ಸ್ಕ್ಯಾನಿಂಗ್ ಸ್ಪೆಷಲಿಸ್ಟ್ ಡಾ. ಮಹಾಂತ್ ಪುತ್ತೂರಿನಿಂದ ಉಜಿರೆಗೆ ಸೈಕಲ್ ಸವಾರಿ…

ಎಂಬಿಬಿಎಸ್ ಓದಿದ ವೈದ್ಯ ಹಾಗೂ ಸ್ಕ್ಯಾನಿಂಗ್ ತಂತ್ರಜ್ಞಾನದಲ್ಲಿ ಆಲ್ಟ್ರಾಸೌಂಡ್ ಸೋನೋಲಜಿಸ್ಟ್ ಆಗಿರುವ ಪುತ್ತೂರು ಸನಿಹದ ನಾಯರ್‌ಕೆರೆ ನಿವಾಸಿ ಡಾ. ಮಹಾಂತ್ ಅವರು ಬಫಾಂಗ್ ಮೋಟಾರ್ ಚಾಲಿತ ಸೈಕಲ್ ಮೂಲಕ ಬೆಳ್ತಂಗಡಿಗೆ ಸುಮಾರು 36 ಕಿ. ಮೀ ಪ್ರಯಾಣ ಮಾಡುವ ಮೂಲಕ ವಿಶೇಷ ಮಂದಿಗಳ ಪೈಕಿ ವಿಶೇಷರಾಗಿ ಕಾಣಿಸಿಕೊಳ್ಳುತ್ತಾರೆ.
ಏರುತ್ತಿರುವ ಜಾಗತಿಕ ತಾಪಮಾನ, ಗಗನಕ್ಕೇರುತ್ತಿರುವ ಇಂಧನ ಬೆಲೆ ಇವೇ ಮೊದಲಾದ ಜಾಗತಿಕ ಸಮಸ್ಯೆಗಳ ನಿವಾರಣೆಗೆ ತಮ್ಮದೇನಾದರೂ ಕೊಡುಗೆಯಾಗಬೇಕು ಎಂಬ ಇರಾದೆ ಅವರನ್ನು ಈ ಕಾರ್ಯಕ್ಕೆ ಪ್ರೇರೇಪಿಸಿದೆ. ಜೊತೆಗೆ ತಾನೋರ್ವ ವೈದ್ಯನಾಗಿ ನಿಯಮಿತವಾದ ವ್ಯಾಯಾಮದಿಂದ ಅನೇಕ ತರಹದ ದೈಹಿಕ ರೋಗಗಳಿಗೆ ಪರಿಹಾರವಿದೆ ಎಂಬ ಬಗ್ಗೆ ಜನಸಾಮಾನ್ಯರಲ್ಲಿ ಆತ್ಮವಿಶ್ವಾಸ ಮೂಡಿಸುವ ಉದ್ಧೇಶದಿಂದ ಅವರು ಈ ಕಠಿಣವಾದ ಆಯ್ಕೆ ಮಾರ್ಗ ಅನುಸರಿಸಿದ್ದಾರೆ.
ಅಪೋಲೋ ಸ್ಯ್ಕಾನಿಂಗ್ ಸೆಂಟರ್‌ನಿಂದ ಉಜಿರೆಗೆ:
ಪುತ್ತೂರು ದರ್ಬೆ ಶ್ರೀ ಗಣೇಶ್ ಕಾಂಪ್ಲೆಕ್ಸ್‌ನಲ್ಲಿ ಅಪೋಲೋ ಸ್ಕ್ಯಾನಿಂಗ್ ಸೆಂಟರ್ ನಡೆಸುತ್ತಿರುವ ಪುತ್ತೂರು ದರ್ಬೆಯವರಾದ ಡಾ. ಮಹಾಂತ್ ಮೊದಲೇ ಸೈಕ್ಲಿಂಗ್ ಬಗ್ಗೆ ಆಸಕ್ತಿ ಉಳ್ಳವರು. ಕಾಲ್ತುಳಿತ ಸೈಕಲ್ ಹೊಂದಿದ್ದ ಅವರು ಇಂಧನ ಉಳಿತಾಯದ ಪರಿಕಲ್ಪನೆ ಹೊಂದಿದ್ದಾರೆ. ಹಿಂದೆ ಅವರು ಕಾಲ್ತುಳಿತದ ಸೈಕಲ್‌ನಲ್ಲಿ ಸ್ಥಳೀಯ ಪರಿಸರ ಮಾತ್ರವಲ್ಲದೆ ಅದೆಷ್ಟೋ ಬಾರಿ ಬಿ.ಸಿ. ರೋಡ್, ಮಂಗಳೂರು ಇಲ್ಲೆಲ್ಲಾ ಹೋಗಿ ಬಂದಿದ್ದಾರೆ. ಇದೀಗ ಹೊಸದಾಗಿ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಪೆಡಲ್ಯಾಕ್ ಸೈಕಲ್ ಅವರನ್ನು ಅತೀವ ಆಕರ್ಷಿಸಿದೆ. ಇದನ್ನು
ಇತ್ತೀಚೆಗೆ ಜಿಲ್ಲಾಧಿಕಾರಿ ಅಧಿಕೃತವಾಗಿ ಉದ್ಘಾಟಿಸಿ ಭಾರೀ ಪ್ರಚಾರಕೊಟ್ಟಿದ್ದರು. ಇದೀಗ ಮಹಾಂತ್ ದ.ಕ. ಜಿಲ್ಲೆಯಲ್ಲಿ ಈ ಸೈಕಲ್ ಹೊಂದಿದ ಮೂರನೇ ವ್ಯಕ್ತಿ. ಅವರು ಪ್ರತೀ ಶುಕ್ರವಾರ ಉಜಿರೆಯ ಬೆನಕ ಹೆಲ್ತ್‌ಸೆಂಟರ್‌ಗೆ ಪ್ರಯಾಣ ಮಾಡುತ್ತಿದ್ದಾರೆ.
ಬ್ಯಾಟರಿ ಚಾಲಿತ ಸೈಕಲ್:
ಪಾನಸೋನಿಕ್ ಕಂಪೆನಿಯ 14 ಎ.ಹೆಚ್. ಬ್ಯಾಟರಿ ಅಳವಡಿಸಿರುವ ಪೆಡಲ್ಯಾಕ್ ಸೈಕಲ್‌ನಲ್ಲಿ ಕುಳಿತು ಪವರ್‌ಆನ್ ಬಟನ್ ಒತ್ತಿ ತಮಗೆ ಬೇಕಾದಂತೆ ವೇಗವನ್ನು ಬಟನ್ ಮೂಲಕ ಒತ್ತಿ ಆಯ್ಕೆ ಮಾಡಿಬಿಟ್ಟರೆ ಅಷ್ಟೇ ಸಾಕು. ನಿಮ್ಮ ವ್ಯಾಯಾಮಕ್ಕಾಗಿ ಪೆಡಲ್ ಮೇಲೆ ಕಾಲಿಟ್ಟು ನಿಧಾನಕ್ಕೆ ಸೈಕಲ್ ತುಳಿಯುತ್ತಿರುವಂತೆ ಮಾಡುತ್ತಾ ಪ್ರಯಾಣಿಸಬಹುದು. ಅಥವಾ ಹೇಂಡಲ್ ಬಳಿ ಇರುವ ಥ್ರೋಟಲ್ ಬಟನ್ ಒತ್ತಿ ಹಾಗೆಯೇ ಸುಮ್ಮನೆ ಸೈಕಲ್‌ನ ಸೀಟ್ ಮೇಲೆ ನೀವು ಕುಳಿತರೆ ಸಾಕು ಸೈಕಲ್ ತನ್ನಿಂತಾನೇ ಮುಂದಕ್ಕೆ ಚಲಿಸುತ್ತದೆ. ರಾತ್ರಿ ಸಂಚಾರಕ್ಕೆ ಬ್ಯಾಟರಿ ಚಾಲಿತ ಎಲ್‌ಇಡಿ ಹೆಡ್‌ಲೈಟ್ ಇದೆ. ಮಂಗಳೂರು ಕೋಪರ್‌ನಿಕರ್‍ಸ್ ಸಂಸ್ಥೆ ಈ ಸೈಕಲ್‌ನ ಅಧಿಕೃತ ಮಾರಾಟಗಾರರು. ಈ ಸೈಕಲ್ ಗಂಟೆಗೆ 25 ಕಿ.ಮೀ ವೇಗದಲ್ಲಿ ಚಲಿಸುತ್ತದೆ. ಪುತ್ತೂರಿನಿಂದ ಉಜಿರೆಗೆ ಬರಲು 36 ಕಿ.ಮೀ. ದೂರಕ್ಕೆ ಅವರಿಗೆ 1.20 ನಿಮಿಷ ತಗಲುತ್ತದೆ. ಈ ಸೈಕಲ್ ಮುಖಃಬೆಲೆ 1.27 ಲಕ್ಷ.
5 ಗಂಟೆ ಚಾರ್ಚ್, 100 ಕಿ. ಮೀ ಪ್ರಯಾಣ ಸೈಕಲ್‌ಗೆ ಅಳವಡಿಸಲಾಗಿರುವ ಶಬ್ಧ ಹೊರಸೂಸದ ಬಫಾಂಗ್ ಇಲೆಕ್ಟ್ರಿಕಲ್ ಮೋಟಾರ್ ಚಾಲನೆಗೆ ಬೇಕಾದ ಪ್ಯಾನಸೋನಿಕ್ ಬ್ಯಾಟರಿ 5 ಗಂಟೆ ಚಾರ್ಜ್ ಮಾಡಿದರೆ 100 ಕಿ.ಮೀ ಈ ಸೈಕಲ್ ಆನಾಯಾಸವಾಗಿ ಓಡುತ್ತದೆ. ಆದರೆ ಕರಾವಳಿ ಭಾಗ ಬೆಟ್ಟ ಗುಡ್ಡಗಳಿಂದ ಆವೃತ ಪ್ರದೇಶವಾಗಿರುವುದರಿಂದ 60 ರಿಂದ 70 ಕಿ.ಮೀ. ಓಡುತ್ತದೆ. ಪುತ್ತೂರಿನಿಂದ ಬಂದು ಬೆಳ್ತಂಗಡಿ ತಲುಪಿದ ಕೂಡಲೇ ಅವರು ಸೈಕಲ್‌ನಿಂದ ಬ್ಯಾಟರಿ ಬೇರ್ಪಡಿಸಿ ಚಾರ್ಚ್‌ಗಿಡುತ್ತಾರೆ. ಅವರ ಕೆಲಸ ಆಗುವಷ್ಟರಲ್ಲಿ ಮತ್ತೆ ಬ್ಯಾಟರಿ 100 ಕಿ.ಮೀ. ಪ್ರಯಾಣಕ್ಕೆ ಸಿದ್ಧವಾಗಿರುತ್ತದೆ. ಒಟ್ಟು 800 ಬಾರಿ ರೀಚಾರ್ಚ್ ಮಾಡುವಷ್ಟು ಬಲಿಷ್ಠ ಅಶ್ವಶಕ್ತಿ ಸಾಮರ್ಥ್ಯ ಈ ಬ್ಯಾಟರಿ ಹೊಂದಿದೆ. ಗೇರ್ ಸಿಸ್ಟಮ್ ಇದ್ದರೂ ಇಲ್ಲಿನ ಪ್ರಯಾಣಕ್ಕೆ ಒಮ್ಮೆಯೂ ಗೇರ್ ಬದಲಾಯಿಸುವ ಅವಶ್ಯಕತೆಯೇ ಬರುವುದಿಲ್ಲ. ಎಷ್ಟೇ ಎತ್ತರದ ದಿಣ್ಣೆ ಏರಬೇಕಾದರೂ ಬಲವಾಗಿ ತುಳಿಯಬೇಕೆಂದಿಲ್ಲ. ಮಾಮೂಲಿನಂತೆ ತಿರುಗುವ ಪೆಡಲ್‌ಮೇಲೆ ನಿಮ್ಮ ಕಾಲನ್ನು ನಿದಾನಕ್ಕೆ ತಿರುಗಿಸುತ್ತಿದ್ದರೆ ಸಾಕು. ಒಂದು ವೇಳೆ ಅರ್ಧ ದಾರಿಯಲ್ಲಿ ಬ್ಯಾಟರಿ ಖಾಲಿಯಾದರೆ ಏನು ಎಂಬ ವ್ಯಥೆ ಬೇಡ. ಮಾಮೂಲಿ ಸೈಕಲಿನಂತೆ ತುಳಿದುಕೊಂಡೇ ನೀವು ಉದ್ಧೇಶಿತ ಜಾಗ ಸೇರಬಹುದು.
ನಂಬರ್ ಲಾಕ್ ರೋಪ್‌ನಿಂದ ಭದ್ರತೆ:
ನೀವು ಸೈಕಲನ್ನು ನಿಲ್ಲಿಸಿ ಹೋಗಬೇಕಾದಾಗ ನಂಬರ್ ಲಾಕ್ ತಂತ್ರಜ್ಞಾನದ ರೋಪ್ ಬೀಗ ಇದೆ. ನಿಲ್ಲಿಸುವ ಜಾಗದಲ್ಲಿ ಕಂಬ, ಅಥವಾ ಇತರ ಘನ ವಸ್ತುವಿಗೆ ಸುತ್ತಿ ಲಾಕ್ ಮಾಡಿದರೆ ಆಯ್ತು. ಅಥವಾ ಚಕ್ರ ಮತ್ತು ಸೈಕಲ್ ಫ್ರೇಮ್‌ಗೆ ಲಾಕ್‌ಗೂ ಅಳವಡಿಸಬಹುದು. ಸೈಕಲ್‌ಗೆ ಕಂಪೆನಿ 1 ವರ್ಷ ಉಚಿತ ವ್ಯಾರೆಂಟಿ ಕೊಟ್ಟಿದೆ. ಟ್ಯೂಬ್‌ಲೆಸ್ಟ್ ಟಯರ್ ಕೂಡ ಇದ್ದು ಬೇಕಾದಲ್ಲಿ ಅಳವಡಿಸಿಕೊಳ್ಳಬಹುದು. ಹೆಲ್ಮೆಟ್ ಮತ್ತು ಕೂಲಿಂಗ್ ಗ್ಲಾಸ್ ಇದ್ದರೆ ಅಷ್ಟೇ ಸಾಕು ಈ ಸೈಕಲ್ ಪ್ರಯಾಣಕ್ಕೆ. ಲೈಸನ್ಸ್ ಬೇಡ, ಆರ್‌ಟಿಒ ನೊಂದಣಿಯೂ ಇಲ್ಲ. ಇನ್ಶ್ಯೂರೆನ್ಸ್ ವಿಷಯಕ್ಕೆ ಬಂದರೆ, ದ್ವಿಚಕ್ರ ವಾಹನವಾದರೆ ಅಲ್ಲೂ ಕೂಡ ಬೈಕ್ ಸವಾರನಿಗೆ ವೈಯುಕ್ತಿಕ ವಿಮೆ ಇದ್ದರೆ ಕ್ಲೇಮ್ ಆಗುವಂತೆ ಇಲ್ಲೂ ಕೂಡ ಆಗಲಿದೆ. ಮೋಟಾರು ಕಾಯ್ದೆ ನಿಯಮ ಇದಕ್ಕೆ ಅನ್ವಯವಾಗದೇ ಇರುವುದರಿಂದ ವಾಹನ ನೋಂದಣಿ, ನಂಬರ್ ಪ್ಲೇಟ್, ವಾಹನಕ್ಕೆ ವಾರ್ಷಿಕ ವಿಮೆ ಅದ್ಯಾವುದೂ ಇದಕ್ಕೆ ಅನ್ವಯವಾಗುವುದಿಲ್ಲ.
ಆಯಿಲ್ ಇಲ್ಲ, ಸರ್ವಿಸ್ ಬೇಕಾಗಿಲ್ಲ. ಸ್ಪಾರ್ಕ್ ಪ್ಲಗ್ ಇಲ್ಲ: ಎಲೆಕ್ಟ್ರಿಕಲ್ ಮೋಟಾರ್ ಆಗಿರುವುದು ಆಯಿಲ್ ಬೇಕಾಗಿಲ್ಲ, ನಿಯಮಿತ ಸರ್ವಿಸ್ ಅಗತ್ಯವಿಲ್ಲ. ಸ್ಪಾರ್ಕ್ ಪ್ಲಗ್ ಅವಶ್ಯಕತೆ ಇಲ್ಲ. ಗೇರ್ ಆಯಿಲ್ ಆಗಲಿ, ಉಷ್ಣ ನಿಯಂತ್ರಣಕ್ಕೆ ಕೂಲೆಂಟ್, ರೆಡಿಯೇಟರ್ ಆಗಲಿ, ಅಧ್ಯಾವುದೂ ಇದಕ್ಕೆ ಅಗತ್ಯವೇ ಇಲ್ಲ. ಸೈಕಲ್ ಎಂದರೆ ಪಕ್ಕಾ ಸೈಕಲ್ ಅಷ್ಟೇ.

ಪುತ್ತೂರು ದರ್ಬೆಯಲ್ಲಿ 1991 ರಲ್ಲಿ ಕರಾವಳಿ ಜಿಲ್ಲೆಯಲ್ಲೇ ಮೊತ್ತಮೊದಲ ಅಪೋಲೋ ಸ್ಕ್ಯಾನಿಂಗ್ ಸೆಂಟರ್ ಸ್ಥಾಪಿಸಿದ್ದ ಖ್ಯಾತ ವೈದ್ಯ ಡಾ. ವಿಠಲ್ ಮತ್ತು ದಿ. ಚಂದ್ರಮ್ಮ ದಂಪತಿಯ 3 ಮಂದಿ ಮಕ್ಕಳ ಪೈಕಿ ಡಾ. ಮಹಾಂತ್ ಕಿರಿಯ ಪುತ್ರ. ಇಬ್ಬರು ಅಕ್ಕಂದಿರು ವಿವಾಹವಾಗಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಮಂಗಳೂರು ಕೆ.ಎಸ್. ಹೆಗ್ಡೆ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಮುಗಿಸಿದ ಡಾ. ಮಹಾಂತ್, ಮೈಸೂರಿನಲ್ಲಿ ಸ್ಕ್ಯಾನಿಂಗ್ ತಂತ್ರಜ್ಞಾನ ಕಲಿತು ತಂದೆ ನಡೆಸುತ್ತಿದ್ದ ವೃತ್ತಿ ಮುಂದುವರಿಸಿದ್ದಾರೆ. ತಂದೆಗೆ ಈಗ 74 ರ ಹರೆಯ. ಅವರು ಈಗಾಗಲೇ ಸುಮಾರು 50 ವರ್ಷಗಳ ತಮ್ಮ ವೈದ್ಯಕೀಯ ವೃತ್ತಿಗೆ ಇತಿಶ್ರೀ ಹಾಡಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ.
ಇವರ ಪತ್ನಿ ಇಂಜಿನಿಯರಿಂಗ್ ಪದವೀಧರೆ ಯಾಗಿದ್ದು, ಅಮೇರಿಕಾದಲ್ಲಿ ಉನ್ನತ ವ್ಯಾಸಾಂಗ ಮುಗಿಸಿ ಅಲ್ಲೇ, ವಿಮಾನ ನಿರ್ಮಾಣ ಸಂಸ್ಥೆ ಬೋಯಿಂಗ್ ಸಂಸ್ಥೆಯಲ್ಲಿ ಕೆಲಸಮಾಡಿರುವ ಅನುಭವಿ. ಪ್ರಸ್ತುತ 4 ವರ್ಷ ಪ್ರಾಯದ ಅವಳಿ ಜವಳಿ ಮಕ್ಕಳಾದ ವಿಜಿತ್ ಮತ್ತು ವಿನಿತ್‌ಎಂಬವರನ್ನು ಪಡೆದು ಪುತ್ತೂರಿನಲ್ಲಿ ಪತಿಯೊಂದಿಗೆ ನೆಲೆಸಿದ್ದಾರೆ.

ತೈಲಬೆಲೆ ಮತ್ತು ತಾಪಮಾನ ಏರಿಕೆ, ಶಬ್ಧಮಾಲಿನ್ಯ ನಿಯಂತ್ರಣ, ಶರೀರಕ್ಕೆ ವ್ಯಾಯಾಮ ಇವಿಷ್ಟಕ್ಕಾಗಿ ನಾನು ಸೈಕಲ್ ಪ್ರಯಾಣ ಆಯ್ಕೆ ಮಾಡಿದ್ದೇನೆ. ಪುತ್ತೂರಿನಿಂದ ಬೆಳ್ತಂಗಡಿಗೆ ತಲುಪುವಷ್ಟರಲ್ಲಿ ಕಾರಿನಲ್ಲಿ ಎಷ್ಟು ಕನ್ಫರ್ಟ್ ಅನಿಸುತ್ತದೋ ಅದಕ್ಕಿಂತ ಒಂದಂಶ ಹೆಚ್ಚೇ ನನಗೆ ಈ ಸೈಕಲ್ ಯಾನ ಖುಷಿ ಕೊಡುತ್ತದೆ. ನನ್ನ ನಿತ್ಯ ಪ್ರಯಾಣಕ್ಕೆ ಕಾರಿಗಾದರೆ 500 ರೂ. ಪೆಟ್ರೋಲ್ ಬೇಕಾಗಿದ್ದು, ಆ ಪ್ರಕಾರ ನನ್ನ ಕರ್ತವ್ಯದ ದಿನ ಲೆಕ್ಕ ಮಾಡಿದರೆ ಒಂದೇ ವರ್ಷದಲ್ಲಿ ನನ್ನ ಸೈಕಲ್ ಹಣ ಬಂದುಬಿಡುತ್ತದೆ. ಆಮೇಲೆ ಮಾಮೂಲಿ ಸೈಕಲ್ ಮೈಂಟೆನೆನ್ಸ್ ಬಿಟ್ಟರೆ ಯಾವುದೇ ಖರ್ಚು ಇಲ್ಲ.
ಡಾ. ಮಹಾಂತ್, ಆಲ್ಟ್ರಾಸೌಂಡ್ ಸೋನೋಲಜಿಸ್ಟ್

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.