ಬೀಡಿ ಕಾರ್ಮಿಕರಿಗೆ ಬೀಡಿ ಮಾಲಕರ ವಂಚನೆ ನಿಲ್ಲಲಿ: ವಸಂತ ಬಂಗೇರ

ಬೆಳ್ತಂಗಡಿ: ಬೀಡಿಗೆ ಕನಿಷ್ಟ ಕೂಲಿ ಮತ್ತು ತುಟ್ಟಿ ಭತ್ಯೆ ನೀಡಬೇಕೆಂಬ ಆದೇಶವಿದ್ದರೂ, ಬೀಡಿ ಮಾಲೀಕರು ಇನ್ನೂ ನೀಡದೆ ಕಾರ್ಮಿಕರಿಗೆ ವಂಚನೆ ಮಾಡುರುವುದು ಖಂಡನೀಯ ಎಂದು ಮಾಜಿ ಶಾಸಕ ಕೆ ವಸಂತ ಬಂಗೇರ ಹೇಳಿದರು.
ಅವರು ಡಿ.7 ರಂದು ಬೆಳ್ತಂಗಡಿ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಕರ್ನಾಟಕ ಸರಕಾರವು 14/03/2018 ರಂದು 1000 ಬೀಡಿಗೆ ಕನಿಷ್ಟ ಕೂಲಿ ರೂ.210 ಮತ್ತು ತುಟ್ಟಿಭತ್ಯೆಗೆ ಸೂಚ್ಯಾಂಕದ ಏರಿಕೆಯ ಪ್ರತಿಅಂಶಕ್ಕೆ 4.ಪೈಸೆ ಎಂದು ನಿಗದಿಗೊಳಿಸಿ, 01/04/2018 ರಿಂದ ಜಾರಿಗೆ ಬರುವಂತೆ ಬೀಡಿ ಕಾರ್ಮಿಕರಿಗೆ ಕನಿಷ್ಟ ಕೂಲಿ ಜಾರಿಗೆ ಆದೇಶ ಮಾಡಿದೆ. 1000 ಬೀಡಿಗೆ ರೂ.220.52 ರಂತೆ ಕಾರ್ಮಿಕರಿಗೆ ವೇತನ ನೀಡಬೇಕಾಗಿದೆ. ಅದೇ ರೀತಿ 01/04/2015 ರಲ್ಲಿ ಏರಿಕೆಯಾದ ತುಟ್ಟಿಭತ್ಯೆ ಪ್ರತೀ ಕಾರ್ಮಿಕರಿಗೆ ದಿನಕ್ಕೆ ರೂ.12.75 ರಂತೆ, ಕಳೆದ ಮೂರು ವರ್ಷಗಳಿಂದ ಬೀಡಿ ಮಾಲಕರು ಬೀಡಿ ಕಾರ್ಮಿಕರಿಗೆ ತಲಾ ರೂ.11,934 ರಂತೆ ನೀಡಬೇಕಾದದ್ದನ್ನು ನೀಡದೆ, ಸುಮಾರು 960 ಕೋಟಿ ರೂ. ವಂಚನೆ ಮಾಡಿದ್ದಾರೆ.
ಕಾರ್ಮಿಕ ಮುಖಂಡ ಬಿ.ಎಂ ಭಟ್‌ರವರ ನಾಯಕತ್ವದಲ್ಲಿ ಡಿ.3 ರಂದು ಬೀಡಿ ಕಾರ್ಮಿಕರು ಬೆಂಗಳೂರಿಗೆ ಹೋಗಿ ಹೋರಾಟ ಮಾಡಿದ್ದಾರೆ. ಬೀಡಿ ಕಾರ್ಮಿಕರು ನ್ಯಾಯ ಪಡೆಯಲಿಕ್ಕೆ ಬೆಂಗಳೂರು ತನಕ ಹೋಗುವಂತೆ ಮಾಡಿದ ಕಾರ್ಮಿಕ ಇಲಾಖೆಯ ನಿರ್ಲಕ್ಷ್ಯವನ್ನು ಖಂಡಿಸುತ್ತೇನೆ. ಕಾರ್ಮಿಕರ ನ್ಯಾಯಯುತ ಬೇಡಿಕೆಗೆ ನನ್ನ ಸಂಪೂರ್ಣ ಬೆಂಬಲ ಇದೆ. ಕಾರ್ಮಿಕ ಇಲಾಖೆ ತಕ್ಷಣ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ ಕಿಣಿ, ಜಿ.ಪಂ ಸದಸ್ಯರಾದ ಧರಣೇಂದ್ರ ಕುಮಾರ್, ನಮಿತಾ ಕೆ ಪೂಜಾರಿ, ಶೇಖರ್ ಕುಕ್ಕೇಡಿ, ತಾ.ಪಂ ಸದಸ್ಯ ಪ್ರವೀಣ್ ಗೌಡ, ಪಟ್ಟಣ ಪಂಚಾಯತ್ ಸದಸ್ಯರಾದ ಜಗದೀಶ್ ಡಿ., ಮುಸ್ತರ್ ಜಾನ್, ಮೆಹಬೂಬ್, ರಾಜಶ್ರೀ ರಮಣ್, ಜನಾರ್ದನ, ಪ್ರಮುಖರಾದ ಬಿ.ಕೆ ವಸಂತ, ಅಶ್ರಫ್ ನೆರಿಯ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.