ಅಭಿವೃದ್ಧಿಯೊಂದಿಗೆ ಗಮನಸೆಳೆಯುತ್ತಿದೆ ಪಿಲಿಗೂಡು ಸರಕಾರಿ ಶಾಲೆ

Advt_NewsUnder_1
Advt_NewsUnder_1

ಪಿಲಿಗೂಡು: ರಾಜ್ಯದ್ಯಂತ ಸರಕಾರಿ ಶಾಲೆಗಳು ಮುಚ್ಚುವ ಬಗ್ಗೆ ಆಗಾಗ ಸುದ್ದಿಗಳು ಬರುತ್ತಲೇ ಇರುತ್ತದೆ. ಆದರೆ ಕಣಿಯೂರು ಗ್ರಾಮದಲ್ಲಿರುವ ಪಿಲಿಗೂಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಾತ್ರ ಇದಕ್ಕೆ ಅಪವಾದ. 2011ರಲ್ಲಿ ಮುಚ್ಚುವ ಭೀತಿ ಎದುರಿಸಿದ್ದರೂ ಕ್ರಮೇಣ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಿಕೊಂಡು ಖಾಸಗಿ ಶಾಲೆಗಳಿಗೂ ಪೈಪೋಟಿ ನೀಡುವಂತೆ ಬೆಳೆಯುತ್ತಿದೆ.
ಹೆಚ್ಚುತ್ತಿದೆ ಮಕ್ಕಳ ಸಂಖ್ಯೆ: ಪ್ರಸಕ್ತ ವರ್ಷ 58  ವಿದ್ಯಾರ್ಥಿಗಳು ಅಧ್ಯಯನ ನಡೆಸುತ್ತಿದ್ದಾರೆ. 2011 ರಲ್ಲಿ 26  ವಿದ್ಯಾರ್ಥಿಗಳಿದ್ದು ಈ ಶಾಲೆ ಮುಚ್ಚುವ ಭೀತಿ ಎದುರಿಸಿತ್ತು. ಶಿಕ್ಷಕರು, ಪೋಷಕರು, ವಿದ್ಯಾಭಿಮಾನಿಗಳು, ಹಳೆವಿದ್ಯಾರ್ಥಿಗಳ ಪ್ರಯತ್ನದೊಂದಿಗೆ 2014 ರ ವೇಳೆಗೆ ವಿದ್ಯಾರ್ಥಿಗಳ ಸಂಖ್ಯೆ 37 ಕ್ಕೆ ಏರಿದೆ. 2015 ಲ್ಲಿ ಹಿರಿಯ ಪ್ರಾಥಮಿಕ ಶಾಲೆಯಾಗಿ ಮೇಲ್ದರ್ಜೆಗೇರಿದ್ದು, 2016 ರಲ್ಲಿ 56  ವಿದ್ಯಾರ್ಥಿಗಳು ಶಾಲೆಯಲ್ಲಿ ಅಧ್ಯಯನ ನಡೆಸಿದ್ದಾರೆ. 2015 ರಲ್ಲಿ ಇನ್ನಷ್ಟು ಹೆಚ್ಚುವ ನಿರೀಕ್ಷೆ ಶಾಲಾಭಿವೃದ್ಧಿ ಸಮಿತಿಯದ್ದು.
ಕಂಪ್ಯೂಟರ್ ಶಿಕ್ಷಣ : ಪ್ರಾಥಮಿಕ ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಕಲಿಕೆಗೆ ಆದ್ಯತೆ ನೀಡಲಾಗಿದೆ. ದಾನಿಗಳು ನೀಡಿರುವ 2 ಕಂಪ್ಯೂಟರ್‌ಗಳ ಮೂಲಕ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಅರಿವು ಮೂಡಿಸಲಾಗುತ್ತಿದೆ. ಕಂಪ್ಯೂಟರ್ ಕಲಿಕೆಗೆ ಶಿಕ್ಷಕಿಯನ್ನೂ ನೇಮಿಸಿದ್ದು, ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಗತಿಗಳು ನಡೆಯುತ್ತಿದೆ.
ಇಂಗ್ಲಿಷ್ ಶಿಕ್ಷಣಕ್ಕೂ ಆದ್ಯತೆ: ಸಂಪನ್ಮೂಲ ವ್ಯಕ್ತಿಗಳಿಂದ ಮಕ್ಕಳಿಗೆ ಇಂಗ್ಲಿಷ್ ಸ್ಪೀಕಿಂಗ್ ಕೋರ್ಸ್ ನಡೆಸಲಾಗುತ್ತಿದೆ. ಒಂದನೇ ತರಗತಿ ವಿದ್ಯಾರ್ಥಿಗಳೂ ನಿರರ್ಗಳವಾಗಿ ಇಂಗ್ಲಿಷ್ ಮಾತನಾಡುವಂತೆ ಮಾಡಲು ಪ್ರಯತ್ನ ನಡೆಯುತ್ತಿದೆ. ಇಂಗ್ಲಿಷ್ ಮಾಧ್ಯಮ ಆರಂಭಿಸುವ ಚಿಂತನೆಯೂ ಶಾಲಾಡಳಿತ ಮಂಡಳಿಯಿಂದ ನಡೆದಿದೆ.
ಪ್ರತ್ಯೇಕ ಸಮವಸ್ತ್ರ: ಶಾಲಾ ವಿದ್ಯಾರ್ಥಿಗಳಿಗೆ ಶಾಲಾ ಸಮವಸ್ತ್ರದ ಜತೆ ವಾರಕ್ಕೊಂದು ದಿನ ಪ್ರತ್ಯೇಕ ಸಮವಸ್ತ್ರ ಧರಿಸುತ್ತಾರೆ. ಖಾಸಗೀ ಶಾಲೆಗಳ ವಿದ್ಯಾರ್ಥಿಗಳನ್ನೂ ಮೀರಿಸುವಂತೆ ಪ್ಯಾಂಟ್, ಶರ್ಟ್, ಟೈ, ಐಡಿ ಕಾರ್ಡ್ ಧರಿಸಿ ತರಗತಿಗೆ ಹಾಜರಾಗುತ್ತಾರೆ.
ಸಮಾಜಮುಖಿ ಕಾರ್ಯಕ್ರಮ: ವರ್ಷಂಪ್ರತಿ ಶಾಲೆಯಲ್ಲಿ ದಿ.ಮಧುಸೂಧನ್ ಸ್ಮರಣಾರ್ಥ ರಕ್ತದಾನ ಶಿಬಿರ ನಡೆಸಲಾಗುತ್ತಿದೆ. ಸ್ವಾತಂತ್ರ್ಯ ದಿನಾಚರಣೆಯಂದು ಪೋಷಕರು ಹಾಗೂ ಊರಿನ ನಾಗರೀಕರಿಗೆ ಕ್ರೀಡಾಕೂಟ ಹಮ್ಮಿಕೊಳ್ಳಲಾಗುತ್ತಿದೆ.
ಹಲವು ಪ್ರಶಸ್ತಿಗಳ ಗರಿ : ಶಾಲೆಗೆ 2013 ರಲ್ಲಿ ತಾಲೂಕು ಮಟ್ಟದ ಉತ್ತಮ ಶಾಲಾ ಪ್ರಶಸ್ತಿ ಲಭಿಸಿದೆ. ಇಲ್ಲಿನ ವಿದ್ಯಾರ್ಥಿಗಳು ಪ್ರತಿಭಾ ಕಾರಂಜಿ, ಕ್ರೀಡಾಕೂಟಗಳಲ್ಲಿ ಭಾಗವಹಿಸಿ ವಿವಿಧ ಪ್ರಶಸ್ತಿಗಳನ್ನೂ ಪಡೆದಿದ್ದಾರೆ.
.೧೮ ಲಕ್ಷಕ್ಕೂ ಹೆಚ್ಚು ಮೌಲ್ಯದ ಕಾಮಗಾರಿ : ರೋಟರಿ, ಲಯನ್ಸ್, ಜೆಸಿಐ, ಗ್ರಾಮಾಭಿವೃದ್ಧಿ ಯೋಜನೆ, ಸೇವಾಭಾರತಿ ಕನ್ಯಾಡಿ-II ಸೇರಿದಂತೆ ವಿವಿಧ ಸಂಘ- ಸಂಸ್ಥೆಗಳು, ಉದ್ಯಮಿಗಳು, ಊರ-ಪರವೂರ ವಿದ್ಯಾಭಿಮಾನಿಗಳು ಶಾಲೆಯ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದ್ದು, ೬ ವರ್ಷಗಳ ಅವಧಿಯಲ್ಲಿ ಸುಮಾರು 18 ಲಕ್ಷ ರೂ. ಗೂ ಹೆಚ್ಚಿನ ವೆಚ್ಚದಲ್ಲಿ ಕಂಪ್ಯೂಟರ್, ಫ್ಯಾನ್, ವಾಟರ್ ಫಿಲ್ಟರ್, ಧ್ವಜ ಸ್ಥಂಭ ಕಟ್ಟೆ, ಊಟದ ಕೊಠಡಿ, ಕೊಳವೆ ಬಾವಿಗೆ ಪಂಪ್ ಅಳವಡಿಕೆ, ಗೇಟ್ ನಿರ್ಮಾಣ, ಪೀಠೋಪಕರಣ, ಅಕ್ಷರ ಕೈತೋಟ ನಿರ್ಮಾಣ, ರಂಗಮಂದಿರ ಮೊದಲಾದ ವಸ್ತು ಹಾಗೂ ಕೆಲಸ ರೂಪದಲ್ಲಿ ಕಾಮಗಾರಿಗಳು ನಡೆದಿವೆ.
ಮಕ್ಕಳಿಗೆ ಜೀವನ ಶಿಕ್ಷಣ : ಶಾಲೆಯ 1.54  ಎಕರೆ ಜಾಗದಲ್ಲಿ ಅಕ್ಷರ ಕೈತೋಟ ನಿರ್ಮಿಸಿದ್ದು, 480  ಅಡಿಕೆ ಗಿಡ ನಾಟಿ ಮಾಡಲಾಗಿದೆ. ಉಳಿದಂತೆ ತೆಂಗು, ಬಾಳೆ, ಕಾಳುಮೆಣಸು, ಗೇರು ಬೀಜ, ಪಪ್ಪಾಯ, ಬೆಂಡೆಕಾಯಿ, ಬಸಳೆ, ನೆಲಬಸಳೆ, ನುಗ್ಗೆಕಾಯಿ, ತೊಂಡೆಕಾಯಿ ಮೊದಲಾದ ಹಣ್ಣು, ತರಕಾರಿ ಗಿಡಗಳಿದ್ದು ವಿದ್ಯಾರ್ಥಿಗಳು ಶಿಕ್ಷಕರು, ಪೋಷಕರ ಮಾರ್ಗದರ್ಶನದಲ್ಲಿ ತೋಟದಲ್ಲಿ ಕೆಲಸ ಮಾಡುವ ಮೂಲಕ ಜೀವನ ಶಿಕ್ಷಣ ಪಡೆಯುತ್ತಿದ್ದಾರೆ. ಶಾಲಾವರಣದಲ್ಲಿ ವಿವಿಧ ಜಾತಿಯ ಹೂವಿನ ಗಿಡಗಳು ಶಾಲೆಯ ಅಂದವನ್ನು ಹೆಚ್ಚಿಸಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.