ನೇಪಥ್ಯಕ್ಕೆ ಸರಿದ ಅಕ್ಕಿಮುಡಿ

ನಮ್ಮ ಜನಪದೀಯ ಸಂಸ್ಕೃತಿಯ ಭಾಗವಾಗಿರುವ ಅಂದದ ಆಕ್ಕಿಮುಡಿಈಗ ಅಪರೂಪವಾಗುತ್ತಿದೆ. ಭತ್ತದ ಕೃಷಿಯ ಅಕ್ಕಿಯನ್ನು ಆಹಾರವನ್ನಾಗಿ ಬಳಸುವ ನಾವು ಇಂದು ಗೋಣಿ ಚೀಲದ ಮೂಲಕ ಖರೀದಿಸಿ ಮನೆಗೆ ತರುತ್ತಿದ್ದೇವೆ. ಆಧುನಿಕತೆಯ ರಭಸಕ್ಕೆ ಹಳೆಯ ಬದುಕು ಬದಲಾಗುತ್ತಿದ್ದು, ಶ್ರಮ ಜೀವಿಗಳ ಕರಕುಶಲತೆಯ ಕಲಾವಂತಿಕೆ ಆಘಾತಕ್ಕೆ ಒಳಗಾಗಿದೆ.
ಹಿಂದೆಲ್ಲ ಅಕ್ಕಿಮುಡಿ ಇಲ್ಲದ ಮನೆ ಇರಲಿಲ್ಲ . ಗದ್ದೆಗಳು ಇದ್ದರಂತೂ ಅಕ್ಕಿ ಮುಡಿಯನ್ನು ಸಂಗ್ರಹಿಸಿಟ್ಟ ಪರಿ ಕಂಡಾಗ ಅವರ ತಾಕತ್ತುಗಳನ್ನು ತೋರ್ಪಡಿಸಬಲ್ಲ ಸಾಮರ್ಥ್ಯ , ಮುಡಿ ಲೆಕ್ಕದ ಮಾನದಂಡ. ದೌಲತ್ತು ಮಾನದಂಡವಾಗಿರುತ್ತಿತ್ತು. ಕೋಣೆ , ಅಟ್ಟ , ಚಾವಡಿಗಳಲ್ಲಿ ಮೋಡಿ ಮಾಡಬಲ್ಲಂತಹ ಅಕ್ಕಿಮುಡಿ ಗಳನ್ನು ಅಚ್ಚುಕಟ್ಟಾಗಿ ಜೋಡಿಸಿ ಇಡುತ್ತಿದ್ದರು.
ಮುಖ್ಯವಾಗಿ ಕರಾವಳಿಯಲ್ಲಿ ಭತ್ತದ ಬೆಳೆ ಸಮೃಧ್ಧಿಯಾಗಿತ್ತು. ಹೆದ್ದಾರಿ ಬದಿಯಲ್ಲಿ ಭತ್ತದ ಬೆಳೆ ಸಂಭ್ರಮದಿಂದ ನೋಡುವುದಂತಾಗಿತ್ತು,. ಈಗ ಬಹು ಮಹಡಿಯ ಕಟ್ಟಡಗಳಿಂದ ಭತ್ತ ಕೃಷಿಗಳು ಮಾಯವಾಗಿವೆ. ತುಳುನಾಡಿನಲ್ಲಿ ರಾರಾಜಿಸುತ್ತಿದ್ದ ಗದ್ದೆ ಕೃಷಿ ಬದಲಾವಣೆಯಾಗಿ ಮಕ್ಕಳು ಭತ್ತ/ ಅಕ್ಕಿ ಎಲ್ಲಿಂದ ಬರುತ್ತದೆ ಎಂದರೆ ಅಂಗಡಿಯ ಗೋಣಿ ಚೀಲದಿಂದ ಎನ್ನುವಂತಾಗಿದೆ.
ಅಕ್ಕಿಯನ್ನು ಕೆಡದ ಹಾಗೆ ಮುಡಿಗಳಾಗಿ ಮಾಡಿ ಭದ್ರವಾಗಿರಿಸುತ್ತಿದ್ದರು. ಈ ಅಕ್ಕಿಮುಡಿ ಒಂದು ಸುಂದರ ರಚನೆ . ಅನ್ನ ದೇವರು ಅನ್ನುವ ಹಾಗೆ ಅಂದದ ಆಕಾರ . ಭತ್ತ ಬೆಳೆದ ಪೈರನ್ನು ತೆನೆ ಸಹಿತ ಕೊಯ್ದು ಒಣಗಿಸಿಡುತ್ತಾರೆ. ಹೊಡಿ ಮಂಚದ ಮೂಲಕ ಬಡಿದು ಭತ್ತ ಉದುರಿಸುತ್ತಾರೆ. ನಂತರ ಪೈರನ್ನು ಮನೆ ಎದುರಿನ ಕಣಜ (ತಿರಿ) ನಿರ್ಮಿಸಿ ಶೇಖರಿಸಿಡುತ್ತಾರೆ.
ಎಷ್ಟು ಮುಡಿ ಗದ್ದೆ ಉಂಟು , ಎಷ್ಟು ಮುಡಿ ಅಕ್ಕಿ ಬೆಳೆಯುತ್ತದೆ, ಎಷ್ಟು ಮುಡಿ ಗೇಣಿ ಇದೆ. ಸಾಗುವಳಿ ಉಂಬಳಿ ಮುಂತಾದ ಲೆಕ್ಕಾಚಾರಗಳು ಸಭೆ ಸಮಾರಂಭಗಳಲ್ಲಿ ಕೇಳಿ ಬರುತ್ತಿದ್ದ ಮಾತು .ಈಗ ಎಷ್ಟು ರಬ್ಬರು, ಎಷ್ಟು ಅಡಿಕೆ ಎಂಬಲ್ಲಿಗೆ ನಿಂತಿದೆ.
ಕಥೆ , ಕಾದಂಬರಿಗಳಲ್ಲಿ, ಸಿನಿಮಾ ಧಾರವಾಹಿಗಳಲ್ಲಿ ಧಣಿಗಳ ದೌಲತ್ತನ್ನು ಅಕ್ಕಿ ಮುಡಿಗಳ ಮೂಲಕ ಚಿತ್ರಿಸುತ್ತಿದ್ದರು. ಈಗ ಬದಲಾವಣೆಯಾಗಿದೆ. ಪೇರಿಸಿಟ್ಟ ಅಕ್ಕಿ ಮುಡಿಗಳ ಮೂಲಕ ಭತ್ತದ ಕೃಷಿಯ ಶ್ರೀಮಂತಿಕೆಯನ್ನು ಹೊರ ಹೊಮ್ಮಿಸುತ್ತಿದ್ದರು. ದೈವ , ದೇವಸ್ಥಾನಗಳಿಗೆ ಉಂಬಳಿ ನೀಡುವಲ್ಲಿ ಕೂಡಾ ಶ್ರೀಮಂತಿಕೆಯ ಲೆಕ್ಕಾಚಾರ ಇರುತ್ತಿತ್ತು.
ಯಾವುದೇ ಶುಭ ಕಾರ್ಯ , ಮದುವೆ ಸಮಾರಂಭ ಉತ್ಸವ , ಜಾತ್ರೆಯ ವೇಳೆ ಭೋಜನದ ಲೆಕ್ಕ ಹಾಕುವಾಗ ಎಷ್ಟು ಮುಡಿಯ ಅಕ್ಕಿಯ ಊಟ ಎಂದು ಕೇಳುವ ವಾಡಿಕೆ ಇತ್ತು . ಈಗೆಲ್ಲ ಕ್ವಿಂಟಾಲ್ , ಕೆ.ಜಿಯ ಲೆಕ್ಕಾಚಾರ. ಅಕ್ಕಿ ಮುಡಿಯು ಕಣ್ಮರೆಯಾಗುತ್ತಿರುವ ಇಂದಿನ ದಿನಗಳಲ್ಲಿ ಇದೆಲ್ಲ ಇತಿಹಾಸದ ಪುಟದತ್ತ ದಾಪುಗಾಲು ಹಾಕ್ಕುತ್ತಿದೆ.
ಅಕ್ಕಿ ಮುಡಿ ಕಟ್ಟುವ ರೀತಿ ಕಲಾತ್ಮಕವಾಗಿದೆ. ಕತ್ತುವಾಗ ಗಟ್ಟಿಯಾಗಿ ಬುಟ್ಟಿಯಂತೆ ಮಾಡಿ ಅಗಲವಾಗಿ ನೆಲದ ಮೇಲೆ ಹಾಕಿ ಅದರ ಮೇಲೆ ಹುಡಿ ಹುಲ್ಲನ್ನುಉರುಟಾಗಿ ತಿರುವಿ ಅದರ ಒಳಗೆ ಭತ್ತ ಕುಟ್ಟಿದ ಅಕ್ಕಿಯನ್ನು ಸಾಮಾನ್ಯವಾಗಿ 3 ಕಲಸೆ (14 ಸೇರು) ಅಂದರೆ 42 ಸೇರು ಅಕ್ಕಿಯನ್ನು ಹಾಕಿ ಹುಲ್ಲಿನಿಂದ ಮಾಡಿದ ಹಗ್ಗದಿಂದ ಸುತ್ತ ಬಿಗಿದು ವೃತ್ತಾಕಾರವಾಗಿ ಕಟ್ಟುತ್ತಾರೆ. ಇದನ್ನು ಮರದ ಕೊದಂಡಿಯಿಂದ ಹೊಂದಿಸಿ ಬಡಿದು ಸಮತಟ್ಟು ಮಾಡುತ್ತಾರೆ. ಬಾಳೆನಾರಿನಿಂದ ಬಿಗಿದು ಕಟ್ಟಿ ಗೋಲಾಕಾರದ ಚೆಂಡಿನಂತೆ ಅಚ್ಚುಕಟ್ಟಾಗಿ ರಚಿಸುತ್ತಾರೆ. ಇದನ್ನ್ನು ಎತ್ತಿ ಬಿಸಾಡಿದರೂ ಒಂದು ಅಕ್ಕಿ ಕಾಳು ಕೂಡಾ ಉದುರದೆ ವರ್ಷಾನುಗಟ್ಟಲೆ ದಾಸ್ತಾನು ಮಾಡಲು ಸಾಧ್ಯವಿದೆ.ಅಕ್ಕಿಮುಡಿಯನ್ನು ಸಾಲಾಗಿ ಪೇರಿಸಿ ಇರಿಸುವುದು ಕಣ್ಣಿಗೆ ಚಂದ.

ಉದಯ ಲಾಯಿಲ

ಈಗೆಲ್ಲ ಗೋಣಿ ಚೀಲಗಳು, ಪಾಲಿಥೀನ್ ಚೀಲಗಳಲ್ಲಿ ಅಕ್ಕಿ ಬರುತ್ತಿದ್ದು, ಅಕ್ಕಿ ಮುಡಿಗಳು ಕಣ್ಮರೆಯಾಗುತ್ತಿದೆ . ಅಕ್ಕಿ ಮುಡಿಗಳನ್ನು ಬೆಚ್ಚನೆಯ ಸ್ಥಳಗಳಲ್ಲಿ ಜೋಡಿಸಿಡುತ್ತಾರೆ. ಈಗ ಅಕ್ಕಿ ಮುಡಿ ಕಟ್ಟುವವರು ಕಡಿಮೆಯಾಗಿ ತುಳುನಾಡಿನ ಸಂಸ್ಕೃತಿ ಬಿಂಬಿಸುವ ಕಾರ್ಯಕ್ರಮಗಳ ವೇದಿಕೆಯಲ್ಲಿ ಗಮನಿಸಬೇಕಾಗಿದೆ. ಅಥವಾ ಹಳ್ಳಿಗಳಲ್ಲಿ ಗುರುತಿಸಬೇಕಾಗಿದೆ. ಬಿತ್ತನೆಗೆ ಬೇಕಾಗುವ ಭತ್ತವನ್ನು ಮುಡಿಗಳಲ್ಲಿ ಕಟ್ಟಿಟ್ಟು ಸಂಗ್ರಹಿಸುವುದುಂಟು. ಕಾಲ ಬದಲಾಗಿ ರೀತಿ ರಿವಾಜುಗಳು ಬದಲಾಗಿದೆ. ಮಿಲ್ಲುಗಳಲ್ಲಿ ಕಿರಾಣಿಗಳಲ್ಲಿ ಅಕ್ಕಿ ಕೆ.ಜಿ . ಲೆಕ್ಕದಲ್ಲಿ ಬರುತ್ತಿದ್ದು, ಸೇರು , ಕಳಸೆ, ಮಾಯವಾಗಿದೆ
ಭತ್ತದ ಕೃಷಿಯನ್ನು ಇಂದು ಯಂತ್ರಗಳ ಮೂಲಕ ನಡೆಸುತ್ತಿದ್ದು, ಭತ್ತವನ್ನು ಹೊತ್ತೊಯ್ದು ಹಂಡೆಗಳಲ್ಲಿ ಬೇಯಿಸಿ , ಅಂಗಳದಲ್ಲಿ ಒಣಗಿಸಿ ಹಿಂದಿನ ಕಾಲದ ಗತ ವೈಭವಗಳ ಒನಕೆಯಲ್ಲಿ , ಕುಟ್ಟಿ, ಅಕ್ಕಿ ಮುಡಿ ಮಾಡುವ ಕಟ್ಟಾಳುಗಳು ಕಾಣದಾಗಿದ್ದಾರೆ. ನೇಪಥ್ಯಕ್ಕೆ ಸೇರಿದಂತೆ ಮುಟ್ಟಾಳೆ , ನೇಗಿಲು, ಕೊರುಂಬು ಕೃಷಿ ಪರಿಕರಗಳು ಮ್ಯೂಸಿಯ್ಂ ಅಥವಾ ಸಂಸ್ಕೃತಿ ಬಿಂಬಿಸುವ ವಸ್ತು ಪ್ರದರ್ಶನದಲ್ಲಿ ಕಂಡು ಬಂದಂತೆ ಅಕ್ಕಿ ಮುಡಿ ಕೂಡಾ ಕ್ರಮೇಣ ಮ್ಯೂಸಿಯಂಗಳಲ್ಲಿ ಕಂಡು ಬರುವ ಸಾಧ್ಯತೆ ಇದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.