ದುಶ್ಚಟ ಮುಕ್ತತೆಯಿಂದ ಆರ್ಥಿಕ ಪ್ರಗತಿ : ಡಾ. ಹೆಗ್ಗಡೆ
ಧರ್ಮಸ್ಥಳ: ಕುಡುಕರು ಕೆಟ್ಟವರಲ್ಲ, ಆದರೆ ಮದ್ಯಪಾನ ಕೆಟ್ಟ ಕೆಲಸಗಳಿಗೆ ಪ್ರೇರಣೆ ನೀಡಿ, ಸಂಸಾರವನ್ನು ಹಾಳು ಮಾಡುತ್ತದೆ. ಉತ್ತಮ ಆರೋಗ್ಯ, ಸಂಸಾರದಲ್ಲಿ ನೆಮ್ಮದಿ, ಸಾಮಾಜಿಕ ಗೌರವ ಹಾಗೂ ಆರ್ಥಿಕ ಪ್ರಗತಿಗಾಗಿ ದುಶ್ಚಟ ಮುಕ್ತರಾಗಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ಅವರು ಡಿ.25 ರಂದು ಧರ್ಮಸ್ಥಳದ ಅಮೃತವರ್ಷಿಣಿ ಸಭಾ ಭವನದಲ್ಲಿ ನಡೆದ ಮದ್ಯವರ್ಜನ ಶಿಬಿರದಲ್ಲಿ ಭಾಗವಹಿಸಿ ವ್ಯಸನಮುಕ್ತರಾಗಿ ನೂರು ದಿನಗಳನ್ನು ಪೂರೈಸಿದ ಮೂರು ಸಾವಿರ ವ್ಯಸನಮುಕ್ತರಿಗೆ ಹಿತ ವಚನ ನೀಡಿದರು.
ಮದ್ಯಪಾನವನ್ನು ನೀವು ಬಿಟ್ಟರೂ ಮದ್ಯ ನಿಮ್ಮನ್ನು ಬಿಡುವುದಿಲ್ಲ. ನಾನು ಮದ್ಯಪಾನವನ್ನು ಬಿಟ್ಟಿದ್ದೇನೆ ಎನ್ನುವುದಕ್ಕಿಂತ ಮದ್ಯ ನನ್ನನ್ನು ಬಿಟ್ಟಿದೆ ಎನ್ನುವಂತಾಗಬೇಕು. ಪಾನ ಮುಕ್ತರಾದವರು ಮತ್ತೆ ಹಳೆ ಚಟ ಕಬಳಿಸದಾಗೆ ನೋಡಿಕೊಳ್ಳಬೇಕು. ಇರುವ ಜೀವನದಲ್ಲಿ ಸುಖ ನೆಮ್ಮದಿಯನ್ನು ಕಾಣಬೇಕು. ಪರಿವರ್ತನೆಯನ್ನು ಅನುಭವಿಸಬೇಕು. ಶ್ರೇಷ್ಠವಾದ ಮನುಷ್ಯ ಜನ್ಮವನ್ನು ಸಾರ್ಥಕ್ಯಗೊಳಿಸಬೇಕು ಎಂದು ಕರೆ ನೀಡಿದರು.
ಇದುವರೆಗೆ ೧೩೦೩ ಮದ್ಯವರ್ಜನ ಶಿಬಿರಗಳನ್ನು ನಡೆಸಲಾಗಿದ್ದು, ಆಯಾ ಊರಿನ ಸಾರ್ವಜನಿಕರೇ ವೆಚ್ಚವನ್ನು ಭರಿಸಿ ಮದ್ಯವರ್ಜನ ಶಿಬಿರವನ್ನು ನಡೆಸುತ್ತಿರುವುದು ಉತ್ತಮ ಬೆಳವಣಿಗೆ. ಇಂತಹ ಮದ್ಯವರ್ಜನ ಶಿಬಿರವನ್ನು ಆಯೋಜಿಸುವವರಿಗೆ ಹಾಗೂ ಸಹಕಾರ ನೀಡುವವರ ಎಕೌಂಟ್ಗೆ ಪುಣ್ಯದ ಒಂದು ಪಾಲು ಹೋಗುತ್ತದೆ ಎಂದು ನುಡಿದರು.
ವೇದಿಕೆಯಲ್ಲಿ ಮಂಡ್ಯದ ಕೆ.ಎಸ್ ರಾಜೇಶ್, ಅಶ್ವಥ್ ಪೂಜಾರಿ ಮತ್ತು ಕಮಲಾಕ್ಷ ನಾಯರ್ ಉಪಸ್ಥಿತರಿದ್ದರು. ಜನಜಾಗೃತಿ ವೇದಿಕೆಯ ಕಾರ್ಯದರ್ಶಿ ವಿವೇಕ್ ಪಾಸ್ ಸ್ವಾಗತಿಸಿದರು. ಶಿಬಿರಾಧಿಕಾರಿ ತಿಮ್ಮಯ್ಯ ನಾಯ್ಕ ವಂದಿಸಿದರು.