ಅಕ್ರಮ ಮರಸಾಗಾಟ: ಓರ್ವನ ಬಂಧನ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಧರ್ಮಸ್ಥಳ ಪುದುವೆಟ್ಟು ಕಾಡಿನಿಂದ ಬೀಟೆ, ಸಾಗುವಾನಿ ಮುಂತಾದ ಬೆಲೆಬಾಳುವ ಮರಗಳನ್ನು ಕಡಿದು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಪ್ರಕರಣ ಪತ್ತೆ ಹಚ್ಚಿದ ಅರಣ್ಯ ಇಲಾಖೆ ಅಧಿಕಾರಿಗಳು ಮಾರುತಿ ಓಮ್ನಿ ವಾಹನ ಸಹಿತ ಆರೋಪಿ ಮಂಗಳೂರು ತಾಲೂಕು ಉಚ್ಚಿಲ ಕೋಟೆಕಾರು ಅಜ್ಜಿನಡ್ಕ ನಿವಾಸಿ ಅಬ್ಬಾಸ್ (45ವ.) ಎಂಬವರನ್ನು ಅ. 27 ರಂದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನುಳಿದ 3 ಮಂದಿ ಆರೋಪಿಗಳಾದ ನೆಲ್ಯಾಡಿ ಕೌಕ್ರಾಡಿ ಗ್ರಾಮದ ಹೊಸಮಜಲು ನಿವಾಸಿ ಎಸ್ ಮಹಮ್ಮದ್ ಬಾವಾ ಮತ್ತು ಸುಲೈಮಾನ್, ಇಳಂತಿಲ ಗ್ರಾಮದ ಶಿಹಾಬ್ ಕಾಡಿನಲ್ಲಿ ಓಡಿ ತಲೆಮರೆಸಿಕೊಂಡಿದ್ದಾರೆ. ವಶಪಡಿಸಿಕೊಂಡು ಸೊತ್ತುಗಳ ಒಟ್ಟು ಮೌಲ್ಯ 3 ಲಕ್ಷ ರೂ. ಗಳೆಂದು ಅಂದಾಜಿಸಲಾಗಿದೆ.
ಬೆಳ್ತಂಗಡಿ ಹಾಗೂ ಉಪ್ಪಿನಂಗಡಿ ವಲಯ ಹಾಗೂ ಇತರ ಪ್ರದೇಶಗಳ ಅರಣ್ಯ ಪ್ರದೇಶದಿಂದ ಬೆಲೆಬಾಳುವ ಬೀಟೆ ಹಾಗೂ ಇನ್ನಿತರ ಮರಗಳನ್ನು ಕಡಿದು ಅಕ್ರಮವಾಗಿ ಸಾಗಾಟ ಮಾಡುವ ವೃತ್ತಿಪರ ಮರಗಳ್ಳರ ಈ ತಂಡವನ್ನು ಪತ್ತೆ ಹಚ್ಚುವ ಸಲುವಾಗಿ ಕಳೆದ ಒಂದು ತಿಂಗಳಿಂದ ಸತತವಾಗಿ ಹೊಂಚು ಹಾಕಿ ಪ್ರಯತ್ನಿಸುತ್ತಿದ್ದರು. ಅಂತೆಯೇ ಅಂದು ಕೂಡ 4 ತಂಡಗಳಾಗಿ ಗಸ್ತು ಸಂಚರಿಸುತ್ತಿದ್ದ ವೇಳೆ ಧರ್ಮಸ್ಥಳ ಗ್ರಾಮದ ಕಲ್ಲೇರಿ ಎಂಬಲ್ಲಿ ಧರ್ಮಸ್ಥಳ ಮುಂಡಾಜೆ ಮೀಸಲು ಅರಣ್ಯ ಪ್ರದೇಶದ ಕಡೆಯಿಂದ ಬರುತ್ತಿದ್ದ ಮಾರುತಿ ಒಮ್ನಿ ಕಾರನ್ನು ತಡೆದುನಿಲ್ಲಿಸಿದಾಗ ಈ ಅಕ್ರಮ ಬಯಲಾಗಿದೆ.
ಆರೋಪಿಗಳು ಈ ಹಿಂದೆ ಧರ್ಮಸ್ಥಳ, ಮುಂಡಾಜೆ, ರೆಖ್ಯ ಮುಂತಾದ ರಕ್ಷಿತಾರಣ್ಯದಿಂದ ಬೆಲೆಬಾಳುವ ಸಾಗುವಾನಿ, ಬೀಟೆ ಮುಂತಾದ ಮರಗಳನ್ನು ಕಡಿದು ಸಾಗಾಟ ಮಾಡಿದ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಖಚಿತಗೊಂಡಿದೆ.
ಸದ್ರಿ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಉಜಿರೆ ಶಾಖಾ ಉಪ ವಲಯ ಅರಣ್ಯಾಧಿಕಾರಿ ವಿನೋದ್ ಎಸ್ ಗೌಡ, ಹಾಗೂ ಉಪ ವಲಯ ಅರಣ್ಯಾಧಿಕಾರಿಗಳಾದ ರವೀಂದ್ರ ಅಂಕಲಗಿ, ರಾಜೇಶ್ ಎಸ್, ಹರಿಪ್ರಸಾದ್, ಭವಾನಿ ಶಂಕರ್ ಬಿ.ಜೆ, ಅರಣ್ಯ ರಕ್ಷಕರಾದ ಶರತ್ ಶೆಟ್ಟಿ, ಪಾಂಡುರಂಗ ಕಮತಿ, ರಾಘವೇಂದ್ರ ಪ್ರಸಾದ್, ಪಿ.ಶಂಕರ್ ಮತ್ತು ಅರಣ್ಯ ವೀಕ್ಷಕ ಸದಾನಂದ ಇವರು ಭಾಗಿಯಾಗಿದ್ದಾರೆ.
ಪ್ರಕರಣದ ಮುಂದಿನ ತನಿಖೆಯನ್ನು ಡಿಎಫ್‌ಒ ಡಾ| ಕರಿಕಲನ್ ಹಾಗೂ ಮಂಗಳೂರು ಉಪ ವಿಭಾಗದ ಎಸಿಎಫ್ ಶಂಕರೇಗೌಡ ಇವರ ನಿರ್ದೇಶನದಂತೆ ಬೆಳ್ತಂಗಡಿ ಆರ್‌ಎಫ್‌ಒ ಸುಬ್ಬಯ್ಯ ನಾಯ್ಕ್ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಗರಗಾಸು ಮತ್ತು ಬೇಕಾದ ಅಯುಧಗಳೊಂದಿಗೆ ರಾತ್ರಿ ಕಾಡು ಪ್ರವೇಶಿಸುವ ಈ ತಂಡ ಬೆಳಗ್ಗಿನ ಜಾವಕ್ಕೂ ಮುನ್ನ ಮರವನ್ನು ಉರುಳಿಸಿ ತುಂಡುಗಳಾಗಿ ಪರಿವರ್ತಿಸಿ ವಾಹನಕ್ಕೆ ತುಂಬಿ ಯಶಶ್ವಿಯಾಗಿ ಸಾಗಾಟ ಮಾಡುತ್ತಿದ್ದರು. ಅಂದು ರಾತ್ರಿ 11 ರ ಗಂಟೆಗೆ ಕಾಡು ಪ್ರವೇಶಿಸಿದ್ದ ನಾಲ್ವರ ತಂಡದ ಬಗ್ಗೆ ಖಚಿತ ಮಾಹಿತಿ ಪಡೆದಿದ್ದ ಇಲಾಖೆ ಬೆಳಗ್ಗಿನ ಜಾವಾ 3 ಗಂಟೆಗೆ ಕೆಲಸ ಮುಗಿಸಿ ಹೊರಬರುತ್ತಿದ್ದ ತಂಡವನ್ನು ಎಡೆಮುರಿಕಟ್ಟಿದೆ. ಓಮ್ನಿ ವಾಹನದ ಒಳಗಿನ ಎಲ್ಲಾ ಸೀಟುಗಳನ್ನು ತೆಗೆದು ಒಳಗೆ ಪೂರ್ತಿ ದಿಮ್ಮಿಗಳನ್ನು ತುಂಬಿಕೊಳ್ಳಲಾಗಿದ್ದು ಚಾಲಕನಿಗೂ ನೆಟ್ಟಗೆ ಕುಳಿತುಕೊಳ್ಳಲಾಗದಷ್ಟು ಜಾಗ ಇಲ್ಲದ ವಾಹನದಲ್ಲಿ ನಾಲ್ವರು ಹೇಗೆ ಪ್ರಯಾಣಿಸುತ್ತಿದ್ದರು ಎಂಬುದೇ ಆಶ್ಚರ್ಯದ ಸಂಗತಿಯಾಗಿದೆ. ವಾಹನದಲ್ಲಿದ್ದ ಮರದ ದಿಮ್ಮಿಗಳ ಮೇಲೆ ಕಪ್ಪು ಬಣ್ಣದ ಟರ್ಪಾಲ್ ಮುಚ್ಚಿ ಈ ತಂಡ ಸಾಗಾಟ ಮಾಡುತ್ತಿದ್ದರು. ಇದೇ ರೀತಿ ಮಾಡುತ್ತಿದ್ದ ಈ ತಂಡದ ಕೃತ್ಯ ಅತ್ಯಂದ ತ್ರಾಸದಾಯಕ ವೃತ್ತಿಯಾಗಿದ್ದರೂ ರಾತ್ರಿ ಬೆಳಗಾಗೂದರೊಳಗೆ ಲಕ್ಷಾಂತರ ರೂ. ಹಣ ಸಂಪಾದಿಸುತ್ತಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.