ಹದಗೆಡುತ್ತಿವೆ ಮಾನವೀಯ ಸಂಬಂಧಗಳು !

Advt_NewsUnder_1
Advt_NewsUnder_1
Advt_NewsUnder_1
ಎಂ. ಬಾಬು ಶೆಟ್ಟಿ ನಾರಾವಿ

ಮನೆಗೆಲಸದ ಹುಡುಗಿ ಯಮುನ ಉತ್ಸಾಹ ದಿಂದ ನಗುನಗುತ್ತ ತನ್ನ ಕೆಲಸದಲ್ಲಿ ನಿರತಳಾಗಿದ್ದಳು. ಇದ್ದಕ್ಕಿದ್ದಂತೆ ಅವಳ ಸೋದರ ಮಾವ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಬಂತು. ಆಕೆ ಒಮ್ಮೆಲೇ ಗಾಬರಿಯಾದಳು. ಹೇಗೋ ಸಮಾಧಾನ ಮಾಡಿ ಮನೆಗೆ ಕಳುಹಿಸಿಕೊಡಲಾಯಿತು. ಒಂದು ವಾರ ಕಳೆಯಿತು. ಆದರೂ ಯಮುನ ಆಘಾತದಿಂದ ಚೇತರಿಸಿಕೊಳ್ಳಲಿಲ್ಲ. ಮಂಕಾಗಿ ಮೌನವಾಗಿದ್ದಾಳೆ. ಮಾವನ ಅನಿರೀಕ್ಷಿತ ಅಗಲಿಕೆ ಅವಳಿಗೆ ಸಹಿಸಲು ಅಸಾಧ್ಯವಾಗಿದೆ. ಕಟ್ಟಡ ಕಾಮಗಾರಿಯ ಮೇಲ್ವಿಚಾರಕನಾಗಿದ್ದ ಆತನಿಗೆ ಯಾವುದೇ ಸಮಸ್ಯೆಯಿರಲಿಲ್ಲ. ಇಬ್ಬರು ಗಂಡು ಮಕ್ಕಳಲ್ಲಿ ದೊಡ್ಡವನು ಪ್ರೀತಿ ಪ್ರೇಮದಾಟದಲ್ಲಿ ಮರ್ಯಾದೆಗೆ ಧಕ್ಕೆ ತಂದಿದ್ದ. ಎಲ್ಲರ ದೂಷಣೆಗೆ ಗುರಿಯಾಗಿದ್ದ ಇದೇ ವಿಚಾರಕ್ಕೆ ಮನನೊಂದು ತಂದೆ ಬದುಕೇ ಬೇಡವೆಂಬ ನಿರ್ಧಾರಕ್ಕೆ ಬಂದ.
ಭೂಮಾಲಕರೊಬ್ಬರ ಜಮೀನಿನಲ್ಲಿ ದಂಪತಿಗಳಿಬ್ಬರು ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದರು. ಹಲವಾರು ವರ್ಷಗಳಿಂದ ಕಾಯಂ ಕೆಲಸಗಾರರಾಗಿ ದುಡಿಯುತ್ತಿದ್ದರು. ಗಂಡ ಗದ್ದೆಯ ಕೆಲಸ ಮಾಡುತ್ತಿದ್ದರೆ ಹೆಂಡತಿ ಮನೆಯಲ್ಲಿ ಅಡುಗೆ ಕೆಲಸ. ಪಾತ್ರೆ, ಬಟ್ಟೆತೊಳೆಯುವುದು, ಗುಡಿಸುವುದು. ಒರಸುವುದು. ಹೀಗೆ ಮನೆಗೆಲಸ ಮಾಡುತ್ತಿದ್ದಳು. ಅವಳು ಮನೆಯಲ್ಲಿ ಕೆಲಸ ಮಾಡುತ್ತಿದ್ದುದರಿಂದ ಕುಟುಂಬಕ್ಕೆ, ಮನೆಯ ಯಜಮಾನನಿಗೆ ಹೆಚ್ಚು ಹತ್ತಿರವಾದಳು. ಈ ಮಧ್ಯೆ ಯಾವುದೋ ಕಾರಣಕ್ಕೆ ಅವರಲ್ಲಿ ದಾಂಪತ್ಯ ವಿರಸ ತಲೆಹಾಕಿತು. ಆಗ ಭೂ ಮಾಲಿಕ ಮಧ್ಯವರ್ತಿಯಾಗಿ ಅವರಲ್ಲಿಯ ಭಿನ್ನಾಭಿಪ್ರಾಯ ನೀಗಿಸಲು ಮುಂದಾದ. ಆದರೆ ಅದು ಹೇಗೋ, ಆತ ಮತ್ತು ಕೆಲಸದಾಕೆ ಪರಸ್ಪರ ಆಕರ್ಷಿತರಾಗಿ ಹತ್ತಿರವಾದರು. ಈ ಗುಟ್ಟು ಅದು ಹೇಗೋ ರಟ್ಟಾಯಿತು. ಜಮೀನ್ದಾರನ ಗೌರವಕ್ಕೆ ಧಕ್ಕೆಯಾಯಿತು. ಪರಿಣಾಮ – ಇಬ್ಬರೂ ಮನೆಯಿಂದ ದೂರ ಹೋಗಿ ಹೊಟೇಲಿನಲ್ಲಿ ರೂಮ್ ಮಾಡಿ ವಿಷ ಸೇವಿಸಿ ಆತ್ಮ ಹತ್ಯೆ ಮಾಡಿಕೊಂಡರು.
ಯೋಗೀಶ್ – ಚಂಪಾ ದಂಪತಿಗಳು ಆಗರ್ಭ ಶ್ರೀಮಂತರು ಧಾರಿಣಿ ಅವರ ಏಕೈಕ ಪುತ್ರಿ ಪ್ರತಿಭಾವಂತ, ರೂಪವತಿ ಕೂಡ. ಎಸ್.ಎಸ್.ಎಲ್.ಸಿ.ಯಲ್ಲಿ ಆಕೆ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣಳಾಗಿದ್ದಳು. ಅವಳಿಗೆ ಸಂಗೀತ, ಸಾಹಿತ್ಯವೆಂದರೆ ತುಂಬಾ ಇಷ್ಟ! ಕಾನೂನು ಪದವೀಧರೆ ಯಾಗಿ ಐ.ಎ.ಎಸ್. ಮಾಡಲು ಬಯಸಿದ್ದಳು. ಆದರೆ ಯೋಗೀಶ್ ಅವರ ಗೆಳೆಯರು ಮಗಳನ್ನು ವೈದ್ಯಳನ್ನಾಗಿ ಮಾಡುವಂತೆ ಒತ್ತಾಯದ ಒತ್ತಡ ಹೇರಿದ್ದರು. ತಾಯಿಗೂ ಅದೇ ಇಷ್ಟವಾಗಿತ್ತು. ಒಬ್ಬಳೇ ಮಗಳು ಡಾಕ್ಟರ್ ಆದರೆ ಎಷ್ಟು ಚೆನ್ನ? ಹೀಗೆ ಭವಿಷ್ಯದ ಆಕರ್ಷಕ ಕನಸು ಹೆಣೆದರು! ಮಗಳು ತಂದೆ ತಾಯಿಗಳ ಕನಸಿಗೆ ಬಲಿಯಾದಳು. ವಿಜ್ಞಾನ ಆಯ್ಕೆ ಮಾಡಿಕೊಂಡಳು. ಮೊದಲ ಪರೀಕ್ಷೆಯಲ್ಲಿ ಒಳ್ಳೆಯ ಅಂಕ ಬಂದಿತ್ತು. ಆದರೆ ಮಧ್ಯಾವಧಿ ಪರೀಕ್ಷೆಯಲ್ಲಿ ಉತ್ತಮ ಅಂಕ ಸಿಗಲಿಲ್ಲ. ಧಾರಿಣಿಗೆ ಅಧ್ಯಯನ ಸಮಸ್ಯೆಯಾಗತೊಡಗಿತು. ಇಷ್ಟವಿಲ್ಲದ ವಿಷಯಗಳಿಗೆ ಮನಸ್ಸು ತೊಡಗಿಸಲು ಅಸಮರ್ಥಳಾದಳು. ತಂದೆ ತಾಯಿಗಳಿಗಿದನ್ನು ಹೇಳುವಂತಿರಲಿಲ್ಲ. ಬದುಕಿನಲ್ಲಿ ಖಿನ್ನತೆ, ಕಾಡತೊಡಗಿತು. ಪರಿಣಾಮ. ಒಬ್ಬಳೇ ಮಗಳು ಒಂದು ದಿನ ಬದುಕಿಗೇ ವಿದಾಯ ಹೇಳಿಬಿಟ್ಟಳು. ಮಿಂಚಿ ಹೋದ ಕಾರ್ಯಕ್ಕೆ ಚಿಂತಿಸಿ ಫಲವೇನು? ಸಂಪತ್ತಿದೆ. ಎಲ್ಲವೂ ಇದೆ. ಆದರೆ ಮಗಳನ್ನೂ ಡಾಕ್ಟರ್ ಮಾಡಲು ಕನಸು ಕಂಡ ತಂದೆ ತಾಯಿಗಳಿಗೆ ಮಗಳೇ ಇಲ್ಲವಾದಳು!.
ಸಂಪತ್ತು, ಸೌಭಾಗ್ಯ ಯಥೇಚ್ಚವಿತ್ತು. ಮಗಳು ಡಾಕ್ಟರ್ ಆಗಬೇಕೆಂಬ ಆಕರ್ಷಕ ಕನಸೂ ಇತ್ತು! ಆದರೆ ನಮ್ಮ ಕನಸುಗಳಿಗೆ, ನಿರ್ಧಾರಗಳಿಗೆ ಮೀರಿದ ಇನ್ನೊಂದು ಅದೃಶ್ಯ ಶಕ್ತಿ ಈ ಪ್ರಪಂಚದಲ್ಲಿ ಹಾಸುಹೊಕ್ಕಾಗಿದೆ. ನಮ್ಮ ಪ್ರಯತ್ನಗಳು, ಆಶೆಗಳು ಆ ಶಕ್ತಿಗೆ ವಿರುದ್ಧವಾದರೆ ನಮ್ಮ ಆಶೆಗಳು ಈಡೇರಲಾರವು ಎಂಬ ಸತ್ಯ ಬಹುತೇಕ ಮಂದಿಗೆ ಅರ್ಥವಾಗುವುದೇ ಇಲ್ಲ. ಇಂದು ಸಮಾಜದಲ್ಲಿ ನಡೆಯುತ್ತಿರುವ ಆತ್ಮ ಹತ್ಯಾಪ್ರಕರಣಗಳಿಗೆ ಕೆಲವು ಉದಾಹರಣೆಗಳು ಮೇಲಿನವು. ಆತ್ಮಹತ್ಯೆ, ಆತ್ಮಹತ್ಯೆ, ಆತ್ಮಹತ್ಯೆ. ಇದು ಇಂದು ಸಮಸ್ಯೆಗಳಿಂದ ಬಿಡುಗಡೆ ಪಡೆಯಲು, ಮುಕ್ತಿ ಹೊಂದಲು ಬಹುತೇಕರು ಅನುಸರಿಸುವ ಅವಸರದ ಮಾರ್ಗ! ಸಮಸ್ಯೆಗಳಿಂದ ಬಿಡುಗಡೆ ಇದರಿಂದ ಸಾಧ್ಯವೆ? ಇದೊಂದು ಅನೇಕರ ಭ್ರಮೆ! ನಿಜವಾಗಿಯೂ ಅನೇಕ ಸಮಸ್ಯೆಗಳು ಇದರಿಂದಲೇ ಹುಟ್ಟಿಕೊಳ್ಳುತ್ತವೆ. ಖಿನ್ನತೆ ಎಂಬುದೊಂದು ಇಂದು ಗಂಭೀರ ಸಮಸ್ಯೆಯಾಗಿ ವ್ಯಾಪಕಗೊಳ್ಳುತ್ತಿದೆ. ೨೦೩೦ರ ಹೊತ್ತಿಗೆ ಇದೊಂದು ಗಂಭೀರ ಕಾಯಿಲೆಯಾಗಿ ಸಮಾಜವನ್ನು ಕಾಡಲಿದೆ ಎಂಬುದು ಮನೋವಿಜ್ಞಾನಿಗಳ ಉಲ್ಲೇಖ. ಆ ಮಾತಿನ ಸತ್ಯತೆ ಈಗಾಗಲೇ ಅಲ್ಲಲ್ಲಿ ಮನವರಿಕೆಯಾಗುತ್ತಿದೆ. ಮನುಷ್ಯನೊಬ್ಬನೇ ಈ ಪ್ರಪಂಚದಲ್ಲಿ ಅತ್ಯಧಿಕವಾಗಿ ದುಃಖಿಸುವವನು. ಅದಕ್ಕಾಗಿಯೇ ಅವನು ನಗುವನ್ನು ಕಂಡು ಹಿಡಿಯುವುದು ಅನಿವಾರ್ಯವಾಯಿತು ಎನ್ನುತ್ತಾನೆ ಫೆಡ್ರಿಕ್ ನೀಷೆ ಎಂಬ ಜರ್ಮನಿಯ ತತ್ವಜ್ಞಾನಿ. ಇಂದು ಬದುಕಿನಲ್ಲಿ ನಗು ಎಂಬುದು ದುಬಾರಿಯಾಗುತ್ತಿದೆ. ಸಮಸ್ಯೆಗಳು, ಒತ್ತಡಗಳು ಜೀವನದಲ್ಲಿ ಆವರಿಸಿಕೊಳ್ಳುತ್ತವೆ. ಪರಿಣಾಮವಾಗಿ ಖಿನ್ನತೆ ವ್ಯಾಪಿಸಿಕೊಳ್ಳುತ್ತದೆ. ಸಂಸಾರದಲ್ಲಿ ಎಲ್ಲರೂ ಒಟ್ಟಾಗಿ ಕುಳಿತು ಕಲೆತು ಮಾತುಕತೆ ಮಾಡುವುದಾಗಲಿ, ನಗು ಹಾಸ್ಯಾದಿಗಳಿಂದ ಮನಸ್ಸನ್ನು ಉಲ್ಲಸಿತಗೊಳಿಸುವುದಾಗಲಿ ಇಂದು ಇಲ್ಲವೇ ಇಲ್ಲ. ಯಾವುದೇ ಸಮಸ್ಯೆ ಬಂದಾಗ ಎಲ್ಲರೂ ಒಟ್ಟಾಗಿ ಆ ಬಗ್ಗೆ ಚರ್ಚಿಸುವುದಾಗಲಿ, ಪರಿಹಾರಮಾರ್ಗವನ್ನು ಚಿಂತಿಸುವುದಾಗಲಿ ಇಂದು ಅತ್ಯಂತ ವಿರಳ. ಮೊಬೈಲ್, ಟಿ.ವಿ. ಯೇ ಪ್ರತಿಯೊಬ್ಬರ ಸಂಗಾತಿ ಕೌಟುಂಬಿಕ ಸಾಮರಸ್ಯ ಬಹುತೇಕ ಮನೆಗಳಲ್ಲಿ ಗತ ಕಾಲದ ಕಥೆ! ಈ ಕಾರಣಗಳಿಂದ ಇಂದು ಹದಿಹರೆಯದ ಮಕ್ಕಳು, ಯುವಕ, ಯುವತಿಯರು ಬಹುತೇಕ ಮನೆಗಳಲ್ಲಿ ಒಂಟಿತನವನ್ನು ಅನುಭವಿಸುತ್ತಾರೆ. ಅವರಿಗೆ ಸಲಹೆ ಸೂಚನೆ ಕೊಡುವ ಹಿರಿತನವುಳ್ಳವರು ಬಹುತೇಕ ಮನೆಗಳಲ್ಲಿ ಸಕ್ರಿಯರಾಗಿಲ್ಲ. ಅವರ ಮಾತನ್ನು ಯಾರೂ ಕೇಳುವುದೂ ಇಲ್ಲ. ಅವರ ಬಗ್ಗೆ ಕಿರಿಯರಿಗೆ ಗೌರವವೂ ಇಲ್ಲ. ಹಾಗಾಗಿ ಇಂದು ಅನೈತಿಕ ಚಟುವಟಿಕೆಗಳು, ಆತ್ಮಹತ್ಯೆಗಳು, ಅತ್ಯಾಚಾರಗಳು ದಿನದಿಂದ ದಿನಕ್ಕೆ ಅಧಿಕಗೊಳ್ಳುತ್ತವೆ. ಮಾದಕ ವಸ್ತುಗಳ ಸೇವನೆ, ಅಮಲು ಮಾತ್ರೆಗಳ ಬಳಕೆ ಯುವ ಪೀಳಿಗೆಯಲ್ಲಿ ಅಧಿಕಗೊಳ್ಳುತ್ತಿದೆ. ಶಾಲೆ ಕಾಲೇಜುಗಳ ಸಮೀಪದ ಅಂಗಡಿಗಳಲ್ಲೇ ಮಾದಕ ಮಾತ್ರೆಗಳು ಸಿಗುತ್ತವೆ. ಶಾಲೆ, ಕಾಲೇಜುಗಳಲ್ಲಿ ನೀತಿ ಪಾಠದ ವ್ಯವಸ್ಥೆಯಿಲ್ಲ. ಮನೆಯಲ್ಲೂ ನೀತಿ ಪಾಠ ಹೇಳುವವರಿಲ್ಲ. ಜೀವನವೆಂಬುದು ಅಂಕಗಳಿಕೆಯ ಸ್ಪರ್ಧೆಯೇ ಹೊರತು ಜೀವನ ಮೌಲ್ಯವೆಂಬುದು ಯಾರಿಗೂ ಬೇಡ. ಕೌಟುಂಬಿಕ ಸಾಮರಸ್ಯವೆಂಬುದು ಏನೆಂದೇ ಬಹುಮಂದಿಗೆ ತಿಳಿಯದು. ಮನೆಯಲ್ಲಿ ಗಾಢ ಮೌನ. ಪ್ರತಿಯೊಬ್ಬರ ಕೈಯಲ್ಲಿ ಒಂದೊಂದು, ಎರಡೆರಡು ಮೊಬೈಲು! ಅದರೊಡನೆಯೇ ಸಂಬಂಧ! ಆದುದರಿಂದಲೇ ಬದುಕು ಯಾಂತ್ರಿಕ. ತೀರ ಯಾಂತ್ರಿಕ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.