ಶಿಕ್ಷಣದಿಂದ ಸಾಧನೆಯ ಅಪೂರ್ವ ಅವಕಾಶ: ಡಾ.ಡಿ.ವೀರೇಂದ್ರ ಹೆಗ್ಗಡೆ

 

ಉಜಿರೆ : ಬಡತನ ಸೇರಿದಂತೆ ವಿವಿಧ ಸಾಮಾಜಿಕ ಮಿತಿಗಳ ನಡುವೆ ಉನ್ನತ ಸಾಧನೆಯ ಅವಕಾಶವನ್ನು ಒದಗಿಸಿಕೊಡುವ ಮಹತ್ವದ ವಲಯವಾಗಿ ಶಿಕ್ಷಣ ಪ್ರಮುಖ ಪಾತ್ರವಹಿಸುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು.
ಅವರು ಸಮಾಜ ವಿಜ್ಞಾನ ಶಿಕ್ಷಕರಿಗಾಗಿ ಅಜೀಮ್ ಪ್ರೇಮ್‌ಜಿ ಪ್ರತಿಷ್ಠಾನವು ಉಜಿರೆ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಸಮಾಜಕಾರ್ಯ ವಿಭಾಗದ ಸಹಯೋಗದೊಂದಿಗೆ ಅ. 8 ರಿಂದ 12ರವರೆಗೆ ಆಯೋಜಿಸಿದ ಒಂದು ವಾರದ ತರಬೇತಿ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಶಿಕ್ಷಣ ಕೇವಲ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವುದಕ್ಕೆ ಮಾತ್ರ ಸೀಮಿತವಲ್ಲ. ಅದರಿಂದ ಉತ್ತಮ ಮಾರ್ಗದರ್ಶನ ಲಭ್ಯವಾಗುತ್ತದೆ. ವ್ಯಕ್ತಿಗತ ಬೆಳವಣಿಗೆಯ ಜೊತೆಗೆ ಸಾಮಾಜಿಕವಾಗಿಯೂ ಕೊಡುಗೆ ನೀಡಲು ನೆರವಾಗುತ್ತದೆ. ಶಿಕ್ಷಣವು ಪರೀಕ್ಷಾ ಫಲಿತಾಂಶ ನೀಡುವುದಷ್ಟೇ ಅಲ್ಲದೇ ಬದುಕನ್ನು ಸಮಗ್ರವಾಗಿಸಿ ಕೊಳ್ಳುವುದಕ್ಕೂ ಸಹಾಯಕವಾಗುತ್ತದೆ. ಇದನ್ನು ಸ್ಪಷ್ಟಪಡಿಸಿಕೊಂಡು ಹೆಜ್ಜೆಯಿರಿಸಬೇಕು ಎಂದು ಹೇಳಿದರು.
ಶಿಕ್ಷಕನಾದವನು ವಿದ್ಯಾರ್ಥಿಯಾ ದವನಿಗೆ ಪಾಠವನ್ನು ಬೋಧಿಸುವದರ ಜೊತೆಗೆ ಜೀವನಕ್ಕೆ ಪೂರಕವಾದ ಮಾರ್ಗದರ್ಶನವನ್ನು ನೀಡಬೇಕು. ವಿದ್ಯಾರ್ಥಿಗಳಲ್ಲಿ ಶಿಕ್ಷಣ ಪಡೆಯುವ ಮಹತ್ವಾಕಾಂಕ್ಷೆ ಬಿತ್ತಬೇಕು. ಜ್ಞಾನಾರ್ಜನೆಗೆ ಸಹಾಯಕವಾಗುವ ವಾತಾವರಣವನ್ನು ನಿರ್ಮಿಸಬೇಕು ಎಂದರು.
ಇಂದಿನ ಸಮಾಜದಲ್ಲಿ ಜನರು ಸಕಾರಾತ್ಮಕ ವಿಚಾರಗಳಿಗಿಂತ ನಕಾರಾತ್ಮಕತೆಗೇ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಜ್ಞಾನದ ಹಸಿವು ಮೂಡಿಸುವ ಸಕಾರಾತ್ಮಕ ಹೆಜ್ಜೆಗಳು ಇಂಥ ನಕಾರಾತ್ಮಕತೆಯನ್ನು ಇಲ್ಲವಾಗಿಸುತ್ತವೆ. ಜ್ಞಾನವೇ ಶಾಶ್ವತ ಎಂಬುದನ್ನು ನಿರೂಪಿಸುತ್ತವೆ ಎಂದು ನುಡಿದರು.
ಕಲಬುರ್ಗಿ, ಯಾದಗಿರಿ, ಜೇವರ್ಗಿ ಮತ್ತು ಸುರಪುರದ ಪ್ರಾಥಮಿಕ ಶಾಲೆಗಳ 228 ಸಮಾಜ ವಿಜ್ಞಾನ ಶಿಕ್ಷಕರು ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದಾರೆ. ಶಿಕ್ಷಕರಿಗೆ 24 ಸಂಪನ್ಮೂಲ ವ್ಯಕ್ತಿಗಳು ತರಬೇತಿ ನೀಡುತ್ತಿದ್ದಾರೆ.
ಕಾರ್ಯಕ್ರಮದಲ್ಲಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಬಿ ಯಶೋವರ್ಮ, ಕಾಲೇಜಿನ ಪ್ರಾಂಶುಪಾಲ ಪ್ರೊ.ಟಿ.ಎನ್ ಕೇಶವ್ ಹಾಗೂ ಅಜೀಮ್ ಪ್ರೇಮ್‌ಜಿ ಪ್ರತಿಷ್ಠಾನದ ಗುರುರಾಜ್ ಉಪಸ್ಥಿತರಿದ್ದರು.
ವರದಿ: ನಿಕಿತಾ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.