ಕೊಲ್ಲಿ ಅಂಗನವಾಡಿ ಶಿಕ್ಷಕಿ ಮರಳಿ ಬಂದಿರುವುದನ್ನು ವಿರೋಧಿಸಿ ಪ್ರತಿಭಟನೆ

ಮಿತ್ತಬಾಗಿಲು : ಇಲ್ಲಿಯ ಕೊಲ್ಲಿ ಅಂಗನವಾಡಿ ಕೇಂದ್ರದಿಂದ ವರ್ಗಾವಣೆಗೊಂಡ ಶಿಕ್ಷಕಿ ಮರಳಿ ಬಂದಿರುವುದನ್ನು ವಿರೋಧಿಸಿ ಸೆ.27 ರಂದು ಅಂಗನವಾಡಿಯಲ್ಲಿ ಪೋಷಕರು ಹಾಗೂ ಮಕ್ಕಳು ತಡರಾತ್ರಿಯವರೆಗೂ ನಿರಂತರ ಪ್ರತಿಭಟನೆಯನ್ನು ಮುಂದುವರೆಸಿದರು.
ಇಲ್ಲಿಯ ಅಂಗನವಾಡಿ ಕೇಂದ್ರದ ಶಿಕ್ಷಕಿ ವಿಜಯಲಕ್ಷ್ಮೀ ರವರನ್ನು ಪೋಷಕರ ಹಾಗೂ ಮಕ್ಕಳ ಪ್ರತಿಭಟನೆಯ ಹಿನ್ನೆಲೆಯಲ್ಲಿ ಮೂರು ತಿಂಗಳುಗಳ ಹಿಂದೆ ಈ ಅಂಗನವಾಡಿಯಿಂದ ಬದಲಿಸಲಾಗಿತ್ತು. ಸೆ. 27 ರಂದು ಅವರು ಅಂಗನವಾಡಿಗೆ ಹಿಂತಿರುಗಿ ಬಂದಿದ್ದರು. ಇದು ಪೋಷಕರ ಹಾಗೂ ಗ್ರಾಮಸ್ಥರ ತೀವ್ರ ಅಸಮಧಾನಕ್ಕೆ ಕಾರಣವಾಯಿತು. ವಿಜಯಲಕ್ಷ್ಮೀ ರವರು ಅಂಗನವಾಡಿಗೆ ಆಗಮಿಸುತ್ತಿದ್ದಂತೆಯೇ ಪೋಷಕರು ಹಾಗೂ ಸ್ಥಳೀಯರು ಪ್ರತಿಭಟನೆ ಆರಂಭಿಸಿದರು. ಯಾವುದೇ ಕಾರಣಕ್ಕೂ ಅವರಿಗೆ ಅಂಗನವಾಡಿಗೆ ಪ್ರವೇಶ ನೀಡುವುದಿಲ್ಲ. ಅವರು ಅಂಗನವಾಡಿಯಿಂದ ಹಿಂತಿರುಗುವವರೆಗೂ ಪ್ರತಿಭಟನೆಯನ್ನು ಹಿಂಪಡೆಯುವುದಲ್ಲ ಎಂದು ಅಂಗನವಾಡಿಯ ಮುಂದೆಯೇ ಕುಳಿತರು.
ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಪ್ರಿಯಾ ಅಗ್ನೇಸ್ ರವರು ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿ, ಕಾನೂನು ಪ್ರಕಾರವಾಗಿ ಅವರನ್ನು ಈ ಅಂಗನವಾಡಿಗೆ ಹಾಕಿದ್ದೇವೆ. ನಾಳೆಯಿಂದ ಅವರೇ ಶಿಕ್ಷಕರಾಗಿರುತ್ತಾರೆ ಎಂದರು. ಇದು ಪ್ರತಿಭಟನಾಕಾರರನ್ನು ಮತ್ತಷ್ಟು ಕೆರಳಿಸಿದ್ದು , ಶಿಕ್ಷಕಿ ಅಂಗನವಾಡಿಯಿಂದ ಹೋಗುವವರೆಗೂ ಪ್ರತಿಭಟನೆಯನ್ನು ಹಿಂಪಡೆಯುವುದಿಲ್ಲ ಎಂದು ಪಟ್ಟಿ ಹಿಡಿದಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.