ಕೇಂದ್ರ ಸಚಿವ ಅನಂತ ಕುಮಾರ್ ನಿಧನ: ಶಾಲಾ ಕಾಲೇಜುಗಳಿಗೆ ರಜೆ

ಬೆಳ್ತಂಗಡಿ: ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಹೆಚ್.ಎನ್. ಅನಂತಕುಮಾರ್(59.ವ)  ಇಂದು (ನ.12) ವಿಧಿವಶರಾದರು.

ಬೆಂಗಳೂರಿನ ನಾರಾಯಣ ಶಾಸ್ತ್ರಿ ಮತ್ತು ಗಿರಿಜಾ ಶಾಸ್ತ್ರಿ ದಂಪತಿ ಪುತ್ರರಾದ ಅವರು,  ಹುಬ್ಬಳ್ಳಿಯ ಕೆಎಸ್ ಕಲಾ ಕಾಲೇಜಿನಲ್ಲಿ ಬಿಎ ಪದವಿ ಪಡೆದಿದ್ದರು. ಜೆಎಸ್ ಎಸ್ ವಿವಿಯಲ್ಲಿ ಕಾನೂನು ಪದವಿ ಪಡೆದಿದ್ದ ಅನಂತ್ ಕುಮಾರ್ ಅವರು ಆರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು.

ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಸಚಿವರಾಗಿದ್ದ ಅನಂತಕುಮಾರ್, ಬಿಜೆಪಿಯ ಅಗ್ರಗಣ್ಯ ನಾಯಕರಲ್ಲಿ ಒಬ್ಬರಾಗಿದ್ದರು. 1996ರಲ್ಲಿ ಬಿಜೆಪಿಯ ಯುವ ಮೋರ್ಚಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ 1996ರಲ್ಲಿ ಸಂಸದರಾಗಿ ಆಯ್ಕೆಯಾಗಿದ್ದರು. ಬಳಿಕ ವಾಜಪೇಯಿ ಸರ್ಕಾರದಲ್ಲಿ ವಿಮಾನಯಾನ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಮೃತರು ಪತ್ನಿ ಡಾ| ತೇಜಸ್ವಿನಿ, ಪುತ್ರಿಯರಾದ  ಐಶ್ವರ್ಯ ಮತ್ತು ವಿಜೇತ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

ನಾಳೆ ಅನಂತಕುಮಾರ್ ಅವರ ಅಂತ್ಯಕ್ರಿಯೆ ನಡೆಯಲಿದ್ದು, ಬಸವನಗುಡಿ ನ್ಯಾಶನಲ್ ಕಾಲೇಜು ಮೈದಾನದಲ್ಲಿ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಬೆಂಗಳೂರಿಗೆ ಪ್ರಧಾನಿ ಮೋದಿ ಆಗಮನ:
ಬೆಳಗ್ಗೆ 10-30ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಆಗಮಿಸಲಿದ್ದು, ಅನಂತ ಕುಮಾರ್ ಪಾರ್ಥಿವ ಶರೀರದ ದರ್ಶನ ಪಡೆಯಲಿದ್ದಾರೆ. ಅನಂತಕುಮಾರ್  ನಿಧನಕ್ಕೆ ಗಣ್ಯಾತಿ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಶಾಲಾ ಕಾಲೇಜುಗಳಿಗೆ ರಜೆ :
ಸಚಿವರ ನಿಧನದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ, ಸರಕಾರಿ ಹಾಗೂ ಖಾಸಗಿ ಶಾಲಾ ಕಾಲೇಜುಗಳಿಗೆ ಜೊತೆಗೆ ಸರಕಾರಿ ಕಚೇರಿಗಳಿಗೂ ಒಂದು ದಿನಗಳ ರಜೆಯನ್ನು ಘೋಷಿಸಿದ್ದು, ಮೂರು ದಿನಗಳ ಕಾಲ ಶೋಕಾಚರಣೆಯನ್ನು ನಡೆಸಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.