ಸಮಸ್ಯೆಗಳ ಸುಳಿಯಲ್ಲಿ ನಮ್ಮ ಜೀವನ

ಸುನಿಲ್ ಬೆಳ್ತಂಗಡಿ

ಈ ಜೀವನ ಹೂಗಳ ಹಾಸಿಗೆಯಲ್ಲ (ಮನುಷ್ಯನಾಗಿ ಹುಟ್ಟಿದ ಮೇಲೆ ಸಮಸ್ಯೆಗಳು, ಕಷ್ಟ ಸಂಕಷ್ಟಗಳು ಇದ್ದೇ ಇರುತ್ತವೆ. ಅವು ಜೀವನದ ಒಂದು ಭಾಗ ಕೂಡ. ಕೆಲವು ಸಮಸ್ಯೆಗಳು ಕೇವಲ ತಾತ್ಕಾಲಿಕ, ಹೆಚ್ಚಿನವು ಬಗೆಹರಿಸಲು ಸಾಧ್ಯವಾಗುವಂತಹ ಸಮಸ್ಯೆಗಳು, ಕೆಲವು ನಿಜವಾಗಿಯೂ ಸಮಸ್ಯೆಗಳಲ್ಲ ಬದಲಾಗಿ ನಾವು ಸಮಸ್ಯೆಗಳು ಎಂದು ಹಣೆಪಟ್ಟಿ ಕಟ್ಟಿಕೊಂಡಂತವುಗಳು. ವೈಯಕ್ತಿಕ ಸಮಸ್ಯೆಗಳು, ಕೌಟುಂಬಿಕ ಸಮಸ್ಯೆಗಳು, ಸಾಮಾಜಿಕ ಸಮಸ್ಯೆಗಳು, ರಾಜಕೀಯ ಸಮಸ್ಯೆಗಳು, ಆರ್ಥಿಕ ಸಮಸ್ಯೆಗಳು ಹೀಗೆ ಅನೇಕ ವಿಧವಾದ ಸಮಸ್ಯೆಗಳಿವೆ. ಹಣ ಇಲ್ಲದಿದ್ದರೆ ಸಮಸ್ಯೆ; ಹಣ ಜಾಸ್ತಿ ಇದ್ದರೂ ಸಮಸ್ಯೆ. ಮದುವೆ ಆಗದಿದ್ದರೆ ಸಮಸ್ಯೆ; ಮದುವೆ ಆದರಂತು ಇನ್ನೂ ಸಮಸ್ಯೆ.
ಸಮಸ್ಯೆಯ ಸುಳಿಯಲ್ಲಿ ಸಿಕ್ಕಿಹಾಕಿಕೊಂಡ ವ್ಯಕ್ತಿಯಲ್ಲಿ ನಾವು ನಿಮಗೆ ಏನು ಸಮಸ್ಯೆ? ಎಂದು ಇತರರಲ್ಲಿ ಕೇಳುವುದು ಸಹಜ ಗುಣ. ಆದರೆ ಆ ವ್ಯಕ್ತಿಯು ನಿಜವಾಗಿಯೂ ಸಮಸ್ಯೆಯಿಂದ ಒದ್ದಾಡುತ್ತಿದ್ದರೂ ಏನು ಇಲ್ಲ ಎಂದೋ ಅಥವಾ ಕೆಲವೊಮ್ಮೆ ನಮ್ಮಿಂದ ಆ ಸಮಸ್ಯೆಗಳಿಗೆ ಪರಿಹಾರ ಇಲ್ಲ ಎಂದು ಮನಗಂಡ ಆ ವ್ಯಕ್ತಿ ತನ್ನ ನಿಜವಾದ ಸಮಸ್ಯೆಯನ್ನು ನಮ್ಮಲ್ಲಿ ಹೇಳಿಕೊಳ್ಳುವುದಿಲ್ಲ. ಕೆಲವರು ನಾನೇ ದೊಡ್ಡ ಸಮಸ್ಯೆ ಎಂದು ತಮಾಷೆಗೆ ಹೇಳುವುದುಂಟು. ಇನ್ನು ಕೆಲವರು ನನ್ನ ಸಮಸ್ಯೆ ನನಗೆ, ನಿನ್ನ ಸಮಸ್ಯೆ ನಿನಗೆ ಎಂದು ಆಲೋಚಿಸಿ ಸುಮ್ಮನಾಗುತ್ತಾರೆ. ಸಮಸ್ಯೆಯು ವ್ಯಕ್ತಿಯಿಂದ ವ್ಯಕ್ತಿಗೆ, ಕಾಲದಿಂದ ಕಾಲಕ್ಕೆ, ಸಂದರ್ಭಕ್ಕೆ ತಕ್ಕಹಾಗೆ ಭಿನ್ನವಾಗಿರುತ್ತದೆ.
ತಜ್ಞರ ಪ್ರಕಾರ ನಗು ಹಾಗೂ ಶಾಂತತೆಯಿಂದ ಹಲವು ಸಮಸ್ಯೆಗಳಿಗೆ ಇತೀಶ್ರೀ ಹಾಡಬಹುದು. ನಮ್ಮ ನಗುವಿನಿಂದ ಹಲವು ಸಮಸ್ಯೆಗಳನ್ನು ನಾವು ಬಗೆಹರಿಸಿಕೊಳ್ಳಬಹುದು ಅಂತೆಯೇ ಶಾಂತ ಸ್ವಭಾವದಿಂದ ಸಮಸ್ಯೆ ಬರುವ ಸಂದರ್ಭಗಳನ್ನು ತಪ್ಪಿಸಬಹುದು. ಜೀವನದಲ್ಲಿ ಸಮಸ್ಯೆಗಳು/ ಕಷ್ಟ/ಸಂಕಷ್ಟಗಳು ನಮ್ಮನ್ನು ನಾಶಗೊಳಿಸಲು ಬರುವುದಿಲ್ಲ. ಬದಲಾಗಿ ನಮ್ಮನ್ನು ಇನ್ನಷ್ಟು ಬಲಿಷ್ಟಗೊಳಿಸಲು ಬರುತ್ತವೆ. ಸಮಸ್ಯೆಗಳ ಮೂಲಕ ನಾವು ಯಾರು ಎಂದು ಸಮಾಜಕ್ಕೆ ತಿಳಿಸಲು ನಾವು ಶಕ್ತರಾಗುತ್ತೇವೆ. ಅಂದರೆ ಸಮಸ್ಯೆಗಳ ಸುಳಿಯಲ್ಲಿ ಸಿಕ್ಕಿ ನಲುಗಿದರೆ ಅಲ್ಲ, ಬದಲಾಗಿ ಆ ಸಮಸ್ಯೆಗಳನ್ನು ಮೆಟ್ಟಿ ನಿಂತು ಧೈರ್ಯವಾಗಿ ಅವುಗಳನ್ನು ಎದುರಿಸಿದಾಗ ಮಾತ್ರ.
ಅಲೆಗಳೇ ಇಲ್ಲದ ಶಾಂತ ಸಮುದ್ರ ಸಮರ್ಥ ಈಜುಗಾರನನ್ನು ಸೃಷ್ಟಿಸಲಾರದು ಎಂಬ ನುಡಿ ಇದೆ. ಅಂತೆಯೇ ಸಮಸ್ಯೆಗಳು/ ಏಳು ಬೀಳುಗಳಿಲ್ಲದ ಜೀವನ ಸಶಕ್ತ/ ಸಮರ್ಥ ವ್ಯಕ್ತಿಯನ್ನು ಎಂದೂ ರೂಪುಗೊಳಿಸಲಾರದು. ಪದೇ ಪದೇ ಸಮಸ್ಯೆಗಳು ನಮ್ಮ ಜೀವನದಲ್ಲಿ ಬರುತ್ತವೆ ಅಂದರೆ ನಮ್ಮ ಹಣೆಬರಹ ಸರಿ ಇಲ್ಲ ಅಂತ ಅಲ್ಲ; ಬದಲಾಗಿ ನಾವೂ ಒಂದು ದಿನ ಎಲ್ಲರಿಗಿಂತ ಎತ್ತರಕ್ಕೆ ಬೆಳೆತೀವಿ ಅಂತ ಅರ್ಥ. ಜೀವನದಲ್ಲಿ ಕಷ್ಟ/ ಸಮಸ್ಯೆಯ ಪರಿಸ್ಥಿತಿ ಬರಲು ಕಾರಣರಾದವರನ್ನು, ಸಮಸ್ಯೆಗಳು ಬಂದಾಗ ಕೈ ಹಿಡಿದವರನ್ನು ಹಾಗೂ ಸಮಸ್ಯೆಗಳು ಬಂದಾಗ ಕೈ ಬಿಟ್ಟವರನ್ನು ಎಂದೂ ಮರೆಯಬಾರದಂತೆ.
ಖ್ಯಾತ ಗುರು ಗೋಪಾಲ್ ದಾಸ್ ಅವರ ಪ್ರಕಾರ ಒಂದು ಹಾಸ್ಯಕ್ಕೆ ಕೇವಲ ಒಂದೇ ಸಲ ಮಾತ್ರ ನಗುವ ನಾವು ಸಮಸ್ಯೆಗಳು ಮರುಕಳಿಸಿ ಬಂದಾಗ ಪುನ: ಪುನ: ಅಳುವುದು ಏತಕ್ಕೆ ಎಂದು ಅವರು ವಾದ ಮಂಡಿಸುತ್ತಾರೆ. ಅವರು ಹೇಳುತ್ತಾರೆ, ಬಗೆಹರಿಸಲು ಸಾಧ್ಯವಾಗುವಂತಹ ಸಮಸ್ಯೆಗಳಿಗೆ ವ್ಯರ್ಥವಾಗಿ ಚಿಂತಿಸುವುದನ್ನು ಬಿಟ್ಟುಬಿಡಿ, ಜೀವನವನ್ನು ನಗುನಗುತ್ತಾ ಬಾಳಿ ಎಂದು ಅವರು ಸಲಹೆ ಕೊಡುತ್ತಾರೆ ತಮ್ಮ ಕಿರು ವಯಸಿನಲ್ಲೇ ತಮ್ಮ ಪರಿಣಾಮ ಕಾರಿಯಾದ ಭಾಷಣ ಕಲೆಯ ಮೂಲಕ ಜನರನ್ನು ತನ್ನತ್ತ ಸೆಳೆವ ಚಾಕಚಕ್ಯತೆ ಅವರಿಗಿದೆ. ಸಮಸ್ಯೆಗಳ ಪರಿಹಾರಕ್ಕಾಗಿ ಸರಳ ಸೂತ್ರಗಳನ್ನು ಅವರು ಕೊಡುತ್ತಾರೆ. ಸಮಸ್ಯೆ ಎಂದು ಚಿಂತೆ ಮಾಡುವುದರಿಂದ ನಾಳಿನ ಸಮಸ್ಯೆಗಳು ಕಡಿಮೆಯಾಗುವುದಿಲ್ಲ ಬದಲಿಗೆ ಇಂದಿನ ಸಂತೋಷ ಕಡಿಮೆಯಾಗುವುದಂತು ಖಚಿತ.
ಜೀವನದಲ್ಲಿ ಯಶಸ್ವಿ ವ್ಯಕ್ತಿಯಾಗಬೇಕಾದರೆ ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಬೇಕು. ಖ್ಯಾತ ಬಾಲಿವುಡ್ ನಟ ಅಕ್ಷಯ್ ಕುಮಾರ್ ನಟನೆಗೆ ಬರುವ ಮೊದಲು ಹೊಟೇಲಿನಲ್ಲಿ ವೈಟರ್ ಆಗಿ ಕೆಲಸ ಮಾಡುತ್ತಾ ಇದ್ದರು. ಸರ್. ಎಂ. ವಿಶ್ವೇಶ್ವರಯ್ಯ ಬೀದಿ ದೀಪದ ಬೆಳಕಿನಡಿ ಓದಿ ಜೀವನದಲ್ಲಿ ಯಶಸ್ಸು ಸಾಧಿಸಲಿಲ್ಲವೇ? ಅಷ್ಟೇ ಏಕೆ ವಿದ್ಯುತ್ ಬಲ್ಬನ್ನು ಕಂಡುಹಿಡಿದ ಎಡಿಸನ್ 999 ಬಾರಿ ತನ್ನ ಪ್ರಯತ್ನದಲ್ಲಿ ವಿಫಲರಾಗಿ ಕೊನೆಗೆ ಗೆಲುವು ಕಂಡಿಲ್ವೆ? ಇದು ನನ್ನಿಂದಾಗದು, ಯಾಕೆ ಈ ಸಮಸ್ಯೆ ಎಂದು ಎಡಿಸನ್ ಸುಮ್ಮನೆ ಕುಳಿತ್ತಿದ್ದರೆ ಇಂದು ನಮಗೆ ಬೆಳಕು ಇರುತ್ತಿತ್ತೇ? ಒಂದು ಕಲ್ಲು ಶಿಲ್ಪಿಯ ಏಟನ್ನು ಧೈರ್ಯವಾಗಿ ಎದುರಿಸಿಧಾಗ ಮಾತ್ರ ಸುಂದರ ವಿಗ್ರಹ ತಯಾರಾಗುತ್ತದೆ ಮತ್ತು ಸಾವಿರಾರು ಮಂದಿ ಅದಕ್ಕೆ ಪೂಜೆ ನೆರವೇರಿಸುತ್ತಾರೆ. ಇಲ್ಲಿ ಸಹನೆ ಅತೀ ಮುಖ್ಯ. ಅದೇ ರೀತಿ ನಮ್ಮ ಜೀವನ ಕೂಡ. ಸಮಸ್ಯೆಗಳು/ಕಷ್ಟ ಸಂಕಷ್ಟ ಎಂದು ನಮ್ಮ ಜೀವನವನ್ನೇ ಕೊನೆಗೊಳಿಸುವ ನಿಟ್ಟಿನಲ್ಲಿ ಸ್ವ-ಹತ್ಯೆ (ಆತ್ಮಹತ್ಯೆ ಅಲ್ಲ. ನಮ್ಮ ಆತ್ಮವನ್ನು ಹತ್ಯೆ ಮಾಡಲು ನಾವ್ಯಾರು? ಕೇವಲ ಜೀವ ಮಾತ್ರ) ಮಾಡಲು ಮುಂದಾದರೆ ಶಿಲ್ಪಿಯ ಏಟಿಗೆ ಒಡೆದ ಕಲ್ಲಿನಂತೆ ನಮ್ಮ ಜೀವನ ಆಗುತ್ತದೆ. ನಮ್ಮ ಜೀವ ಇರುವವರೆಗೂ ನಾವು ಹೋರಾಡಬೇಕು. ಕೊನೆಗೆ ಜಯ ನಮ್ಮದಾಗುವುದು.
ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದಾಗ ನಮಗೂ ಜೀವನದ ನಿಜವಾದ ಅರ್ಥ ಅರಿವಾಗುತ್ತದೆ. ಸುಖ ನಾಣ್ಯದ ಒಂದು ಮುಖವಾದರೆ, ಕಷ್ಟ ನಾಣ್ಯದ ಇನ್ನೊಂದು ಮುಖ. ಹೊಟ್ಟೆ ತುಂಬಾ ಊಟ ಮಾಡುವುದಕ್ಕೆ ಗೊತ್ತಿದ್ದ ನಮಗೆ ಉಪವಾಸ ಮಾಡಲೂ ಗೊತ್ತಿರಬೇಕು.
ಆವಾಗ ಮಾತ್ರ ಹಸಿವಿನ ಮಹತ್ವ ತಿಳಿಯುತ್ತದೆ. ಅಂತೆಯೇ ಸಮಸ್ಯೆಗಳು ಎಂದು ನಾವು ಎದೆಗುಂದುವುದು ಬೇಡ, ಬದಲಾಗಿ ಧೈರ್ಯದಿಂದ ಎದುರಿಸೋಣ. ಸಮಸ್ಯೆಗಳ ಸಂದರ್ಭ ಬಂದಾಗ ಏನೂ ಆಗದಂತೆ ಸುಮ್ಮನಾಗಿರಿ ಆಗ ಹಲವು ಸಮಸ್ಯೆಗಳು ತನ್ನಿಂತಾನೆ ಬಗೆಹರಿಸಲ್ಪಡುತ್ತವೆ ಎಂದು ಹಲವರು ಅನುಭವದಿಂದ ಹೇಳುತ್ತಾರೆ. ಆತ್ಮವಿಶ್ವಾಸ ಹಾಗೂ ಸಾಧಿಸುವ ಛಲವಿದ್ದರೆ ನಮ್ಮ ಜೀವನವನ್ನೇ ಗೆಲ್ಲಬಹುದು. ತುಕ್ಕು ಹಿಡಿಯುವುದಕ್ಕಿಂತ ಸವೆದು ಹೋಗುವುದೇ ಲೇಸು ಎಂಬ ಸ್ವಾಮಿ ವಿವೇಕಾನಂದರ ಮಾತಿನಂತೆ ಸಮಸ್ಯೆಗಳು ನಮಗೆ ಎದುರಾದರೆ ಅವುಗಳ ವಿರುದ್ಧ ಸಮರ ಸಾರುವ ಕಾಯಕಕ್ಕೆ ಮುಂದಾಗುವುದು ಸಜ್ಜನರ ಲಕ್ಷಣ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.