ಉಜಿರೆಯಲ್ಲಿ ಲಕ್ಷ ತುಳಸಿ ಅರ್ಚನೆ, ಪ್ರತಿಭಾ ಪುರಸ್ಕಾರ

 

ಉಜಿರೆ : ನಾವು ಆಡಂಬರಕ್ಕೆ ಮಾತ್ರ ಬೆಲೆ ಕೊಡುತ್ತಿದ್ದೇವೆ. ಅನುಷ್ಠಾನಕ್ಕೆ ಆದ್ಯತೆ ನೀಡುತ್ತಿಲ್ಲ. ಧಾರ್ಮಿಕ ಗ್ರಂಥ, ಪುಸ್ತಕಗಳಿರುವುದು ಕೇವಲ ಪೂಜೆಗಾಗಿಯಲ್ಲ. ಅನುಸರಣೆಗಾಗಿ, ಮಾಡುವ ಪ್ರತಿಯೊಂದು ಕೆಲಸದಲ್ಲೂ ಶ್ರದ್ಧೆ, ಭಕ್ತಿಯಿರಬೇಕು. ನಾವು ಯಾವುದೇ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡದಿದ್ದರೆ ಉಳಿಗಾಲವಿಲ್ಲ. ಆಚಾರ ವಿಚಾರದಲ್ಲಿ ಬ್ರಾಹ್ಮಣ್ಯ ಮರೆಯಾಗುತ್ತಿದೆ ಎಂದು ಮಂಗಳೂರಿನ ಸರಕಾರಿ ಮಹಿಳಾ ಪ್ರ. ದರ್ಜೆ ಕಾಲೇಜು ಪ್ರಾಚಾರ್ಯ ಪ್ರೊ| ಜಗದೀಶ ಬಾಳ ಹೇಳಿದರು.
ಅವರು ಅ. 7 ರಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಶ್ರೀ ರಾಮಕೃಷ್ಣ ಸಭಾ ಮಂಟಪದಲ್ಲಿ ಬೆಳ್ತಂಗಡಿ ತಾಲೂಕು ತುಳು ಶಿವಳ್ಳಿ ಸಭಾ ವತಿಯಿಂದ ನಡೆದ ‘ಲಕ್ಷಾರ್ಚನೆ ಸೇವೆ’ ಹಾಗೂ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ಸಾಧಕರ ಪುರಸ್ಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು. ಮಣಿಪಾಲ ಮಾಹೆ ವಿವಿ ಮಾಹಿತಿ ತಂತ್ರಜ್ಞಾನ ವಿಭಾಗದ ಪ್ರಾಧ್ಯಾಪಕ ಹರಿಶ್ಚಂದ್ರ ಹೆಬ್ಬಾರ್ ನಮ್ಮ ಕುಟುಂಬಗಳೂ ಸಣ್ಣದಾಗುತ್ತಿದ್ದರೂ ಮನುಷ್ಯ ಒಂಟಿಯಲ್ಲ, ಸಂಘಜೀವಿ. ಮಕ್ಕಳಲ್ಲಿ ಶಾರೀರಿಕ ಚಟುವಟಿಕೆ ಕಡಿಮೆಯಾಗುತ್ತಿದ್ದು ದುರಾಭ್ಯಾಸ, ಸವಾಲುಗಳನ್ನೆದುರಿಸಿ ಕಷ್ಟ ಬಂದಾಗ ಸಮಾಜದಲ್ಲಿ ಎದುರಿಸುವ ಧೈರ್ಯ, ಶಕ್ತಿಯನ್ನು ತುಂಬಬೇಕು. ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸಿ, ಸಮಾಜದಲ್ಲಿ ಸೇವೆ ಸಲ್ಲಿಸಿದವರನ್ನು ಗುರುತಿಸಿ ಗೌರವಿಸುವುದು ಶ್ಲಾಘನೀಯವೆಂದರು.
ಬೆಳ್ತಂಗಡಿ ತಾಲೂಕು ತುಳು ಶಿವಳ್ಳಿ ಸಭಾಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ ಅಧ್ಯಕ್ಷತೆ ವಹಿಸಿ ಯುವ ಪ್ರತಿಭೆಗಳು ಸಮಾಜದ ಆಸ್ತಿ. ಪ್ರತಿಭೆಗಳ ಮೂಲಕ ಸಂಘಟನೆಗೆ ವಿಶೇಷ ಶಕ್ತಿ, ಬಲ ಬಂದಿದೆಯೆಂದರು. ಸಮಾಜದ ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಹಾಗೂ ಕ್ರೀಡೆ, ಸಾಂಸ್ಕೃತಿಕ ಕ್ಷೇತ್ರದ ಸಾಧಕರನ್ನು ಅರ್ಹತಾ ಪತ್ರ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕೃಷಿ ಪತ್ತಿನ ಸಹಕಾರಿ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಸುಬ್ರಹ್ಮಣ್ಯ ನೂರಿತ್ತಾಯ (ಧರ್ಮಸ್ಥಳ), ಹರಿಪ್ರಸಾದ್ ಕೆ.ಎಸ್. (ಗೇರುಕಟ್ಟೆ) ಮತ್ತು ಅಶೋಕ ಕುಮಾರ್ ಭಾಂಗಿಣ್ಣಾಯ (ಕೊಯ್ಯೂರು), ಛಾಯಾಗ್ರಾಹಕ ವಸಂತ ಶರ್ಮ ಮತ್ತು ಯುವ ಸಾಧಕ ಶಿವಕುಮಾರ್ ಬಾರಿತ್ತಾಯ ಅವರನ್ನು ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ತಾಲೂಕು ತುಳು ಶಿವಳ್ಳಿ ಸಭಾ ಉಪಾಧ್ಯಕ್ಷ ರಾಜಾರಾಮ ಶರ್ಮ, ನಾಗೇಶ ರಾವ್ ಮುಂಡ್ರುಪ್ಪಾಡಿ, ಮಹಿಳಾ ಘಟಕಾಧ್ಯಕ್ಷೆ ಸ್ವರ್ಣ ಶ್ರೀರಂಗ ನೂರಿತ್ತಾಯ ಉಪಸ್ಥಿತರಿದ್ದರು. ಕಾರ್ಯದರ್ಶಿ ರಾಜಪ್ರಸಾದ್ ಪೋಳ್ನಾಯ ಪ್ರಸ್ತಾವಿಸಿ, ವಾರ್ಷಿಕ ವರದಿ ಮಂಡಿಸಿದರು. ಉಜಿರೆ ವಲಯಾಧ್ಯಕ್ಷ ಗೋಪಾಲಕೃಷ್ಣ ಭಟ್ ಮತ್ತು ಗಾಯತ್ರಿ ಶ್ರೀಧರ್ ಪ್ರತಿಭಾ ಪುರಸ್ಕಾರದ ವಿವರ ನೀಡಿದರು. ಜನಾರ್ದನ ಪಡ್ಡಿಲ್ಲಾಯ, ವಾಣಿ ಸಂಪಿಗೆತ್ತಾಯ, ದುರ್ಗಾಪ್ರಸಾದ್ ಕೆರ್ಮುಣ್ಣಾಯ, ರಾಮಕೃಷ್ಣ ಭಟ್ ಮತ್ತು ಮೋಹನ ಉಪಾಧ್ಯಾಯ ಸಮ್ಮಾನಿತರನ್ನು ಪರಿಚಯಿಸಿ ಸನ್ಮಾನ ಪತ್ರ ವಾಚಿಸಿದರು.
ಶಿವಳ್ಳಿ ವಿಪ್ರ ಯುವ ವೇದಿಕೆ : ಬೆಳ್ತಂಗಡಿ ತಾಲೂಕು ತುಳು ಶಿವಳ್ಳಿ ಸಭಾ ವತಿಯಿಂದ ಹೊಸದಾಗಿ ಅಸ್ತಿತ್ವಕ್ಕೆ ಬಂದ ಶಿವಳ್ಳಿ ವಿಪ್ರ ಯುವ ವೇದಿಕೆಯನ್ನು ಗೌರವಾಧ್ಯಕ್ಷ ವಿಜಯರಾಘವ ಪಡ್ವೆಟ್ನಾಯ ದೀಪ ಪ್ರಜ್ವಲನಗೊಳಿಸಿ ಉದ್ಘಾಟಿಸಿ, ಬಾಡಿ ಮುದುಡುವ ಮರದಲ್ಲಿ ಹಸುರೆಲೆ ಚಿಗುರೊಡೆಯುವಂತೆ ಶಿವಳ್ಳಿ ವಿಪ್ರ ಯುವ ವೇದಿಕೆ ಪ್ರಜ್ವಲಿಸಿ ಸಮಾಜದ ಸಂಘಟನೆಗೆ ಶಕ್ತಿಯಾಗಲೆಂದು ಶುಭ ಕೋರಿದರು. ಶಿವಳ್ಳಿ ವಿಪ್ರ ಯುವ ವೇದಿಕೆ ಅಧ್ಯಕ್ಷ ದುರ್ಗಾಪ್ರಸಾದ್ ಕೆರ್ಮುಣ್ಣಾಯ, ಕಾರ್ಯದರ್ಶಿ ಜನಾರ್ದನ ಪಡ್ಡಿಲ್ಲಾಯ, ಜತೆ ಕಾರ್ಯದರ್ಶಿ ಭಾರ್ಗವಿ ಶಬರಾಯ, ಸಂಚಾಲಕ ಶಿವಕುಮಾರ್ ಬಾರಿತ್ತಾಯ ಅವರನ್ನು ಗುರುತಿಸಿ ಅಭಿನಂದಿಸಲಾಯಿತು. ದುರ್ಗಾಪ್ರಸಾದ್ ಕೆರ್ಮುಣ್ಣಾಯ ಯುವ ವೇದಿಕೆಯ ಕಾರ್ಯ ಚಟುವಟಿಕೆಗಳಿಗೆ ಎಲ್ಲರ ಸಹಕಾರ, ಪ್ರೋತ್ಸಾಹ ಕೋರಿದರು. ‘ಶ್ರೀ ತುಳಸಿ’ ಪತ್ರಿಕೆಯ ಗೌರವ ಸಂಪಾದಕ ಶರತ್‌ಕೃಷ್ಣ ಪಡ್ವೆಟ್ನಾಯ ಸ್ವಾಗತಿಸಿ, ಮುರಲಿಕೃಷ್ಣ ಆಚಾರ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಜ್ಯೋತಿ ಗುರುರಾಜ್ ವಂದಿಸಿದರು.
ಲಕ್ಷ ತುಳಸಿ ಅರ್ಚನೆ : ಉಜಿರೆ ಶ್ರೀ ಜನಾರ್ದನ ಸ್ವಾಮಿಗೆ ಬೆಳ್ತಂಗಡಿ ತಾಲೂಕು ತುಳು ಶಿವಳ್ಳಿ ಸಭಾ ವತಿಯಿಂದ ಅರ್ಚಕ ವೇದಮೂರ್ತಿ ರಾಮಚಂದ್ರ ಹೊಳ್ಳರಿಂದ ಲೋಕ ಕಲ್ಯಾಣಾರ್ಥವಾಗಿ ಲಕ್ಷ ತುಳಸಿ ಅರ್ಚನೆ ನಡೆಯಿತು. ಆಡಳಿತ ಮೊಕ್ತೇಸರ ವಿಜಯರಾಘವ ಪಡ್ವೆಟ್ನಾಯರ ನೇತೃತ್ವದಲ್ಲಿ ವೇದಮೂರ್ತಿ ಶ್ರೀಪತಿ ಎಳಚಿತ್ತಾಯರ ಉಪಸ್ಥಿತಿಯಲ್ಲಿ ೪೫ ವಿಪ್ರರಿಂದ ವಿಷ್ಣು ಸಹಸ್ರನಾಮಾವಳಿ ಪಠನ ಹಾಗೂ ಶ್ರೀ ಜನಾರ್ದನ ಸ್ವಾಮಿ ಭಗಿನಿ ಭಜನಾ ಮಂಡಳಿಯ ಸದಸ್ಯೆಯರಿಂದ ಲಕ್ಷ್ಮೀ ಶೋಭಾನೆ ಹಾಗೂ ವಿಷ್ಣು ಸಹಸ್ರನಾಮ ಪಠನ ನಡೆಯಿತು. ತುಳು ಶಿವಳ್ಳಿ ಸಭಾಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ ಸಂಕಲ್ಪ ಕಾರ್ಯ ನೆರವೇರಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.