ಬೆಳ್ತಂಗಡಿ ಟೆಲಿಕಾಂ ಸಿಬಂದಿ ತಿಮ್ಮಪ್ಪ ಪೂಜಾರಿ ಕೊಲೆ ಪ್ರಕರಣ: ಅಪರಾಧಿಗೆ ಜೀವಾವಧಿ ಶಿಕ್ಷೆ

ಬೆಳ್ತಂಗಡಿ: 2017 ಜೂನ್. 2 ರಂದು ರಾತ್ರಿ ಅತೀ ಕ್ಷುಲ್ಲಕ ಕಾರಣಕ್ಕೆ ಸಂತೆಕಟ್ಟೆ ಚಾಮುಂಡಿ ಎಂಟರ್‌ಪ್ರೈಸಸ್ ಹಿಂಬದಿ ಅಲ್ಲಾಟಬೈಲು ಬಾಡಿಗೆ ಮನೆ ನಿವಾಸಿ ಟೆಲಿಕಾಂ ಇಲಾಖೆ ಉದ್ಯೋಗಿ ತಿಮ್ಮಪ್ಪ ಪೂಜಾರಿ (52ವ.) ಅವರನ್ನು ಪತ್ನಿಯ ಎದುರೇ ಅತ್ಯಂತ ಬರ್ಭರವಾಗಿ ಮಾರಕಾಯುಧದಿಂದ ಕಡಿದು ಕೊಲೆ ಮಾಡಿದ ಆರೋಪಿ ಬಂಗಾಡಿ ಇಂದಬೆಟ್ಟು ಎರ್ಮಾಳ ನಿವಾಸಿ, ಕಾಲೇಜು ವಿದ್ಯಾರ್ಥಿ ಚಂದ್ರಶೇಖರ ಪಿ (21ವ.) ಅವರಿಗೆ ಕಠಿಣ ಜೀವಾವಧಿ ಶಿಕ್ಷೆ ವಿಧಿಸಿ ಮಂಗಳೂರು ಪಿ Pಜಿಲ್ಲಾ ಸತ್ಯ ನ್ಯಾಯಾಲಯ ಅ. 23 ರಂದು ತೀರ್ಪು ನೀಡಿದೆ.
ಶಿಕ್ಷೆಯ ಪ್ರಮಾಣ:
ಕೊಲೆ ಕೃತ್ಯದ ಅಪರಾಧಕ್ಕೆ ಐಪಿಸಿ 302 ಅನ್ವಯ ಕಠಿಣ ಜೀವಾವಧಿ ಶಿಕ್ಷೆ, ಮತ್ತು 10 ಸಾವಿರ ರೂ. ದಂಡ, ದಂಡ ತಪ್ಪಿದರೆ 6 ತಿಂಗಳ ಸಾದಾ ಶಿಕ್ಷೆ, ತಿಮ್ಮಪ್ಪ ಪೂಜಾರಿ ಕುಟುಂಬದ ಸದಸ್ಯರಿಗೆ ಜೀವ ಬೆದರಿಕೆ ಒಡ್ಡಿದ ಅಪರಾಧಕ್ಕೆ ಐಪಿಸಿ 506 ಅನ್ವಯ 5 ವರ್ಷಗಳ ಕಠಿಣ ಸಜೆ, ಮತ್ತು 5 ಸಾವಿರ ರೂ. ದಂಡ, ಹಾಗೂ ದಂಡ ತೆರಲು ತಪ್ಪಿದರೆ 3 ತಿಂಗಳ ಸಾದಾ ಸಜೆ ನೀಡಿ ನ್ಯಾಯಾಧೀಶರು ತೀರ್ಪಿತ್ತಿದ್ದಾರೆ. ಅಲ್ಲದೆ ತಿಮ್ಮಪ್ಪ ಪೂಜಾರಿ ಅವರ ಪತ್ನಿ ಮತ್ತು ಮಕ್ಕಳು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಪರಿಹಾರ ಪಡೆಯಲು ಅರ್ಹರು ಎಂದೂ ತೀರ್ಪಿನಲ್ಲಿ ತಿಳಿಸಲಾಗಿದೆ.
23 ಸಾಕ್ಷಿಗಳ ವಿಚಾರಣೆ:
ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 23 ಸಾಕ್ಷಿಗಳ ವಿಚಾರಣೆ ನಡೆಸಲಾಗಿದೆ. ಮೃತ ಪತ್ನಿ ಘಟನೆಯ ಪ್ರತ್ಯಕ್ಷ ಸಾಕ್ಷಿಯಾಗಿದ್ದರು. ಪತಿಯ ಆರ್ತನಾದ ಕೇಳುತ್ತಲೇ ಮನೆಯಿಂದ ಹೊರಗೋಡಿ ಬಂದಿದ್ದ ಪತ್ನಿ ಚಂಪಾವತಿ ನೋಡನೋಡುತ್ತಿದ್ದಂತೆ ಪತಿಯನ್ನು ಅಪರಾಧಿ ಚಂದ್ರಶೇಖರ ಪಿ ಕಡಿದು ಕೊಲೆಮಾಡುವುದನ್ನು ಸ್ವತಹ ಕಂಡಿದ್ದರು. ಅಲ್ಲದೆ ಎಲ್ಲ ಜನ ನಿಂತು ನೋಡುತ್ತಿರುವಂತೆ ಅಪರಾಧಿ ಅತ್ಯಂತ ಸಹಜ ಸ್ಥಿತಿಯಲ್ಲಿ ದ್ವಿಚಕ್ರ ವಾಹನ ಏರಿ ಜನರ ನಡುವೆಯೇ ಅಲ್ಲಿಂದ ಹೋಗಿದ್ದನ್ನೂ ಅವರು ವೀಕ್ಷಿಸಿದ್ದರು. ಅಲ್ಲದೆ ಮೃತರ ಇಬ್ಬರು ಎಳೆಯ ಮಕ್ಕಳು ಹೇಳಿಕೆಯನ್ನು ಬೆಳ್ತಂಗಡಿ ಮ್ಯಾಜಿಸ್ಟ್ರೇಟ್ ಸಿಆರ್‌ಪಿಸಿ 164 ಅನ್ವಯ ಪಡೆದುಕೊಂಡಿತ್ತು. ಇಡೀ ಪ್ರಕರಣದಲ್ಲಿ ತೀರ್ಪು ಹೊರಬರಲು ಈ ಎಲ್ಲ ಅಂಶಗಳು ಪ್ರಭಲವಾದ ಸಾಕ್ಷಿಯಾದರೆ, ರಾಸಾಯನಿಕ ತಜ್ಞೆ ಡಾ. ಗೀತಾಲಕ್ಷ್ಮೀ ಕೂಡ ಪ್ರಕರಣದಲ್ಲಿ ಸಾಕ್ಷಿ ನುಡಿದಿದ್ದರು. ಇದೆಲ್ಲವನ್ನೂ ಪರಿಗಣಿಸಿದ್ದ ನ್ಯಾಯಾಲಯ ಚಂದ್ರಶೇಖರ್ ಅಪರಾಧಿ ಎಂದು ಸಾಬೀತುಪಡಿಸಿದೆ. ಪ್ರಾರಂಭದಲ್ಲಿ ಪ್ರಕರಣದ ವಿಚಾರಣೆಯನ್ನು ನ್ಯಾಯಾಧೀಶ ಕೆ.ಎಸ್ ಬೀಳಗಿ ನಡೆಸಿದ್ದರೆ ತದನಂತರದಲ್ಲಿ ಕಡ್ಲೂರು ಸತ್ಯನಾರಾಯಣಾರ್ಯ ಮುಂದುವರಿಸಿದ್ದರು.
ಕೊಲೆಕೃತ್ಯದ ಸಂಕ್ಷಿಪ್ತ ವಿವರ:
ಜೂ.2 ರ ರಾತ್ರಿ ಬಾಡಿಗೆ ಮನೆಯಿಂದ ಪೇಟೆ ಕಡೆಗೆ ಹೊರಟಿದ್ದ ತಿಮ್ಮಪ್ಪ ಪೂಜಾರಿ ಅವರನ್ನು ಬೆನ್ನತ್ತಿಬಂದ ಅವರ ರೂಮಿನ ಪಕ್ಕದ ರೂಮಿನಲ್ಲಿ ತಾಯಿಯೊಂದಿಗೆ ವಾಸವಾಗಿದ್ದ ಆರೋಪಿ ಚಂದ್ರಶೇಖರ ರಾತ್ರಿ 7 ರಿಂದ 7.15 ರ ಮಧ್ಯೆ ಮಾರಕಾಯುಧದಿಂದ ಕಡಿದು ಬರ್ಭರವಾಗಿ ಕೊಲೆಗೈದಿದ್ದರು.
ಮೃತರ ಪತ್ನಿ ಸಂಪಾವತಿ ಕಣ್ಣಮುಂದೆಯೇ ನಡೆದ ಈ ಕೃತ್ಯದ ಬಗ್ಗೆ ಅವರು ಠಾಣೆಗೆ ದೂರು ನೀಡಿದ್ದರು.ಅಂದು ಅವರು ನೀಡಿದ್ದ ದೂರಿನಲ್ಲಿ, ತನ್ನ ಪತಿ ಎಂದಿನಂತೆ ಕೆಲಸ ಮುಗಿಸಿ ಮನೆಗೆ ಬಂದವರೇ ಮಕ್ಕಳಿಬ್ಬರಿಗೆ ತಿಂಡಿ ತರಲು ಮತ್ತೆ ಪೇಟೆಗೆ ಹೊರಟು ಬಂದಿದ್ದರು. ದಾರಿ ಮಧ್ಯೆ ಪತಿಯನ್ನು ತಡೆದು ನಿಲ್ಲಿಸಿದ್ದ ನೆರೆಮನೆ ನಿವಾಸಿ ಮೂಲತಃ ತಮಿಳುನಾಡು ನಿವಾಸಿ ಏಕಾಏಕಿ ಅವರ ಮೇಲೆರಗಿ ಕತ್ತಿಯಿಂದ ಪತಿಯ ಮುಖಕ್ಕೆ ಮತ್ತು ಕುತ್ತಿಗೆಗೆ ಕಡಿದಿದ್ದಾರೆ. ಬೊಬ್ಬೆ ಕೇಳಿ ನಾನು ಮತ್ತು ಅಕ್ಕಪಕ್ಕದವರು ಓಡಿ ಬಂದಾಗ ನಮಗೂ ಕತ್ತಿ ಬೀಸಿ ಹತ್ತಿರ ಸುಳಿಯದಂತೆ ಬೆದರಿಕೆ ಹಾಕಿದನು. ಗಾಯದ ಏಟಿಕೆ ನೆಲಕ್ಕೆ ಉರುಳಿದ್ದ ಪತಿಗೆ ಯದ್ವತದ್ವಾ ಕಡಿದ ಆರೋಪಿ ಜನ ಜಮಾಯಿಸುತ್ತಿದ್ದಂತೆ ಕತ್ತಿಯನ್ನು ಅಲ್ಲೇ ಎಸೆದು ಸ್ಥಳದಿಂದ ತನ್ನ ಬೈಕ್ ಏರಿ ಪರಾರಿಯಾಗಿದ್ದರು ಎಂದು ತಿಳಿಸಿದ್ದರು.
ನಾಗೇಶ್ ಕದ್ರಿ ಸಲ್ಲಿಸಿದ್ದ ಚಾರ್ಚ್‌ಶೀಟ್‌ನ ಇನ್ನೊಂದು ಪ್ರಕರಣದಕ್ಕೂ ಜೀವಾವಧಿ ಶಿಕ್ಷೆ:
ಈಗಾಗಲೇ ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ನಾಗೇಶ್ ಕದ್ರಿ ನೇತೃತ್ವದ ಪೊಲೀಸ್ ತನಿಖಾ ತಂಡ ಈ ವರ್ಷ ಸಲ್ಲಿಸಿದ್ದ ಚಾರ್ಚ್‌ಶೀಟ್‌ಗೆ ಮತ್ತೊಂದು ಜೀವಾವಧಿ ಶಿಕ್ಷೆ ಪ್ರಕಟಗೊಳ್ಳುವ ಮೂಲಕ ಈ ಪ್ರಕರಣ ನಾಲ್ಕನೇ ಪ್ರಕರಣವಾಗಿದೆ. ಈಗಾಗಲೇ ಅವರು ತನಿಖೆ ನಡೆಸಿದ ದಿಡುಪೆ ಅತ್ಯಾಚಾರ ಪ್ರಕರಣದ ಅರೋಪಿಗೆ ಜೀವಾವಧಿ ಶಿಕ್ಷೆ, ಕೊಯ್ಯೂರು ಕೊಲೆಪ್ರಕರಣದ ಆರೋಪಿಗೆ ಜೀವಾವಧಿ ಶಿಕ್ಷೆ, ಉಜಿರೆ ಕೊಲೆ ಪ್ರಕರಣದ ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟಗೊಂಡಿದ್ದು ಎಸ್‌ಪಿ ಅವರಿಂದ ನಗದು ಪುರಸ್ಕಾರ ಲಭಿಸಿತ್ತು. ಇದೀಗ ತಿಮ್ಮಪ್ಪ ಪೂಜಾರಿ ಕೊಲೆ ಪ್ರಕರಣದ ಆರೋಪವೂ ಸಾಬೀತಾಗಿದ್ದು ಆರೋಪಿಗೆ ಜೀವಾವಧಿ ಶಿಕ್ಷೆ ಪ್ರಕಟಗೊಂಡಿದೆ. ಅಂದು ಘಟನಾ ಸ್ಥಳಕ್ಕೆ ರಾತ್ರಿಯೇ ಆಗಿನ ಎಸ್.ಪಿ. ಭೂಷಣ್ ಗುಲಾಬ್ ರಾವ್ ಬೊರಸೆ ಮೊದಲಾದ ಅಧಿಕಾರಿಗಳು ಭೇಟಿ ನೀಡಿದ್ದರು. ಇನ್ಸ್‌ಪೆಕ್ಟರ್ ನಾಗೇಶ್ ಕದ್ರಿ ಮತ್ತು ಘಟನೆಯ ದಿನ ಬೆಳ್ತಂಗಡಿ ಪ್ರಭಾರ ಕರ್ತವ್ಯದಲ್ಲಿದ್ದ ಇನ್ಸ್‌ಪೆಕ್ಟರ್, ಜಿಲ್ಲಾ ವಿಶೇಷ ದಳದ(ಡಿಎಸ್‌ಬಿ) ಇನ್ಸ್‌ಪೆಕ್ಟರ್ ಕೃಷ್ಣಯ್ಯ ಪ್ರಕರಣ ತನಿಖೆ ನಡೆಸಿದ್ದರು. ನಾಗೇಶ್ ಕದ್ರಿ ಅವರ ತನಿಖಾ ತಂಡದಲ್ಲಿ, ಅಂದು ಎಫ್‌ಐಆರ್ ದಾಖಲಿಸಿದ್ದ ಸಿಬಂದಿ ದುರ್ಗಾದಾಸ್, ತನಿಖೆಯಲ್ಲಿ ಎಸ್‌ಐ ರವಿ, ಸಿಬಂದಿಗಳಾದ ವೆಂಕಟೇಶ್ ನಾಯ್ಕ್, ದೇವಪ್ಪ ಎಎಸ್‌ಐ, ಚಾಲಕ ನವಾಝ್ ಬುಡ್ಕಿ ಮೊದಲಾದವರು ಕಾರ್ಯಾಚರಿಸಿದ್ದರು.
ಪತ್ನಿ ಇಬ್ಬರು ಎಳೆಯ ಮಕ್ಕಳೊಂದಿಗೆ ವಾಸವಾಗಿದ್ದ ತಿಮ್ಮಪ್ಪ ಪೂಜಾರಿ ಮೂಲತಃ ಮೂಡಿಗೆರೆ ತಾಲೂಕು ಮುತ್ತಿಗೆ ನಿವಾಸಿಯಾಗಿದ್ದ ತಿಮ್ಮಪ್ಪ ಪೂಜಾರಿ ಪತ್ನಿ ಸಂಪಾವತಿ ಯಾನೆ ಚಂಪಾವತಿ ಅವರ ಜೊತೆ ಸಂತೆಕಟ್ಟೆಯ ಸುಧೀರ್ ಎಂಬವರ ಕಟ್ಟಡದಲ್ಲಿ ಬಾಡಿಗೆಗೆ ನೆಲೆಸಿದ್ದರು. ಸಂಪಾವತಿ ಬೆಳ್ತಂಗಡಿ ತಾಲೂಕಿನ ಪಡಂಗಡಿಯವರು. ದಂಪತಿಗೆ ತನ್ವಿ ಮತ್ತು ಋಷಿಕ್ ಎಂಬಿಬ್ಬರು ಮಕ್ಕಳಿದ್ದಾರೆ. ಅತ್ಯಂತ ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದ ತಿಮ್ಮಪ್ಪ ಪೂಜಾರಿ ವೃತ್ತಿಯಲ್ಲಿ ಮತ್ತು ಸಮಾಜದಲ್ಲಿ ಎಲ್ಲರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದರು. 27 ವರ್ಷಗಳಿಂದ ಕೇಂದ್ರ ಸರಕಾರಿ ನೌಕರಿ ಪಡೆದಿದ್ದ ಅವರು 2018 ಜೂನ್ ತಿಂಗಳಲ್ಲಿ ವಯೋ ನಿವೃತ್ತರಾಗಲಿದ್ದರು. 10 ವರ್ಷಗಳ ಹಿಂದೆ ಪಡಂಗಡಿಗೆ ವರ್ಗಾವಣೆಯಾಗಿ ಬಂದಿದ್ದ ವೇಳೆ ಚಂಪಾವತಿಯೊಂದಿಗೆ ವಿವಾಹವಾಗಿತ್ತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.