ಭರವಸೆಯ ಬೆಳಕು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

 

ಬೆಳ್ತಂಗಡಿ ತಾಲೂಕಿನಲ್ಲೊಂದು ಭರವಸೆಯ ಬೆಳಕು ಮೂಡಿದೆ. ಶಾಸಕನಾಗಿ ಆಯ್ಕೆಯಾಗಬೇಕು; ನವ ಬೆಳ್ತಂಗಡಿ ನಿರ್ಮಾಣ ಮಾಡಬೇಕು-ಎಂಬ ಯುವ ನಾಯಕ ಹರೀಶ್ ಪೂಂಜರ ಕನಸಿನಲ್ಲಿ ಶಾಸಕನಾಗುವ ಕನಸು ಕೈಗೂಡಿದೆ. ಈಗ ಜನತೆ ಬಹಳ ನಿರೀಕ್ಷೆಯಿಂದ, ಕುತೂಹಲದಿಂದ ನೋಡುತ್ತಿದ್ದಾರೆ; ಕಿವಿಯೊಡ್ಡಿ ಕೇಳುತ್ತಿದ್ದಾರೆ; ಆಸಕ್ತಿಯಿಂದ ಮಾತನಾಡುತ್ತಿದ್ದಾರೆ. ಆದರೆ ಅವರ ನವ ಬೆಳ್ತಂಗಡಿ ನಿರ್ಮಾಣದ ಕನಸಿನ ಸಾಕಾರಕ್ಕೆ ಎಲ್ಲರ ಸಹಕಾರದ ಅಗತ್ಯವೂ ಇದೆ.
ನೂತನ ಶಾಸಕ ಹರೀಶ್ ಪೂಂಜ ಅವರು ಯುವ ಜನತೆಯ ಮಾತ್ರವಲ್ಲ, ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲ ವರ್ಗದ ಜನರ ಕಣ್ಮಣಿ. ಇದಕ್ಕೆ ಅವರು ಚುನಾವಣೆಯಲ್ಲಿ ಪಡೆದ ಬಹುಮತವೇ ಸಾಕ್ಷಿ. ಜನ ಅವರನ್ನು ಇಷ್ಟಪಟ್ಟಿದ್ದು ಮತ್ತು ಶಾಸಕರನ್ನಾಗಿ ಆಯ್ಕೆ ಮಾಡಿದ್ದು ಅವರ ಸೌಜನ್ಯಯುಕ್ತ ಸರಳ ನಡೆ-ನುಡಿಯ, ಸಾತ್ವಿಕ ಸಜ್ಜನಿಕೆಯ ಸುಂದರ ವ್ಯಕ್ತಿತ್ವದ ಮೇಲಿನ ಸೆಳೆತದಿಂದ ಎಂಬುದು ಮುಚ್ಚಿಡುವಂತದ್ದಲ್ಲ. ಅವರೂ ಅಷ್ಟೆ, ರಾಜಕೀಯ ಪ್ರವೇಶ ಬಯಸಿದ್ದು, ಬಡಜನರ ಸೇವೆ ಮಾಡುವುದಕ್ಕೆ. ಕುಡಿಯುವ ನೀರು, ರಸ್ತೆ, ವಿದ್ಯುತ್ ಮೊದಲಾದ ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾಗಿ ವ್ಯವಸ್ಥೆಗೊಳಿಸಿ ಕ್ಷೇತ್ರದ ಎಲ್ಲ ವರ್ಗದ ಜನತೆಗೆ ಎಲ್ಲ ರೀತಿಯ ಅನುಕೂಲಗಳನ್ನು ಕಲ್ಪಿಸುವ ಮೂಲಕ ತಾಲೂಕನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ದು ರಾಜ್ಯದಲ್ಲಿಯೇ ಬೆಳ್ತಂಗಡಿಯನ್ನು ಮಾದರಿ ತಾಲೂಕನ್ನಾಗಿ ರೂಪಿಸುವುದಕ್ಕೆ. ನಮ್ಮಿಂದ ಆಯ್ಕೆಯಾಗಿ ನಮ್ಮ ದುಡ್ಡನ್ನೇ ಲೂಟಿ ಹೊಡೆದು ಕೋಟ್ಯಧೀಶ್ವರನಾಗಿ ಐಷಾರಾಮದ ಜೀವನ ಮಾಡುವುದಕ್ಕಾಗಿ ಅವರು ರಾಜಕೀಯಕ್ಕೆ ಬಂದವರಲ್ಲ ಎಂಬುದು ಅವರ ನಡೆ-ನುಡಿಯಿಂದಲೇ ತಿಳಿಯುತ್ತದೆ.
ಇತ್ತೀಚೆಗೆ ಮುಂಗಾರು ಆರಂಭದಲ್ಲಿ ಚಾರ್ಮಾಡಿ ಘಾಟಿ ಕುಸಿದು ತೊಂದರೆಯಾದಾಗ ಶಾಸಕರು ಏನೂ ಆಹಾರ ಸೇವಿಸದ ದಿನವೂ ಸ್ವತಃ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸಿದ್ದು ಅವರ ಕಾರ್ಯಕ್ಷಮತೆ ಮತ್ತು ಬದ್ಧತೆಗೆ ಹಿಡಿದ ಕನ್ನಡಿಯಂತಿತ್ತು. ಯಾವುದೇ ದುಶ್ಚಟಗಳಿಲ್ಲದ ಮತ್ತು ಹಿಂದುಳಿದ ಬಡ ಕುಟುಂಬದ ಹಿನ್ನೆಲೆಯವರಾದರೂ ನಿತ್ಯ ಸಸ್ಯಾಹಾರಿಯಾಗಿ ಮಂಗಳವಾರ ಮತ್ತು ಶುಕ್ರವಾರಗಳಲ್ಲಿ ನಿರಾಹಾರ ವ್ರತಧಾರಿಯಾಗಿರುವ ಹರೀಶ್ ಪೂಂಜ ಅವರದು ಕಠಿಣ ಸಾಧಕ ಬದುಕು; ಕಠಿನ ಶ್ರಮದ ಜೀವನ ಎಂದರೂ ತಪ್ಪಲ್ಲ. (ಅವರ ಈ ಗುಣಕ್ಕೆ ಪೂರಕವಾಗಿಯೇ ಮೊನ್ನೆ ಚೌತಿಹಬ್ಬದಂದು ಉದ್ಘಾಟನೆಯಾದ ಅವರ ಕಚೇರಿಗೆ ಶ್ರಮಿಕ ಎಂದು ನಾಮಧೇಯವಾಗಿದೆ.) ನನಗೆ ತಿಳಿದ ಮಟ್ಟಿಗೆ ಎಲ್ಲ ಪಕ್ಷಗಳ ಬಹುತೇಕ ಎಲ್ಲ ರಾಜಕಾರಣಿಗಳಲ್ಲಿರುವಂತೆ ಇವರಲ್ಲಿ ಮದ್ಯದಂಗಡಿಗಳಿಲ್ಲ; ಬಾರ್‌ಗಳಿಲ್ಲ; ಕಳ್ಳದಂಧೆಯಿಲ್ಲ; ಅಹಂಕಾರವಿಲ್ಲ. ಇರುವುದೊಂದೇ, ಅದು ಸ್ವಾಮಿ ವಿವೇಕಾನಂದರು ಹೇಳಿದಂತೆ-ಈ ಸಮಾಜಕ್ಕಾಗಿ ಏನನ್ನಾದರೂ ಒಳಿತು ಮಾಡಬೇಕು ಎಂಬ ಅಮಿತ ಜೀವನೋತ್ಸಾಹ.
ಇವನ್ನೆಲ್ಲ ಯಾಕೆ ಉಲ್ಲೇಖಿಸುತ್ತೇನೆಂದರೆ ಸದ್ಗುಣಗಳ ಸಾಂದ್ರನಾಗಿರುವ ಪೂಂಜರ ಅಭಿಮಾನಿ ಯುವ ಬಳಗವೂ ಸನ್ಮಾರ್ಗದಲ್ಲಿ ನಡೆಯಲು ಸತ್ಪ್ರೇರಣೆಯಾಗಲಿ ಎಂಬ ಸದುದ್ದೇಶದಿಂದ. ಪ್ರೀತಿಯ ರಾಜಕಾರಣ ಮಾಡುತ್ತೇನೆಯೇ ಹೊರತು ದ್ವೇಷದ್ದಲ್ಲ ಎಂದು ಬಹುಶಃ ಇತಿಹಾಸದಲ್ಲಿಯೇ ಮೊದಲು ಹೇಳಿರುವ ಪೂಂಜ ಅವರು, ಸುದೀರ್ಘ ಕಾಲ ಸಾಟಿಯಿಲ್ಲದ ತಾಲೂಕಿನ ಜನ ನಾಯಕನಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವ ಮಾನ್ಯ ವಸಂತ ಬಂಗೇರರ ಮಾರ್ಗದರ್ಶನ ಪಡೆದುಕೊಂಡು ಮುಂದುವರಿಯುತ್ತೇನೆ ಎಂದು ಹೇಳಿರುವುದು ರಾಜಕೀಯ ಇರುವುದು ಕೆಸರೆರಚಾಟಕ್ಕಲ್ಲ; ಕೆಸರಲ್ಲಿರುವ ಜನರನ್ನು ಉದ್ಧರಿಸುವುದಕ್ಕೆ ಎಂಬ ಉತ್ತಮ ಸಂದೇಶವನ್ನು ಸಾರಿದೆ.
ಯುವಜನತೆ ದುಶ್ಚಟಗಳಿಗೆ ಬಲಿಯಾಗಬೇಡಿ; ಕೃಷಿಭೂಮಿ ಇರುವ ವಿದ್ಯಾವಂತ ಯುವಕರು ನಗರದ ಕಡೆ ವ್ಯಾಮೋಹಿತರಾಗದೆ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು, ಹೆತ್ತವರನ್ನೂ ಚೆನ್ನಾಗಿ ನೋಡಿಕೊಳ್ಳಿ ಎಂದು ಹೇಳುತ್ತಿರುವ ಪೂಂಜರಲ್ಲಿ ಒಬ್ಬ ವಿವೇಕ ಗೋಚರಿಸುತ್ತಾರೆ. ನಾನೊಬ್ಬ ಮಾತ್ರ ಶಾಸಕನಲ್ಲ; ಪ್ರಜೆಗಳು ನೀವೆಲ್ಲರೂ ಶಾಸಕರು ಎಂಬ ಶಾಸಕರ ಮಾತಿನಲ್ಲಿ ಸಮಾಜದ ಅಭಿವೃದ್ಧಿಯಲ್ಲಿ ಪ್ರಜಾ ಪ್ರತಿನಿಧಿಯಾಗಿ ಆಯ್ಕೆಯಾದ ಓರ್ವ ಶಾಸಕನಿಗಿರುವಷ್ಟೇ ಜವಾಬ್ದಾರಿ, ಬದ್ಧತೆ ಪ್ರತಿಯೋರ್ವ ಪ್ರಜೆಗೂ ಇದೆ-ಎಂಬ ಎಚ್ಚರಿಕೆಯ ಸೂಚನೆಯಿದೆ. ಅಧಿಕಾರಿಗಳು ಜನಸಾಮಾನ್ಯರ ಕಷ್ಟವನ್ನು ಅರ್ಥ ಮಾಡಿಕೊಂಡು ಅವರ ಕೆಲಸಗಳನ್ನು ಯಾವತ್ತೂ ಕಾಯಿಸದೆ, ಸತಾಯಿಸದೆ ಸಕಾಲದಲ್ಲಿ ಮಾಡಿಕೊಡಬೇಕು, ಸಮಸ್ಯೆ ಹೇಳಿಕೊಂಡು ಬರುವ ಬಡವರ ಮುಂದೆ ಲಂಚಕ್ಕಾಗಿ ಜೊಲ್ಲು ಸುರಿಸಿ ನೀವೇ ದೊಡ್ಡ ಸಮಸ್ಯೆಯಾಗಬಾರದು ಎಂದು ತಾಲೂಕು ಕಛೇರಿಯ ಅಧಿಕಾರಿಗಳಿಗೆ ಶಾಸಕರು ಇತ್ತೀಚೆಗೆ ಮಾಡಿರುವ ತಾಕೀತು ಒಂದು ಸ್ವಾಗತಾರ್ಹ ದಿಟ್ಟ ನಡೆ.
ಎಲ್ಲ ಸರಿ. ಆದರೆ ಇತ್ತೀಚೆಗೆ ಸುದ್ದಿ ಬಿಡುಗಡೆಯಲ್ಲಿ ಪ್ರಕಟವಾದ ಪ್ರಜೆಗಳ ಬೇಡಿಕೆಯನ್ನು ನೋಡುವಾಗ ಪೂಂಜರ ಮುಂದೆ ಎಷ್ಟು ದೊಡ್ಡ ಸವಾಲಿದೆ ಎಂಬುದೂ ಅರ್ಥವಾಗುತ್ತದೆ. ಅರ್ಥವಾಗದವರು ಅರ್ಥ ಮಾಡಿಕೊಳ್ಳಬೇಕು ಮತ್ತು ಆದರ್ಶ ನಾಯಕನ ಆದರ್ಶ ಮಾರ್ಗದಲ್ಲಿ ಪ್ರತಿಯೊಬ್ಬರೂ ಹೆಜ್ಜೆಯಿಟ್ಟರೆ ಎಲ್ಲ ಸವಾಲನ್ನೂ ಸಲೀಸಾಗಿ ಎದುರಿಸಿ ಮುನ್ನಡೆಯುವುದು ಕಷ್ಟವೇನಲ್ಲ.
ಜನ ಯಾರೂ ತಮ್ಮ ವೈಯಕ್ತಿಕ ಹಿತಾಸಕ್ತಿಗಳಿಗಾಗಿ ಜನಪ್ರತಿನಿಧಿಗಳ ಪ್ರಭಾವವನ್ನು ಬಳಸಿಕೊಳ್ಳುವ ಬದಲು ಸಾರ್ವಜನಿಕ ಹಿತಾಸಕ್ತಿಗಾಗಿ ಶ್ರಮಿಸಬೇಕು, ಜೊತೆಗೆ ಜನಪ್ರತಿನಿಧಿಗಳ ಇತಿಮಿತಿಯನ್ನೂ ಅರ್ಥಮಾಡಿ ಕೊಳ್ಳಬೇಕು. ಎಲ್ಲ ಸಮಸ್ಯೆಗಳಿಗೂ ಜನಪ್ರತಿನಿಧಿಗಳನ್ನು ಇಲ್ಲವೇ ಸರಕಾರವನ್ನು ಬೊಟ್ಟು ಮಾಡುವುದು ಒಳ್ಳೆಯದಲ್ಲ; ಪ್ರಜ್ಞಾವಂತಿಕೆಯ ಲಕ್ಷಣವೂ ಅಲ್ಲ. ಸರಕಾರದ ಜೊತೆ ನಮ್ಮದೂ ಸಹಭಾಗಿತ್ವವಿದ್ದಲ್ಲಿ, ಸೂಕ್ತ ಸಲಹೆ-ಸೂಚನೆಗಳಿದ್ದಲ್ಲಿ ಅಭಿವೃದ್ಧಿ ಮರೀಚಿಕೆಯೇನೂ ಅಲ್ಲ. ಆದ್ದರಿಂದ ಭರವಸೆಯ ಬೆಳಕಿನಲ್ಲಿ ಬೆಳ್ತಂಗಡಿಯೂ ಬೆಳಗಲು ಎಲ್ಲರೂ ದ್ವೇಷ ಮರೆತು, ತಮ್ಮ ತಮ್ಮ ದೋಷ ಕಳೆದು ಒಂದಿಷ್ಟು ಬೆವರು ಹರಿಸಿದರೆ, ಬೆಳ್ತಂಗಡಿ ಬೆಳಗುವುದರಲ್ಲಿ ಖಂಡಿತವಾಗಿಯೂ ಅನುಮಾನವಿಲ್ಲ.

  • ಡಾ. ದಿವ ಕೊಕ್ಕಡ
    ಕನ್ನಡ ಸಹಾಯಕ ಪ್ರಾಧ್ಯಾಪಕರು
    ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು, (ಸ್ವಾಯತ್ತ) ಉಜಿರೆ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.