ಹೂಡಿಕೆದಾರರ ಜಾಗೃತಿ ಕಾರ್ಯಕ್ರಮ

ಬೆಳ್ತಂಗಡಿ: ಆರ ಮ್ಯಾನೇಜ್ಮೆಂಟ್ ಸೊಲ್ಯೂಷನ್ಸ್ ಪ್ರೈ.ಲಿಮಿಟೆಡ್ ಇದರ ವತಿಯಿಂದ ಪ್ರಥಮ ಬಾರಿಗೆ ಬೆಳ್ತಂಗಡಿಯಲ್ಲಿ ಹೂಡಿಕೆದಾರರ ಜಾಗೃತಿ ಕಾರ್ಯಕ್ರಮ ಡಿ.16 ರಂದು ನಗರದ ಎಸ್.ಡಿ.ಎಂ ಸಭಾಭವನದ ಪಿನಾಕಿ ಹಾಲ್‌ನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಜನಜಾಗೃತಿ ವೇದಿಕೆ ಬೆಳ್ತಂಗಡಿ ಇದರ ಸ್ಥಾಪಕಾಧ್ಯಕ್ಷ ಕೆ. ವಸಂತ ಸಾಲಿಯಾನ್ ಅವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ದ.ಕ ಜಿಲ್ಲೆಯಲ್ಲಿ ಅಡಿಕೆ ಮತ್ತು ರಬ್ಬರ್ ಕೃಷಿಯನ್ನು ಜನರು ಅವಲಂಭಿಸಿದ್ದು, ಈ ಕೃಷಿ ಉತ್ಪನ್ನದ ಧಾರಣೆಯ ಏರಿಳಿತಗಳು ಜನಜೀವನದ ಮೇಲೆ ನೇರ ಪರಿಣಾಮ ಬಿರುತ್ತಿದೆ. ಅದಕ್ಕಾಗಿ ನಮ್ಮ ಜೀವನಕ್ಕೆ ಭದ್ರತೆ ಬೇಕು. ಇದಕ್ಕಾಗಿ ನಾವು ಹಣ ಉಳಿತಾಯ ಮಾಡುವ ಇಂತಹ ಯೋಜನೆಗಳ ಮಾಹಿತಿಯನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಶರತ್‌ಕೃಷ್ಣ ಪಡ್ವೆಟ್ನಾಯ ಅವರು ಮಾತನಾಡಿ ಹಣ ಹೂಡಿಕೆ ಎಂದರೆ ಜನರು ಇಂದು ಹಿಂದೆ ಸರಿಯುವ ಸ್ಥಿತಿಯಾಗಿದೆ. ಶೇ 60 ಕ್ಕೂ ಹೆಚ್ಚು ಮಂದಿ ಹೂಡಿಕೆ ಮಾಡಿ ಕೈಸುಟ್ಟುಕೊಂಡಿದ್ದಾರೆ. ಹಲವಾರು ನಕಲಿ ಕಂಪೆನಿಗಳು ಹೂಡಿಕೆ ಮಾಡಿ ಜನರನ್ನು ವಂಚಿಸಿರುವುದು ಇದಕ್ಕೆ ಕಾರಣವಾಗಿದೆ. ಆದರೆ ಆದಿತ್ಯ ಬಿರ್ಲಾದಂತಹ ಉತ್ತಮ ಸಂಸ್ಥೆಗಳಲ್ಲಿ ಹೂಡಿಕೆ ಮಾಡಿದರೆ ಹೆಚ್ಚು ಲಾಭವನ್ನು ಗಳಿಸಬಹುದು ಎಂಬ ತನ್ನ ಸ್ವಂತ ಅನುಭವವನ್ನು ವಿವರಿಸಿದರು.
ನ್ಯಾಯವಾದಿ ಬಿ.ಕೆ ಧನಂಜಯ ರಾವ್ ಮಾತನಾಡಿ ಮಕ್ಕಳ ಭವಿಷ್ಯದ ದೃಷ್ಟಿಯನ್ನು ಇಟ್ಟುಕೊಂಡು ನಾವು ಹೂಡಿಕೆಯನ್ನು ಮಾಡಬೇಕು. ತಾನು ತನ್ನ ಮಗನ ಹೆಸರಿನಲ್ಲಿ ಹೂಡಿಕೆ ಮಾಡಿರುವುದರಿಂದ ಇಂದು ಆತನ ಶಿಕ್ಷಣದ ಎಲ್ಲಾ ಖರ್ಚನ್ನು ನಿಭಾಯಿಸಲು ಸಾಧ್ಯವಾಗಿದೆ ಎಂದು ತನ್ನ ಅನುಭವವನ್ನು ವಿವರಿಸಿದರು.
ಪ್ರೋ. ಬಾಲಾಜಿ ರಾವ್ ಹಾಗೂ ಆರ್.ಎಸ್.ವಿ.ಪಿ ಶ್ರೀಧರ್ ಭಟ್ ಅವರು ಮ್ಯೂಚುಯಲ್ ಫಂಡ್‌ನ ಅಗತ್ಯತೆ, ಪ್ರಯೋಜನಗಳು, ಯಾವ ರೀತಿಯಲ್ಲಿ ಹೂಡಿಕೆ ಮಾಡಬೇಕು, ಭವಿಷ್ಯದ ಭದ್ರತೆಗಾಗಿ ಹೂಡಿಕೆಯಿಂದ ಆಗುವ ಉಪಯೋಗಗಳು ಮೊದಲಾದ ವಿಷಯಗಳ ಕುರಿತು ಸಮಗ್ರ ಮಾಹಿತಿ ನೀಡಿದರು.
ಶಂಕರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.