ಬೆಳ್ತಂಗಡಿ ಎಪಿಎಂಸಿ ಯಲ್ಲಿ ಜ. 21ರಿಂದ ತೆಂಗಿನಕಾಯಿ ಮಾರಾಟ ಸಂತೆ ಆರಂಭ

ಬೆಳ್ತಂಗಡಿ: ರೈತರಿಗೆ ತೆಂಗಿನಕಾಯಿ ಮಾರಾಟದಲ್ಲಿ ಇನ್ನೂ ಹೆಚ್ಚಿನ ಬೆಲೆ ಮತ್ತು ಸರಕಾರದ ಬೆಂಬಲ ಬೆಲೆ ದೊರೆಯಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಮುಂದಕ್ಕೆ ಜ. 21 ರಿಂದ ಪ್ರತೀ ಸೋಮವಾರ ಪ್ರಾಯೋಜಿಕ ನೆಲೆಯಲ್ಲಿ ತೆಂಗಿನಕಾಯಿ ಮಾರಾಟ ಸಂತೆ ಪ್ರಾರಂಭಿಸಲಾಗುವುದು. ಈ ಸಂತೆಯಲ್ಲಿ ದೇಶದ ಯಾವುದೇ ಭಾಗದ ಲೈಸೆನ್ಸ್ ಪಡೆದ ವರ್ತಕರು ಭಾಗವಹಿಸಿ ಖರೀದಿ ಪ್ರಕ್ರೀಯೆಯಲ್ಲಿ ಭಾಗಿಯಾಗಬಹುದು. ಇದಕ್ಕೆ ಸಕಾರಾತ್ಮಕ ಸ್ಪಂದನ ದೊರೆತಲ್ಲಿ ಸರಕಾರಿ ರಜಾದಿನ ಹೊರತುಪಡಿಸಿ ಎಲ್ಲಾ ದಿನಗಳಿಗೂ ವಿಸ್ತರಿಸಲಾಗುವುದು ಎಂದು ಎಪಿಎಂಸಿ ಅಧ್ಯಕ್ಷ ಕೇಶವ ಗೌಡ ಪಿ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.
2 ಕಡೆ ಚೆಕ್‌ಪೋಸ್ಟ್:
ಕೃಷಿ ಉತ್ಪನ್ನಗಳ ಆದಾಯ ಸಂಗ್ರಹಣೆಯಲ್ಲಿ ಎಪಿಎಂಸಿ ಗಣನೀಯ ಪ್ರಗತಿ ಸಾಧಿಸಿದ್ದು, ಆದಾಯ ಸೋರಿಕೆ ತಡೆಯಲು ಮುಂದಕ್ಕೆ ತಾಲೂಕಿನ 2 ಕಡೆ ಚೆಕ್‌ಪೋಸ್ಟ್ ತೆರೆಯಲಾಗುವುದು. ಒಮ್ಮೆ ಚೆಕ್‌ಪೋಸ್ಟ್‌ನಲ್ಲಿ ಪರಿಶೀಲನೆ ನಡೆದು ರಶೀದಿ ನೀಡಿದರೆ ಅದನ್ನು ದೇಶದ ಯಾವ ಭಾಗಕ್ಕೂ ಸರಬರಾಜು ಮಾಡಬಹುದು. ಎಪಿಎಂಸಿ2017-18 ರಲ್ಲಿ 2.58 ಕೋಟಿ ರೂ. ಆದಾಯ,2018-19 ರಲ್ಲಿ 2.81 ಕೋಟಿ ರೂ. ಆದಾಯ ಬಂದಿದೆ. ಆದಾಯದಲ್ಲಿ 1.5 ಶೇ. ಸರಕಾರಕ್ಕೆ ಪಾವತಿಯಾಗುತ್ತಿದ್ದು ಇದರಿಂದ ಸರಕಾರಕ್ಕೂ ಕೂಡ ಉತ್ತಮ ಆದಾಯವಿದೆ. 2019-20 ನೇ ಸಾಲಿನಲ್ಲಿ ಕೂಡ 3.74 ಕೋಟಿ ರೂ. ಆದಾಯ ಅಂದಾಜಿಸಲಾಗಿದೆ ಎಂದರು.
ವಾರದ ಸಂಜೆ ಎಪಿಎಂಸಿ ತರಲು ಸಂಪೂರ್ಣ ಶ್ರಮ:
ಎಪಿಎಂಸಿ ವ್ಯವಹಾರದ ಬಗ್ಗೆ ಜನರಲ್ಲಿ ಇನ್ನೂ ಕೂಡ ತಿಳುವಳಿಕೆ ಕಡಿಮೆ ಇದೆ. ತೋಟಗಾರಿಕೆ, ಕೃಷಿ ಇಲಾಖೆಗಳಲ್ಲಿ ಸಿಗುವ ಸೌಲಭ್ಯಗಳನ್ನು ನಮ್ಮ ಇಲಾಖೆಯಲ್ಲಿ ಬಂದು ವಿಚಾರಿಸುವ ಜನರೂ ಇದ್ದಾರೆ. ಇಲ್ಲಿ ರೈತರಿಗೆ ಗೋದಾಮು ಸೌಲಭ್ಯ, ತಮ್ಮ ಬೆಳೆಗಳಿಗೆ ಉತ್ತಮ ನ್ಯಾಯಯುತ “ಇ- ಮಾರುಕಟ್ಟೆ” ಒದಗಿಸುವುದು ಇತ್ಯಾಧಿ ಸೇವೆ ನಮ್ಮಲ್ಲಿದೆ. ಸರಕಾರದ ಅನುದಾನದಲ್ಲಿ ಸಂತೆಮಾರುಕಟ್ಟೆಗಳನ್ನು ನಿರ್ಮಿಸಿ ಅದನ್ನು ಗ್ರಾ.ಪಂ ಗಳಿಗೆ ಹಸ್ತಾಂತರಿಸುತ್ತೇವೆ. ಅದರ ಲಾಭವನ್ನು ಅವರು ಪಡೆದುಕೊಳ್ಳಬಹುದಾಗಿದೆ. ಪ್ರಸ್ತುತ ಎಪಿಎಂಸಿ ಯಾರ್ಡ್‌ನಲ್ಲಿ ಇರುವ ಉತ್ತಮ ಮೂಲಸೌಕರ್ಯಗಳ ಸದ್ಬಳಕೆಯಾಗಬೇಕೆಂಬ ನಿಟ್ಟಿನಲ್ಲಿ ವಾರದ ಸಂತೆಯನ್ನು ಇಲ್ಲಿಗೆ ಸ್ಥಳಾಂತರಿಸುವ ಬಗ್ಗೆ ಸಂಪೂರ್ಣ ಶ್ರಮವಹಿಸಲಿದ್ದೇವೆ. ಇದಕ್ಕೆ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳಿಂದಗಳೂ ಉತ್ತಮ ಸ್ಪಂದನೆ ಇದೆ ಎಂದರು.
ಮುಂದಿನ ಯೋಜನೆಗಳ ಅನ್ವಯ ಈಗಾಗಲೇ ಕ್ರಿಯಾಯೋಜನೆಗಳನ್ನು ತಯಾರಿಸಲಾಗಿದ್ದು, ಕೆಲವು ಕಾಮಗಾರಿಗಳು ಪ್ರಗತಿಯಲ್ಲಿದೆ. ಕೊಕ್ಕಡ, ಧರ್ಮಸ್ಥಳ, ಕಲ್ಲೇರಿ, ಗೇರುಕಟ್ಟೆ, ಕಕ್ಕಿಂಜೆ, ಮರೋಡಿ ಪ್ರದೇಶದಲ್ಲಿ ಗ್ರಾಮೀಣ ಸಂತೆ ಮಾರುಕಟ್ಟೆ ನಿರ್ಮಾಣಕ್ಕೆ ಪ್ರಯತ್ನ, 60 ಸಿ ಅಡಿಯಲ್ಲಿ ರಸ್ತೆಗಳ ನಿರ್ಮಾಣ, ಮಾರುಕಟ್ಟೆ ಪ್ರಾಂಗಣದಲ್ಲಿ ವಿವಿಧಿ ಅಭಿವೃದ್ಧಿ ಕಾಮಗಾರಿಗಳ ಅನುಷ್ಟಾನ ಇತ್ಯಾಧಿ ಉದ್ದೇಶಿಸಲಾಗಿದೆ ಎಂದರು.
ಇಷ್ಟೆಲ್ಲಾ ಸರಕಾರಕ್ಕೆ ಆದಾಯವಿದ್ದರೂ ಇಲ್ಲಿಗೆ ಮಂಜೂರಾಗಿರುವ 13 ಹುದ್ದೆಗಳ ಪೈಕಿ ಮುಖ್ಯ ಕಾರ್ಯದರ್ಶಿ ಸಹಿತ ಎಲ್ಲಾ ಹುದ್ದೆಗಳು ಖಾಲಿಯಾಗಿದ್ದು ತೀವ್ರ ಸಿಬ್ಬಂದಿ ಕೊರತೆ ಕಾಡುತ್ತಿದೆ. ಆವಶ್ಯಕವಾಗಿರುವ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆದುಕೊಂಡು ಸುಗಮವಾಗಿ ಕೆಲಸ ನಿರ್ವಹಿಸಲಾಗುತ್ತಿದೆ ಎಂದು ವಿವಿರ ನೀಡಿದರು.
ಉಪಾಧ್ಯಕ್ಷ ಅಬ್ದುಲ್ ಗಫೂರ್, ಸದಸ್ಯರಾದ ಚಿದಾನಂದ ಪೂಜಾರಿ, ಜಯಾನಂದ ಕಲ್ಲಾಪು, ಸಿಲೆಸ್ಟಿನ್ ಡಿಸೋಜ, ಚಂಚಲ ಕುಂದರ್, ಜಗದೀಶ್ ಹೆಗ್ಡೆ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.