ಬಿಜೆಪಿ ಲೋಕಸಭಾ ಚುನಾವಣಾ ಸಿದ್ಧತಾ ಸಭೆ

Advt_NewsUnder_1
Advt_NewsUnder_1

ಬೆಳ್ತಂಗಡಿ: ಭಾರತೀಯ ಜನತಾ ಪಕ್ಷ ಬೆಳ್ತಂಗಡಿ ಮಂಡಲ ಇದರ ವತಿಯಿಂದ ಮುಂಬರುವ ಲೋಕಸಭಾ ಚುನಾವಣೆಯ ಸಿದ್ಧತಾ ಸಭೆ ಹಾಗೂ ಕಾರ್ಯಾಗಾರ ಫೆ.5ರಂದು ಗುರುವಾಯನಕೆರೆ ನಮ್ಮ ಮನೆ ಹವ್ಯಕ ಭವನದಲ್ಲಿ ಜರುಗಿತು.
ಕಾರ್ಯಾಗಾರವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಶಾಸಕ ಹರೀಶ್ ಪೂಂಜ ಅವರು ಮಾತನಾಡಿ, ಕೇಂದ್ರದಲ್ಲಿ ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಭಾರತ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದು, ಜಗತ್ತು ಮೋದಿಯವರ ನಾಯಕತ್ವವನ್ನು ಮೆಚ್ಚಿದೆ. ವಿದ್ಯುತ್, ನೀರಾವರಿ, ರಸ್ತೆ ಸೇರಿದಂತೆ ಗ್ರಾಮೀಣ ಬದುಕಿಗೆ ರಾಮರಾಜ್ಯದ ಕಲ್ಪನೆಯನ್ನು ಮೋದಿಯವರು ನೀಡಿದ್ದಾರೆ. ಈಗಾಗಲೇ ಉತ್ತಮ ಬಜೆಟನ್ನು ಮಂಡಿಸಿದ್ದು, 2019ರಲ್ಲಿಯೂ ಮೋದಿ ದೇಶದ ಪ್ರಧಾನಿಯಾವುದು ಶತಸಿದ್ಧ ಎಂದರು.
ದೇಶದಲ್ಲಿ 65 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಸರಕಾರವಿದ್ದಾಗ ಕೇಂದ್ರದ ಯೋಜನೆ ಗ್ರಾಮೀಣ ಪ್ರದೇಶಕ್ಕೆ ತಲುಪಿಲ್ಲ. ಆದರೆ ಮೋದಿಯವರು ಜಾರಿಗೆ ತಂದ ಜನಧನ್ ಯೋಜನೆ, ರೂ.೫ಲಕ್ಷದವರೆಗಿನ ಆರೋಗ್ಯ ವಿಮೆ, ಉಜ್ವಲ ಯೋಜನೆ ಸೇರಿದಂತೆ ಅನೇಕ ಯೋಜನೆಗಳು ಗ್ರಾಮೀಣ ಪ್ರದೇಶಕ್ಕೆ ಬಂದಿದೆ. ಉಜ್ವಲ ಯೋಜನೆಯಲ್ಲಿ ತಾಲೂಕಿನಲ್ಲಿ 11 ಸಾವಿರ ಗ್ಯಾಸ್ ವಿತರಣೆ ಮಾಡಲಾಗಿದೆ. ಗ್ಯಾಸ್ ಸಂಪರ್ಕ ಇಲ್ಲದವರನ್ನು ಗುರುತಿಸಿ ಈ ಯೋಜನೆ ನೀಡಲಾಗಿದೆ. ಎರಡು ತಿಂಗಳಲ್ಲಿ ಬೆಳ್ತಂಗಡಿ ತಾಲೂಕು ಹೊಗೆ ಮುಕ್ತ ತಾಲೂಕು ಎಂದು ಘೋಷಣೆಯಾಗಲಿದೆ ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ಬಿಜೆಪಿ ಬೆಳ್ತಂಗಡಿ ಮಂಡಲ ಅಧ್ಯಕ್ಷ ಜಯಂತ ಕೋಟ್ಯಾನ್ ವಹಿಸಿದ್ದರು. ವೇದಿಕೆಯಲ್ಲಿ ವಿಭಾಗ ಪ್ರಭಾರಿ ಪ್ರತಾಪಸಿಂಹ ನಾಯಕ್, ವಿಭಾಗ ಸಂಘಟನಾ ಕಾರ್ಯದರ್ಶಿ ಪ್ರಸಾದ್‌ಕುಮಾರ್, ಮಾಜಿ ಶಾಸಕ ಪ್ರಭಾಕರ ಬಂಗೇರ, ಚುನಾವಣಾ ಸಂಚಾಲಕ ಬಾಲಕೃಷ್ಣ ವಿ. ಶೆಟ್ಟ, ಜಿಲ್ಲಾ ಉಪಾಧ್ಯಕ್ಷೆ ಶಾರದಾ ಆರ್.ರೈ, ಜಿಲ್ಲಾ ಕಾರ್ಯದರ್ಶಿ ಕೊರಗಪ್ಪ ನಾಯ್ಕ, ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷೆ ಪೂಜಾ ಪೈ, ಲೋಕಸಭಾ ಸಂಚಾಲಕ ಗೋಪಾಲಕೃಷ್ಣ ಹೆರಳೆ, ಚುನಾವಣಾ ಪ್ರಭಾರಿ ಆನಂದ ಜಿ. ಬಂಟ್ವಾಳ ಉಪಸ್ಥಿತರಿದ್ದರು.
ಗಣೇಶ್ ನಾವೂರು ಪ್ರಾರ್ಥನೆ ಹಾಡಿದರು. ಪ್ರಧಾನ ಕಾರ್ಯದರ್ಶಿ ಸೀತಾರಾಮ ಬಿ.ಎಸ್ ಸ್ವಾಗತಿಸಿ, ಇನ್ನೋರ್ವ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಶೆಟ್ಟಿ ಉಪ್ಪಡ್ಕ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.