ಉಜಿರೆಯಲ್ಲಿ ನಾರಾಯಣ ಹೆಗ್ಡೆ ಸಂಸ್ಮರಣೆ-ಯಕ್ಷಗಾಯನ- ಅಭಿನಂದನೆ-ತಾಳಮದ್ದಳೆ

ಉಜಿರೆ: ಯಕ್ಷಲೋಕದಲ್ಲಿ ಪಾತ್ರಗಳನ್ನು ಆವಾಹಿಸಿ ಮೆರೆದ ದಿ. ಪುತ್ತೂರು ನಾರಾಯಣ ಹೆಗ್ಡೆಯವರು ಅದ್ಭುತ ನಾಟಕೀಯ ಪ್ರಜ್ಞೆಯ ಶ್ರೇಷ್ಠ ನಟ. ಅಸುರೀ ಭಾವದ ದೈತ್ಯ ಧ್ವನಿಗೆ ಭಾವುಕತೆಯ ಆವರಣದಲ್ಲಿ ಹೂರಣವಾಗಿಸಿ ಪ್ರೇಕ್ಷಕರಿಗೆ ಉಣಬಡಿಸುತ್ತಿದ್ದ ನಾಟಕೀಯ ಪ್ರಜ್ಞೆಯಿಂದಾಗಿ ಯಕ್ಷಲೋಕದಲ್ಲಿ ಅವರು ಶ್ರೇಷ್ಟರು. ಗರಳುಕಂಠದ ರಾಕ್ಷಸೀ ಸ್ವರಕ್ಕೆ ಸಾತ್ವಿಕತೆಯ ಮಾಧುರ್ಯ ಬೆರೆಸಿದ ಯಾವ ಪಾತ್ರಕ್ಕೂ ಒಪ್ಪುವ ಗಂಭೀರ ವಾಚಿಕ ಪ್ರತಿಭೆ ಅವರದ್ದು. ಇದು ಶೇಣಿಯವರ ಹೊರತು ಮತ್ತೊಬ್ಬರಲ್ಲೂ ಇಲ್ಲದ ವಿಶೇಷತೆ. ಹೆಗ್ಡೆಯವರು ನಾಟ್ಯ ಚತುರನಲ್ಲ, ಆದರೆ ರಂಗಬಳಸುವಿಕೆಯ ಬೀಸುನಡೆ, ದೇಹಭಾಷೆಗಳಿಂದಾಗಿ ಅವರು ರಂಗದಲ್ಲಿ ಹೆಡೆ ಎತ್ತಿದ ಹಾವಿನಂತೆ ಪಾತ್ರ ಮೆರೆಸುತ್ತಿದ್ದರು ಎಂದು ಹಿರಿಯ ಯಕ್ಷಗಾನ ಕಲಾವಿದ, ವಾಗ್ಮಿ ಉಜಿರೆ ಅಶೋಕ ಭಟ್ ನುಡಿದರು.

ಉಜಿರೆಯ ದೊಂಪದಪಲ್ಕೆ ಶಾಲೆ ಹತ್ತಿರದ ಓಡಲ ಎಂಬಲ್ಲಿರುವ ‘ಸಂಜೀವಿಕೃಪಾ’ ಮನೆಯ ಆವರಣದಲ್ಲಿ ಸೆ.19 ರಂದು ಯಕ್ಷಸಂಜೀವಿನೀ ಪ್ರತಿಷ್ಠಾನ ಪುತ್ತೂರು ಇದರ ಸಂಯೋಜನೆಯಲ್ಲಿ ನಡೆದ ಯಕ್ಷಸಾರ್ವಭೌಮ ಪುತ್ತೂರು ನಾರಾಯಣ ಹೆಗ್ಡೆ ಸಂಸ್ಮರಣಾ ಸಮಾರಂಭದಲ್ಲಿ ಅವರು ಸಂಸ್ಮರಣೆ ಮಾಡುತ್ತಾ ‘ಶೇಣಿಯಾದಿ ಪ್ರಮುಖ ದಿಗ್ಗಜರು ಮೆರೆಯುತ್ತಿದ್ದ ಕಾಲದಲ್ಲೇ ತನ್ನ ಆಳ್ತನ, ಸ್ವರಭಾರ, ಪುರಾಣಪ್ರಜ್ಞೆ, ಪ್ರಸಂಗಹಿಡಿತ, ವೇಷದ ಸ್ವರೂಪಜ್ಞಾನ, ಆಕಾರಜ್ಞಾನ, ರಂಗತುಂಬಿಸುವ ಕೌಶಲ್ಯ ಹೀಗೆ ಸಮಗ್ರವಾಗಿ ಯಕ್ಷಗಾನದ ನಾಟಕೀಯ ಪಾತ್ರಕ್ಕೆ ನಾರಾಯಣ ಹೆಗ್ಡೆ ‘ಲೆಜೆಂಡ್’ ಆಗಿದ್ದರು ಎಂದು ಉಜಿರೆ ಅಶೋಕ ಭಟ್ ಸ್ಮರಿಸಿಕೊಂಡರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಗುರುವಾಯನಕೆರೆ ಹಂಸಗಿರಿಯ ಶ್ರೀ ಶಿವದರ್ಶನ್ ಆಗ್ರೋ ಇಂಡಸ್ಟ್ರೀಸ್ ಮಾಲಕ ಬಾಲಕೃಷ್ಣ ನಾಯಕ್ ದೀಪಬೆಳಗಿಸಿ ಉದ್ಘಾಟಿಸಿದರು. ಇದೇ ಸಂದರ್ಭ ದಿ. ಪುತ್ತೂರು ನಾರಾಯಣ ಹೆಗ್ಡೆಯವರಿಂದ ಸ್ಪೂರ್ತಿ ಪಡೆದು, ಅವರ ಅನುಸರಿಸುವಿಕೆಯಲ್ಲಿ ಅವರಂತೆಯೇ ರೂಪುಗೊಂಡ ಹನುಮಗಿರಿ ಮೇಳದ ಹಿರಿಯ ಕಲಾವಿದ ಶಿವರಾಮ ಜೋಗಿ ಬಿ.ಸಿ ರೋಡ್ ಮತ್ತು ಶ್ರೀ ಧರ್ಮಸ್ಥಳ ಮೇಳದಲ್ಲಿ ನಾರಾಯಣ ಹೆಗ್ಡೆಯವರ ವೇಷಗಳಿಗೆ ಸ್ತ್ರೀವೇಷಗಳಲ್ಲಿ ಜೊತೆಯಾಗುತ್ತಿದ್ದ, ಅನುಭವೀ ಹಿರಿಯ ಕಲಾವಿದ ಕುಂಬಳೆ ಶ್ರೀಧರ ರಾವ್ ಇವರಿಗೆ ಪುತ್ತೂರು ನಾರಾಯಣ ಹೆಗ್ಡೆ ಸ್ಮರಣೆಯ ಅಭಿನಂದನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಭಿನಂಧಿಸಲ್ಪಟ್ಟ ಇಬ್ಬರು ಕಲಾವಿದರ ಕುರಿತು ಉಜಿರೆ ಅಶೋಕ ಭಟ್ ಅಭಿನಂದನಾ ನುಡಿಗಳನ್ನಾಡಿದರು.
ಶ್ರೀ ಧರ್ಮಸ್ಥಳ ಶಾಂತಿವನ ಟ್ರಸ್ಟ್ ನ ಸೀತಾರಾಮ ತೋಳ್ಪಡಿತ್ತಾಯ, ಕಣಿಪುರ ಯಕ್ಷಗಾನ ಮಾಸಪತ್ರಿಕೆಯ ಸಂಪಾದಕ ಎಂ.ನಾ ಚಂಬಲ್ತಿಮಾರ್ ಅತಿಥಿಗಳಾಗಿ ಪಾಲ್ಗೊಂಡು ಶುಭಹಾರೈಸಿದರು. ಪುತ್ತೂರು ನಾರಾಯಣ ಹೆಗ್ಡೆಯವರ ಪುತ್ರರು, ಕಲಾವಿದರಾದ ದೇವರಾಜ ಹೆಗ್ಡೆ, ಚಂದ್ರಶೇಖರ ಹೆಗ್ಡೆ ವೇದಿಕೆಯಲ್ಲಿದ್ದರು. ಶ್ರೀ ಧರ್ಮಸ್ಥಳ ಮೇಳದ ಪ್ರಬಂಧಕ ಗಿರೀಶ್ ಹೆಗ್ಡೆ ಸ್ವಾಗತಿಸಿದರು. ಶ್ರೀನಿವಾಸ ರಾವ್(ಪುಟಾಣಿ) ನಿರೂಪಿಸಿದರು.

ಸಂಸ್ಮರಣೆ-ಅಭಿನಂದನಾ ಕಾರ್ಯಕ್ರಮದ ಮುನ್ನ ಕು.ಕಾವ್ಯಶ್ರೀ ಅಜೇರು ಅವರ ಮಧುರಕಂಠಸಿರಿಯಲ್ಲಿ ಯಕ್ಷಗಾಯನ ಮಾರ್ದನಿಸಿತು. ಶ್ರೀಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಸಹಿತ ಆಯ್ದ ಪ್ರಸಂಗಗಳ ವೈವಿಧ್ಯ ಛಂದೋಬದ್ಧತೆಯ ಹಾಡುಗಳನ್ನು ರಸಾವಿಷ್ಕರಿಸಿ, ಭಾವ ಸ್ಪುರಿಸಿ ಹಾಡಿದ ಕಾವ್ಯಶ್ರೀ ಗಾನಪ್ರಿಯರನ್ನು ತಲೆದೂಗಿಸುತ್ತಾ, ಜನಮೆಚ್ಚುಗೆ ಪಡೆದರು. ಗಾಯನ ಕಳೆಕಟ್ಟಲು ಶ್ರೀ ಧರ್ಮಸ್ಥಳದ ಬಿ.ಸೀತಾರಾಮ ತೋಳ್ಪಡಿತ್ತಾಯ(ಚೆಂಡೆ), ಬಿ. ಜನಾರ್ಧನ ತೋಳ್ಪಡಿತ್ತಾಯ (ಮದ್ದಳೆ) ಹಿಮ್ಮೇಳ ಸಾಥ್ ನೀಡಿತು. ಚಕ್ರತಾಳದಲ್ಲಿ ಶ್ರೀಪತಿ ನಾಯಕ್ ಅಜೇರು ಪಾಲ್ಗೊಂಡರು. ಗತ ಕಾಲದ ಯಕ್ಷಕಥನಗಳನ್ನು ಹಂಚುತ್ತಾ ಉಜಿರೆ ಅಶೋಕ ಭಟ್ ಗಾನಮಾಧುರ್ಯ ನಿರೂಪಿಸದರು. ಸಮಾರಂಭದ ಬಳಿಕ ಮಲ್ಪೆ ವಾಸುದೇವ ಸಾಮಗ ನಿರ್ದೇಶಿತ ‘ಸಂಯಮಂ’ ತಂಡದವರಿಂದ ‘ಭಿಷ್ಮಪರ್ವ’ ತಾಳಮದ್ದಳೆ ನಡೆಯಿತು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.