂದೇಶ ಮುಟ್ಟಬೇಕು ಎಂಬುದು ನಮ್ಮ ಆಶಯ ಎಂದರು.
“ಯು” ಪ್ರಮಾಣ ಪತ್ರ ದೊರೆತ ಸಿನಿಮಾ:
ಇದೇ ಮೊದಲ ಬಾರಿಗೆ ಸೆನ್ಸಾರ್ ಮಂಡಳಿಯಿಂದ ವಿಶೇಷ ಮಾನ್ಯತೆ ಮತ್ತು ಆದರಕ್ಕೆ ಪಾತ್ರವಾಗಿರುವ ಈ ಚಿತ್ರವನ್ನು ಮಕ್ಕಳಿಂದ ಪ್ರಾರಂಭಿಸಿ ಎಲ್ಲಾ ವಯೋಮಾನದವರೂ ವೀಕ್ಷಿಸಬಹುದಾದ “ಯು” ಪ್ರಮಾಣಪತ್ರ ದೊರೆತಿದೆ. ಜತೆಗೆ ಸೆನ್ಸಾರ್ ಮಂಡಳಿಯ ಸದಸ್ಯರುಗಳು ಈ ಚಿತ್ರ ನಿರ್ಮಾಪಕರ ತಂಡವನ್ನು ತಮ್ಮ ಬಳಿ ಕರೆಸಿಕೊಂಡು ಚಿತ್ರದ ಬಗ್ಗೆ ವಿಚಾರ ವಿನಿಮಯ ಮಾಡಿಕೊಂಡದ್ದೂ ಮಾತ್ರವಲ್ಲದೆ ಚಿತ್ರ ನಿರ್ಮಾಣ, ಸಾಹಿತ್ಯ, ಕಥಾ ವಸ್ತು ಆಯ್ಕೆ ಮತ್ತು ಅಷ್ಟೇ ಪುರಾತನವಾಗಿ ಅದನ್ನು ನಿರೂಪಿಸಿದ ರೀತಿಯನ್ನು ಕಂಡು ಹುಬ್ಬೇರಿಸಿಕೊಂಡು, ಈ ಚಿತ್ರದ ಬಗ್ಗೆ ಅಪಾರ ಮೆಚ್ಚುಗೆಯ ಮಾತನ್ನಾಡಿದ್ದಾರೆ. ನಿರ್ಮಾಣ ತಂಡಕ್ಕೆ ವಿಶೇಷ ಅಭಿನಂದನೆಯನ್ನೂ ಸಲ್ಲಿಸಿರುವುದು ತುಳುನಾಡಿನ ಸತ್ಯಕಥೆಯೊಂದಕ್ಕೆ, ಅದನ್ನು ಚಿತ್ರದ ಮೂಲಕ ಕಟ್ಟಿಕೊಟ್ಟ ನಮ್ಮ ಈ ಚಿತ್ರ ತಂಡಕ್ಕೆ ಮತ್ತು ನಮ್ಮ ಒಟ್ಟು ಪರಿಕಲ್ಪನೆಗೆ ಸಿಕ್ಕಿದ ಅತಿದೊಡ್ಡ ಗೌರವ ಎಂದು ಸೂರ್ಯೋದಯ ಪೆರಂಪಳ್ಳಿ ಹೆಮ್ಮೆಯಿಂದ ಹೇಳಿಕೊಂಡರು.
“ಕನ್ನಡ”- “ತುಳು” ದ್ವಿಭಾಷೆಯಲ್ಲಿ ಏಕಕಾಲದಲ್ಲಿ ಚಿತ್ರೀಕರಣ:
ಈ ಸಿನಿಮಾಕ್ಕೆ ಆಯ್ಕೆ ಮಾಡಿಕೊಂಡಿರುವ ಕಥಾವಸ್ತು ಒಂದು ಐತಿಹಾಸಿಕ ನೈಜ ಕಥಾಹಂದರವಾಗಿದ್ದು ಇದು ಇತಿಹಾಸ ಪೂರಕ ಕಥೆ. ತುಳುನಾಡಿನ ಪಾಡ್ದಾನದಲ್ಲಿ ಬಂದಿರುವ ವಿಚಾರವನ್ನು ಅಧ್ಯಯನ ನಡೆಸಿ ಅದರ ಹಿಂದಿರುವ ಪ್ರತೀ ವಿಚಾರಗಳ ಬಗ್ಗೆಯೂ ಭಾಷೆ ಮತ್ತು ವಿಷಯ ತಜ್ಞರ ಜೊತೆ ಚರ್ಚಿಸಿ, ವಿಮರ್ಷೆ ನಡೆಸಿ ಈ ಚಿತ್ರದ ಕತೆ ರಚಿತವಾಗಿದೆ. ಜನರನ್ನು ಸುಮಾರು 500 ವರ್ಷಗಳ ಹಿಂದಕ್ಕೆ ಕೊಂಡೊಯ್ಯಬಹುದಾದ ಶೈಲಿಯಲ್ಲೇ ಸೆಟ್ ಹಾಕಲಾಗಿದ್ದು ಎಲ್ಲವನ್ನೂ ಅಚ್ಚುಕಟ್ಟಾಗಿ ಚಿತ್ರ ತಂಡ ನಿರ್ವಹಿಸಿದೆ. ಅಂದಿನ ಜನರ ಜನಜೀವನ, ಆಚಾರ ವಿಚಾರ, ಉಡುಗೆ ತೊಡುಗೆ, ಕಂಡುಕೇಳರಿಯದ ಸಂಪ್ರದಾಯಗಳ ಕಟ್ಟುಪಾಡುಗಳನ್ನು ಈ ಚಿತ್ರದಲ್ಲಿ ಬಿಂಬಿಸಲಾಗಿದೆ. ಈ ಕಥೆ ಕೇವಲ ತುಳುನಾಡಿನಲ್ಲಿ ಮಾತ್ರ ಪ್ರಸಿದ್ಧಿ ಪಡೆದು ನಿಂತುಹೋಗಬಾರದು ಎಂಬ ಕಾರಣಕ್ಕೆ “ಕನ್ನಡ” ಭಾಷೆಯಲ್ಲೂ ಇದೇ ಸಮಯದಲ್ಲಿ ಚಿತ್ರೀಕರಣಗೊಳಿಸಲಾಗಿದೆ. ಸದ್ಯದಲ್ಲೇ ಅದೂ ಕೂಡ ರಾಜ್ಯಾಧ್ಯಂತ ತೆರೆಕಾರಣಲಿದೆ ಎಂದರು.
ಯಾರ್ಯಾರು ಪಾತ್ರ ನಿರ್ವಹಿಸಿದ್ದಾರೆ?
ಸಂಕ್ರಿಮೋಷನ್ ಪಿಕ್ಟರ್ ಬ್ಯಾನರ್ನಲ್ಲಿ ತಯಾರಾದ ಈ ಚಿತ್ರಕ್ಕೆ ದೇವರಾಜ್ ಪಾಲನ್, ರಾಜಕೃಷ್ಣ, ಅಮಿತ್ ರಾವ್ ಸಹನಿರ್ದೇಶನವಿದ್ದು, ಸಂಜೀವ ಪೂಜಾರಿ ಹೆರ್ಗ, ಕಿರಣ್ ಹೆಗ್ಡೆ ಬಿಜ್ರಿಯವರ ನಿರ್ಮಾಣ ನಿರ್ವಹಣೆಯಿದೆ. ಚಿತ್ರಕ್ಕೆ ಬಿ ಭಾಸ್ಕರ್ ರಾವ್ ಸಂಗೀತ, ಮಣಿಕಾಂತ್ ಕದ್ರಿ ಅವರ ಹಿನ್ನೆಲೆ ಸಂಗೀತವಿದೆ. ರವಿ ಸುವರ್ಣ, ಹರೀಶ್ ಪೂಜಾರಿ ಕುಕ್ಕುಂಜೆ ಛಾಯಗ್ರಹಣ, ಮೋಹನ.ಎಲ್ ಸಂಕಲನದ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ಕರಾವಳಿ ಸಂಪ್ರದಾಯ ಬಲ್ಲವರಾದ ಕಲಾ ನಿರ್ದೇಶಕ ರವಿ ಪೂಜಾರಿ ಹಿರಿಯಡ್ಕ, ದಿನೇಶ್ ಸುವರ್ಣ ರಾಯಿ ಅದ್ಭುತವಾಗಿ ಕಲಾ ಕೈಚಳಕ ತೋರಿದ್ದಾರೆ.
ಬೆಳ್ತಂಗಡಿ ಮೊಬೈಲ್ ಪ್ಯಾಲೇಸ್ ಮಾಲಕ ಉಮೇಶ್ ಪೂಜಾರಿ ಸಹ ನಿರ್ಮಾಪಕರಾಗಿದ್ದು ಚಿತ್ರದ ಸಾಹಿತ್ಯ, ಚಿತ್ರಕಥೆ, ಸಂಭಾಷಣೆ ಹೊಣೆ ಸೂರ್ಯೋದಯ ಪೆರಂಪಳ್ಳಿ ಅವರದ್ದು.
ಬೆಳ್ತಂಗಡಿ ತಾಲೂಕಿನ ನಿಟ್ಟಡೆಗುತ್ತುವಿನ ಸೌಜನ್ಯಾ ಹೆಗ್ಡೆ ಸೇರಿದಂತೆ ಪ್ರಸಿದ್ಧ ಕಲಾವಿದರಾದ ಸೀತಾ ಕೋಟೆ, ಅಮಿತ್ ರಾವ್, ಚೇತನ್ ರೈ ಮಾಣಿ, ಎಂ.ಕೆ ಮಠ, ಪ್ರಕಾಶ್ ಧರ್ಮನಗರ, ಅಶ್ವಿನಿ ಕೋಟ್ಯಾನ್, ಕಾಜೋಲ್ ಕುಂದರ್, ಪ್ರವೀಣ್ ಶೆಟ್ಟಿ, ಸುನಿಲ್ ನೆಲ್ಲಿಗುಡ್ಡೆ, ಲಕ್ಷ್ಮಣ್ ಮಲ್ಲೂರು, ಸುನಿಲ್ ಪಲ್ಲಮಜಲು, ಎಂ.ಕೆ ನಯನಾಡು, ಸುನೀತಾ ಎಕ್ಕೂರ್, ಮಂಜುಭಾಷಿನಿ, ಕಿರ್ಲೋಸ್ಕರ್, ಸತ್ಯನಾರಾಯಣ್, ಸುಜಾತಾ ಶೆಟ್ಟಿ, ಮೋನಿಕಾ ಆಂದ್ರಾದೆ ನಾಗರಾಜ್ ವರ್ಕಾಡಿ, ಭಾಸ್ಕರ್ ಮಣಿಪಾಲ್, ಸೊರ್ಯೋದಯ್, ಪವಿತ್ರಾ ಶೆಟ್ಟಿ ಕಟಪಾಡಿ, ಇಡ್ಲಿ ರಾಜ, ಶ್ರೀನಾಥ್ ವಸಿಷ್ಠ, ತಾರಾನಾಥ್ ಸುರತ್ಕಲ್, ಯಶಸ್ಸ್ ಸೂರ್ಯ, ಶ್ರೇಜಲ್ ಪೂಜಾರಿ, ಸಮೃದ್ದಿ ಪ್ರಕಾಶ್ ಭಟ್ ಮುಂತಾದ ಅನುಭವೀ ಕಲಾವಿದರು ಬಣ್ಣಹಚ್ಚಿದ್ದಾರೆ. ತುಳು ಚಿತ್ರರಂಗದ ಇತಿಹಾದಲ್ಲೇ ಮೊಟ್ಟಮೊದಲ ಬಾರಿಗೆ ಅದ್ಭುತವಾಗಿ ನಿರ್ಮಾಣಗೊಂಡ ಚಿತ್ರವಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ಸಹನಿರ್ಮಾಪಕ, ಮೊಬೈಲ್ ಪ್ಯಾಲೇಸ್ ಮಾಲಕ ಉಮೇಶ್ ಕುಮಾರ್, ಯುವವಾಹಿನಿ ಸಂಘಟನಾ ಕಾರ್ಯದರ್ಶಿ ಸುನಿಲ್ ಕುಮಾರ್, ನಿಯೋಜಿತ ಅಧ್ಯಕ್ಷ ಹರೀಶ್ ಸುವರ್ಣ, ಸಲಹೆಗಾರರಾದ ಗೋಪಾಲಕೃಷ್ಣ ಮತ್ತು ರಮಾನಂದ ಸಾಲ್ಯಾನ್ ಉಪಸ್ಥಿತರಿದ್ದರು.
ಪ್ರಶಾಂತ್ ಮಚ್ಚಿನ ಮತ್ತು ಉಮೇಶ್ ಪೂಜಾರಿ:
ತಾಲೂಕಿನ 81 ಗ್ರಾಮದ ಜನರೂ ಈ ಚಿತ್ರ ನೋಡುವಂತೆ ಪ್ರೇರೇಪಿಸುತ್ತೇವೆ:
81 ಗ್ರಾಮಗಳಲ್ಲೂ ಮನೆಮನೆಗೆ ಸಂಪರ್ಕಿಸಿ ಎಲ್ಲರೂ ಈ ಚಿತ್ರ ನೋಡುವಂತೆ ಮಾಡಲಿದ್ದೇವೆ. ನಮ್ಮದೇ ಊರಿನ ನೈಜ ಕಥಾವಸ್ತುವಾಗಿರುವ ಈ ಚಿತ್ರವನ್ನು ಭಕ್ತಿಭಾವದ ದೃಷ್ಟಿಯಿಂದ ಎಲ್ಲರೂ ನೋಡುವಂತಾಗಬೇಕು. ಇದೇ ನಮ್ಮ ಭಾವನೆ. ನಾವು ನಮ್ಮ ಸಂಘಟನೆ ಮೂಲಕ ಆ ಕಾರ್ಯವನ್ನು ಮಾಡಲಿದ್ದೇವೆ ಎಂದು ಯುವವಾಹಿನಿ ತಾ| ಅಧ್ಯಕ್ಷ ಪ್ರಶಾಂತ್ ಮಚ್ಚಿನ ತಿಳಿಸಿದರು.
ಬೆಳ್ತಂಗಡಿ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ::
1.25 ಕೋಟಿ ವೆಚ್ಚದಲ್ಲಿ ತುಳುಚಿತ್ರ:
1.25 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ತುಳು ಸಿನಿಮಾದಿಂದ ಎಷ್ಟು ಆದಾಯ ಬರಲಿದೆ ಎಂಬುದನ್ನು ನಾವು ಲೆಕ್ಕಹಾಕುತಿಲ್ಲ. ಆದರೆ ನಮ್ಮ ನಾಳಿನ ಜನಾಂಗಕ್ಕೆ ಐನೂರು ವರ್ಷಗಳ ಜನಜೀವನದ ಶೈಲಿಯ ನೈಜವಾದ ಚಿತ್ರೀಕರಣದ ಸೂಕ್ಷ್ಮತೆಯನ್ನು ಡಾಕ್ಯುಮೆಂಟರಿಯಾಗಿ ಉಳಿಸಿದ ಹೆಮ್ಮೆ ನಮಗೆ ಸಲ್ಲಲಿದೆ. ಉಳಿದಂತೆ ಹಣ ಅಂತಸ್ತು ಆಸ್ತಿಗಳು ಮುಗಿದು ಖರ್ಚಾಗಿ ಹೋದರೆ ಈ ಚಿತ್ರ ಕೊನೆಯವರೆಗೂ ಅದ್ಭುತ ದಾಖಲೆಯಾಗಿ ಉಳಿಯಲಿದೆ. ಇದೇ ನಮ್ಮ ಜೀವನದ ಆಸ್ತಿ ಕೂಡ ಎಂದು ಸೂರ್ಯೋದಯ ಪೆರಂಪಳ್ಳಿ ಹೇಳಿದರು.
500 ವರ್ಷ ಪೂರ್ವದಲ್ಲಿ ಸ್ಥಿತಿಗತಿಯ ನೈಜ ಚಿತ್ರಣ ಈ ಚಿತ್ರದಲ್ಲಿ:
ಕರಾವಳಿಯ ರೋಚಕ ಕಥೆಯಿದೆ. ಪಾಡ್ದಾನದಲ್ಲಿ ಬರುವ ಕಥೆಗಿಂತಲೂ ಅದರೊಳಗಿರುವ ಅಗೋಚರತೆಯನ್ನು ತೆರೆದಿಡುವ ಸಾರಾಂಶ ಇದರಲ್ಲಿದೆ. ಆಗಿನ ಕಾಲದಲ್ಲಿ ಮನೆಯಲ್ಲಿ ಹೆಣ್ಣುಮಗು ಋತುಮತಿಯಾಗುವ ಮುನ್ನ ಆಕೆಗೆ ವಿವಾಹ ಮಾಡಿಕೊಡಬೇಕು. ಇಲದಿದ್ದರೆ ಆಕೆ ಋತುಮತಿಯಾದರೆ ಆಕೆಯನ್ನು ಕಾಡಿನಲ್ಲಿ ಹೋಗಿ ಬಿಟ್ಟುಬರಬೇಕೆಂಬ ತೆರನಾದ ಸಂಪ್ರದಾಯಗಳಿತ್ತು ಎಂಬುದನ್ನು ಈ ಚಿತ್ರದ ಮೂಲಕ ಜನರು ಅಂದಿನ ಬದುಕು, ಜೀವನ ಶೈಲಿ, ಕಟ್ಟುಪಾಡುಗಳನ್ನು ತಿಳಿದುಕೊಳ್ಳಲೂ ಇದೊಂದು ವೇದಿಕೆಯಂತೆ ನಾವು ಈ ಚಿತ್ರದ ಮೂಲಕ ಸೇತುವೆ ನಿರ್ಮಿಸಿ ಕೊಟ್ಟಿದ್ದೇವೆ ಎಂದು ಸಹನಿರ್ಮಾಪಕ ಉಮೇಶ್ ಪೂಜಾರಿ ಹೇಳುತ್ತಾರೆ.
ಅಶ್ರಫ್ ಆಲಿಕುಂಞಿ
ವರದಿಗಾರರು ಸುದ್ದಿ ಬಿಡುಗಡೆ ಬೆಳ್ತಂಗಡಿ
(9449640130)