ಸಕಾಲ ಯೋಜನೆ: ದಂಡದ ಮೊತ್ತ 25ಸಾವಿರ ರೂ. ಗೆ ಏರಿಸಲು ಕಾನೂನು ತಿದ್ದುಪಡಿಗೆ ಚಿಂತನೆ

ಬೆಳ್ತಂಗಡಿ: ಸಕಾಲ ಯೋಜನೆ ಎಂದರೆ ಕಾಲಮಿತಿಯೊಳಗೆ ತಮ್ಮ ಅರ್ಜಿಗಳನ್ನು ಸರಕಾರಿ ಇಲಾಖೆಗಳಲ್ಲಿ ನೀಡಿ ಪರಿಹಾರ ಪಡೆಯುವುದಾಗಿದೆ. ಇದು ನಾಗರಿಕರ ಕೈಗೆ ಕೊಟ್ಟಿರುವ ಅತಿದೊಡ್ಡ ಹಕ್ಕು. ಇದರಲ್ಲಿ ವಿಳಂಬನೀತಿ ಅನುಸರಿಸುವ ಅಧಿಕಾರಿಯ ಸಂಬಳದಿಂದ ವಿಲಂಬಿತ ಅವಧಿಗಿಂತ ನಂತರ ದಿನಕ್ಕೆ 20ರೂ. ನಂತೆ ಕಡಿತಗೊಳಿಸಿ ಅರ್ಜಿದಾರರಿಗೆ ನೀಡುವ ದಂಡ ವ್ಯವಸ್ಥೆ ಇದೆ. ಇದರ ಮಿತಿಯನ್ನು 25 ಸಾವಿರ ಮಿತಿಗೆ ಏರಿಸಬೇಕೆಂಬ ನಿಟ್ಟಿನಲ್ಲಿ ಕಾನೂನು ತಿದ್ದುಪಡಿಗೆ ಚಿಂತನೆ ನಡೆಯುತ್ತಿದೆ ಎಂದು ಸಕಾಲ ಮಂಡಳಿಯ ಸರಕಾರಿ ಆಡಳಿತಾಧಿಕಾರಿ ಕೆ ಮಥಾಯಿ ಹೇಳಿದರು.
ಸಕಾಲ ಮಿಶನ್ ಸಿಬ್ಬಂದಿ, ಆಡಳಿತ ಸುಧಾರಣಾ ಇಲಾಖೆ ಹಾಗೂ ಜಿಲ್ಲಾಡಳಿತದ ವತಿಯಿಂದ ಅ. 17 ರಂದು ಬೆಳ್ತಂಗಡಿ ಮಿನಿ ವಿಧಾನ ಸೌಧದ ಸಭಾಂಗಣದಲ್ಲಿ ಸಕಾಲ ಯೋಜನೆ ಕುರಿತು ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ಜಾಗೃತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
16 ಕೋಟಿ ಅರ್ಜಿಗಳ ವಿಲೇ:
ಸಕಾಲ ಯೋಜನೆಯಲ್ಲಿ ಈಗಾಗಲೇ 16 ಕೋಟಿ ಅರ್ಜಿಗಳನ್ನು ವಿಲೇಗೊಳಿಸಲಾಗಿದ್ದು ಇನ್ನು 30 ಲಕ್ಷ ಅರ್ಜಿಗಳು ವಿಲೇಗೆ ಬಾಕಿ ಇದೆ. ಅವುಗಳ ಬಗ್ಗೆ ಕ್ರಮ ಕೈಗೊಳ್ಳಲು ಈಗಾಗಲೇ ಆಯಾಯಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ರಾಜ್ಯ ಸರಕಾರದ 73 ಇಲಾಖೆಗಳ ಒಟ್ಟು 897 ಸೇವೆಗಳು ಈ ಯೋಜನೆಯ ವ್ಯಾಪ್ತಿಗೆ ಬರುತ್ತದೆ. ಇದಕ್ಕಾಗಿ 20 ಸಾವಿರ ಗೊತ್ತುಪಡಿಸಿದ ಉತ್ತರದಾಯಿ ಅಧಿಕಾರಿಗಳನ್ನು
ನೇಮಿಸಲಾಗಿದೆ. ಇಲಾಖಾವಾರು ನಿಗದಿತ ದಿನಗಳ ಒಳಗೆ ಅರ್ಜಿಗಳನ್ನು ವಿಲೇಗೊಳಿಸುವುದು ಆಯಾಯ ಅಧಿಕಾರಿಯ ಜವಾಬ್ಧಾರಿ. ತಹಶಿಲ್ದಾರರು ಸಕಾಲ ನಿಯಮ ಪಾಲಿಸಲು ವಿಳಂಬವಾದರೆ ಸಹಾಯಕ ಆಯುಕ್ತರಿಗೆ ಮೇಲ್ಮನವಿ ಹೋಗುತ್ತದೆ. ಅವರಿಂದಲೂ ಆಗದಿದ್ದಲ್ಲಿ ಜಿಲ್ಲಾಧಿಕಾರಿಗಳಿಗೆ ನಿಗದಿತ ದಿನಗಳಲ್ಲಿ ವಿಲೇಗೊಳಿಸುವಂತೆ ಸೂಚಿಸಲಾಗುತ್ತದೆ. ಇದರಲ್ಲಿ ಎಸಿ, ಡಿಸಿ ಯಾರೇ ಆದರೂ ಎಡವಿದಲ್ಲಿ ಅವರ ವಿರುದ್ಧವೂ ನೇರ ಕ್ರಮ ಜರುಗಿಸುವ ಅಧಿಕಾರ ಸಕಾಲ ಮಂಡಳಿಗೆ ಇದೆ ಎಂದರು.
ಕಚೇರಿಗಳಲ್ಲಿ ಸೂಚನಾ ಫಲಕ ಕಡ್ಡಾಯ:
ಸಕಾಲ ಯೋಜನೆ ಬಗ್ಗೆ ಮಾಹಿತಿ ನೀಡುವ ಫಲಕ, ಅರ್ಜಿಗಳು ವಿಲೇ ಆಗಬೇಕಾದ ನಿಗದಿತ ದಿನಗಳ ವಿವರ, ಒಂದು ವೇಳೆ ಸಕಾಲ ಬಗ್ಗೆ ಸಾರ್ವಜನಿಕರಿಗೆ ದೂರುಗಳೇನಾದರೂ ದೂರು ಸಲ್ಲಿಸಬೇಕಾದ ಪ್ರಾಧಿಕಾರದ ದೂರವಾಣಿ ಸಹಿತ ವಿಳಾಸದ ಫಲಕವನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕಾಗಿದೆ. ಇಲ್ಲದಿದ್ದರೆ ಅದಕ್ಕೆ ಸಂಬಂಧಪಟ್ಟ ಅಧಿಕಾರಿ ಮಾಲತಿ ಅವರು ವರದಿ ನೀಡಲಿದ್ದು, ವರದಿ ಆಧರಿಸಿ ಸಂಬಂಧಪಟ್ಟ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕಾದ ದಿನಗಳು ದೂರ ಇಲ್ಲ ಎಂದು ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು. ತಹಶಿಲ್ದರ್ ಮದನ್‌ಮೋಹನ್, ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ್ ಉಪಸ್ಥಿತರಿದ್ದರು.
ಸಾರ್ವಜನಿಕ ದೂರು ಆಲಿಕೆ:
ಸಾರ್ವಜನಿಕ ಮಾಹಿತಿ ಬಳಿಕ ಸಭೆಯಿಂದ ಅವರಿಗೆ ಬಂದ ಪ್ರಶ್ನೆಗೆ ಸ್ಪಂದಿಸಿದ ಅಧಿಕಾರಿಗಳು, ತಹಶಿಲ್ದಾರರ ಸಮ್ಮುಖ ಕಡತ ಪರಿಶೀಲನೆ ನಡೆಸಿದರು. ಹತ್ಯಡ್ಕ ಗ್ರಾಮದ ನಿವೃತ್ತ ಸೇನಾನಿ ಮೋಹನ್ ಶೆಟ್ಟಿ ಅವರು ದೂರು ನೀಡಿ, ಕಂದಾಯ ಇಲಾಖೆಯಿಂದ ತನ್ನ ಮೇಲೆ ಆಗಿರುವ ದಬ್ಬಾಳಿಕೆಯ ಬಗ್ಗೆ ಮತ್ತು ಲೋಕಾಯುಕ್ತದಿಂದ ಆಗಿರುವ ಅನ್ಯಾಯದ ಬಗ್ಗೆ ವಿವರಿಸಿದರು. ಹಕ್ಕುಪತ್ರ ದೊರೆತರೂ ಪಹಣಿ ಆಗಿಲ್ಲ ಎಂದು ಗ್ರಾಮಸ್ಥರೊಬ್ಬರು ದೂರಿದರೆ 94 ಸಿ ಬಗ್ಗೆ ಫಲಾನುಭವಿ ಮಹಿಳೆ ಯೊಬ್ಬರು ಅಳಲು ತೋಡಿಕೊಂಡರು. ಸಭೆಯ ಬಳಿಕ ಸಮಸ್ಯೆದಾರರ ದೂರು ಆಲಿಸಿದ ಮಥಾಯಿ ಕಡತ ಪರಿಶೀಲಿಸಿ ಮುಂದಿನ ಕ್ರಮಕ್ಕೆ ತಹಶಿಲ್ದಾರರಿಗೆ ಸೂಚನೆ ನೀಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.