ಅ.29: ಪ್ರಗತಿ ರಕ್ಷಾ ಕವಚ ಯೋಜನೆ ಚಾಲನೆ: ಧರ್ಮಸ್ಥಳಕ್ಕೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ 40 ಲಕ್ಷ ಸದಸ್ಯರಿದ್ದು, ಸ್ವ ಸಹಾಯ ಸಂಘದಲ್ಲಿ ಸಾಲವನ್ನು ಪಡೆಯುವವರಿಗೆ ವಿಮಾ ಭದ್ರತೆ ನೀಡುವ ಹಿನ್ನಲೆಯಲ್ಲಿ ಎಲ್‌ಐಸಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ನೂತನ ವಿಮಾ ಯೋಜನೆಯಾದ `ಪ್ರಗತಿ ರಕ್ಷಾ ಕವಚ ಯೋಜನೆ’ಯನ್ನು ಅ.29 ರಂದು ಕೇಂದ್ರ ಸರಕಾರದ ರಕ್ಷಣಾ ಸಚಿವೆ ನಿರ್ಮಾಲಾ ಸೀತಾರಾಮನ್ ಅವರು ಉದ್ಘಾಟಿಸಲಿದ್ದಾರೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ನುಡಿದರು.
ಅವರು ಅ.23 ರಂದು ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಸ್ವಸಹಾಯ ಸಂಘಗಳಿಗೆ ಕಿರು ಆರ್ಥಿಕ ಯೋಜನೆಯಲ್ಲಿ ಬ್ಯಾಂಕಿನ ಮೂಲಕ ಸಾಲವನ್ನು ನೀಡಲಾಗುತ್ತಿದ್ದು, ಸಾಲದ ಭದ್ರತೆಗಾಗಿ ವಿಮೆಯನ್ನು ಮಾಡಲಾಗುತ್ತದೆ. ಯಾವುದಾದರೂ ಸಂದರ್ಭದಲ್ಲಿ ಸಾಲಗಾರ ಅಕಾಲಿಕವಾಗಿ ಮೃತಪಟ್ಟರೆ ಅವರ ಸಾಲವನ್ನು ವಿಮಾ ಕಂಪೆನಿ ಭರಿಸಿ ಉಳಿದ ಹಣವನ್ನು ಅವರ ಕುಟುಂಬಕ್ಕೆ ನೀಡುತ್ತದೆ ಎಂದು ವಿವರಿಸಿದರು.
ಮಂಜೂಷಾ ವಸ್ತು ಸಂಗ್ರಹಾಲಯ: ಧರ್ಮಸ್ಥಳದ ವಸ್ತು ಸಂಗ್ರಹಾಲಯದಲ್ಲಿ ಸುಮಾರು 200 ವರ್ಷಗಳ ಹಳೆಯ ಅಮೂಲ್ಯ ವಸ್ತುಗಳು ಇವೆ. ಇಂದಿನ ಆಧುನಿಕ ಪರಿರ್ವತನೆಯ ಯುಗದಲ್ಲಿ ನಮ್ಮ ಸಂಸ್ಕೃತಿ, ಪರಂಪರೆಯು ಕೃಷಿ, ವೇಷಭೂಷಣ, ತಾಳೆಗರಿ, ಸೇರಿದಂತೆ ಆನೇಕ ಪ್ರಾಚೀನ ಚಾರಿತ್ರಿಕ ವಸ್ತುಗಳು ನಾಶವಾಗುತ್ತಿದ್ದು, ಇವುಗಳನ್ನು ರಕ್ಷಿಸುವ ಕಾರ್ಯವನ್ನು ಧರ್ಮಸ್ಥಳದ ವತಿಯಿಂದ ಮಾಡಲಾಗುತಿದೆ ಎಂದು ತಿಳಿಸಿದರು.
ಧರ್ಮಸ್ಥಳಕ್ಕೆ ಬರುವ ಯಾತ್ರಿಕರಿಗೆ ದೇವರ ದರ್ಶನದ ಬಳಿಕ ಉಳಿದ ಸಮಯವನ್ನು ಸಮರ್ಪಕವಾಗಿ ವಿನಿಯೋಗಿಸಲು ಮಂಜೂಷ ವಸ್ತು ಸಂಗ್ರಾಹಲಕ್ಕೆ ಬಂದು ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದು. ಕ್ಷೇತ್ರಕ್ಕೆ ಪ್ರತಿ ವರ್ಷ ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಬರುತ್ತಿದ್ದು, ಇವರು ಇಲ್ಲಿಗೆ ಭೇಟಿ ನೀಡುವುದರಿಂದ ಅವರ ಜ್ಞಾನದ ಶಕ್ತಿ ಹೆಚ್ಚುತ್ತದೆ. ತಿರುಪತಿಯಲ್ಲಿ ಇದೇ ರೀತಿಯ ವಸ್ತು ಸಂಗ್ರಹಾಲಯವಿದೆ. ಧರ್ಮಸ್ಥಳಕ್ಕೆ ಬರುವ ಅಸಂಖ್ಯಾತ ಜನಸಾಮಾನ್ಯರನ್ನು ಗಮನದಲ್ಲಿಟ್ಟುಕೊಂಡು ಇದನ್ನು ನಿರ್ಮಿಸಲಾಗಿದೆ. ಭಾರತದ ಭವ್ಯ ಪರಂಪರೆಯನ್ನು ಎಲ್ಲರಿಗೂ ಪರಿಚಯಿಸುವ ತಾಣವಾಗಿದೆ ಎಂದು ತಿಳಿಸಿದರು.
ರೂ.23.50 ಕೋಟಿ ಕಾಮಗಾರಿ: ಈ ಸಂದರ್ಭದಲ್ಲಿ ಮಾತನಾಡಿದ ಲೋಕೋಪಯೋಗಿ ಇಲಾಖೆಯ ಅಧೀಕ್ಷಕ ಅಭಿಯಂತರ ಕಾಂತರಾಜು ಅವರು ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳದ ಭಕ್ತರ ಅನುಕೂಲಕ್ಕಾಗಿ ಸರಕಾರದಿಂದ ರೂ.23.50 ಕೋಟಿಯ ಅಭಿವೃದ್ಧಿ ಕಾಮಗಾರಿಗಳು ಮಂಜೂರಾಗಿದ್ದು, ಟೆಂಡರ್ ಹಂತದಲ್ಲಿದೆ. ಡಿಸೆಂಬರ್‌ನಲ್ಲಿ ಕಾಮಗಾರಿ ಆರಂಭಿಸಲಾಗುವುದು ಎಂದು ತಿಳಿಸಿದರು.
ನೇತ್ರಾವತಿಯಿಂದ ಮುಖ್ಯ ದ್ವಾರದವರೆಗೆ 2 ಕಿ.ಮೀ ಚತುಷ್ಪಥ ರಸ್ತೆ, ಪುಟ್‌ಫಾತ್, ಒಳಚರಂಡಿ ನಿರ್ಮಾಣ, ಗಂಗೋತ್ರಿಯಿಂದ ಸ್ನಾನ ಘಟ್ಟದವರೆಗೆ ರಸ್ತೆ ಅಗಲೀಕರಣ, ಕೆಎಸ್ಸಾರ್ಟಿಸಿ ಡಿಪ್ಪೋಗೆ ಹೋಗುವ ರಸ್ತೆ ಮತ್ತು ರತ್ನಗಿರಿ ಸಂಪರ್ಕ ರಸ್ತೆಯನ್ನು 7 ಮೀಟರ್ ಅಗಲೀಕರಣ ಮಾಡಲಾಗುವುದು. ಮುಂದಿನ ಮಳೆಗಾಲದ ಒಳಗೆ ಎಲ್ಲಾ ಕಾಮಗಾರಿಗಳು ಪೂರ್ತಿಗೊಳ್ಳುತ್ತದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಡಿ. ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಶಿವಪ್ರಸಾದ ಅಜಿಲ, ಇಂಜಿನಿಯರ್ ತೌಸೀಫ್‌ಅಹಮ್ಮದ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.