ಅನುಗ್ರಹ ಟ್ರೈನಿಂಗ್ ಕಾಲೇಜು ಪ್ರಶಸ್ತಿಗಾಗಿ ಅಭಿನಂದನಾ ಸಮಾರಂಭ

ಬೆಳ್ತಂಗಡಿ: ಕಳೆದ ನಾಲ್ಕು ವರ್ಷಗಳಿಂದ ಬೆಳ್ತಂಗಡಿಯಲ್ಲಿ ಕಾರ್ಯಾಚರಿಸುತ್ತಿರುವ ಮತ್ತು ವೃತ್ತಿಪರ ತರಬೇತಿಯಲ್ಲಿ ಹೆಸರುವಾಸಿಯಾಗಿರುವ ಅನುಗ್ರಹ ಟ್ರೈನಿಂಗ್ ಕಾಲೇಜಿನಲ್ಲಿ ಬೆಂಗಳೂರಿನಲ್ಲಿ ಸ್ವೀಕರಿಸಿದ ರಾಷ್ಟ್ರೀಯ ಪ್ರಶಸ್ತಿ ಮತ್ತು ಮಂಗಳೂರಿನಲ್ಲಿ ಸ್ವೀಕರಿಸಿದ ಬೆಸ್ಟ್ ಪರ್ಫಾರ್ಮೆನ್ಸ್ ಪ್ರಶಸ್ತಿಗಾಗಿ ಸನ್ಮಾನ ಸಮಾರಂಭ ಡಿ. 15 ರಂದು ಸಂಸ್ಥೆಯ ನೂತನ ಅನುಗ್ರಹ ಸಭಾಂಗಣದಲ್ಲಿ ಜರುಗಿತು.
ಸಂಸ್ಥೆ ಬೆಂಗಳೂರಿನಲ್ಲಿ ಪಡೆದ ರಾಷ್ಟ್ರೀಯ ಪ್ರಶಸ್ತಿಯನ್ನು ಚೇರ್ಮೆನ್ ತಲ್‌ಹತ್ ಎಂ. ಜಿ ಸವಣಾಲು ಇವರು ಕಾಲೇಜಿಗೆ ಹಸ್ತಾಂತರಿಸಿದರು. ಈ ವೇಳೆ ಅವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಿದರೆ, ಕಾಲೇಜು ಪ್ರಾಂಶುಪಾಲ ಜೈಸನ್ ಪಟ್ಟೇರಿಲ್, ಉಪಪ್ರಾಂಶುಪಾಲ ರಾಜೇಶ್ ಸಚ್ಚೇರಿಪೇಟೆ, ವ್ಯವಸ್ಥಾಪಕಿ ಮಸೂದಾ ಇವರನ್ನು ಟ್ರಸ್ಟ್ ಕಡೆಯಿಂದ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ತಾ. ಪಂ. ಮಾಜಿ ಸದಸ್ಯ ಮತ್ತು ಬಿಜೆಪಿ ಮುಖಂಡ ಬಾಲಕೃಷ್ಣ ವಿ. ಶೆಟ್ಟಿ ಸಾಲಿಗ್ರಾಮ ಮಾತನಾಡಿ, ಸಂಸ್ಥೆಯಲ್ಲಿ ಉತ್ತಮ ರೀತಿಯ ಸಾಮಾಜ ಮುಖಿ ಕಾರ್ಯಗಳು ನಡೆಯುತ್ತಿದೆ, ಅನುಗ್ರಹ ಸಂಸ್ಥೆ ತಾಲೂಕಿನ ಮಾದರಿ ಸಂಸ್ಥೆಯಾಗಿ ಹೆಸರು ಪಡೆಯಲಿದೆ ಎಂದರು.
ಮಂಶರ್ ಅಕಾಡೆಮಿ ಗೇರುಕಟ್ಟೆ ಇದರ ಅಕಾಡಮಿಕ್ ಡೈರೆಕ್ಟರ್ ವಸಂತ ಕುಮಾರ್ ನಿಟ್ಟೆ ಮಾತನಾಡಿ, ಶಿಕ್ಷಣ ಪಡೆದ ಸಂಸ್ಥೆಗೆ ಮತ್ತು ತಾಯಿಗೆ ಗೌರವ ಕೊಡದೆ ಆಶೀರ್ವಾದ ಇಲ್ಲದೆ ಇದ್ದರೆ ಅವರ ಜೀವನದಲ್ಲಿ ಯಶಸ್ಸು ಲಭಿಸಲು ಅಸಾಧ್ಯ, ಅಂತವರು ಗುರಿ ತಲುಪಲು ಕಷ್ಟಕರ ಎಂದರು. ಸಂಸ್ಥೆಯ ನ್ಯಾಯವಾದಿ ಹಾಗೂ ವಕೀಲರ ಸಂಘದ ಉಪಾಧ್ಯಕ್ಷ ರಾಧಕೃಷ್ಣ ಭಟ್, ಕಾನೂನಾತ್ಮಕವಾಗಿ ಸಂಸ್ಥೆ ಯಾವ ರೀತಿ ಕಾರ್ಯನಿರ್ವಹಿಸುತ್ತಿದೆ ಎಂಬುದಾಗಿ ವಿಶ್ಲೇಸಿದರು.
ಸಮಾರಂಭದಲ್ಲಿ ಎಸ್‌ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಅಲ್ಫೋನ್ಸ್ ಫ್ರಾಂಕೋ ಮಾತನಾಡಿ, ಜಾತಿ ಭೇದ ಮತ ಪಂಗಡ ಎಂಬ ವ್ಯತ್ಯಾಸವಿಲ್ಲದೆ ಅತ್ಯುತ್ತಮ ರೀತಿಯಲ್ಲಿ ಕಾರ್ಯಾಚರಿಸುತ್ತಿರುವ ತಾಲೂಕಿಗೆ ಮಾದರಿಯಾಗಿ ವೃತ್ತಿ ಪರ ತರಬೇತಿಗಳನ್ನು ನೀಡುತ್ತಿರುವುದೇ ಸಂಸ್ಥೆಯನ್ನು ಪ್ರಶಸ್ತಿಗೆ ಗುರುತಿಸುವಿಕೆಗೆ ಕಾರಣವಾಗಿದೆ ಎಂದರು.
ಸಮಾರಂಭದಲ್ಲಿ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ಮುನೀರಾ ಕೆ ವೈ, ಅನುಗ್ರಹ ಸ್ಕೂಲ್ ಬುಕ್ ಕಂಪೆನಿಯ ಮ್ಯಾನೇಜಿಂಗ್ ಡೈರೆಕ್ಟರ್ ಮುಹಮ್ಮದ್ ಅಶ್ರಫ್ ಪೈಝಿ, ಅನುಗ್ರಹ ಕೆಫೆಟೇರಿಯ ಮ್ಯಾನೇಜಿಂಗ್ ಡೈರೆಕ್ಟರ್ ಅಬ್ದುಲ್ ರಶೀದ್ ನಹೀಮಿ ಬೆಂಗಳೂರು ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲ ಜೈಸನ್ ಪಟ್ಟೇರಿಯಲ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕರಾದ ಸರಿತಾ, ಸಜಿತ್ ಅಳದಂಗಡಿ, ವಿದ್ಯಾರ್ಥಿಗಳ ಪೋಷಕರು, ಎಲ್ಲಾ ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳು ಭಾಗಿಯಾಗಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.