HomePage_Banner_
HomePage_Banner_
HomePage_Banner_

ತಾಲೂಕಿನ ನಾಲ್ಕು ಕಡೆ ಮಂಗಗಳ ಕೊಳೆತ ಮೃತದೇಹ ಪತ್ತೆ

Advt_NewsUnder_1
ಆರೋಗ್ಯ ಇಲಾಖೆಯಿಂದ ಟಿಕ್ ಸ್ಯಾಂಪಲ್ ಪರಿಶೀಲನೆ.

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಉಜಿರೆ, ಸವಣಾಲು ಮತ್ತು ಗುರುವಾಯನಕೆರೆಯ ಶಕ್ತಿನಗರ ಪರಿಸರದಲ್ಲಿ ಒಟ್ಟು ನಾಲ್ಕು ಮಂಗಗಳು ಮೃತಪಟ್ಟಿದ್ದು, ರಾಜ್ಯದ ಅಲ್ಲಲ್ಲಿ ಮಂಗನಕಾಯಿಲೆ ಕಂಡು ಬಂದ ಹಿನ್ನಲೆಯಲ್ಲಿ ಜನರಲ್ಲಿ ಆತಂಕ ಸೃಷ್ಟಿಯಾಗಿದೆ.
ಉಜಿರೆ ಪೇಟೆಯ ಬಳಿಯ ಖಾಸಗಿ ವ್ಯಕ್ತಿಯ ಮನೆಯ ಸಮೀಪ ಜ.೧೧ರಂದು ಮಂಗವೊಂದರ ಮೃತ ದೇಹ ಪತ್ತೆಯಾದರೆ, ಜ.೧೨ರಂದು ಉಜಿರೆ ಗ್ರಾಮದ ಅತ್ತಾಜೆಯ ತೋಟವೊಂದರಲ್ಲಿ ಮಂಗದ ಮೃತ ದೇಹ ದೊರಕಿದೆ. ಇನ್ನೊಂದು ಸವಣಾಲು ಗ್ರಾಮದ ಕನ್ನಾಜೆ ಬೈಲು ಎಂಬಲ್ಲಿ ಪತ್ತೆಯಾಗಿದೆ. ಗುರುವಾಯನಕೆರೆಯ ಶಕ್ತಿನಗರದಲ್ಲಿಯೂ ಮಂಗವೊಂದು ಸತ್ತಿರುವುದು ಬೆಳಕಿಗೆ ಬಂದಿದೆ.
ಉಜಿರೆಯಲ್ಲಿ ಮಂಗದ ಶವ ಕಂಡು ಬಂದ ತಕ್ಷಣ ಸಾರ್ವಜನಿಕರು ಕೂಡಲೇ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಉಜಿರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅರ್ಚನಾ, ಹೆಲ್ತ್ ಇನ್ಸ್‌ಪೆಕ್ಟರ್ ಸ್ವತಂತ್ರ ರಾವ್, ಉಜಿರೆ ಪಶುವೈದ್ಯಾಧಿಕಾರಿ ಡಾ| ಕಾರ್ತಿಕ್, ಮಂಗನ ಕಾಯಿಲೆಯ ವಿಶೇಷ ಅಧಿಕಾರಿ ಅಶೋಕ್, ಗ್ರಾ.ಪಂ ಅಧ್ಯಕ್ಷ ಶ್ರೀಧರ ಪೂಜಾರಿ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.
ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದ್ದ ಮಂಗನ ಶವವನ್ನು ಪರಿಶೀಲನೆ ನಡೆಸಿ, ಕೊಳೆತು ಹೋಗಿರುವುದರಿಂದ ಯಾವುದೇ ಅಂಗಾಂಗ ತೆಗೆಯಲು ಸಾಧ್ಯವಾಗದೇ, ಅಲ್ಲೇ ಸುಟ್ಟು ಹಾಕಲಾಯಿತು. ಮತ್ತೊಂದು ಮಂಗದ ಮೃತ ದೇಹ ಲಾಲ-ಸವಣಾಲು ಗಡಿ ಭಾಗವಾದ ಕನ್ನಾಜೆ ಗುಡ್ಡ ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿ ಜ.10 ರಂದು ಪತ್ತೆಯಾಗಿದೆ. ಸ್ಥಳೀಯರು ನೀಡಿದ ಮಾಹಿತಿಯಂತೆ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಶವವನ್ನು ಸುಟ್ಟು ಹಾಕಿದರು.
ಮತ್ತೊಂದು ಮಂಗನ ಮೃತದೇಹ ಜ.೧೨ರಂದು ಉಜಿರೆ ಗ್ರಾಮದ ಅತ್ತಾಜೆಯ ತೋಟವೊಂದರಲ್ಲಿ ಪತ್ತೆಯಾಗಿದೆ. ಆರೋಗ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಗುರುವಾಯನಕೆರೆಯ ಶಕ್ತಿನಗರದ ಖಾಸಗಿ ವ್ಯಕ್ತಿಯ ತೋಟದಲ್ಲಿ ಮಂಗವೊಂದು 10 ದಿನಗಳ ಹಿಂದೆ ಮೃತಪಟ್ಟಿರುವುದು ಆರೋಗ್ಯ ಇಲಾಖೆಗೆ ತಡವಾಗಿ ಮಾಹಿತಿ ದೊರಕಿದ್ದು, ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ರಾಜ್ಯದ ಅಲ್ಲಲ್ಲಿ ಮಂಗನ ಕಾಯಿಲೆ ಕಂಡು ಬರುತ್ತಿರುವ ಹಿನ್ನಲೆಯಲ್ಲಿ ತಾಲೂಕಿನಲ್ಲಿ ಮೂರು ಕಡೆ ಮಂಗಗಳ ಮೃತ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವುದು ನಾಗರಿಕರಲ್ಲಿ ಆಂತಂಕವನ್ನುಂಟು ಮಾಡಿದೆ. 1982 ರಲ್ಲಿ ತಾಲೂಕಿನ ಪಟ್ರಮೆ ಹಾಗೂ ಬೆಳಾಲು ಪರಿಸರದಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡು ಹಲವು ಜೀವಗಳು ಬಲಿಯಾಗಿತ್ತು. ಇದೀಗ ಮಂಗಗಳ ಸಾವು ನಾಗರಿಕರಿಗೆ ಭೀತಿಯನ್ನು ಸೃಷ್ಟಿಸಿದೆ.

ವಿಶೇಷ ತಂಡದಿಂದ 15 ಉಣ್ಣಿ ಸಂಗ್ರಹ
ತಾಲೂಕಿನ ನಾಲ್ಕು ಕಡೆ ಮಂಗಗಳ ಮೃತದೇಹ ಪತ್ತೆಯಾದ ಹಿನ್ನಲೆಯಲ್ಲಿ ಮಂಗಗಳು ಕಾಯಿಲೆಯಿಂದ ಮೃತಪಟ್ಟಿರಬಹುದೇ ಅಥವಾ ಇನ್ನಾವುದೇ ಕಾರಣದಿಂದ ಮೃತಪಟ್ಟಿರಬಹುದೇ ಎಂದು ದೃಢಪಡಿಸಲು ಜ.14ರಂದು ಆರೋಗ್ಯ ಇಲಾಖೆಯ ವಿಶೇಷ ತಂಡ ಸ್ಥಳಕ್ಕೆ ಭೇಟಿ ನೀಡಿ ಟಿಕ್ ಸ್ಯಾಂಪಲ್ ಪರಿಶೀಲನೆ ನಡೆಸಿ ಉಣ್ಣಿಗಳನ್ನು ಸಂಗ್ರಹಿಸಿದೆ.
ತಾಲೂಕಿನ ಲಾಯಿ ದ ಕನ್ನಾಜೆ, ಉಜಿರೆಯ ಅತ್ತಾಜೆ ಹಾಗೂ ಉಜಿರೆ ಪೇಟೆ ಸಮೀಪ ಹಾಗೂ ಗುರುವಾಯನಕೆರೆಯ ಶಕ್ತಿನಗರದಲ್ಲಿ ಮಂಗಗಳು ಸತ್ತು ಬಿದ್ದಿದ್ದ ಪ್ರದೇಶಕ್ಕೆ ಈ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿ ಟಿಕ್ ಸ್ಯಾಂಪಲ್ ಪರಿಶೀಲನೆ ನಡೆಸಿತು. ಗುರುವಾಯನಕೆರೆಯ ಶಕ್ತಿನಗರ ಸುದೇಕಾರ್ ಪ್ರದೇಶದಲ್ಲಿ 10 ಉಣ್ಣಿಗಳು ಹಾಗೂ ಉಜಿರೆ ಅತ್ತಾಜೆ ಪ್ರದೇಶದಲ್ಲಿ 5 ಉಣ್ಣಿಗಳು ಸೇರಿದಂತೆ ಒಟ್ಟು 15 ಉಣ್ಣಿಗಳನ್ನು ಸಂಗ್ರಹಿಸಿ ಜ.15 ರಂದು ಅದನ್ನು ಶಿವಮೊಗ್ಗದ ಪ್ರಯೋಗಾಲಯಕ್ಕೆ ಕಳುಹಿಸಲಾಯಿತು. ತಂಡದಲ್ಲಿ ಮಂಗಳೂರಿನ ಕೀಟ ತಂತ್ರಜ್ಞೆ ಡಾ| ಮಂಜುಳಾ, ತಾಲೂಕು ಆರೋಗ್ಯಾಧಿಕಾರಿ ಡಾ| ಕಲಾಮಧು ಶೆಟ್ಟಿ, ಹೆಲ್ತ್ ಇನ್ಸ್‌ಪೆಕ್ಟರ್‌ಗಳಾದ ಸ್ವತಂತ್ರ ರಾವ್, ಸೋಮನಾಥ್, ಗಿರೀಶ್, ಪ್ರಮೋದ್ ಹಾಗೂ ಕೆಎಫ್‌ಡಿ ಸಿಬ್ಬಂದಿ ಅಶೋಕ್ ಭಾಗವಹಿಸಿದ್ದರು.

ಆರೋಗ್ಯ ಇಲಾಖೆಯಿಂದ ಮುಂಜಾಗ್ರತಾ ಕ್ರಮ
ತಾಲೂಕಿನ ನಾಲ್ಕು ಕಡೆಗಳಲ್ಲಿ ಕೊಳೆತ ಸ್ಥಿತಿಯಲ್ಲಿ ಮಂಗಗಳ ಮೃತದೇಹ ಪತ್ತೆಯಾದ ಹಿನ್ನಲೆಯಲ್ಲಿ ಆರೋಗ್ಯ ಇಲಾಖೆಯಿಂದ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ| ಕಲಾಮಧು ತಿಳಿಸಿದ್ದಾರೆ.
ಆರೋಗ್ಯ ಕಾರ್ಯಕರ್ತೆಯರು ಮತ್ತು ಆಶಾ ಕಾರ್ಯಕರ್ತೆಯರು ಮನೆ, ಮನೆ ಭೇಟಿ ಮಾಡಿ ಕಾಯಿಲೆ ಬಗ್ಗೆ ಗ್ರಾಮೀಣ ಪ್ರದೇಶಗಳಲ್ಲಿ ಮಾಹಿತಿ ನೀಡುವ ಕಾರ್ಯವನ್ನು ಆರಂಭಿಸಿದ್ದಾರೆ. ಆರೋಗ್ಯ ಇಲಾಖೆಯ ವಿಶೇಷ ತಂಡ ಮಂಗಗಳು ಸತ್ತ ಪ್ರದೇಶಕ್ಕೆ ಭೇಟಿ ನೀಡಿ ಉಣ್ಣಿಗಳನ್ನು ಸಂಗ್ರಹಿಸಿ, ಅದನ್ನು ಶಿವಮೊಗ್ಗಕ್ಕೆ ಕಳುಹಿಸಲಾಗಿದೆ. ಒಂದು ವಾರದೊಳಗೆ ಇದರ ವರದಿ ಬರಲಿದ್ದು, ಮಂಗಗಳ ಸಾವಿಗೆ ಕಾರಣವೇನು ಎಂಬುದು ಬಳಿಕವಷ್ಟೇ ಸ್ವಷ್ಟಗೊಳ್ಳಲಿದೆ.
– ಡಾ| ಕಲಾಮಧು ತಾಲೂಕು ಆರೋಗ್ಯಾಧಿಕಾರಿ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.