ಬಾಂಜಾರುಮಲೆ ಪ್ರದೇಶ ಅಭಿವೃದ್ಧಿಗೆ ರೂ.2.75ಕೋಟಿ : ಡಿ.ಸಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ನೆರಿಯ ಗ್ರಾಮ ಪಂಚಾಯತಕ್ಕೆ ಸೇರಿದ ಬಾಂಜಾರುಮಲೆ ಪ್ರದೇಶದ ಜನರ ವಿವಿಧ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸುತ್ತೇವೆ. ಈಗಾಗಲೇ ಈ ಪ್ರದೇಶದ ಅಭಿವೃದ್ಧಿಗೆ ರೂ.2.75 ಕೋಟಿ ವೆಚ್ಚದ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲಾಗಿದ್ದು, ಮಂಜೂರಾತಿಯ ಹಂತದಲ್ಲಿದೆ ಎಂದು ದ.ಕ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದರು.
ಅವರು ಅ.10 ರಂದು ಬಾಂಜಾರುಮಲೆಗೆ ಭೇಟಿ ನೀಡಿ ಇಲ್ಲಿಯ ಸಮುದಾಯ ಭವನದಲ್ಲಿ ಈ ಪ್ರದೇಶದ ನಾಗರಿಕರ ಅಹವಾಲುಗಳನ್ನು ಸ್ವೀಕರಿಸಿ ಇದುವರೆಗೆ ವಿವಿಧ ಇಲಾಖೆಗಳಿಂದ ನಡೆದ ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲನೆ ನಡೆಸಿದರು. ಬಾಂಜಾರುಮಲೆಗೆ ಬರುವ ರಸ್ತೆ ಕಾಂಕ್ರೀಟೀಕರಣ ನಡೆಯುತ್ತಿದೆ. ಇಲ್ಲಿಯ ನಾಗರಿಕರು ವಿವಿಧ ಬೇಡಿಕೆಗಳನ್ನು ಸಲ್ಲಿಸಿದ್ದು, ಇದನ್ನು ಆದ್ಯತೆಯ ಮೇಲೆ ಈಡೇರಿಸಲಾಗುತ್ತದೆ ಎಂದು ಭರವಸೆ ನೀಡಿದರು. ಬಾಂಜಾರು ಮಲೆಗೆ ಬರುವ ರಸ್ತೆಯ ಪೂರ್ತಿ ಕಾಂಕ್ರೀಟೀಕರಣಗೊಳಿಸಬೇಕು, ಒಳ ರಸ್ತೆಯ ಡಾಮರೀಕರಣ, ಎರಡು ಸೇತುವೆಗಳ ನಿರ್ಮಾಣ, ಬಾಂಜಾರುಮಲೆಗೆ ನೆರಿಯದ ಅಣಿಯೂರಿಗೆ ಹತ್ತಿರದ ದಾರಿಯಾಗಿದ್ದು, ಈಗಾಗಲೇ ಸ್ವಲ್ಪ ಭಾಗದಲ್ಲಿ ಪಂಚಾಯತು ರಸ್ತೆ ಇದೆ. ಈ ಭಾಗದಲ್ಲಿ ರಸ್ತೆ ನಿರ್ಮಿಸಿಕೊಡಬೇಕು ಎಂದು ನಾಗರಿಕರು ಬೇಡಿಕೆ ಸಲ್ಲಿಸಿದರು.
ಬಾಂಜಾರು ಪ್ರದೇಶಕ್ಕೆ ವಿದ್ಯುತ್ ವ್ಯವಸ್ಥೆ, ಇಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಹತ್ತಿರದ ನದಿಯಿಂದ ಪೈಪ್ ಮೂಲಕ ನೀರು ಪೂರೈಕೆ ಮಾಡುವ ವ್ಯವಸ್ಥೆ ಮಾಡಬೇಕು, ಇಲ್ಲಿಯ ನಿವಾಸಿಗಳು ಪಡಿತರಕ್ಕಾಗಿ ಕಕ್ಕಿಂಜೆಗೆ ಹೋಗಬೇಕಾಗಿದ್ದು, ಇಲ್ಲಿಗೆ ಸಂಚಾರಿ ಪಡಿತರ ವ್ಯವಸ್ಥೆ ಮಾಡಬೇಕು. ಇಲ್ಲಿ ವಿದ್ಯುತ್ ಇಲ್ಲದಿರುವುದರಿಂದ ಪ್ರತಿ ಕಾರ್ಡಿಗೆ 5 ಲೀಟರ್ ಸೀಮೆ ಎಣ್ಣೆ ನೀಡಬೇಕು, ಇಲ್ಲಿಯ ಸಮುದಾಯ ಭವನವನ್ನು ಅಭಿವೃದ್ಧಿಪಡಿಸಬೇಕು ಎಂದು ಇಲ್ಲಿಯ ನಿವಾಸಿಗಳು ಅಹವಾಲು ಸಲ್ಲಿಸಿದರು.
ಬಾಂಜಾರಿನಿಂದ ನೆರಿಯದ ಅಣಿಯೂರಿಗೆ ರಸ್ತೆ ನಿರ್ಮಾಣಕ್ಕೆ ಖಾಸಗಿಯವರ ಎಷ್ಟು ಜಾಗ ಬರುತ್ತದೆ ಎಂದು ಸರ್ವೆ ನಡೆಸಿ ವರದಿಕೊಡುವಂತೆ ಡಿ.ಸಿ.ಯವರು ತಹಶೀಲ್ದಾರರಿಗೆ ಸೂಚನೆ ನೀಡಿದರು. ಬಾಂಜಾರುಮಲೆಗೆ ವಿದ್ಯುತ್ ಸಂಪರ್ಕಕ್ಕೆ ಸೌಭಾಗ್ಯ ಯೋಜನೆಯಲ್ಲಿ ಕ್ರಿಯಾ ಯೋಜನೆ ಸಲ್ಲಿಸಲಾಗಿದ್ದು, ಡಿಸೆಂಬರ್ ಒಳಗೆ ಟೆಂಡರ್ ಆಗುತ್ತದೆ ಎಂದು ಮೆಸ್ಕಾಂನ ಶಿವಶಂಕರ್ ಮಾಹಿತಿ ನೀಡಿದರು.
ಎರಡು ಸೇತುವೆಗೆ ಐ.ಟಿ.ಡಿ.ಪಿ ಯಿಂದ ರೂ.25 ಲಕ್ಷಕ್ಕೆ ಕ್ರಿಯಾ ಯೋಜನೆ ಮಾಡಲಾಗಿದೆ ಎಂದು ಅಧಿಕಾರಿ ಹೇಮಲತಾ ತಿಳಿಸಿದರು. ಕುಡಿಯುವ ನೀರು ಪೈಪ್‌ಲೈನ್ ಹಾಕಲು ಎಸ್ಟಿಮೇಟ್ ಮಾಡುವಂತೆ ಜಿ.ಪಂ. ಇಂಜಿನಿಯರಿಂಗ್ ವಿಭಾಗದ ಕೌಶಿಕ್ ಎಸ್. ಚಂದ್ರರಿಗೆ ಡಿ.ಸಿಯವರು ಸೂಚನೆ ನೀಡಿದರು. ಬಾಂಜಾರಿಗೆ ಸಂಚಾರಿ ಆರೋಗ್ಯ ಘಟಕ ವಾರಕ್ಕೊಮ್ಮೆ ಬರುವುದು, ವಿದ್ಯುತ್ ಬರುವವರೆಗೆ ಸೋಲಾರ್ ವ್ಯವಸ್ಥೆ, ಸಮುದಾಯ ಭವನ ಅಭಿವೃದ್ಧಿ, ಒಂದು ದಿನ ಬಾಂಜಾರಿನಲ್ಲಿ ಆಧಾರ್ ತೆಗೆಯಲು ವ್ಯವಸ್ಥೆ, ಅಡಿಕೆ ಕೊಳೆ ರೋಗಕ್ಕೆ ಪರಿಹಾರ ನೀಡುವ ಬಗ್ಗೆ ಸೂಕ್ತ ವ್ಯವಸ್ಥೆಗಳನ್ನು ಮಾಡುವುದಾಗಿ ಜಿಲ್ಲಾಧಿಕಾರಿಗಳು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಸೆಲ್ವಮಣಿ, ತಹಶೀಲ್ದಾರ್ ಮದನ್‌ಮೋಹನ್, ಐ.ಟಿ.ಡಿ.ಪಿ ಯೋಜನೆಯ ಹೇಮಲತಾ, ಎಸ್.ಸಿ, ಎಸ್.ಟಿ. ನಿಗಮದ ಅಧಿಕಾರಿ ಅನಿತಾ, ಸಮಾಜ ಕಲ್ಯಾಣಾಧಿಕಾರಿ ಮೋಹನ್ ಕುಮಾರ್, ತಾ.ಪಂ. ಕಾರ್ಯ ನಿರ್ವಾಹಣಾಧಿಕಾರಿ ಕುಸುಮಾಧರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಸುಂದರ ಪೂಜಾರಿ, ಜಿ.ಪಂ. ಸದಸ್ಯೆ ನಮಿತಾ, ನೆರಿಯ ಗ್ರಾ.ಪಂ. ಅಧ್ಯಕ್ಷ ಪಿ. ಮಹಮ್ಮದ್, ಸದಸ್ಯರಾದ ಆಶ್ರಫ್ ಬಿ., ಮಥಾಯಿ, ಮೀನಾಕ್ಷಿ, ಸುಧಾಕರ್, ಬಾಬು ಗೌಡ, ವಸಂತಿ, ವರ್ಗೀಸ್, ಸಿಡಿಪಿಒ ಪ್ರಿಯಾ ಆಗ್ನೆಸ್, ಕಂದಾಯ ನಿರೀಕ್ಷಕ ರವಿಕುಮಾರ್, ಬೆಳ್ತಂಗಡಿ ವಲಯಾರಣ್ಯಾಧಿಕಾರಿ ಸುಬ್ಬಯ್ಯ ನಾಯ್ಕ, ಐಟಿಡಿಪಿ ತಾಲೂಕು ಅಧಿಕಾರಿ ಹೇಮಲತಾ, ಪಿಡಿಒ ಚೇತನ್, ಆರೋಗ್ಯಾಧಿಕಾರಿ ಡಾ| ಕಲಾಮಧು, ಐಟಿಡಿಪಿಯ ಸೋಮಶೇಖರ್, ಧರ್ಮಸ್ಥಳ ಠಾಣಾ ಎಸ್.ಐ. ಅವಿನಾಶ್, ಜಿ.ಪಂ. ಇಂಜಿನಿಯರ್ ಸುಜೀತ್, ತಾಲೂಕು ಸಂಯೋಜಕ ಜಯಾನಂದ ಲಾಯಿಲ, ಮೆಸ್ಕಾಂ ಜೆಇ ಕೃಷ್ಣೇ ಗೌಡ, ಆದಿವಾಸಿ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಶೇಖರ ಎಲ್, ಎಪಿಎಂಸಿ ಮಾಜಿ ಉಪಾಧ್ಯಕ್ಷ ಲಕ್ಷ್ಮಣ್, ಜಯಾನಂದ ಪಿಲಿಕಲ, ಕೃಷ್ಣ ಪೂರ್ಜೆ, ನೋಣಯ್ಯ, ಗಿರೀಶ್ ನಿಡ್ಲೆ, ಉಮಾನಾಥ, ಮಲೆಕುಡಿಯ ಸಂಘದ ಕಾರ್ಯದರ್ಶಿ ಹರೀಶ್ ಎಳನೀರು, ಪುಷ್ಪ, ಗುತ್ತಿಗೆದಾರ ಶಾಫಿ ಹಾಗೂ ಸ್ಥಳೀಯ ನಿವಾಸಿಗಳಾದ ನಾಗೇಶ್, ಸಂತೋಷ್, ಸುನೀಲ್ ಮೊದಲಾದವರು ಉಪಸ್ಥಿತರಿದ್ದರು.

 

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.