ಡಿ. ಸುರೇಂದ್ರ ಕುಮಾರ್, ಅಣ್ಣು ದೇವಾಡಿಗ ರಿಗೆ ರಾಜ್ಯಮಟ್ಟದ ರಾಜ್ಯೋತ್ಸವ ಪ್ರಶಸ್ತಿ

ಬೆಳ್ತಂಗಡಿ: ಕರ್ನಾಟಕ ರಾಜ್ಯ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಗಿದ್ದು, ವಿವಿಧ ಕ್ಷೇತ್ರಗಳ ಸೇವೆಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಸಹೋದರ ಡಿ. ಸುರೇಂದ್ರ ಕುಮಾರ್ ಮತ್ತು ಸಂಗೀತ ಕ್ಷೇತ್ರದಲ್ಲಿ ನಾಗಸ್ವರ ವಾದಕ ಅಣ್ಣು ದೇವಾಡಿಗ ಅವರಿಗೆ 2018 ನೇ ಸಾಲಿನ ಪ್ರಶಸ್ತಿ ಲಭಿಸಿದೆ.
ಉಪಚುನಾವಣೆ ನೀತಿಸಂಹಿತೆ ಹಿನ್ನೆಲೆಯಲ್ಲಿ ನ. 1 ರಂದು ಘೋಷಿಸಲ್ಪಡಬೇಕಿದ್ದ ಈ ಪ್ರಶಸ್ತಿ ಇದೀಗ ತಡವಾಗಿ ನ. 28 ರಂದು ಪ್ರಕಟವಾಗಿದೆ.
ಡಿ. ಸುರೇಂದ್ರ ಕುಮಾರ್ ಸಂಕ್ಷಿಪ್ತ ಪರಿಚಯ:
ಡಿ. ಸುರೇಂದ್ರ ಕುಮಾರ್ ಅವರು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷರಾಗಿದ್ದು, ಜೈನ್ ಮಿಲನ್ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ಗ್ರಾಮೀಣ ಭಾಗದಲ್ಲಿ ಜೈನ್ ಮಿಲನ್ ಶಾಖೆಗಳು ತೆರೆಯುವಲ್ಲಿ ಪ್ರಮುಖ ಪಾತ್ರವಹಿಸಿರುವ ಅವರು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುವ
ರಾಜ್ಯ, ರಾಷ್ಟ್ರಮಟ್ಟದ ಎಲ್ಲಾ ಕಾರ್ಯಕ್ರಮಗಳ ಯಶಸ್ವಿ ಸಂಯೋಜಕರಾಗಿಯೂ ಗುರುತಿಸಲ್ಪಟ್ಟಿದ್ದಾರೆ. ಬೆಂಗಳೂರಿನಲ್ಲಿ ನೆಲೆಸಿರುವ ಅವರು ಅಪೂರ್ವ ಸಂಘಟಕರಾಗಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮುಂದಿನ ಫೆಬ್ರವರಿಯಲ್ಲಿ ನಡೆಯುವ ಭಗವಾನ್ ಶ್ರೀ ಬಾಹುಬಲಿ ಮಹಾಮಸ್ತಕಾಭಿಷೇಕದ ಸಮಿತಿಯ ಪ್ರ. ಸಂಚಾಲಕರಾಗಿದ್ದಾರೆ. ಇತ್ತೀಚೆಗೆ ಶ್ರವಣಬೆಳಗೊಳದಲ್ಲಿ ನಡೆದ ಮಹಾಮಸ್ತಕಾಭಿಷೇಕ ಸಂಯೋಜನೆಯಲ್ಲೂ ಸಕ್ರೀಯ ಪಾತ್ರವಹಿಸಿದ್ದರು. ತ್ಯಾಗಿಗಳ ಸೇವೆ, ಮುನಿಗಳ ಚಾತುರ್ಮಾಸಗಳಲ್ಲಿ ಅವರ ಜೊತೆ ಇದ್ದು ಅವರ ಸೇವೆ ಅಲ್ಲದೆ ಹಳ್ಳಿ ಹಳ್ಳಿಗಳಲ್ಲಿ ಇರುವ ಜೈನ ಬಸದಿಗಳ ಜೀರ್ಣೋದ್ಧಾರ ಕಾರ್ಯದಲ್ಲಿ ಮುಂಚೂಣಿಯಲ್ಲಿ ನಿಂತು ಮಾರ್ಗದರ್ಶನ ನೀಡುತ್ತಿದ್ದಾರೆ.ಅಣ್ಣು ದೇವಾಡಿಗರ ಸಂಕ್ಷಿಪ್ತ ಪರಿಚಯ: ಅಣ್ಣು ದೇವಾಡಿಗ ಅವರು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸಾಂಪ್ರದಾಯಿಕ ನಾಗಸ್ವರ ವಾದಕರಾಗಿ ಕಳೆದ 40 ವರ್ಷಗಳಿಗೂ ಮಿಕ್ಕಿ ಸೇವೆ ನೀಡುತ್ತಿದ್ದಾರೆ. 2005 ರಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೂ ಭಾಜನರಾಗಿದ್ದ ಅವರು 2010 ರಲ್ಲಿ ಸಂಗೀತ ನೃತ್ಯ ಅಕಾಡೆಮಿ ವತಿಯಿಂದ ರಾಜ್ಯಮಟ್ಟದ ಕಲಾಶ್ರೀ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಆಲ್ ಇಂಡಿಯಾ ರೇಡಿಯೋ ಆಕಾಶವಾಣಿ ಮಂಗಳೂರು ಇಲ್ಲಿಂದ ಎ ಗ್ರೇಡ್ ಅತ್ಯುನ್ನತ ಮಾನ್ಯತೆ ಪಡೆದವರಾಗಿದ್ದಾರೆ.
ಮಲೇಶ್ಯಾ, ಚೆನ್ನೈ, ತಮಿಳುನಾಡು, ತಿರುಪತಿ ಸೇರಿದಂತೆ ಹಲವೆಡೆ ತಮ್ಮ ಕಾರ್ಯಕ್ರಮ ನೀಡಿ ಕೀರ್ತಿ ಗಳಿಸಿಕೊಂಡಿದ್ದಾರೆ. ತಮ್ಮ ತಂದೆಯವರ ಕಾಲದಿಂದಲೂ ಪರಂಪರಾಗತವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಶಿವನ ಸಾನಿಧ್ಯದಲ್ಲಿ ಕಲಾ ಸೇವೆ ನೀಡುವ ಅವಕಾಶ ಪಡೆದುಕೊಂಡಿರುವ ಅವರು ಈಗಲೂ ಕಲಾಸೇವೆ ನೀಡಿಕೊಂಡು ಬರುತ್ತಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.